ಬೆಳ್ಳಂದೂರು ಡ್ರೋನ್ ಇಮೇಜ್ ಮುಂಬಯಿಯ ಧಾರಾವಿಯ ನೆನಪಿಸಿತು; ಬೆಂಗಳೂರು ನಗರಾಭಿವೃದ್ಧಿ ಯೋಜನೆ ವಿಚಾರ ಚರ್ಚೆಗೆ ಗ್ರಾಸ
ಬೆಳ್ಳಂದೂರು ಡ್ರೋನ್ ಇಮೇಜ್ ಬೆಂಗಳೂರು ಮಹಾನಗರದ ಬೆಳವಣಿಗೆಯ ಅಸಮಾನತೆಯ ಬಗ್ಗೆ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರು ನಗರಾಭಿವೃದ್ಧಿ ಯೋಜನೆ ಕುರಿತು ಚರ್ಚೆಯ ನಡುವೆ ಮುಂಬಯಿ ಧಾರಾವಿಯನ್ನೂ ಕೆಲವರು ನೆನಪಿಸಿಕೊಂಡಿರುವುದು ಕಂಡುಬಂದಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಬೆಳವಣಿಗೆ, ನಗರ ಯೋಜನೆಗಳು ಸದಾ ಚರ್ಚೆಗೆ ಗ್ರಾಸವಾಗುವ ವಿಷಯಗಳು ಎಂಬುದರಲ್ಲಿ ಸಂದೇಹವೇ ಇಲ್ಲ. ಕರ್ನಾಟಕದ ಇತರ ನಗರಗಳು ಕಡೆಗಣಿಸಲ್ಪಟ್ಟಿದ್ದು ಬೆಂಗಳೂರು ಮಾತ್ರವೇ ಕ್ಷಿಪ್ರವಾಗಿ ವಿಸ್ತರಣೆಯಾಗುತ್ತಿದೆ ಎಂಬ ಟೀಕೆಯೂ ಇತ್ತೀಚೆಗೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಈಗ ಬೆಳ್ಳಂದೂರು ಭಾಗದ ವೈಮಾನಿಕ ನೋಟದ ಚಿತ್ರ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಬೆಂಗಳೂರು ನಗರಾಭಿವೃದ್ಧಿ ಯೋಜನೆ ಕುರಿತು ಬಿಸಿಬಿಸಿ ಚರ್ಚೆಗೆ ಇದು ವೇದಿಕೆ ಒದಗಿಸಿದ್ದು, 100ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಪೋಸ್ಟ್ ವೀಕ್ಷಿಸಿದ್ದಾರೆ. ಅಂತಹ ಚರ್ಚೆ ಏನು ನಡೆಯಿತು ಗಮನಿಸೋಣ.
ಮುಂಬಯಿ ಧಾರಾವಿಯ ನೆನಪಿಸಿತು ಬೆಳ್ಳಂದೂರು ಡ್ರೋನ್ ಇಮೇಜ್
ಬೆಳ್ಳಂದೂರು ಡ್ರೋನ್ ಇಮೇಜ್ ನಗರ ಅಸಮಾನತೆಯ ಬಗ್ಗೆ ಬಿಸಿಬಿಸಿಯಾದ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಎರಡು ಪಕ್ಕದ ಸಮುದಾಯಗಳ ನಡುವಿನ ಸಂಪೂರ್ಣ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ, ಒಂದು ಸೂಕ್ಷ್ಮವಾಗಿ ಯೋಜಿಸಲಾದ ಐಷಾರಾಮಿ ವಿಲ್ಲಾ ವಿನ್ಯಾಸ, ಇನ್ನೊಂದು ದಟ್ಟವಾದ ಪ್ಯಾಕ್ ಮಾಡಿದ, ಅಭಿವೃದ್ಧಿಯಾಗದ ನೆರೆಹೊರೆಯಾಗಿ ಗಮನಸೆಳೆದಿದೆ. ಅನೇಕರು ಈ ಅಭಿವೃದ್ಧಿ ಕಂದಕವನ್ನು ಗಮನಿಸಿದ್ದು, ಪಾಲಿಕೆ ಅಧಿಕಾರಿಗಳ ಯೋಜನಾ ಆದ್ಯತೆಗಳನ್ನು ಪ್ರಶ್ನಿಸಿದ್ದಾರೆ. ಜನಪ್ರಿಯ ವ್ಯೂಹಾತ್ಮಕ ಗೇಮ್ ಕ್ಲಾಶ್ ಆಫ್ ಕ್ಲಾನ್ಸ್ ಗೆ ಇದನ್ನು ಹೋಲಿಸಿದ್ದಾರೆ. ಇನ್ನು ಕೆಲವರು ಮುಂಬಯಿ ಧಾರಾವಿಯಂತೆ ಬೆಂಗಳೂರಲ್ಲಿ ಬೆಳ್ಳಂದೂರು ನಿರ್ಮಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಬೆಳ್ಳಂದೂರು ಡ್ರೋನ್ ಇಮೇಜ್‌ನ ವೈರಲ್ ಟ್ವೀಟ್ ಇಲ್ಲಿದೆ
ಈ ವೈರಲ್ ಇಮೇಜ್ ಯಾರು ತೆಗೆದುದು, ಅದರ ಮೂಲ ಯಾವುದು ಎಂಬುದು ಗೊತ್ತಾಗಿಲ್ಲ. ಆದರೆ, ಬೆಂಗಳೂರು ನಗರಾಭಿವೃದ್ಧಿಯ ಸವಾಲುಗಳ ಕುರಿತು ಬಿಸಿಬಿಸಿ ಚರ್ಚೆಗೆ ಗ್ರಾಸ ಒದಗಿಸಿರುವುದು ಕಂಡುಬಂದಿದೆ.
ಬೆಂಗಳೂರು ನಗರಾಭಿವೃದ್ಧಿ ಯೋಜನೆ ವಿಚಾರ ಚರ್ಚೆಗೆ ಗ್ರಾಸ
ಬೆಳ್ಳಂದೂರು ಡ್ರೋನ್ ಇಮೇಜ್ ಎಂದು ಬೆಂಗಳೂರು ಟೆಕ್ ಗೈಡ್ ಖಾತೆಯಲ್ಲಿ ಈ ಚಿತ್ರ ಮಾರ್ಚ್ 25 ರಂದು ಮುಸ್ಸಂಜೆ 7 ಗಂಟೆಗೆ ಟ್ವೀಟ್ ಆಗಿದೆ. ಕೂಡಲೇ ಅದು ವೈರಲ್ ಆಗಿದ್ದು, ಬೆಂಗಳೂರು ನಗರಾಭಿವೃದ್ಧಿ ಯೋಜನೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿದೆ. ನಗರದಲ್ಲಿ ಅಭಿವೃದ್ಧಿಯ ಅಸಮಾನತೆಯನ್ನು ಎತ್ತಿ ತೋರಿಸುವುದಕ್ಕೆ ನೆಟ್ಟಿಗರು ಈ ಅವಕಾಶವನ್ನು ಬಳಸಿಕೊಂಢರು. ಪಾಲಿಕೆಯ ಅಧಿಕಾರಿಗಳು ಯೋಜಿತ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗುತ್ತಿರುವುದು ಯಾಕೆ ಎಂಬಿತ್ಯಾದಿ ಪ್ರಶ್ನೆಗಳನ್ನು, ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ.
ಖಾಸಗಿ ಡೆವಲಪರ್‌ಗಳಂತೆ ಪಾಲಿಕೆ ಅಧಿಕಾರಿಗಳು ಯಾಕೆ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇಂಥದ್ದೇ ಭಾವನೆಗಳನ್ನು ಅನೇಕರು ಹಂಚಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಬೆಳ್ಳಂದೂರು ಹಚ್ಚ ಹಸಿರು ಹೊದಿಕೆ ಹೊಂದಿತ್ತು. ಈಗ ಅದು ಕಾಂಕ್ರೀಟ್ ಕಾಡಾಗಿದೆ. ಇನ್ನು ಮುಂದಿನ ಕೆಲವು ವರ್ಷಗಳಲ್ಲಿ ಬೆಳ್ಳಂದೂರಲ್ಲಿ ಒಂದೇ ಒಂದು ಮರವೂ ಕಾಣಲಾರದು. ಅದರ ಸೌಂದರ್ಯ ಹಾಳಾಗಲಿದೆ. ನೀರು ನಿಲ್ಲುವ ರಸ್ತೆಗಳು, ಕೊಳಚೆ ನೀರು, ಮೂಲಸೌಕರ್ಯ ಕೊರತೆಯ ಇನ್ನೊಂದು ನಗರ ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ವೇತನಕ್ಕೆಂದು ಬೆಂಗಳೂರಿಗೆ ಆಗಮಿಸುವ ತೆರಿಗೆದಾರರು ಹತಾಶರಾಗುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು, ಆಡಳಿತ ಯಾವಾಗ ಇದನ್ನೆಲ್ಲ ಸರಿ ಮಾಡುವುದೋ, ಈ ಬಗ್ಗೆ ಗಮನಹರಿಸುವುದೋ ಇಲ್ಲವೋ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
