Shivaratri 2024: ತಾಯಿಗಾಗಿ ಶಿವದೇಗುಲ ಕಟ್ಟಿದ ನಿರ್ಮಾಪಕ ಬಸಂತಕುಮಾರ್ ಪಾಟೀಲ್, ವಿಜಯಪುರ ಶಿವಗಿರಿಯಲ್ಲಿ ಶಿವರಾತ್ರಿ ಸಂಭ್ರಮ
ವಿಜಯಪುರ ನಗರದ ಉಕ್ಕಲಿ ರಸ್ತೆಯಲ್ಲಿರುವ ಶಿವಗಿರಿ ಪ್ರಮುಖ ಪ್ರವಾಸಿ ತಾಣ, ಎತ್ತರದ ಶಿವನ ಮೂರ್ತಿ, ದೇಗುಲ, ಉದ್ಯಾನ ಇಲ್ಲಿನ ವಾತಾವರಣವನ್ನು ಧಾರ್ಮಿಕ ಸ್ನೇಹಿಯನ್ನಾಗಿಸಿದೆ.ವರದಿ: ಸಮೀವುಲ್ಲಾ ಉಸ್ತಾದ್, ವಿಜಯಪುರ
ವಿಜಯಪುರ: ತಾಯಿಗಾಗಿ ಏನೆಲ್ಲಾ ಮಾಡಿದವರನ್ನು ನೋಡಿದ್ದೇವೆ. ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರು ವಿಜಯಪುರದಲ್ಲಿ ತಾಯಿಗಾಗಿ ಶಿವದೇಗುಲ ಕಟ್ಟಿದ್ದಾರೆ. ಅದು ದಶಕದ ಹಿಂದೆಯೇ ನಿರ್ಮಿಸಿದ ಶಿವಗಿರಿ ಪ್ರಮುಖ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಜನ ನಿತ್ಯ ಇಲ್ಲಿಗೆ ನಿತ್ಯ ಬರುತ್ತಾರೆ. ಶಿವರಾತ್ರಿ ಬಂದರಂತೂ ಇಲ್ಲಿ ವಿಶೇಷ ಕಾರ್ಯಕ್ರಮಗಳು ಅಣಿಗೊಳ್ಳುತ್ತವೆ. ಈ ವರ್ಷವೂ ಶಿವಗಿರಿಯಲ್ಲಿ ಶಿವರಾತ್ರಿ ದಿನಕ್ಕಾಗಿ ತಯಾರಿಗಳು ನಡೆದಿವೆ. ಬೆಳಿಗ್ಗೆಯಿಂದ ಮರುದಿನ ಬೆಳಿಗ್ಗೆವರೆಗೂ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿನ ವಿಶೇಷ.
ವಿಜಯಪುರದಲ್ಲಿ ಶಿವರಾತ್ರಿಗೆ ವಿಶೇಷ ಸ್ಪರ್ಶ. ಬೃಹತ್ ಶಿವನ ಮೂರ್ತಿ ಇರುವ ಶಿವಗಿರಿ, ಶಿವಲಿಂಗದ ಮೇಲೆ ಶ್ರೀಚಕ್ರ ಇರುವ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿರುವ ವಿಜಯಪುರದ ಶ್ರೀ ಸುಂದರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ ಆರಂಭಗೊಳ್ಳುತ್ತಿದೆ.
ಬೃಹತ್ ಶಿವನಮೂರ್ತಿ ಇರುವ ಶಿವಗಿರಿ ಅತ್ಯಂತ ಪ್ರಸಿದ್ಧಿ. ಪ್ರತಿ ವರ್ಷ ಶಿವರಾತ್ರಿ ಎಂದು ಶಿವನ ಮೂರ್ತಿಯ ಸಾನಿಧ್ಯದಲ್ಲಿ ಶಿವಮಂತ್ರ ಜಪಿಸಿ ಶಿವಭಕ್ತರು ಪುನೀತರಾಗುತ್ತಾರೆ, ಅಂದು ಎತ್ತ ಕಣ್ಣು ಹಾಯಿಸಿದರೂ ಭಗವಾನ ಪರಶಿವನ ಭಕ್ತರ ದಂಡೇ ಕಾಣಿಸಿಗುತ್ತದೆ.
ಸುಂದರವಾದ ಹಚ್ಚ ಹಸುರಾದ ಉದ್ಯಾನವನದಲ್ಲಿ ಅರಳಿರುವ `ಶಿವಗಿರಿ' ನೋಡುವುದೇ ಒಂದು ಹಬ್ಬ, ಧ್ಯಾನಾಸಕ್ತ ಶಿವನ ಬೃಹತ್ ಮೂರ್ತಿ ನೋಡುವುದು ನಿಜಕ್ಕೂ ಕಣ್ಣು ಹಾಗೂ ಮನಸಿಗೆ ಹಬ್ಬ.
ಶಿವಗಿರಿ ಸಾನಿಧ್ಯ : ಭಕ್ತಿಯ ಸಾಮೀಪ್ಯ
ಬಸಂತ್‌ಕುಮಾರ್ ಪಾಟೀಲ್ ಕುಟುಂಬದವರು ಇಲ್ಲಿ ಸ್ಥಾಪಿಸಲಾಗಿರುವ ಶ್ವೇತವರ್ಣದ ಶಿವನ ಮೂರ್ತಿಯು ಒಟ್ಟು 85 ಅಡಿ ಎತ್ತರ ಹೊಂದಿದೆ. ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್ ನಿಂದ ಈ ಶಿವಮೂರ್ತಿಯನ್ನು ನಿರ್ಮಿಸಲಾಗಿದೆ. ಈ ದೈತ್ಯ ಶಿವನ ಮೂರ್ತಿಯು ಅಂದಾಜು 1500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕ ಹೊಂದಿರುವುದು ಈ ಮೂರ್ತಿಯ ವಿಶೇಷ. ಇನ್ನು ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ.
ಶಿವನ ವೈಭವಯುತ ಮೂರ್ತಿಯ ದರ್ಶನಾಶೀರ್ವಾದ ಪಡೆಯಲು ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದು ರೂಢಿ. ಪ್ರತಿನಿತ್ಯ ಇಲ್ಲಿಗೆ ಆಗಮಿಸಿ ಬೃಹತ್ ಶಿವನ ಮೂರ್ತಿಗೆ ಶಿರಬಾಗಿ ನಮಸ್ಕರಿಸಿ ಪೂಜೆ ಸಲ್ಲಿಸಿ ಭಕ್ತರು ಪುನೀತರಾಗುತ್ತಾರೆ.
ಶಿವರಾತ್ರಿಯ ದಿನದಂದು ಶಿವಗಿರಿಯ ವೈಭವ ನೋಡಲು ಕಣ್ಣುಗಳೇ ಸಾಲದು. ಆ ಮಟ್ಟಿಗೆ ಭಕ್ತರ ದಂಡು, ಶಿವಮಂತ್ರಗಳ ಘೋಷಣೆ, ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎಂಬ ಶಿವನ ಭಕ್ತಿ ಪ್ರತಿಬಿಂಬಿಸುವ ಗೀತೆಗಳ ಗಾಯನ ಹೀಗೆ ಶಿವರಾತ್ರಿ ಹಬ್ಬದ ಸಂಭ್ರಮವೋ ಸಂಭ್ರಮ ಮನೆ ಮಾಡಿರುತ್ತದೆ.
ಶಿವರಾತ್ರಿ ದಿನ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಶಿವಗಿರಿ ಚಾರಿಟೇಬಲ್ ಟ್ರಸ್ಟ್ ಸಿದ್ಧತೆ ಮಾಡಿಕೊಳ್ಳುವಲ್ಲಿ ತೊಡಗಿದೆ. ಬೆಳಿಗ್ಗೆಯಿಂದಲೇ ಶಿವಗಿರಿಗೆ ಭಕ್ತರ ದಂಡು ಬರುವುದು ಆರಂಭವಾಗಲಿದೆ. ಈ ವೇಳೆ ಶಿವಗಿರಿ ದೇವಸ್ಥಾನದಲ್ಲಿ ಶಿವನಿಗೆ ಹೂವು, ಹಣ್ಣು, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಭಜನಾ ಕಾರ್ಯಕ್ರಮಗಳು, ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹಾಶಿವರಾತ್ರಿಯಂದು ಆಯೋಜಿಸಲಾಗುತ್ತದೆ.
ನಾವು ಶಿವದೇಗುಲಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತೇವೆ. ಶಿವರಾತ್ರಿ ವೇಳೆ ತಪ್ಪಿಸೋಲ್ಲ. ಅಲ್ಲಿನ ಆಚರಣೆ, ಶಿವನಿಗೆ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತವೆ. ಶಿವರಾತ್ರಿ ಜಾಗರಣೆಯೂ ಅಲ್ಲಿಯೇ ಆಗುತ್ತದೆ ಎಂದು ವಿಜಯಪುರದ ಹಲವರು ಖುಷಿಯಿಂದಲೇ ಹೇಳುತ್ತಾರೆ.
ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ