ಹೆಚ್ಚುತ್ತಿರುವ ಉಷ್ಣಾಂಶ: ವಿಜಯಪುರದಲ್ಲಿ ವಯೋವೃದ್ದರು, ಮಕ್ಕಳಲ್ಲಿ ಕಾಯಿಲೆ ಭೀತಿ
ಕನ್ನಡ ಸುದ್ದಿ  /  ಕರ್ನಾಟಕ  /  ಹೆಚ್ಚುತ್ತಿರುವ ಉಷ್ಣಾಂಶ: ವಿಜಯಪುರದಲ್ಲಿ ವಯೋವೃದ್ದರು, ಮಕ್ಕಳಲ್ಲಿ ಕಾಯಿಲೆ ಭೀತಿ

ಹೆಚ್ಚುತ್ತಿರುವ ಉಷ್ಣಾಂಶ: ವಿಜಯಪುರದಲ್ಲಿ ವಯೋವೃದ್ದರು, ಮಕ್ಕಳಲ್ಲಿ ಕಾಯಿಲೆ ಭೀತಿ

Vijayapura News: ವಿಜಯಪುರದಲ್ಲಿ ದಿನೇ ದಿನೇ ಉಷ್ಠಾಂಶ ಹೆಚ್ಚಾಗುತ್ತಿದ್ದು, ವಯೋವೃದ್ದರು, ಅಪೌಷ್ಠಿಕತೆ ಹೊಂದಿದವರು, ವಿಶೇಷವಾಗಿ ಚಿಕ್ಕ ಮಕ್ಕಳ ಮೇಲೆ ಇದರ ನೇರ ಪರಿಣಾಮ ಉಂಟು ಮಾಡುತ್ತಿದೆ. ಜಿಲ್ಲೆಯಲ್ಲಿನ ಆಸ್ಪತ್ರೆಗಳು ಮಾತ್ರವಲ್ಲದೇ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಕಂಡು ಬರುತ್ತಿದೆ. (ವರದಿ: ಸಮೀವುಲ್ಲಾ ಉಸ್ತಾದ)

ಹೆಚ್ಚುತ್ತಿರುವ ಉಷ್ಣಾಂಶ (pixabay)
ಹೆಚ್ಚುತ್ತಿರುವ ಉಷ್ಣಾಂಶ (pixabay)

ವಿಜಯಪುರ: ಇಡೀ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಈಗ ರಣ ಬಿಸಿಲಿನ ಹೊಡೆತಕ್ಕೆ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಬಿಸಿಲನಾಡು ಎಂದೆಲ್ಲಾ ಕರೆಯಿಸಿಕೊಳ್ಳುವ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಸಹ ದಿನೇ ದಿನೇ ಉಷ್ಠಾಂಶ ಹೆಚ್ಚುತ್ತಿದೆ. ಈ ಉಷ್ಣಾಂಶದ ಕಾರಣ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಇದರ ನೇರ ಪರಿಣಾಮ ವಯೋವೃದ್ದರು, ಅಪೌಷ್ಠಿಕತೆ ಹೊಂದಿದವರು ಅಲ್ಲದೇ ವಿಶೇಷವಾಗಿ ಚಿಕ್ಕ ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಉಂಟುಮಾಡುತ್ತಿದೆ. ಕಾರಣ ಜಿಲ್ಲೆಯಲ್ಲಿನ ಆಸ್ಪತ್ರೆಗಳು ಮಾತ್ರವಲ್ಲದೇ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಕಂಡು ಬರುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬಸವನಾಡು ವಿಜಯಪುರ ಜಿಲ್ಲೆಯನ್ನ ಬರದನಾಡು, ಬಿಸಿಲ ನಾಡು ಎಂದೆಲ್ಲಾ ಸಹ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿ ಆದರೆ ಅತಿವೃಷ್ಠಿ ಆಗದಿದ್ದರೆ ಅನಾವೃಷ್ಠಿ ಎನ್ನುವ ಸ್ಥಿತಿ ಸದಾ ಇದ್ದೇ ಇರುತ್ತದೆ. ಪ್ರಸಕ್ತ ಸಾಲಿನಲ್ಲಂತೂ ಮಳೆಯ ಕೊರತೆಯಿಂದ ಇಡೀ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿತವಾಗಿದೆ. ಮಳೆಯಿಲ್ಲದೇ ಬೆಳೆಯಿಲ್ಲದೇ, ಅಷ್ಟೋ ಇಷ್ಟೋ ಬಿತ್ತಿದ ಬೆಳೆಗೆ ನೀರಿಲ್ಲದೇ ಅನ್ನದಾತ ಪರಿತಪಿಸುವಂತಾಗಿದೆ. ಕೆರೆಕಟ್ಟೆಗಳೆಲ್ಲಾ ಬತ್ತಿಹೋಗಿದ್ದು, ಮುಂಬರುವ ಮಳೆಗಾಲದವರೆಗೆ ಜನ ಜಾನುವಾರು ಪಶು ಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕರೆ ಸಾಕಪ್ಪ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆಂದು ಬತ್ತಿಹೋದ ಕೆರೆಗಳನ್ನ ಆಲಮಟ್ಟಿ ಜಲಾಶಯದಿಂದ ನೀರು ಹರಿಸಿ ಮತ್ತೆ ತುಂಬಿಸುವ ಕೈಂಕರ್ಯಕ್ಕೆ ಜಿಲ್ಲಾಡಳಿತ ಇತ್ತೀಚೆಗೆ ಮುಂದಾಗಿದೆ.

ಗಾಯದ ಮೇಲೆ ಬರೆ ಎಳೆದಂತೆ ಜಿಲ್ಲೆಯಲ್ಲಿ ದಿನೇ ದಿನೇ ಉಷ್ಠಾಂಶ ಹೆಚ್ಚಾಗುತ್ತಿದ್ದು, ಇದರ ನೇರ ಪರಿಣಾಮ ವಯೋವೃದ್ದರು, ಅಪೌಷ್ಠಿಕತೆ ಹೊಂದಿದವರು ಅಲ್ಲದೇ ವಿಶೇಷವಾಗಿ ಚಿಕ್ಕ ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಉಂಟು ಮಾಡುತ್ತಿದೆ. ಜಿಲ್ಲೆಯಲ್ಲಿನ ಆಸ್ಪತ್ರೆಗಳು ಮಾತ್ರವಲ್ಲದೇ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಕಂಡು ಬರುತ್ತಿದೆ. ಈ ದಿನಮಾನದಲ್ಲಿ ದೇಹದಲ್ಲಿ ನೀರಿನ ಅಂಶದ ಕೊರತೆ ಡಿಹೈಡ್ರೇಶನ್‌ ಮತ್ತು ಹೀಟ್‌ ಸ್ಟ್ರೋಕ್‌ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಕಂಡು ಬರುತ್ತಿದ್ದು ಪಾಲಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ನಿಗಾ ಮತ್ತು ಕಾಳಜಿ ವಹಿಸಬೇಕು ಎನ್ನುವುದು ಚಿಕ್ಕ ಮಕ್ಕಳ ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ಬರುವಂತಹ ದಿನಮಾನದಲ್ಲಿ ಉಷ್ಠಾಂಶ 40 ಡಿಗ್ರಿ ಗಡಿ ದಾಟುವ ದಿನ ಸಹ ದೂರವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಚಿಕ್ಕ ಮಕ್ಕಳನ್ನ ಬಿಸಿಲಿಗೆ ಕೊಂಡೊಯ್ಯುಬಾರದು. ಬಿಸಿಲಿನಲ್ಲಿ ಆಟವಾಡಲು ವಿಶೇಷವಾಗಿ ಶೆಖೆ ಹೆಚ್ಚಾಗಿರುವ ಮಧ್ಯಾಹ್ನದ ವೇಳೆಯಲ್ಲಿ ಬಿಡಬಾರದು. ಅಲ್ಲದೇ ಮಕ್ಕಳು ತಾವಾಗೇ ನೀರು ಕುಡಿಯುವುದಿಲ್ಲ. ಕಾರಣ ತೇವಾಂಶ ಕಡಿಮೆಯಾಗುವುದು, ಬೆವರು ಬರುವುದು ಆಗುತ್ತದೆ. ಕಾರಣ ಪಾಲಕರು ರೋಗ ಬರುವುದಕ್ಕಿಂತ ಮುಂಚೆಯೇ ಜಾಸ್ತಿ ನೀರು ಕುಡಿಸಬೇಕು ಎನ್ನುತ್ತಾರೆ ವೈದ್ಯರು.

ದೇಹಕ್ಕೆ ಅಗತ್ಯವಿರುವಷ್ಠು ತಂಪಾದ ನೀರು, ಅದೂ ಹೆಚ್ಚಾಗಬಾರದು. ಅಲ್ಲದೇ ಮಕ್ಕಳಿಗೆ ಎಣ್ಣೆ ಪದಾರ್ಥಗಳನ್ನ, ಬೇಕರಿ ತಿನಿಸುಗಳನ್ನ ಹೆಚ್ಚಾಗಿ ಕೊಡಬಾರದು. ಮಕ್ಕಳಿಗೆ ವಾಂತಿ ಬೇಧಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಟ್ಟಾರೆಯಾಗಿ ಪ್ರಿವೆಂಶನ್‌ ಈಸ್‌ ಬೆಟರ್‌ ದೆನ್​​ ಕ್ಯೂರ್‌ ಎನ್ನುವಂತೆ ಪಾಲಕರು ಮತ್ತು ಪೋಷಕರು ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ವಿಜಯಪುರ ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿಯವರ ಅಭಿಪ್ರಾಯವಾಗಿದೆ.

ಇನ್ನು ಇಂತಹ ವಿಷಮ ಪರಿಸ್ಥಿತಿಯನ್ನ ಎದುರಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಸಕಲ ರೀತಿಯಲ್ಲಿ ಸೌಲಭ್ಯಗಳನ್ನ ಹೊಂದಿದೆ. ಅಲ್ಲದೇ ಮಕ್ಕಳ ತಜ್ಞ ವೈದ್ಯರು ಮತ್ತು ನರ್ಸಿಂಗ್‌ ಸಿಬ್ಬಂದಿಯವರಿಗೆ ಈಗಾಗಲೇ ವಿಶೇಷ ತರಬೇತಿ ಸಭೆಗಳನ್ನ ನಡೆಸಲಾಗಿದೆ. ಮಕ್ಕಳ ವಾರ್ಡಿನಲ್ಲಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಎನ್‌ಐಸಿಯು ಹೀಗೆ ಎಲ್ಲಾ ರೀತಿಯಿಂದಲೂ ಜಿಲ್ಲಾಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸೌಲಭ್ಯಗಳ ಜೊತೆಗೆ ಸಶಕ್ತವಾಗಿದೆ ಎನ್ನುವುದು ಜಿಲ್ಲಾ ಶಸ್ತ್ರ ಚಿಕಿತ್ಸಕರ ಮಾತವಾಗಿದೆ. ಇನ್ನು ಬೇಸಿಗೆ ಕಾರಣದಿಂದ ವಯೋವೃದ್ದರು ಮಾತ್ರವಲ್ಲದೇ ಎಲ್ಲಾ ವಯೋಮಾನದವರು, ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಪಾಲಕರು ಪೋಷಕರು ಕಾಳಜಿ ವಹಿಸಬೇಕಾದದ್ದು ಅತ್ಯಗತ್ಯವಾಗಿದೆ.

ವರದಿ: ಸಮೀವುಲ್ಲಾ ಉಸ್ತಾದ

Whats_app_banner