Viral News: ಬೆಂಗಳೂರು ನಾಗವಾರ ಬಳಿ 39 ವರ್ಷದ ಚಿಂದಿ ಆಯುವಾತನಿಗೆ ಸಿಕ್ತು 3 ಮಿಲಿಯನ್ ಡಾಲರ್ ಕರೆನ್ಸಿ, ಮುಂದೇನಾಯ್ತು…
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಬೆಂಗಳೂರು ನಾಗವಾರ ಬಳಿ 39 ವರ್ಷದ ಚಿಂದಿ ಆಯುವಾತನಿಗೆ ಸಿಕ್ತು 3 ಮಿಲಿಯನ್ ಡಾಲರ್ ಕರೆನ್ಸಿ, ಮುಂದೇನಾಯ್ತು…

Viral News: ಬೆಂಗಳೂರು ನಾಗವಾರ ಬಳಿ 39 ವರ್ಷದ ಚಿಂದಿ ಆಯುವಾತನಿಗೆ ಸಿಕ್ತು 3 ಮಿಲಿಯನ್ ಡಾಲರ್ ಕರೆನ್ಸಿ, ಮುಂದೇನಾಯ್ತು…

ಇದೊಂದು ವಿಚಿತ್ರ ಘಟನೆ. ಬೆಂಗಳೂರಿನ ನಾಗವಾರ ರೈಲ್ವೆ ನಿಲ್ದಾಣದ ಸಮೀಪ ಚಿಂದಿ ಆಯುವ ವಕ್ತಿಗೆ 3 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್‌ ಕರೆನ್ಸಿ ಕಟ್ಟುಗಳ ಬ್ಯಾಗ್ ಸಿಕ್ಕಿದ್ದವು. ಆ ಕ್ಷಣಕ್ಕೆ ಆತ ದಂಗಾಗಿದ್ದು, ಈಗ ಆ ಕರೆನ್ಸಿ ಆರ್‌ಬಿಐ ವಶಕ್ಕೆ ಹೋಗಿದೆ.

ಅಮೆರಿಕನ್ ಡಾಲರ್‌ ಕಟ್ಟುಗಳು (ಸಾಂಕೇತಿಕ ಚಿತ್ರ)
ಅಮೆರಿಕನ್ ಡಾಲರ್‌ ಕಟ್ಟುಗಳು (ಸಾಂಕೇತಿಕ ಚಿತ್ರ) (HT File image)

ಬೆಂಗಳೂರಿನ ಅಮೃತಹಳ್ಳಿಯ 39 ವರ್ಷದ ಚಿಂದಿ ಆಯುವ ವ್ಯಕ್ತಿಗೆ ನಾಗವಾರ ರೈಲ್ವೆ ನಿಲ್ದಾಣದ ಸಮೀಪ ಇದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ 3 ಮಿಲಿಯನ್ ಅಮೆರಿಕನ್ ಡಾಲರ್‌ ಕರೆನ್ಸಿಗಳು ಕಂಡು ದಂಗಾಗಿ ಹೋಗಿದ್ದ. ಒಂದು ಕ್ಷಣ ಏನು ಮಾಡಬೇಕು ಎಂದು ತೋಚದೆ ಆತ್ಮೀಯರಿಗೆ ಕರೆ ಮಾಡಿದ್ದ. 3 ಮಿಲಿಯನ್ ಅಮೆರಿಕನ್ ಡಾಲರ್ ಎಂದರೆ ಭಾರತದ ಕರೆನ್ಸಿಯಲ್ಲಿ ಅಂದಾಜು 25 ಕೋಟಿ ರೂಪಾಯಿ.

ಚಿಂದಿ ಆಯುವ ವ್ಯಕ್ತಿಯನ್ನು ಸಲೇಮಾನ್ ಎಸ್‌ಕೆ ಎಂದು ಗುರುತಿಸಲಾಗಿದೆ. ವಿಶ್ವಸಂಸ್ಥೆಯ ಮುದ್ರೆ ಪತ್ರ ಇದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸಿಕ್ಕ ಡಾಲರ್‌ಗಳನ್ನು ಏನು ಮಾಡುವುದು ಎಂದು ತಿಳಿಯದೇ ಮನೆಗೆ ಕೊಂಡೊಯ್ದಿದ್ದ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಈ ಡಾಲರ್ ಕರೆನ್ಸಿಗಳು ಜೆರಾಕ್ಸ್ ಮಾಡಿದ ನಕಲಿ ಕರೆನ್ಸಿ ಎಂಬುದೀಗ ದೃಢಪಟ್ಟಿದೆ.

3 ಮಿಲಿಯನ್ ಡಾಲರ್ ಮೌಲ್ಯದ ಕರೆನ್ಸಿ ಸಿಕ್ಕ ಕೂಡಲೇ ಸಲೇಮಾನ್ ಏನು ಮಾಡಿದ್ರು

ಆರಂಭಿಕ ವರದಿಗಳ ಪ್ರಕಾರ, ಸಲೇಮಾನ್ ಅವರು 3 ಮಿಲಿಯನ್ ಡಾಲರ್ ಮೌಲ್ಯದ ಕರೆನ್ಸಿ ಸಿಕ್ಕ ಕೂಡಲೇ ಸಲೇಮಾನ್‌ ಆ ಮಾಹಿತಿಯನ್ನು ಸ್ಕ್ರ್ಯಾಪ್ ಡೀಲರ್ ಬಾಪ್ಪಾಗೆ ತಿಳಿಸಿದರು. ಆತ ಆ ಕರೆನ್ಸಿಗಳನ್ನು ಆತನ ಬಳಿಯೇ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದ. ಆದರೆ ಅದು ಕಷ್ಟವೆನಿಸಿ ಸಲೇಮಾನ್ ಅವರು ಸ್ವರಾಜ್ ಇಂಡಿಯಾ ಸಂಘಟನೆಯ ಸೋಷಿಯಲ್ ಆಕ್ಟಿವಿಸ್ಟ್ ಕರೀಮ್ ಉಲ್ಲಾ ಅವರನ್ನು ಭಾನುವಾರ ಸಂಪರ್ಕಿಸಿದರು ಎಂದು ವರದಿ ಹೇಳಿದೆ.

ಕರೀಮ್ ಉಲ್ಲಾ ಅವರು ಈ ವಿಷಯವನ್ನು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಗಮನಕ್ಕೆ ತಂದರು. ಕಮಿಷನರ್‌ಗೆ ಹಣದ ಬಗ್ಗೆ ತಿಳಿಸಿದಾಗ, ಅವರು ಹಣದ ಜೊತೆಗೆ ಸಲೇಮಾನ್‌ರನ್ನು ತಮ್ಮ ಕಚೇರಿಗೆ ಕರೆತರುವಂತೆ ಹೇಳಿದರು. ಇನ್ನೂ ಆಘಾತದಲ್ಲಿದ್ದ ಸಲೇಮಾನ್ ಅವರು ರೈಲ್ವೆ ಹಳಿಗಳ ಮೇಲೆ ಡಾಲರ್‌ ಕರೆನ್ಸಿಗಳು ಸಿಕ್ಕವು ಎಂದು ಹೇಳಿದ್ದ. ಇದಾದ ಕೂಡಲೇ ಆಯುಕ್ತ ಬಿ.ದಯಾನಂದ ಅವರು ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾಗಿ ಕರೀಮ್ ಉಲ್ಲಾ ಹೇಳಿರುವುದನ್ನು ವರದಿ ವಿವರಿಸಿದೆ.

ಪ್ಲಾಸ್ಟಿಕ್ ಬ್ಯಾಗ್‌ನಲ್ಲಿತ್ತು ವಿಶ್ವಸಂಸ್ಥೆ ಮುದ್ರೆ ಹೊಂದಿದ ಪತ್ರ

ಮೂರು ಮಿಲಿಯನ್ ಡಾಲರ್ ಕರೆನ್ಸಿ ಜತೆಗೆ ವಿಶ್ವಸಂಸ್ಥೆಯ ಮುದ್ರೆ ಹೊಂದಿದ ಪತ್ರವೂ ಇರುವುದನ್ನು ಸಲೇಮಾನ್ ಕಂಡುಕೊಂಡಿದ್ದರು. ಅದರಲ್ಲಿ, “ಆರ್ಥಿಕ ಮತ್ತು ಹಣಕಾಸು ಸಮಿತಿಯು ದಕ್ಷಿಣ ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಹಾಯ ಮಾಡಲು ಭದ್ರತಾ ಮಂಡಳಿಯ ಸದಸ್ಯರು ಮತ ಚಲಾಯಿಸಿದ ವಿಶೇಷ ನಿಧಿಯನ್ನು ಇರಿಸುತ್ತದೆ” ಎಂಬ ಒಕ್ಕಣೆ ಇದೆ.

ಈ ಪ್ರದೇಶಗಳಲ್ಲಿನ ಭಯೋತ್ಪಾದಕರು ಮತ್ತು ಸರ್ವಾಧಿಕಾರಿಗಳಂತಹ ಅನಧಿಕೃತ ವ್ಯಕ್ತಿಗಳ ಕಾರಣ ಬ್ಯಾಂಕಿಂಗ್‌ ಕಾರ್ಯಾಚರಣೆ ಕಷ್ಟವಾಗಿದೆ. ಅಲ್ಲಿ ಹಣ ದೋಚುವ ಸನ್ನಿವೇಶ ಇರುವ ಕಾರಣ, ವಿಶ್ವಸಂಸ್ಥೆಯು ನೋಟುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಸುರಕ್ಷಿತವಾಗಿ ಗಮ್ಯಸ್ಥಾನವನ್ನು ತಲುಪಿಸಲು ನೋಟುಗಳ ಮೇಲೆ ಗೋಚರಿಸುವ ಲೇಸರ್ ಸ್ಟ್ಯಾಂಪ್ ಅನ್ನು ಇರಿಸಲು ಹಣಕಾಸು ಸಮಿತಿಗೆ ಅಧಿಕಾರ ನೀಡಿತು...," ಎಂಬಿತ್ಯಾದಿ ವಿವರಣೆ ಕೂಡ ಅದರಲ್ಲಿದೆ ಎಂದು ವರದಿ ವಿವರಿಸಿದೆ.

ನಕಲಿ ಕರೆನ್ಸಿಯಂತೆ ಕಾಣುತ್ತಿವೆ ಆ ಡಾಲರ್ ಕಟ್ಟುಗಳು

ಸಲೇಮಾನ್‌ಗೆ ಸಿಕ್ಕ ಆ ಡಾಲರ್‌ ಕಟ್ಟುಗಳನ್ನು ಪರಿಶೀಲಿಸಿದಾಗ ನಕಲಿ ನೋಟುಗಳಂತೆ ಕಾಣುತ್ತಿವೆ. ಡಾಲರ್‌ನ ಜೆರಾಕ್ಸ್ ಪ್ರತಿಯನ್ನು ಕಟ್ಟುಗಳನ್ನಾಗಿ ಮಾಡಿ ಇಟ್ಟಂತೆ ಕಾಣುತ್ತಿದೆ. ಅವುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿರುವುದಾಗಿ ವರದಿ ಹೇಳಿದೆ.

Whats_app_banner