Vijayapura News: ಲೋಕಸಮರದಲ್ಲಿ ತಾರಕಕ್ಕೇರಿದ ವಿಜಯಪುರದ ಯತ್ನಾಳ -ಶಿವಾನಂದ ಪಾಟೀಲ ವಾಕ್ಸಮರ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಲೋಕಸಮರದಲ್ಲಿ ತಾರಕಕ್ಕೇರಿದ ವಿಜಯಪುರದ ಯತ್ನಾಳ -ಶಿವಾನಂದ ಪಾಟೀಲ ವಾಕ್ಸಮರ

Vijayapura News: ಲೋಕಸಮರದಲ್ಲಿ ತಾರಕಕ್ಕೇರಿದ ವಿಜಯಪುರದ ಯತ್ನಾಳ -ಶಿವಾನಂದ ಪಾಟೀಲ ವಾಕ್ಸಮರ

ವಿಜಯಪುರದಲ್ಲಿ ಲೋಕಸಭೆ ಚುನಾವಣೆ ವೇಳೆ ಪಾಟೀಲರ ರಾಜಕಾರಣ ಜೋರಾಗಿದೆ. ಯತ್ನಾಳ್‌ ಹಾಗೂ ಶಿವಾನಂದ ಪಾಟೀಲ್‌ ಮಾತಿನ ಸಮರ ನಡೆದಿದೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ಯತ್ನಾಳ್‌ ಹಾಗೂ ಶಿವಾನಂದ ಪಾಟೀಲ್‌ ನಡುವೆ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ.
ಯತ್ನಾಳ್‌ ಹಾಗೂ ಶಿವಾನಂದ ಪಾಟೀಲ್‌ ನಡುವೆ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ.

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬಿರುಬಿಸಿಲಿನ ಕಾವು ಏರಿದಂತೆ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹಾಗೂ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಮೇಶ ಜಿಗಜಿಣಗಿ ಅವರ ವಾಗ್ವಾದಕ್ಕಿಂತಲೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲರಿಗೆ ಮಾಡಿರುವ ಪಂಥಾಹ್ವಾನ ಹೆಚ್ಚು ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಸಚಿವ ಶಿವಾನಂದ ಪಾಟೀಲರು ವಿಜಯಪುರ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಯತ್ನಾಳ ಸ್ಪರ್ಧೆ ಮಾಡಲಿ ಎಂದು ಆಹ್ವಾನ ನೀಡಿದ್ದರು.

ಸಾಂಪ್ರದಾಯಿಕ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಹಾಲಿ ಸಚಿವ ಶಿವಾನಂದ ಪಾಟೀಲರ ಹೇಳಿಕೆ-ಪ್ರತಿ ಹೇಳಿಕೆಗೆ ದೊಡ್ಡ ಇತಿಹಾಸವಿದೆ. ಈಗ ಪುನ: ಗುಡುಗಿರುವ ಯತ್ನಾಳ ಶಿವಾನಂದ ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ. ಯತ್ನಾಳ ಪಂಥಾಹ್ವಾನದ ನಂತರ ಸಚಿವ ಶಿವಾನಂದ ಪಾಟೀಲ ಇನ್ನೂ ಯಾವ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಆದರೂ ಸಹ ಈ ಇಬ್ಬರು ನಾಯಕರ ವಾಕ್ಸಮರ ಮತ್ತೆ ತಾರಕಕ್ಕೇರಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

ಈ ಇಬ್ಬರು ನಾಯಕರ ರಾಜಕೀಯ ವಾಗ್ವಾದ ಹೊಸದೇನೂ ಅಲ್ಲ. 1994ರಲ್ಲಿ ಇಬ್ಬರೂ ಶಾಸಕರಾದಾಗಿನಿಂದಲೂ ಇದೆ. ಆಣೆ-ಪ್ರಮಾಣದ ಹಂತಕ್ಕೂ ಹೋದ ಉದಾಹರಣೆ ಇದೆ. ಹಲವಾರು ಬಾರಿ ಉಭಯ ನಾಯಕರು ಬಹಿರಂಗವಾಗಿಯೇ ಆರೋಪ-ಪ್ರತಿ ಆರೋಪ ಮಾಡುವುದು ಹೊಸತಲ್ಲ. ಆದರೆ ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಈ ಜಿದ್ದಾಜಿದ್ದು ಕೇಳಿ ಬರುತ್ತಿದೆ.

ಸುದೀರ್ಘ ಇತಿಹಾಸ

1994ರಲ್ಲಿ ಯತ್ನಾಳ್‌ ಬಿಜೆಪಿಯಿಂದ ವಿಜಯಪುರ ನಗರ ಶಾಸಕರಾದರೆ, ಶಿವಾನಂದಪಾಟೀಲ್‌ ತಿಕೋಟಾದಿಂದ ಜನತಾದಳದಿಂದ ಗೆದ್ದಿದ್ದರು. ಮುಂದೆ ಶಿವಾನಂದ ಪಾಟೀಲ್‌ ಬಿಜೆಪಿಗೆ ಬಂದು ಗೆದ್ದರೆ, ಯತ್ನಾಳ್‌ ಸಂಸದರಾಗಿ ಕೇಂದ್ರ ರಾಜಕಾರಣಕ್ಕೆ ಹೋದರು. ಆನಂತರ ಶಿವಾನಂದ ಪಾಟೀಲ್‌ ಕಾಂಗ್ರೆಸ್‌ ಸೇರಿ ಬಸನವಬಾಗೇವಾಡಿ ಕ್ಷೇತ್ರದಿಂದ ಗೆಲ್ಲುತ್ತಿದ್ದಾರೆ. ಜೆಡಿಎಸ್‌ಗೆ ಹೋಗಿ ಬಿಜೆಪಿಗೆ ವಾಪಾಸಾದ ಯತ್ನಾಳ್‌ ಈಗ ಸತತ ಎರಡು ಬಾರಿ ವಿಜಯಪುರ ನಗರದಿಂದ ಗೆದ್ದಿದ್ದಾರೆ. ಆದರೆ ಶಿವಾನಂದ ಪಾಟೀಲ್‌ ಅವರನ್ನು ಬಿಜೆಪಿಗೆ ಸೆಳೆದು ವಿಜಯಪುರ ನಗರ ಕ್ಷೇತ್ರ ಅಭ್ಯರ್ಥಿಯಾಗಿಸುವ ಪ್ರಯತ್ನವನ್ನು ಬಿ.ಎಸ್.ಯಡಿಯೂರಪ್ಪ ಹಲವು ಬಾರಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕಾರಣವೂ ಸೇರಿ ಮೊದಲಿನಿಂದಲೂ ಇಬ್ಬರ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆದೇ ಇದೆ.

ಈಗ ಜಿದ್ದು ಏಕೆ?

ಯತ್ನಾಳ ಅವರ ಸಾರಥ್ಯದ ಚಿಂಚೋಳಿ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡುವ ವಿಷಯವಾಗಿ ಯತ್ನಾಳ ಸಚಿವ ಶಿವಾನಂದ ಪಾಟೀಲರ ಮೇಲೆ ಪುನ: ವಾಕ್‌ಸಮರ ಮುಂದುವರೆಸಿದ್ದಾರೆ. ಈ ಹಿಂದೆ ಹಿರೇಬೇವನೂರ ಸಕ್ಕರೆ ಕಾರ್ಖಾನೆ ವಿಷಯವಾಗಿಯೂ ಇಬ್ಬರು ನಾಯಕರ ನಡುವೆ ವಾಕ್ ಸಮರ ಜಿಲ್ಲೆಯ ಗಮನವನ್ನೇ ಕೇಂದ್ರಿಕರಿಸಿತ್ತು.

ಕಳೆದ ಕೆಲ ವರ್ಷಗಳ ಹಿಂದಷ್ಟೇ ವಿಜಯಪುರ ನಗರ ಶಾಸಕ ಯತ್ನಾಳ ಅವರು ಶಿವಾನಂದ ಪಾಟೀಲರ ಕೌಟುಂಬಿಕ ಉದ್ಯಮದ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಖಾರವಾಗಿಯೇ ಶಿವಾನಂದ ಪಾಟೀಲರು ಪ್ರತಿಕ್ರಿಯೆ ನೀಡಿದ ನಂತರ ಈ ವಿವಾದ ತಣ್ಣಗಾಯಿತು.

ಲೋಕ ಸಮರಕ್ಕೆ ಪಂಥಾಹ್ವಾನ

ಕೆಲವೇ ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗುತ್ತದೆ, ಲೋಕಸಭಾ ಕ್ಷೇತ್ರಗಳ ಸಂಖ್ಯೆ ಅಧಿಕವಾಗಲಿದೆ, ಸರಿಸುಮಾರು 3 ಜನರು ಜಿಲ್ಲೆಯನ್ನು ಪ್ರತಿನಿಧಿಸಬಹುದು. ಹೀಗಾಗಿ ಒಂದು ಸಾಮಾನ್ಯ ಕ್ಷೇತ್ರದಲ್ಲಿ ನಾನಂತೂ ಸ್ಪರ್ಧಿಸುವುದು ನಿಶ್ಚಿತ. ನನ್ನ ವಿರುದ್ದ ಸ್ಪರ್ಧೆಗೆ ಅಣಿಯಾಗಿ ಎಂದು ಯತ್ನಾಳ್‌ ಸವಾಲನ್ನು ಹಾಕಿದ್ದಾರೆ. ಶಿವಾನಂದ ಪಾಟೀಲರು ತಮ್ಮ ಪುತ್ನಿ ಸಂಯುಕ್ತ ಪಾಟೀಲ್‌ ಅವರನ್ನು ಪಕ್ಕದ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದಾರೆ. ಅವರು ಅಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೂ ಉತ್ತರ ಕೊಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ವರದಿ: ಸಮೀವುಲ್ಲಾ, ಉಸ್ತಾದ್‌, ವಿಜಯಪುರ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner