ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

ಉತ್ತರ ಕರ್ನಾಟಕದಲ್ಲಿಯೇ ಹಳೆಯ ಸಂಸ್ಥೆ ಬಿಎಲ್‌ಡಿಇ( BLDE)ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾಂತ್ರಿಕ ಹಬ್ಬ ನಡೆಯಲಿದೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ವಿಜಯಪುರ ಬಿಎಲ್‌ಡಿಇಯಲ್ಲಿ ತಾಂತ್ರಿಕ ಹಬ್ಬಕ್ಕೆ ಸಿದ್ದತೆ ನಡೆದಿದೆ
ವಿಜಯಪುರ ಬಿಎಲ್‌ಡಿಇಯಲ್ಲಿ ತಾಂತ್ರಿಕ ಹಬ್ಬಕ್ಕೆ ಸಿದ್ದತೆ ನಡೆದಿದೆ

ವಿಜಯಪುರ: ಅನೇಕ ಸ್ಮಾರಕಗಳನ್ನು ಒಡಲಾಳದಲ್ಲಿರಿಸಿಕೊಂಡಿರುವ ವಿಜಯಪುರದಲ್ಲಿ ಸಾಂಸ್ಕೃತಿಕ, ಕಲಾಭಿರುಚಿಗೆ ಕೊರತೆ ಇಲ್ಲ, ಅನೇಕ ಸಾಂಸ್ಕೃತಿಕ ಹಬ್ಬಗಳು ವಿಜಯಪುರದಲ್ಲಿ ನಿತ್ಯ ನಿರಂತರ ನಡೆಯುತ್ತಲೇ ಇರುತ್ತದೆ. ಆದರೆ ಈಗ ವಿಜಯಪುರದಲ್ಲಿ ವಿಶಿಷ್ಟವಾದ ಇಂಜಿನಿಯರಿಂಗ್ ಕೌಶಲ್ಯಗಳ `ತಾಂತ್ರಿಕ ಹಬ್ಬ' ಆಯೋಜನೆಯಾಗುತ್ತಿದೆ. ಈ ವಿಶಿಷ್ಟ ಹಬ್ಬಕ್ಕೆ ಗುಮ್ಮಟ ನಗರಿ ಸಜ್ಜಾಗುತ್ತಿದೆ. ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ದಿ.22 ರಿಂದ 25 ರವರೆಗೆ ತಾಂತ್ರಿಕ ಸಪ್ತಾಹ ಆಯೋಜಿಸಲಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳು ವಿಶಿಷ್ಟ ತಂತ್ರಜ್ಞಾನವನ್ನು ನಿರೂಪಿಸುವಲ್ಲಿ ಸಜ್ಜಾಗಿದ್ದಾರೆ. ಭವಿಷ್ಯದ ಬದುಕನ್ನು ಸರಳೀಕರಣಗೊಳಿಸುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂಜನಿಯರಿಂಗ್ ವಿದ್ಯಾರ್ಥಿಗಳು ರೂಪಿಸಿರುವ ಪ್ರಾತ್ಯಕ್ಷಿತೆ, ಸಂಶೋಧನಾ ವರದಿಗಳ ಮಂಡನೆ ಈ ಹಬ್ಬದಲ್ಲಿ ಗೋಚರಿಸಲಿದೆ. ಅನೇಕ ತಾಂತ್ರಿಕಮಯ ವಿಷಯಗಳ ಗೋಷ್ಠಿಗಳು `ತಾಂತ್ರಿಕ ಲೋಕ' ಸೃಷ್ಟಿಸುವ ಜೊತೆಗೆ ತಾಂತ್ರಿಕ ಜ್ಞಾನವನ್ನು ಉಣಬಡಿಸುವ ನಿಟ್ಟಿನಲ್ಲಿ ಪೂರಕವಾಗುವಂತೆ ಈ ಹಬ್ಬವನ್ನು ಸಂಯೋಜಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ವಿಶಿಷ್ಟ ರೀತಿಯ ಸಂಶೋಧನಾ ವಿಧಾನಗಳನ್ನು ರೂಪಿಸಿರುವ ವಿದ್ಯಾರ್ಥಿಗಳ ಪ್ರಾತ್ಯಕ್ಷಿತೆಗಳು ಈ ಪ್ರದರ್ಶನದಲ್ಲಿ ಗೋಚರಿಸಲಿವೆ. ಬೈಸಿಕಲ್ ಚಾಲಿತ ನೀರಿನ ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ದಿ ಮತ್ತು ತಯಾರಿಕೆ, ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಮಾನಿಟರಿಂಗ್, ಭೂಕಂಪ ನಿರೋಧಕ ರಚನೆ ಮೊದಲಾದ ಬಗೆಯ ಪ್ರಾತ್ಯಕ್ಷಿತೆಗಳು ಪ್ರದರ್ಶನಗೊಳ್ಳಲಿವೆ.

ವಿಜಯಪುರದಲ್ಲಿ ಅನೇಕ ದಿನಗಳಿಂದ ಭೂಕಂಪನ ಸಂಭವಿಸುತ್ತಲೇ ಇದೆ, ಕಳೆದ ವರ್ಷವೂ ಭೂಕಂಪನದ ವರದಿಗಳು ದಿನನಿತ್ಯ ಕೇಳುತ್ತಲೇ ಇದ್ದವು, ಆದರೆ ವಿದ್ಯಾರ್ಥಿಗಳು ಇದಕ್ಕೆ ವಿಶಿಷ್ಟವಾದ ಉಪಾಯ ಹುಡುಕಿದ್ದಾರೆ, ಈ ಉಪಾಯವನ್ನು ಕಾಣಲು ನೀವು ತಾಂತ್ರಿಕ ಹಬ್ಬಕ್ಕೆ ಭೇಟಿ ನೀಡಲೇಬೇಕು.

ಬಿಎಲ್‌ಡಿಇ ಸಂಸ್ಥೆಯು ಓಪನ್ ಡೇ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿದೆ. ಈ ಓಪನ್ ಡೇ ಕಾರ್ಯಕ್ರಮದಲ್ಲಿ ಕೆಎಸ್‌ಸಿಎಸ್‌ಟಿ ಪ್ರಾಯೋಜಕತ್ವ ಪಡೆದ 14 ಪ್ರಾತ್ಯಕ್ಷಿಕೆಗಳ ಜೊತೆಗೆ ಇತರ 187 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ವಿವಿಧ ವಿಭಾಗಗಳ ಪದವಿಪೂರ್ವ ಸ್ನಾತಕೋತ್ತರ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಠ್ಯಕ್ರಮದ ಭಾಗವಾಗಿ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿರುತ್ತಾರೆ. ಈ ಪ್ರಾತ್ಯಕ್ಷಿಕೆಗಳನ್ನು ವಿಜಯಪುರ ನಗರದ ಪ್ರೌಢಶಾಲೆ, ಪಿ.ಯು. ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗಾವಿಯ ಕ್ವಿಸ್ಟ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ನ ಪ್ರಶಾಂತ ಮರಿಕಟ್ಟಿ ಚಾಲನೆ ನೀಡಲಿದ್ದಾರೆ.

ಮಹಾವಿದ್ಯಾಲಯದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೂಪಿಸಿದ 201 ಪ್ರಾತ್ಯಕ್ಷಿಕೆಗಳು ಪ್ರದರ್ಶನಗೊಳ್ಳಲಿವೆ ಎಂದರು. ಪ್ರಾತ್ಯಕ್ಷಿಕೆಗಳನ್ನು ನಾವಿನ್ಯತೆ, ಸಾಮಾಜಿಕ ಕಾಳಜಿ, ಪರಿಸರ, ಅಪ್ಲಿಕೇಷನ್ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ತಾಂತ್ರಿಕ ಕಾರ್ಯಕ್ರಮದ ಅಂಗವಾಗಿ ಒಟ್ಟು 22 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ವಿನ್ಯಾಸ, ನಾವಿನ್ಯತೆ, ತಾಂತ್ರಿಕ ಪೆಪರ್ ಪ್ರಸ್ತುತಿಗಳು, ಕ್ವಿಜ್, ಕೋಡಿಂಗ್ ಡೀಬಗ್ಗ್ ಮಾಡುವಿಕೆ, ಪೋಸ್ಟರ್ ಪ್ರಸ್ತುತಿಗಳು, ಐಡಿಯಾಥಾನ್ ಹಾಗೂ ಮುಂತಾದ ತಾಂತ್ರಿಕ ಸ್ಪರ್ದೆಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ ಮತ್ತು ಇತರೆ ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ರಮವು ಇತರ ಕಾಲೇಜಿಗಳ ಮಿತ್ರರೊಂದಿಗೆ ಸಂವಾದ ನಡೆಯಲಿದೆ.

ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ, ಸಂಶೋಧನಾ ಮನೋಭಾವ ವೃದ್ಧಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ತಾಂತ್ರಿಕ ಪರ್ವದಂತೆ ವಿಶಿಷ್ಟಪೂರ್ಣವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಅದೇ ತೆರನಾಗಿ ರಂಗಮಂಚ ಹಾಗೂ ಸಾಂಸ್ಕೃತಿಕ ಮಹತ್ವ ಸಾರುವ ಸಂಭ್ರಮ ಎನ್ನುವ ಕಾರ್ಯಕ್ರಮ ಸಹ ನಡೆಯಲಿದೆ ಎಂದು ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾಹಿತಿ ನೀಡಿದರು.

ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024