ಕನ್ನಡ ಸುದ್ದಿ  /  Karnataka  /  Vijayapura Water Problem Where Are Thousand Of Bawdi In Bijapur Water Sources In Vijayapur Smu

ವಿಜಯಪುರದಲ್ಲಿ ನೀರಿನ ಸಮಸ್ಯೆ; ಸಾವಿರ ಬಾವಡಿಗಳು ಮಾಯವಾದವೆಲ್ಲಿ?

Vijayapura Bawdi: ವಿಜಯಪುರದಲ್ಲಿದ್ದ ಸಾವಿರಾರು ಬಾವಡಿಗಳು ಎಲ್ಲಿ ಹೋದವು ಎಂಬ ಪ್ರಶ್ನೆ ನೀರಿನ ಸಮಸ್ಯೆ ತಲೆದೋರಿರುವ ಈ ವೇಳೆಯಲ್ಲಿ ಮುನ್ನೆಲೆಗೆ ಬಂದಿದೆ.

ವಿಜಯಪುರ ಬಾವಡಿಗಳು
ವಿಜಯಪುರ ಬಾವಡಿಗಳು

ವಿಜಯಪುರ: ಅನೇಕ ಗುಮ್ಮಟಗಳನ್ನು ಹೊಂದಿರುವ ವಿಜಯಪುರ ನಗರ ಗುಮ್ಮಟ ನಗರಿ ಎಂದೇ ಪ್ರಸಿದ್ಧಿ. ಆದರೆ ಇಲ್ಲಿ ದೊಡ್ಡ ಸಂಖ್ಯೆಯ ಅಂದರೆ ಬಾರಾ ಸೌ ಬಾವಡಿ ಸಹ ಇಲ್ಲಿದ್ದವು ಎಂದು ಇತಿಹಾಸ ಪುಟದಲ್ಲಿ ದಾಖಲಾಗಿರುವುದು ಗಮನ ಸೆಳೆಯುತ್ತವೆ, ಹಾಗಾದರೆ ವಿಜಯಪುರ ಒಂದು ರೀತಿ ಬಾವಡಿಗಳ ನಗರವೂ ಸಹ ಹೌದು. ಬಾವಡಿಗಳೆಂದರೆ ಒಂದು ರೀತಿಯ ಜಲಮೂಲಗಳು. ಇಷ್ಟೊಂದು ಸಂಖ್ಯೆಯ ಬಾವಡಿಗಳಲ್ಲಿ ಈಗ ಉಳಿದಿರುವುದು ಬೆರಳಣಿಕೆಯಷ್ಟು ಮಾತ್ರ, ಇನ್ನೂ ಕೆಲವು ಕಾಲಗರ್ಭಕ್ಕೆ ಸೇರಿ ಮಾಯವಾಗಿವೆ. ಕೆಲವು ವರ್ಷಗಳ ಹಿಂದೆಯೂ ಸಹ ಅನೇಕ ತಾಜಬಾವಡಿ, ಚಂದಾಬಾವಡಿ, ಇಬ್ರಾಹಿಂಪೂರ ಬಾವಡಿ ಸಹ ಕೇವಲ ಅಸ್ತಿತ್ವವಷ್ಟೇ ಉಳಿಸಿಕೊಂಡು ಗತ ವೈಭವ ಕಳೆದುಕೊಂಡಿದ್ದವು. ಆದರೆ ಈ ಬಾವಡಿಗಳ ಪುನರುಜ್ಜೀವನವಾಗಿ ಮತ್ತೆ ಆದಿಲ್‌ಷಾಹಿ ಕಾಲದ ಜಲವೈಭವ ನಿರೂಪಿಸುತ್ತಿವೆ. ಆದರೆ ವಿಜಯಪುರದಲ್ಲಿದ್ದ ಸಾವಿರಾರು ಬಾವಡಿಗಳು ಎಲ್ಲಿ ಹೋದವು ಎಂಬ ಪ್ರಶ್ನೆ ನೀರಿನ ಸಮಸ್ಯೆ ತಲೆದೋರಿರುವ ಈ ವೇಳೆಯಲ್ಲಿ ಮುನ್ನೆಲೆಗೆ ಬಂದಿದೆ.

ಇಂದು ಕೆಲವೇ ಬಾವಿಗಳು ನೋಡಲು ಮಾತ್ರ ಸಿಗುತ್ತವೆ. ಅದರಲ್ಲಿ ಕೆಲವು ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ತುಂಬಿರುತ್ತವೆ. ಇನ್ನೂ ಕೆಲವು ಬಾವಿಗಳು ಇದ್ದರೂ ಪತ್ತೆ ಹಚ್ಚದಂತಹ ಪರಿಸ್ಥಿತಿಯಲ್ಲಿ ಶಿಥಿಲವಾಗಿ ಹೋಗಿವೆ. ಬಹುತೇಕ ಬಾವಿಗಳು ನಾಪತ್ತೆಯಾಗಿರುವುದು ಮಾತ್ರ ದುರ್ದೈವ. ವಿಜಯಪುರದ ಬಾವಡಿಗಳಲ್ಲೇ ಅತ್ಯಂತ ಸುಂದರ ವಾಸ್ತುಶಿಲ್ಪದೊಂದಿಗೆ ನಿರ್ಮಾಣವಾಗಿರುವ ಬೃಹದಾಕಾರದ ಬಾವಡಿಗಳೆಂದರೆ ತಾಜ್ ಬಾವಡಿ ಮತ್ತು ಚಾಂದ್ ಬಾವಡಿ. ಈ ಎರಡು ಬಾವಿಗಳಿಗೆ ಇಂದಿಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಇನ್ನುಳಿದ ಪ್ರಮುಖ ಬಾವಡಿಗಳಾದ ಅಲಿಖಾನ್ ಬಾವಡಿ, ಇಬ್ರಾಹಿಂಪುರ ಬಾವಡಿ, ಇಲಾಲ ಬಾವಡಿ, ಅಂಧೇರಿ ಬಾವಡಿ, ಗುಮ್ಮಟ ಬಾವಡಿ, ಥಾಲ ಬಾವಡಿ, ದೌಲತ್ ಬಾವಡಿ, ನಗರ್ ಬಾವಡಿ, ನವಾನ್ ಬಾವಡಿ, ನಾಲಬಂದ್ ಬಾವಡಿ, ನೀಮ್ ಬಾವಡಿ, ಬಸ್ತಿ ಬಾವಡಿ, ಮಸ್ಜಿದ್ ಬಾವಡಿ, ಮಾಲ್ ಬಾವಡಿ, ವಲಸ್ ಬಾವಡಿ, ಮುಕ್ರಿ ಬಾವಡಿ, ಮುಬಾರಕ್‌ಖಾನ್ ಬಾವಡಿ, ಹಾಸಿಂಪೀರ ದರ್ಗಾ ಬಾವಡಿ, ಸೋನಾರ ಬಾವಡಿಗಳು ಇವೆ, ಆದರೆ ಇವುಗಳನ್ನು ಪ್ರವಾಸಿಗರು ಒಂದೆಡೆ ಇರಲಿ ಸ್ಥಳೀಯರೇ ನೋಡಿದ್ದು ಅಪರೂಪ, ಈ ಬಾವಡಿಗಳ ಹೆಸರು ಉಲ್ಲೇಖಿಸಿದರೆ ವಿಜಯಪುರಿಗರೇ ಅಚ್ಚರಿ ಪಟ್ಟರೂ ಆಶ್ವರ್ಯವಿಲ್ಲ.

ವಿಜಯಪುರ ನಗರದಲ್ಲಿ ಇಂದಿಗೂ ಕೂಡ ಸುಮಾರು 200 ದೊಡ್ಡ, ಸಣ್ಣ ಬಾವಿಗಳು (ಬಾವಡಿ) ಕಾಣಲು ಸಿಗುತ್ತವೆ. ಅವುಗಳಲ್ಲಿ 20ಕ್ಕಿಂತ ಅಧಿಕ ಬಾವಿಗಳ ನೀರನ್ನು ಜನರು ಉಪಯೋಗಿಸುತ್ತಿದ್ದಾರೆ. ಅವುಗಳ ವಾಸ್ತು ರಚನೆ ಒಂದಕ್ಕಿಂತ ಒಂದು ಭಿನ್ನ ಎಂದು ಸಂತೋಷದಿಂದ ಹೇಳುತ್ತಾರೆ ವಿಜಯಪುರದ ಖ್ಯಾತ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಆದರೆ, ಬಾವಡಿಗಳನ್ನು ಹೊರಗಿಟ್ಟಿದೆ. ಬಾವಿಗಳ ಸಂರಕ್ಷಣೆಗೆ ಆದ್ಯತೆ ನೀಡಿಲ್ಲ. ಜಿಲ್ಲಾಡಳಿತದ ವಶದಲ್ಲಿ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ಆತಂಕ ಹೊರಹಾಕಿದರು.

ಅನೇಕ ಬಾವಡಿಗಳು ಪ್ರಭಾವಿಗಳಿಂದ ಒತ್ತುವರಿಯಾಗಿ, ನಿವೇಶನಗಳಾಗಿವೆ. ಇನ್ನು ಕೆಲವು ಖಾಸಗಿ ಸ್ವತ್ತುಗಳಾಗಿವೆ. ಇನ್ನು ಕೆಲವು ತ್ಯಾಜ್ಯದಿಂದ ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿವೆ. ಐತಿಹಾಸಿಕ ಬಾವಡಿಗಳನ್ನು ಸರ್ಕಾರ, ಜನಪ್ರತಿನಿಧಿಗಳು ಗುರುತಿಸಿ ಪುನಶ್ಚೇತನಗೊಳಿಸಿ, ಸಂರಕ್ಷಿಸಲು ಆದ್ಯತೆ ನೀಡಬೇಕು ಎಂಬುದು ಕರ್ನಾಟಕ ಜಲ ಬಿರಾದರಿ ಸಂಸ್ಥೆಯ ಪ್ರಮುಖರಾದ ಪೀಟರ್ ಅಲೆಕ್ಸಾಂಡರ್ ಅವರ ಹಕ್ಕೊತ್ತಾಯ.

ಐತಿಹಾಸಿಕ ಬಾವಡಿಗಳನ್ನು ಸ್ವಚ್ಛಗೊಳಿಸಿ ಆ ನೀರನ್ನು ಸಾರ್ವಜನಿಕ ಶೌಚಾಲಯಗಳಿಗೆ, ಗಾರ್ಡನ್‌ಗಳಿಗೆ ಹಾಗೂ ಇನ್ನೀತರ ಬಳಕೆಗೆ ಉಪಯೋಗಿಸಿಕೊಳ್ಳಲು ನಾಲ್ಕು ಶತಮಾನಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ, ತ್ಯಾಜ್ಯದ ಗುಂಡಿಯಂತಾಗಿದ್ದ ಐತಿಹಾಸಿಕ ತಾಜ್ ಬಾವಡಿ 2016ರಲ್ಲಿ ಪುನಶ್ಚೇತನಗೊಂಡಿದ್ದು, ಸದ್ಯ ಜೀವಜಲದಿಂದ ತುಂಬಿ ನಳನಳಿಸುತ್ತಿದೆ. ಆದರೆ, ಈ ನೀರು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ.ಪಾಟೀಲರು ವಿಶೇಷ ಆಸಕ್ತಿ ವಹಿಸಿ, 2016-17ರಲ್ಲಿ ಕೆಬಿಜಿಎನ್‌ಎಲ್ ಮೂಲಕವಾಗಿ ಅನುದಾನ ಒದಗಿಸಿ, ತಾಜ್ ಬಾವಡಿ ಸೇರಿದಂತೆ ಒಟ್ಟು 26 ಬಾವಡಿಗಳ ಹೂಳು ತೆಗೆಸಿ, ಪುನಶ್ಚೇತನಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆದರೆ, ಬಳಿಕ ಈ ಯೋಜನೆ ನನೆಗುದಿಗೆ ಬಿದ್ದಿದೆ. 'ಬಾವಡಿಗಳ ಪುನರುಜ್ಜೀವನ ಯೋಜನೆ' ಮತ್ತೆ ಜಾರಿಯಾಗಬೇಕಿದೆ ಎಂಬ ಅಭಿಪ್ರಾಯ ಪ್ರತಿಯೊಬ್ಬ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ವರದಿ: ಸಮೀವುಲ್ಲಾ ಉಸ್ತಾದ