Vijayapura Earthquake: ವಿಜಯಪುರ ನಗರದಲ್ಲಿ ಮತ್ತೆರಡು ಬಾರಿ ಲಘು ಭೂಕಂಪ; ಜನತೆಯ ನಿದ್ದೆಗೆಡಿಸಿದ ಕಂಪನಗಳು
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Earthquake: ವಿಜಯಪುರ ನಗರದಲ್ಲಿ ಮತ್ತೆರಡು ಬಾರಿ ಲಘು ಭೂಕಂಪ; ಜನತೆಯ ನಿದ್ದೆಗೆಡಿಸಿದ ಕಂಪನಗಳು

Vijayapura Earthquake: ವಿಜಯಪುರ ನಗರದಲ್ಲಿ ಮತ್ತೆರಡು ಬಾರಿ ಲಘು ಭೂಕಂಪ; ಜನತೆಯ ನಿದ್ದೆಗೆಡಿಸಿದ ಕಂಪನಗಳು

Vijayapura Earthquake News: ವಿಜಯಪುರದಲ್ಲಿ ಮತ್ತೆರಡು ಬಾರಿ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ, ತಿಕೋಟಾ ತಾಲೂಕು, ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಭಾಗದಲ್ಲಿ ಸೋಮವಾರ ನಸುಕಿನಲ್ಲಿ (ಜ.29) ಭೂಕಂಪ ಸಂಭವಿಸಿದ್ದು, ಜನತೆ ಮತ್ತೆ ನಿದ್ದೆಗೆಡುವಂತಾಗಿದೆ. (ವರದಿ- ಸಮೀವುಲ್ಲಾ ಉಸ್ತಾದ್‌, ವಿಜಯಪುರ)

ವಿಜಯಪುರ ನಗರದಲ್ಲಿ ಸೋಮವಾರ ನಸುಕಿನಲ್ಲಿ ಲಘುಭೂಕಂಪ ಸಂಭವಿಸಿದೆ.
ವಿಜಯಪುರ ನಗರದಲ್ಲಿ ಸೋಮವಾರ ನಸುಕಿನಲ್ಲಿ ಲಘುಭೂಕಂಪ ಸಂಭವಿಸಿದೆ.

ವಿಜಯಪುರ: ಕಳೆದ ಎರಡು ವರ್ಷಗಳಿಂದ ಸಾಮಾನ್ಯವಾಗಿದ್ದ ಭೂಕಂಪನ ಕಳೆದ ಹಲವಾರು ದಿನಗಳಿಂದ ಒಂದು ರೀತಿ ಸ್ತಬ್ಧವಾಗಿತ್ತು. ಆದರೆ ಹೊಸ ವರ್ಷ ಆರಂಭದಲ್ಲೇ ಭೂಕಂಪ ಮತ್ತೆ ಸದ್ದು ಆರಂಭಿಸಿದೆ.

ಭಾನುವಾರ ತಡ ರಾತ್ರಿ ಜಿಲ್ಲೆಯಲ್ಲಿ ಲಘು ಭೂಕಂಪನ‌ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ತಿಕೋಟಾ ತಾಲೂಕು, ಬಸವನಬಾಗೇವಾಡಿ ತಾಲೂಕಿನ ಮನಗೂಳಿ ವ್ಯಾಪ್ತಿಯಲ್ಲಿ 2.9 ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಚದುರಿ ಸದ್ದು ಮಾಡಿವೆ. ಇದರಿಂದಾಗಿ ಮನೆಗಳಲ್ಲಿ ಟಿ.ವಿ. ನೋಡುತ್ತಿದ್ದ ಊಟ ಮಾಡುತ್ತಿದ್ದ, ವಿಶ್ರಾಂತಿಯಲ್ಲಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ವಿಜಯಪುರದಲ್ಲಿ ಭೂಕಂಪ ಹೊಸತೇನಲ್ಲ

ಕಳೆದ ಎರಡು ವರ್ಷಗಳಿಂದ ಭೂಕಂಪ ಹೊಸತೇನಲ್ಲ. ಅನೇಕ ತಜ್ಞರು ಸಹ ಭೂಕಂಪನ ಕಾರಣ ಹುಡಕಲು ಜಿಲ್ಲೆಗೆ ಆಗಮಿಸಿದ್ದರು. ನಂತರ ಕೆಲದಿನಗಳಿಂದ ಭೂಕಂಪನ ಮಾಯವಾಗಿ ಈಗ ಮತ್ತೆ ಹೊಸ ವರ್ಷದಲ್ಲಿ ‌ಆತಂಕ ಸೃಷ್ಟಿಸಿದೆ.

ಇದೇ ಜನವರಿ 25 ರಂದು ತಡರಾತ್ರಿ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ, ಯರನಾಳ ಗ್ರಾಮ ಪಂಚಾಯಿತಿ ಹತ್ತಿರದ ಹತ್ತರಕಿಹಾಳ, ನಂದಿಹಾಳ, ವಿಜಯಪುರ ಭಾಗದ ವ್ಯಾಪ್ತಿಯಲ್ಲಿ 2.6 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಉಕುಮನಾಳ ಗ್ರಾಮದಲ್ಲಿ ಭೂಂಕನಪದ ಅನುಭವವಾಗಿತ್ತು. ಆಗ ಅಲ್ಲಿನ ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದು ಕೆಲವು ಸಮಯದವರೆಗೆ ಅಲ್ಲೇ ಕಾಲ ಕಳೆಯುವಂತಾಗಿತ್ತು.

ಕಳೆದ ವರ್ಷ ಡಿಸೆಂಬರ್ 8 ರ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿತ್ತು ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ದೃಢಪಡಿಸಿದ್ದರು.

ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸುತ್ತಲೇ ಇದ್ದು, ಜನರು ಆತಂಕದಲ್ಲಿ ಜೀವನ ಕಳೆಯುಂತಾಗಿದೆ. ರಾತ್ರಿ, ಮಧ್ಯರಾತ್ರಿ ಸಮಯದಲ್ಲಿ ಏಕಾಕಿ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದು ಜನತೆ ನಿದ್ದೆಗೆಡುವಂತೆ ಮಾಡಿದೆ.

ದಶಕದಿಂದ ಇದೇ ರೀತಿಯಾಗಿ ಭೂಕಂಪನ ಅನುಭವವಾಗಿದೆ. ವಿಜಯಪುರ ಭಾಗದಲ್ಲಿ 2010 ರಲ್ಲಿ 24 ಬಾರಿ ಭೂಮಿ ಕಂಪಿಸಿತ್ತು. ನಂತರ 2011 ರಲ್ಲಿ ಒಂದು ಭಾರಿ ಕಂಪಿಸಿತ್ತು, ಇದರ ನಂತರ 2021ರವರೆಗೆ ಭೂಕಂಪನದ ಸದ್ದು ಇರಲಿಲ್ಲ.

2010ರಲ್ಲಿ ತಲೆವಾಡ, ಕಲಗುರ್ಕಿ, ಮಲಘಾಣ, ಹುಣಶ್ಯಾಳ ಭಾಗದಲ್ಲಿ ಪದೇಪದೆ ಭೂಕಂಪನಗಳು ಸಂಭವಿಸಿದ ಕಾರಣ ಅಲ್ಲಿ ಭೂಕಂಪನ ನಿರೀಕ್ಷಣಾ ಯಂತ್ರಗಳನ್ನು ಅವಳಡಿಸಲಾಗಿತ್ತು. ಇಲ್ಲಿ ದಾಖಲಾಗದ ಕಂಪನಗಳನ್ನು ಅವಲೋಕಿಸಿದಾಗ ಸಾಮಾನ್ಯವಾಗಿ 1.2 ಕಡಿಮೆ ತೀವ್ರತೆಯ ಭೂಕಂಪನ ದಾಖಲಾಗಿತ್ತು.

(ವರದಿ- ಸಮೀವುಲ್ಲಾ ಉಸ್ತಾದ್‌, ವಿಜಯಪುರ)

Whats_app_banner