ಕನ್ನಡ ಸುದ್ದಿ  /  Karnataka  /  Vijayapura News Vijayapura Historical Taj Bawdi Rejuvenation Mumbai Agency To Adopt Adil Shahi Period Water Body Smu

Vijayapura News: 400 ವರ್ಷದ ವಿಜಯಪುರ ತಾಜ್ ಬಾವಡಿಗೆ ಮರುಜೀವ, ದತ್ತು ಪಡೆದ ಮುಂಬೈ ಖಾಸಗಿ ಸಂಸ್ಥೆ

ವಿಜಯಪುರದ ತಾಜ್‌ಬಾವಡಿಯನ್ನು ಮತ್ತಷ್ಟು ಪುನರುಜ್ಜೀವಗೊಳಿಸಿ ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿದೆ.ವರದಿ: ಸಮೀವುಲ್ಲಾ ಉಸ್ತಾದ

 ವಿಜಯಪುರದ ತಾಜ್‌ ಬಾವಡಿ
ವಿಜಯಪುರದ ತಾಜ್‌ ಬಾವಡಿ

ವಿಜಯಪುರ: ವಿಜಯಪುರದಲ್ಲಿ ಆದಿಲ್‌ಷಾಹಿ ಕಾಲದ ಪ್ರಮುಖ ಜಲಮೂಲವಾಗಿದ್ದ ಐತಿಹಾಸಿಕ ತಾಜ್ ಬಾವಡಿ ಕಳೆದ ಕೆಲವು ವರ್ಷಗಳಿಂದ ತನ್ನ ಗತವೈಭವ ಕಳೆದುಕೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ದೂರದೃಷ್ಟಿ ಫಲವಾಗಿ ತಾಜ್ ಬಾವಡಿ ಮತ್ತೆ ಪುನರುಜ್ಜೀವನಗೊಂಡಿದೆ.ಈಗ ಜಿಲ್ಲಾಡಳಿತ ಈ ಮಹತ್ವದ ಸ್ಮಾರಕ ಹಾಗೂ ಜಲಮೂಲವನ್ನು ಸಂರಕ್ಷಿಸಲು ಹಾಗೂ ನಿರ್ವಹಣೆ ಮಾಡಲು ಮುಂಬೈ ಮೂಲದ ಪ್ರತಿಷ್ಠಿತ ಏಜೆನ್ಸಿಗೆ ದತ್ತು ನೀಡಲು ನಿರ್ಧರಿಸಿದೆ.ಈ ಸ್ಮಾರಕವನ್ನು ಮೂರು ವರ್ಷಗಳ ಕಾಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಮುಂಬೈ ಮೂಲದ ವರ್ಲ್ಡ್ ಮೋನುಮೆಂಟ್ ಫಂಡ್ ಇಂಡಿಯಾ ಅಸೋಸಿಯೇಶನ್‌ಗೆ ನೀಡಲು ನಿರ್ಣಯ ಸ್ವೀಕರಿಸಿದೆ.

400 ವರ್ಷದ ಇತಿಹಾಸ

ತಾಜ್ ಬಾವಾಡಿಯನ್ನು 1620 ರಲ್ಲಿ ಇಬ್ರಾಹಿಂ ಆದಿಲ್ ಷಾ ನಿರ್ಮಿಸಿದ್ದು, ಈ ಬೃಹತ್ ತೆರೆದ ಬಾವಿಯನ್ನು ತನ್ನ ಪತ್ನಿ ತಾಜ್ ಸುಲ್ತಾನನಿಗೆ ಅರ್ಪಿಸಿದ ನಂತರ ಈ ಐತಿಹಾಸಿಕ ಸ್ಮಾರಕವನ್ನು ತಾಜ್ ಬಾವಡಿ ಎಂದು ಹೆಸರಾಯಿತು. ಆದಿಲ್‌ಷಾಹಿ ಕಾಲದ ಜನಸಂಖ್ಯೆ ಈಗಿರುವ ಜನಸಂಖ್ಯೆಗಿಂತ ಅಧಿಕವಾಗಿತ್ತು. ಆ ಸಮಯದಲ್ಲೂ ಸಹ ತಾಜ್ ಬಾವಡಿ ಒಂದು ಪ್ರಮುಖ ಜಲಮೂಲವಾಗಿ ರಾರಾಜಿಸುತ್ತಿತ್ತು. ಕಾಲಘಟ್ಟ ಉರುಳಿದ ನಂತರ ತಾಜ್ ಬಾವಡಿ ತ್ಯಾಜ್ಯ ವಸ್ತುಗಳಿಂದ ಕೂಡಿ ಕಳೆಗುಂದಿತ್ತು. ಕೊನೆಗೂ ಸಹ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಡಾ.ಎಂ.ಬಿ. ಪಾಟೀಲ ಐತಿಹಾಸಿಕ ಪುನರುಜ್ಜೀವನ ಕೈಗೊಂಡ ಫಲವಾಗಿ ಮತ್ತೆ ತಾಜ್ ಬಾವಡಿ ತನ್ನ ಗತ ವೈಭವಕ್ಕೆ ಮರಳಿದೆ. ಈಗ ಖಾಸಗಿ ಏಜೆನ್ಸಿ ವ್ಯವಸ್ಥಿತ ನಿರ್ವಹಣೆ ಸಾಧ್ಯವಾದರೆ ತಾಜ್ ಬಾವಡಿ ವೈಭವ ಮತ್ತೆ ಕಳೆಕಟ್ಟುವುದರಲ್ಲಿ ಎರಡು ಮಾತಿಲ್ಲ.

ದತ್ತುಗೆ ನೀಡಲು ತಯಾರಿ

ಈಗಾಗಲೇ ಸ್ಮಾರಕವನ್ನು ಮೂರು ವರ್ಷಗಳವರೆಗೆ ದತ್ತು ಪಡೆದುಕೊಂಡಿರುವ ಏಜೆನ್ಸಿ ಈ ಯೋಜನೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯ ಅಡಿಯಲ್ಲಿ ಹಣವನ್ನು ನೀಡಿದೆ ಎನ್ನುವುದು ಪ್ರಾಜೆಕ್ಟ್ ಮ್ಯಾನೇಜರ್ ಅನ್ನಾಬೆಲ್ ಲೋಪೆಜ್ ವಿವರಣೆ.

ಪ್ರವಾಸೋದ್ಯಮ ಸಚಿವಾಲಯವು ಸ್ಮಾರಕಗಳನ್ನು ದತ್ತು ಪಡೆಯುವಂತೆ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಆಹ್ವಾನಿಸಿತ್ತು. ಅದರನ್ವಯ ತಾಜ್ ಬಾವಡಿಯನ್ನು ದತ್ತು ತೆಗೆದುಕೊಳ್ಳಲು ಮುಂಬೈನ ವರ್ಲ್ಡ್ ಮೋನುಮೆಂಟ್ ಫಂಡ್ ಇಂಡಿಯಾ ಅಸೋಸಿಯೇಶನ್ ಮುಂದೆ ಬಂದಿದೆ. ಅದೇ ತೆರನಾಗಿ ಜಿಲ್ಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಸುಮಾರು 40 ರಕ್ಷಿತ ಸ್ಮಾರಕಗಳನ್ನು ಏಜೆನ್ಸಿಗಳು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಜ್ ಬಾವಡಿ ನಂತರ ಜಿಲ್ಲೆಯ ಇನ್ನಷ್ಟು ಸಂಸ್ಥೆಗಳು ಉಳಿದ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ವಿಶ್ವಾಸವಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕಿ ಎಂ. ಕಾವ್ಯಶ್ರೀ.

ತಾಜ್‌ಬಾವಡಿ ಸಂರಕ್ಷಣೆಗೆ ಮೂರು ಹೆಜ್ಜೆ

  1. ಸ್ಮಾರಕದ ಸಂರಕ್ಷಣೆಗಾಗಿ ಏಜೆನ್ಸಿ ಮೂರು ಪ್ರಮುಖ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದು, ಕಟ್ಟಡದ ಕೊಳೆ ತೆಗೆಯುವುದು ಮತ್ತು ಬಿರುಕು ಬಿಟ್ಟ ಕಡೆ ನವೀಕರಣ ಮಾಡುವ ಗುರಿ ಹೊಂದಿದ್ದು, ಈಗಾಗಲೇ ಇದಕ್ಕಾಗಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಲಾಗಿದೆ. ಬಳಿಕ ನವೀಕರಣಕ್ಕೆ ಟೆಂಡರ್ ಕರೆಯುವ ನಿಟ್ಟಿನಲ್ಲಿ ಏಜೆನ್ಸಿ ಸಿದ್ಧತೆಯಲ್ಲಿ ತೊಡಗಿದೆ.
  2. ಎರಡನೇಯ ಹಂತದ ಹೆಜ್ಜೆಯಾಗಿ ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಯಾವ ರೀತಿ ಉಪಯೋಗಿಸಬಹುದು ಎಂಬುದರ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ಏಜೆನ್ಸಿ ಮುಂದಾಗಲಿದೆ.
  3. ಮೂರನೇಯ ಹಂತದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸ್ಮಾರಕದ ಸಂರಕ್ಷಣೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಸಲು ಸ್ಥಳೀಯ ನಿವಾಸಿಗಳಿಗೆ ತಿಳಿಹೇಳುವ ಕಾರ್ಯಕ್ಕೆ ಏಜೆನ್ಸಿ ಮುಂದಾಗಲಿದೆ.

(ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ)

IPL_Entry_Point

ವಿಭಾಗ