Vijayapura News: ಕೊಳವೆ ಬಾವಿಗೆ ಬಿದ್ದ ಬಾಲಕ ಪಾರು; ರಂಜಾನ್‌ ಉಪವಾಸದಲ್ಲೂ ಸ್ಥಳ ಬಿಟ್ಟು ಕದಲದ ಎಸಿ ಆಬೀದ ಗದ್ಯಾಳ ಕಾರ್ಯಕ್ಕೆ ಪ್ರಶಂಸೆ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಕೊಳವೆ ಬಾವಿಗೆ ಬಿದ್ದ ಬಾಲಕ ಪಾರು; ರಂಜಾನ್‌ ಉಪವಾಸದಲ್ಲೂ ಸ್ಥಳ ಬಿಟ್ಟು ಕದಲದ ಎಸಿ ಆಬೀದ ಗದ್ಯಾಳ ಕಾರ್ಯಕ್ಕೆ ಪ್ರಶಂಸೆ

Vijayapura News: ಕೊಳವೆ ಬಾವಿಗೆ ಬಿದ್ದ ಬಾಲಕ ಪಾರು; ರಂಜಾನ್‌ ಉಪವಾಸದಲ್ಲೂ ಸ್ಥಳ ಬಿಟ್ಟು ಕದಲದ ಎಸಿ ಆಬೀದ ಗದ್ಯಾಳ ಕಾರ್ಯಕ್ಕೆ ಪ್ರಶಂಸೆ

ಕೊಳವೆ ಬಾವಿಗೆ ಸಾತ್ವಿಕ್‌ ಎಂಬ ಮಗು ಬಿದ್ದು ಜೀವಂತವಾಗಿ ಹೊರಬಂದ ಬಳಿಕ ರಕ್ಷಣಾ ಪಡೆಗಳು, ಎಸಿ ಆಬೀದ್‌ ಗದ್ಯಾಳ ಸೇರಿದಂತೆ ಈ ಕಾರ್ಯಚರಣೆಯಲ್ಲಿ ತೊಡಗಿದ ಎಲ್ಲರ ಕುರಿತು ಜನರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಎಸಿ ಆಬೀದ್ ಗದ್ಯಾಳ ಕೇವಲ ನೀರು ಹಾಗೂ ಒಂದೇ ಒಂದು ಖರ್ಜೂರಿ ತಿಂದು ರೋಜಾ ಬಿಟ್ಟರು. (ವರದಿ: ಸಮೀವುಲ್ಲಾ ಉಸ್ತಾದ)

ಕೊಳವೆ ಬಾವಿಗೆ ಬಿದ್ದು ಜೀವಂತವಾಗಿ ಹೊರಬಂದ ಬಾಲಕ ಸಾತ್ವಿಕ್‌
ಕೊಳವೆ ಬಾವಿಗೆ ಬಿದ್ದು ಜೀವಂತವಾಗಿ ಹೊರಬಂದ ಬಾಲಕ ಸಾತ್ವಿಕ್‌

ವಿಜಯಪುರ: ಕೊಳವೆ ಬಾವಿಗೆ ಸಾತ್ವಿಕ್‌ ಎಂಬ ಮಗು ಬಿದ್ದು ಜೀವಂತವಾಗಿ ಹೊರಬಂದ ಬಳಿಕ ರಕ್ಷಣಾ ಪಡೆಗಳು, ಎಸಿ ಆಬೀದ್‌ ಗದ್ಯಾಳ ಸೇರಿದಂತೆ ಈ ಕಾರ್ಯಚರಣೆಯಲ್ಲಿ ತೊಡಗಿದ ಎಲ್ಲರ ಕುರಿತು ಜನರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಆಬೀದ ಗದ್ಯಾಳ. ಕೊಳವೆ ಬಾವಿ ಸುದ್ದಿ ಕೇಳಿದ ತಕ್ಷಣವೇ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಮಗು ಕೊಳವೆಬಾವಿಯಲ್ಲಿ ಬಿದ್ದ ಕಡೆ ಹೊರಡಿದ ಆಬೀದ್ ಗದ್ಯಾಳ ಸತತ 21 ಗಂಟೆಗಳ ಕಾಲ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಿಲ್ಲ, ಏತನ್ಮಧ್ಯೆ ರೋಜಾ ಬಿಡಲಿಲ್ಲ.

ಸಭೆ ಮೊಟಕುಗೊಳಿಸಿ ಸ್ಥಳಕ್ಕೆ ಧಾವಿಸಿದ ಆಬೀದ್ ಗದ್ಯಾಳ ಅಲ್ಲಿಯೇ ಕೇವಲ ನೀರು ಹಾಗೂ ಒಂದೇ ಒಂದು ಖರ್ಜೂರಿ ತಿಂದು ರೋಜಾ ಬಿಟ್ಟರು. ನಂತರ ಮನೆಯಿಂದ ಬುತ್ತಿ ಬಂದರೂ ಸಹ ಅದನ್ನು ಸವಿಯುತ್ತಾ ಕುಳಿತರೆ ಸಮಯ ಹಾಳಾಗಬಹುದು ಎಂದು ಅದನ್ನು ಸಹ ಸ್ವೀಕರಿಸಲಿಲ್ಲ.

ಸತತ ಕರೆಗಳು, ಅಧಿಕಾರಿಗಳೊಂದಿಗೆ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿಗಳನ್ನು ನಿಭಾಯಿಸಿದರು. ನಸುಕಿನ ಜಾವ ಸೆಹರಿ (ರೋಜಾ ಆಚರಣೆಗೆ ಅಣಿಯಾಗುವ ಹೊತ್ತು) ಸಹ ಸ್ಥಳ ಬಿಟ್ಟು ಕದಲದ ಆಬೀದ್ ಅಲ್ಲಿಯೇ ಚಹಾ, ಎರಡು ಬಿಸ್ಕೀಟ್ ಸೇವನೆ ಮಾಡಿ ಮತ್ತೆ ರೋಜಾ ಆಚರಣೆ ಮಾಡಿದರು.

ನಿನ್ನೆಯಿಂದಲೇ ಒಂದು ಕ್ಷಣವೂ ರೆಸ್ಟ್ ಮಾಡದ ಆಬೀದ್ ಗದ್ಯಾಳ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಲಚ್ಯಾಣದಲ್ಲಿ ಕಾರ್ಯಾಚರಣೆಯಲ್ಲಿ ತಲ್ಲೀನರಾದರು. ಹೈದರಾಬಾದ್ ಎನ್‌ಡಿಆರ್‌ಎಫ್ ತಂಡದೊಂದಿಗೆ ಸಮನ್ವಯ, ಅವರನ್ನು ಈ ಸ್ಥಳಕ್ಕೆ ಕರೆ ತರುವಲ್ಲಿ ಕೈಗೊಳ್ಳಬೇಕಾದ ಕಾರ್ಯಸೂಚಿಗಳು, ಎಷ್ಟು ಬೇಗ ಅವರನ್ನು ಕರೆ ತರಲು ಸಾಧ್ಯವಾಗಬಹುದಾದ ಕಾರ್ಯಚಟುವಟಿಕೆಗಳು, ಜಿಲ್ಲಾಡಳೀತಕ್ಕೆ ಸತತ ಸಂಪರ್ಕದ ಮೂಲಕ ಕ್ಷಣ ಕ್ಷಣದ ಮಾಹಿತಿ, ರಕ್ಷಣಾ ಕಾರ್ಯಾಚರಣೆ ಯಾವ ರೀತಿ ಮಾಡಬೇಕು ಎಂಬ ಕಾರ್ಯವಿಧಾನ ಹೀಗೆ ಈ ಎಲ್ಲ ಕಾರ್ಯವನ್ನು ಆಬೀದ್ ಗದ್ಯಾಳ ಅವರು ರೋಜಾ ಆಚರಣೆ ಮಾಡುತ್ತಲೇ ನಿಭಾಯಿಸಿದರು.

ಮಗುವಿನ ರಕ್ಷಣಾ ಕಾರ್ಯ ದೇವರ ಕಾರ್ಯವಿದ್ದಂತೆ, ರೋಜಾ ಮಾಡಿದರೆ ಇನ್ನಷ್ಟೂ ಶ್ರದ್ಧೆಯಿಂದ ಈ ಕಾರ್ಯ ಕೈಗೊಳ್ಳಲು ಸಾಧ್ಯ, ಕೊಳವೆಬಾವಿಯಲ್ಲಿ ಸಿಲುಕಿದ ಮಗು ಇಲ್ಲಿಗಿಂತಲೂ ಕಠಿಣ ಪರಿಸ್ಥಿತಿಯಲ್ಲಿದೆ, ಆ ಮಗು ಸಹ ಏನನ್ನೂ ತಿಂದಿಲ್ಲ, ಅಲ್ಲಿ ತೇವಾಂಶವೂ ಅಧಿಕ, ಆ ಮಗುವಿನ ಪರಿಸ್ಥಿತಿ ಹೇಗಿರಬೇಡ? ಎಂದು ನೋವಾಯಿತು. ಇಲ್ಲಿ ನಮಗೆ 40° ಡಿಗ್ರಿ ಸೆಲ್ಸಿಯಸ್ ಬಿಸಿಲು ಇರಬಹುದು, ನಮಗೆ ವಿಶ್ರಾಂತಿಗೆ ಅವಕಾಶವೂ ಇದೆ, ಗಿಡಗಳ ನೆರಳು ಇದೆ, ಆದರೆ ಆ ಮಗು. ಹೀಗಾಗಿ ಮಗುವಿನ ರಕ್ಷಣೆಯೇ ಮೂಲಮಂತ್ರವಾಯಿತು ಎಂದು ಆಬೀದ್ ಗದ್ಯಾಳ ವಿವರಿಸಿದರು.

ಪಾಲಕರಿಗೆ ಅಭಯ

ತಮ್ಮ ಕರುಳ ಕುಡಿ ಕೊಳವೆಬಾವಿಯಲ್ಲಿರುವುದನ್ನು ಕಂಡ ಆ ಹೆತ್ತವರ ದು:ಖವಂತೂ ಹೇಳತೀರದು. ಇಂತಹ ಕಠಿಣ ಸಂದರ್ಭದಲ್ಲೂ ಸಹ ಅತ್ಯಂತ ಧೈರ್ಯವಾಗಿರಿ, ನಿಮ್ಮ ಮಗುವನ್ನು ಸುರಕ್ಷಿತವಾಗಿ ಕರೆ ತರುತ್ತೇವೆ, ಇಡೀ ಜನತೆಯ ಪ್ರಾರ್ಥನೆ ನಿಮ್ಮ ಮಗುವಿನ ಜೊತೆ ಇದೆ, ನೀವು ಪ್ರಾರ್ಥಿಸಿರಿ ಎಂದು ಅನೇಕ ಬಾರಿ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಎ.ಸಿ. ಆಬೀದ್ ಗದ್ಯಾಳ ಪಾಲಕರಿಗೆ ಅಭಯ ತುಂಬುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು.

ವರದಿ: ಸಮೀವುಲ್ಲಾ ಉಸ್ತಾದ

Whats_app_banner