ವಿಜಯಪುರ ಹೃದಯ ಭಾಗದ ಗಾಂಧಿವೃತ್ತ ಮೇಲ್ಸೇತುವೆಯಲ್ಲಿ ಅಪಾಯಕಾರಿ ಸಂಚಾರ: ಶಿಥಿಲಾವಸ್ಥೆಯಲ್ಲಿದ್ದರೂ ಬದಲಿಸಲು ಪಾಲಿಕೆ ಮೀನ ಮೇಷ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರ ಹೃದಯ ಭಾಗದ ಗಾಂಧಿವೃತ್ತ ಮೇಲ್ಸೇತುವೆಯಲ್ಲಿ ಅಪಾಯಕಾರಿ ಸಂಚಾರ: ಶಿಥಿಲಾವಸ್ಥೆಯಲ್ಲಿದ್ದರೂ ಬದಲಿಸಲು ಪಾಲಿಕೆ ಮೀನ ಮೇಷ

ವಿಜಯಪುರ ಹೃದಯ ಭಾಗದ ಗಾಂಧಿವೃತ್ತ ಮೇಲ್ಸೇತುವೆಯಲ್ಲಿ ಅಪಾಯಕಾರಿ ಸಂಚಾರ: ಶಿಥಿಲಾವಸ್ಥೆಯಲ್ಲಿದ್ದರೂ ಬದಲಿಸಲು ಪಾಲಿಕೆ ಮೀನ ಮೇಷ

ವಿಜಯಪುರದ ಮುಖ್ಯ ಭಾಗವಾದ ಗಾಂಧಿಚೌಕದಲ್ಲಿರುವ ಪಾದಚಾರಿ ಮೇಲ್ಸೇತುವೆ ಶಿಥಿಲಾವಸ್ತೆಯಲ್ಲಿದ್ದರೂ ದುರಸ್ಥಿ ಕೆಲಸ ಆಗುತ್ತಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ವಿಜಯಪುರದಲ್ಲಿ ಶಿಥಿಲಾವಸ್ಥೆ ತಲುಪಿರುವ ಪಾದಚಾರಿ ಮೇಲ್ಸೇತುವೆ
ವಿಜಯಪುರದಲ್ಲಿ ಶಿಥಿಲಾವಸ್ಥೆ ತಲುಪಿರುವ ಪಾದಚಾರಿ ಮೇಲ್ಸೇತುವೆ

ವಿಜಯಪುರ: ನಗರದ ಹೃದಯ ಭಾಗದಲ್ಲಿರುವ ಫ್ಲೈಓವರ್ ಬಹುತೇಕ ಶಿಥಿಲಾವಸ್ಥೆಗೆ ತಲುಪಿದ್ದು ಯಾವ ಸಮಯದಲ್ಲಾದರು ಫ್ಲೈಓವರ್ ಕುಸಿದು ಬೀಳುವ ಹಂತದಲ್ಲಿದ್ದು, ಸಾರ್ವಜನಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಹೃದಯಭಾಗದ ಗಾಂಧಿ ಚೌಕ್ ನಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟಲು ಅನುಕೂಲವಾಗಲು ಫ್ಲೈಓವರ್ ನಿರ್ಮಿಸಲಾಗಿದೆ ಆದರೆ ಸಧ್ಯ ಈ ಫ್ಲೈಓವರ್ ಶಿಥಿಲಾವಸ್ಥೆಗೆ ತಲುಪಿದ್ದು ಇಂದು - ನಾಳೆ ಬೀಳುವ ಹಂತದಲ್ಲಿರುವ ಫ್ಲೈಓವರ್ ಬಲಿಗಾಗಿ ಕಾಯುತ್ತಿದೆ.

ನಗರದ ಹೃದಯಭಾಗ ವಾಗಿರುವುದರಿಂದ ಅದರಲ್ಲೂ ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಸಹಜವಾಗಿಯೇ ಇಲ್ಲ ಸಾರ್ವಜನಿಕರ ಓಡಾಟ ಹೆಚ್ಚಿರುತ್ತದೆ ಪ್ರತಿನಿತ್ಯ ಸಾರ್ವಜನಿಕರು ಒಂದಿಲ್ಲ ಒಂದು ಕೆಲಸದಿಂದ ಮಾರುಕಟ್ಟೆಗೆ ಬರುತ್ತಲೆ ಇರುತ್ತಾರೆ ಆದರೆ ಮಾರುಕಟ್ಟೆಗೆ ಬಂದಂತಹ ಸಂದರ್ಭದಲ್ಲಿ ರಸ್ತೆ ದಾಟಲು ಕೆಲವರು ರಸ್ತೆಯನ್ನು ಬಳಸಿದರೆ ಇನ್ನು ಕೆಲವರು ಇದೇ ಫ್ಲೈಓವರ್ ಬಳಸುತ್ತಾರೆ.

ಆದರೆ ಫ್ಲೈಓವರ್ ಕೆಳಭಾಗ ಸಂಫೂರ್ಣವಾಗಿ ಕೊಳೆತು ಕಾಂಕ್ರಿಟ್ ಪದರುಗಳು ಉದುರಿ ಕೆಳಗೆ ಬೀಳುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಗಾಂಧಿ ಚೌಕ್ ನಲ್ಲಿರುವ ಸಿಗ್ನಲ್ ಗೆ ನಿಲ್ಲಬೇಕಾದರೆ ಇದೇ ಫ್ಲೈಓವರ್ ಕೆಳಗಡೆ ವಾಹನ ಸವಾರರು ನಿಲ್ಲಬೇಕಾದ ಪರಿಸ್ಥಿತಿ ಇರುವುದರಿಂದ ವಾಹನ ಸವಾರರು ಸಹ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಈ ಸಿಗ್ನಲ್ ನಲ್ಲಿ ಫ್ಲೈಓವರ್ ಕೆಳಗಡೆ ನಿಲ್ಲಬೇಕಾಗಿದೆ.

ಈ ಹಿಂದೆ ಬಿಎಲ್‌ಡಿಇ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಗಾಂಧಿವೃತ್ತದ ಈ ಸೇತುವೆ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿದ್ದರು. ಇಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಕ್ರಮಗಳಿಲ್ಲ ಎನ್ನುವುದನ್ನು ಗುರುತಿಸಿದ್ದರು. ಈ ವರದಿ ಆಧರಿಸಿಯೇ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸುಧಾರಣೆ ಕ್ರಮ ಕೈಗೊಂಡರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ

ವಿಜಯಪುರ ಪಾಲಿಕೆಗೂ ಫ್ಲೈಓವರ್ ಗೂ ಏನು ಸಂಬಂಧವೇ ಇಲ್ಲವೆಂಬಂತೆ ಪಾಲಿಕೆ ಅಧಿಕಾರಿಗಳು ವರ್ತಿಸುತ್ತಿರುವುದು ಜನರ ಜೀವಕ್ಕೆ ಕುತ್ತು ತಂದಿಟ್ಟಿದ್ದು ಬಲಿಗಾಗಿ ಪಾಲಿಕೆ ಅಧಿಕಾರಿಗಳೆ ಕಾಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುವಂತಾಗಿದೆ.

ಫ್ಲೈಓವರ್ ಶಿಥಿಲಾವಸ್ಥೆಗೆ ಬಂದಿದ್ದರು ಅದನ್ನು ದುರಸ್ತಿ ಮಾಡಲು ಇದುವರೆಗೂ ಪಾಲಿಕೆ ಮುಂದಾಗದೆ ಇರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ಫ್ಲೈಓವರ್ ನ ಕೆಳಭಾಗದ ಕಾಂಕ್ರಿಟ್ ಪದರುಗಳು ಉದುರಿ ಬೀಳುತ್ತಿದ್ದರು ಅದನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಗೋಜಿಗೆ ಪಾಲಿಕೆ ಮುಂದಾಗುತ್ತಿಲ್ಲ. ನಿದ್ದೆ ಕಣ್ಣಿಂದ ಅಧಿಕಾರಿಗಳು ಎದ್ದು ಬಂದು ಫ್ಲೈಓವರ್ ಸ್ಥಿತಿ ಪರಿಶೀಲನೆ ನಡೆಸಬೇಕಾಗಿದೆ ಎನ್ನುವುದು ಸ್ಥಳೀಯರ ಆಕ್ರೋಶದ ನುಡಿ.

ಸಾರ್ವಜನಿಕರ ಒತ್ತಾಯ

ನಿತ್ಯ ಸಾವಿರಾರು ಜನರು ಒಡಾಡುತ್ತಿರುತ್ತಾರೆ. ಯಾರದಾದರೂ ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಕೂಡಲೇ ಪಾಲಿಕೆ ಅಧಿಕಾರಿಗಳು ಈ ಫ್ಲೈಓವರ್ ದುರಸ್ತಿಗೆ ಮುಂದಾಗಬೇಕೆಂದು ಇಲ್ಲಿನ ನಿವಾಸಿ ಫಜಲ್ ಮನಗೂಳಿ ಆಗ್ರಹಿಸಿದ್ದಾರೆ.

ಈಗಾಗಲೇ ಮೇಲ್ಸೇತುವೆ ಕುಸಿಯುವ ಹಂತಕ್ಕೆ ಬಂದಿದೆ. ಈ ಮೇಲ್ಸೇತುವೆ ತೆಗೆದು ಮತ್ತೊಂದು ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಒಂದು ವೇಳೆ ಸೇತುವೆ ಕುಸಿದು ಯಾರದಾದರೂ ಜೀವಕ್ಕೆ ಹಾನಿಯಾದರೆ ಅದಕ್ಕೆ ಪಾಲಿಕೆ ಅಧಿಕಾರಿಗಳೆ ಹೋಣೆಗಾರರಾಗಲಿದ್ದಾರೆ ಹೀಗಾಗಿ ಶೀಘ್ರ ಸೇತುವೆ ದುರಸ್ತಿ ಕಾರ್ಯಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಆರು ವರ್ಷಗಳ ಹಿಂದೆ ಸಾರ್ವಜನಿಕರಿಗೆ ರಸ್ತೆ ದಾಟಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಫ್ಲೈಓವರ್ ನಿರ್ಮಿಸಲಾಗಿದೆ. ಆದರೆ ಆರೇ ವರ್ಷದಲ್ಲಿ ಫ್ಲೈಓವರ್ ಶಿಥಿಲಾವಸ್ಥೆಗೆ ತಲುಪಿದ್ದು ಸಾರ್ವಜನಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

(ವರದಿ: ಸಮೀವುಲ್ಲಾ ಉಸ್ತಾದ)

Whats_app_banner