ಕನ್ನಡ ಸುದ್ದಿ  /  Karnataka  /  Vijayapura News Vijayapura Mp Ramesh Jigajinagi Assets Increased 9198.3 Percentage In 15 Years Adr Releases Details Smu

Vijayapura News: 15 ವರ್ಷದಲ್ಲಿ ವಿಜಯಪುರ ಸಂಸದ ಜಿಗಜಿಣಗಿ ಆಸ್ತಿ ಶೇ. 9198.3 ಏರಿಕೆ ! ಏನಿರಬಹುದು ಕಾರಣ

ವಿಜಯಪುರ ಲೋಕಸಭಾ ಕ್ಷೇತ್ರದ ಸದಸ್ಯ ರಮೇಶ ಜಿಗಜಿಣಗಿ ಅವರ ಆಸ್ತಿ ನಿರೀಕ್ಷೆಗೂ ಮೀರಿ ಏರಿದೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ
ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ

ವಿಜಯಪುರ: ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ಕುರಿತು ದೆಹಲಿ ಮೂಲದ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಸ್ಮ್‌ (ಎಡಿಆರ್) ನೀಡಿರುವ ವರದಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಸಂಸದ ರಮೇಶ ಜಿಗಜಿಣಗಿ ಅವರ ಆಸ್ತಿಯಲ್ಲಿ ಹಲವು ಪಟ್ಟು ಏರಿಕೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಹುಟ್ಟು ಹಾಕಿದೆ. ಅಸೋಸಿಯೇಶನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ವರದಿಯಿಂದ ಸಂಸದರ ಆಸ್ತಿಯಲ್ಲಿ ಹಲವುಪಟ್ಟು ಏರಿಕೆಯಾಗಿರುವ ಕುರಿತು ದಾಖಲೆ ಇದೆ. 2004 ರಲ್ಲಿ ಇದ್ದ ಆಸ್ತಿಗೂ ಹಾಗೂ 2019ರವರೆಗೆ ಇರುವ ಆಸ್ತಿಗೆ ಹೋಲಿಕೆ ಮಾಡಿ ನೋಡಿದಾಗ ಸುಮಾರು ಶೇ. 9198.3 ಏರಿಕೆಯಾಗಿರುವುದು ಕಂಡು ಬಂದಿದೆ.

ಚಿಕ್ಕೋಡಿ ಕೇತ್ರದಲ್ಲಿ ಮೂರು ಬಾರಿ ಸಂಸದರಾಗಿ, ಆನಂತರ ವಿಜಯಪುರ ಕ್ಷೇತ್ರವನ್ನು ಸತತ ಮೂರು ಪ್ರತಿನಿಧಿಸುವುದೂ ಸೇರಿ ಸತತ ಆರು ಬಾರಿ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರನ್ನು ಸೋಲಿಲ್ಲದ ಸರದಾರ ಎಂದು ಕರೆಯಲಾಗುತ್ತದೆ. ಸತತವಾಗಿ ಮೂರು ಬಾರಿ ವಿಜಯಪುರ ಸಂಸದರಾಗಿ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ ಅವರು, ಕಳೆದ ಲೋಕಸಭಾ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿಯೂ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಆದರೆ 2004ರಿಂದ ಇಲ್ಲಿಯವರೆಗೆ ಸಂಸದ ಜಿಗಜಿಣಗಿ ಅವರ ಆಸ್ತಿಯಲ್ಲಿ ಏರಿಕೆಯಾಗುತ್ತಲೆ ಇದ್ದು ಸಂಸದರ ಆಸ್ತಿಯ ಕುರಿತು ಎಡಿಆರ್ ವರದಿ ಬಹಿರಂಗ ಪಡಿಸಿದೆ. ಸಂಸದರು ತಾವು ಚುನಾವಣೆಗೆ ಸ್ಪರ್ಧಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡೆವಿಟ್ ಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.

2004 ರಿಂದ 2019ರ ಅವಧಿಯಲ್ಲಿ ಅಂದರೆ 15 ವರ್ಷದಲ್ಲಿ ಸುಮಾರು ಶೇ. 9198.3 ಪಟ್ಟು ಆಸ್ತಿಯಲ್ಲಿ ಹೆಚ್ಚಳವಾಗಿದೆ. 2004ರಲ್ಲಿ 54.80 ಲಕ್ಷ ರೂ. ಗಳ ಓಡೆಯ ಜಿಗಜಿಣಗಿ ಇದ್ದರು. ಆದರೆ ಅದು 2019 ಬರುವಷ್ಟರಲ್ಲಿ 50 ಕೋಟಿ ರೂ. ಗೂ ಅಧಿಕವಾಗಿದೆ. ಇನ್ನು 2014 ರಿಂದ 2019ರ ಐದು ವರ್ಷದ ಅವಧಿಯಲ್ಲಿಯೇ ಸುಮಾರು ಶೇ. 464 ಆಸ್ತಿ ಹೆಚ್ಚಳವಾಗಿದೆ.

2004ರಲ್ಲಿ 54,80,600 ಇದ್ದ ಆಸ್ತಿ 2009ರಲ್ಲಿ 1,17,53,725 ರೂ. (1.70 ಕೋಟಿ) ಆಗಿದೆ. ಅಂದರೆ ಈ ಐದು ವರ್ಷದಲ್ಲಿ ಸುಮಾರು ಶೇ. 114 ಹೆಚ್ಚಾಗಿದೆ. ನಂತರ 2009 ರಿಂದ 2014ರ ಐದು ವರ್ಷದ ಅವಧಿಯಲ್ಲಿ ಸುಮಾರು ಒಂದು ಕೋಟಿ ಇದ್ದ ಆಸ್ತಿ 8,94,29,828 (8.94 ಕೋಟಿ) ರೂ. ಆಗಿದೆ.

ಇನ್ನು ಕಳೆದ ಐದು ವರ್ಷದ ಅಂದರೆ 2014 ರಿಂದ 2019ರ ಅವಧಿಯಲ್ಲಿ ಸುಮಾರು ಶೇ. 464 ಆಸ್ತಿಯಲ್ಲಿ ಹೆಚ್ಚಳವಾಗಿದೆ ಎಂದು ಎಡಿಆರ್ ವರದಿಯಲ್ಲಿದೆ. 2014ರಲ್ಲಿ ಸುಮಾರು 8,94,29,828 (8.94 ಕೋಟಿ) ರೂ. ಇದ್ದ ಆಸ್ತಿಯು 2019ರವರೆಗೆ ಸುಮಾರು 50,41,22,985 (50.41 ಕೋಟಿ) ರೂ. ಆಗಿದೆ.

ಇದರಲ್ಲಿ ಸ್ಥಿರಾಸ್ಥಿ ಹಾಗೂ ಚರಾಸ್ಥಿ ಎರಡರಲ್ಲೂ ಏರಿಕೆ ಕಂಡು ಬಂದಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವಾರ ಎಡಿಆರ್‌ ಬಿಡುಗಡೆ ಮಾಡಿದ್ದ ಐದು ವರ್ಷದಲ್ಲಿ ಸದನದಲ್ಲಿ ಮಾತನಾಡದ ಒಂಬತ್ತು ಸಂಸದರ ಪಟ್ಟಿಯಲ್ಲಿ ರಮೇಶ್‌ ಜಿಗಜಿಣಗಿ ಅವರ ಹೆಸರಿತ್ತು. ಈಗ ಆದಾಯ ಏರಿಕೆಯಾದವರ ಪಟ್ಟಿಯಲ್ಲೂ ಅವರ ಹೆಸರಿದೆ.

ಇನ್ನು ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಎಡಿಆರ್ ವರದಿ ಈ ಬಾರಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮುಳುವಾಗುತ್ತಾ ಎಂಬ ಚರ್ಚೆಗಳು ಕೂಡು ಆರಂಭವಾಗಿದ್ದು ಸಂಸದ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ಸಿಗುತ್ತಾ ಎನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.

(ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ)