ಬೆಂಗಳೂರು: ಚಪ್ಪಲಿ ಧರಿಸಿ ಹೋದಾಗ ಪ್ರವೇಶ ನಿರಾಕರಿಸಿತ್ತು ರೆಸ್ಟೋರೆಂಟ್, ಮೂರ್ಖತನದ ಪ್ರಸಂಗ ಎಂದು ನೆನಪಿಸಿಕೊಂಡ ನವೋದ್ಯಮಿ ಗಣೇಶ್ ಸೊನಾವಾನೆ
ಬೆಂಗಳೂರು ರೆಸ್ಟೋರೆಂಟ್ ಒಂದು ಚಪ್ಪಲಿ ಧರಿಸಿ ಹೋದಾಗ ಪ್ರವೇಶ ನಿರಾಕರಿಸಿತ್ತು ಎಂಬ ಪ್ರಸಂಗವನ್ನು ನೆನಪಿಸಿಕೊಂಡ ನವೋದ್ಯಮಿ ಗಣೇಶ್ ಸೊನಾವಾನೆ ಎಕ್ಸ್‌ನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅದೊಂದು ಮೂರ್ಖತನದ ಪ್ರಸಂಗವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಜಿಟಿ ಮಾಲ್ ಪ್ರಸಂಗದ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ.
ಬೆಂಗಳೂರು: ಡ್ರೆಸ್ ಕೋಡ್ ನೆಪದಲ್ಲಿ ರೈತನಿಗೆ ಮಾಲ್ ಪ್ರವೇಶ ನಿಷೇಧಿಸಿ ಜಿಟಿ ಮಾಲ್ ಪ್ರಕರಣ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಡ್ರೆಸ್ ಕೋಡ್ ಅಥವಾ ವಸ್ತ್ರ ಸಂಹಿತೆ ವಿಚಾರ ಚರ್ಚೆಗೆ ಒಳಗಾಗಿದ್ದು, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಫ್ರಿಡೋ ಸಂಸ್ಥಾಪಕ, ಸಿಇಒ ಗಣೇಶ್ ಸೊನಾವಾನೆ ಮತ್ತು ಏಥರ್‌ನ ಸಹ ಸಂಸ್ಥಾಪಕ ಸ್ವಪ್ನಿಲ್ ಜೈನ್ ಅನುಭವವನ್ನೂ ಹಂಚಿಕೊಂಡಿದ್ದಾರೆ. ಬೆಂಗಳೂರಿನ ರೆಸ್ಟೋರೆಂಟ್ ಒಂದಕ್ಕೆ ಚಪ್ಪಲಿ ಧರಿಸಿ ಹೋದ ಕಾರಣ ಅವರನ್ನು ವಾಪಸ್ ಕಳುಹಿಸಿದ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಅದು ಮೂರ್ಖತನ ಎಂದು ಬಣ್ಣಿಸಿದ್ದಾರೆ.
ಧೋತಿ ಮತ್ತು ಶರ್ಟ್ ಧರಿಸಿ ಬಂದಿದ್ದ ರೈತನಿಗೆ ಜಿಟಿ ಮಾಲ್‌ನಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ರೈತನ ಪುತ್ರ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ.ಇದು ಬಹಿರಂಗವಾದ ಬೆನ್ನಿಗೆ ಈ ನವೋದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಪ್ರಕರಣದ ಬಳಿಕ ಬಿಬಿಎಂಪಿ ಅಧಿಕಾರಿಗಳು ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ವಿರುದ್ಧ 1.78 ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಕ್ರಮ ತೆಗೆದುಕೊಂಡಿದ್ದಾರೆ. ಏಳು ದಿನ ಮಾಲ್ ಅನ್ನು ಬಂದ್ ಮಾಡಿದ್ದಾರೆ.
ಶೂವೇರ್ ಬ್ರಾಂಡ್ ಸಂಸ್ಥಾಪಕ, ಫ್ರಿಡೋ ಸಿಇಒ ಗಣೇಶ್ ಸೊನಾವಾನೆ ಟ್ವೀಟ್
ಶೂವೇರ್ ಬ್ರಾಂಡ್‌ನ ಸಂಸ್ಥಾಪಕ ಫ್ರಿಡೋದ ಸಿಇಒ ಗಣೇಶ್ ಸೋನಾವಾನೆ ಅವರು ತಮ್ಮ ಸ್ನೇಹಿತ ಮತ್ತು ಸಹೋದ್ಯೋಗಿ, ಅಥರ್ ಸಹ-ಸಂಸ್ಥಾಪಕ ಸ್ವಪ್ನಿಲ್ ಜೈನ್ ಅವರೊಂದಿಗೆ ಬೆಂಗಳೂರಿನ ರೆಸ್ಟೋರೆಂಟ್ ಹೋದ ಪ್ರಸಂಗವನ್ನು ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಶೂ ಧರಿಸದೆ ಚಪ್ಪಲಿ ಧರಿಸಿ ರೆಸ್ಟೋರೆಂಟ್‌ಗೆ ಹೋಗಿದ್ದಾಗ ಮುಜುಗರಕ್ಕೆ ಒಳಗಾಗಿ ಹಿಂದಿರುಗಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.
"ನೈಜ ಕಥೆ: ಸ್ವಪ್ನಿಲ್, ಅಥೆರ್ ಸಹ-ಸಂಸ್ಥಾಪಕ ಮತ್ತು ನಾನು ಒಮ್ಮೆ ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋಗಿದ್ದೆವು. ಶೂಗಳನ್ನು ಧರಿಸದೇ ಬದಲಿಗೆ ಚಪ್ಪಲಿಗಳನ್ನು ಧರಿಸಿದ್ದಕ್ಕಾಗಿ ಅಲ್ಲಿ ನಮಗೆ ಪ್ರವೇಶವನ್ನು ನಿರಾಕರಿಸಲಾಯಿತು" ಎಂದು ಸೋನಾವಾನೆ ಎಕ್ಸ್‌ನಲ್ಲಿ ಬರೆದಿದ್ದಾರೆ.
ಆದಾಗ್ಯೂ, ಈ ಘಟನೆ ಯಾವಾಗ ಅಥವಾ ಎಲ್ಲಿ ಸಂಭವಿಸಿತು ಎಂಬುದನ್ನು ಸೋನಾವಾನೆ ಹಂಚಿಕೊಂಡಿಲ್ಲ. ಅವರು ಆ ಘಟನೆ "ಮೂರ್ಖತನ"ದ್ದು ಎಂದು ಅವರು ವಿವರಿಸಿದ್ದು, ಅದನ್ನು "ತಾರತಮ್ಯ" ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು, ಪ್ರವೇಶ ನಿರಾಕರಿಸಿದ ನಂತರ ಅವರು ಮತ್ತೊಂದು ರೆಸ್ಟೋರೆಂಟ್‌ಗೆ ಹೋಗಿರುವುದಾಗಿ ಹೇಳಿದರು.
ತೆರಿಗೆ ಪಾವತಿಸದ್ದಕ್ಕೆ ಜಿಟಿ ಮಾಲ್ ಒಂದು ವಾರ ಬಂದ್
ರೈತನಿಗೆ ಪ್ರವೇಶ ನಿರಾಕರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾಲ್ ಅನ್ನು ಬಂದ್ ಮಾಡಲು ಸರ್ಕಾರ ನಿರ್ಧರಿಸಿತು. ಈ ನಡುವೆ, ಜಿಟಿ ಮಾಲ್ ಆಸ್ತಿ ತೆರಿಗೆ ಪಾವತಿ ಮಾಡದೇ 1.78 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ನಿನ್ನೆ (ಜುಲೈ 18) ಏಳು ದಿನಗಳ ಕಾಲ ಮಾಲ್ ಅನ್ನು ಬಂದ್ ಮಾಡಿದರು. ವೈರಲ್ ಆಗಿರುವ ವಿಡಿಯೋದಲ್ಲಿ, ಫಕೀರಪ್ಪ ಎಂಬ 70 ವರ್ಷದ ರೈತ ತನ್ನ ಮಗ ನಾಗರಾಜ್ ಅವರೊಂದಿಗೆ ಚಲನಚಿತ್ರ ವೀಕ್ಷಿಸಲು ಮಾನ್ಯ ಟಿಕೆಟ್‌ನೊಂದಿಗೆ ಹೋದಾಗ ಮಾಲ್ ಒಳಗೆ ಪ್ರವೇಶಿಸಲು ಸೆಕ್ಯುರಿಟಿ ಗಾರ್ಡ್ ಅನುಮತಿಸರದ ದೃಶ್ಯ ಇತ್ತು.
ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್, ''ಕಾನೂನಿನ ಪ್ರಕಾರ ಸರಕಾರ ಏಳು ದಿನಗಳ ಕಾಲ ಮಾಲ್ ಮುಚ್ಚಬಹುದು. ನಾನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಘಟನೆಯ ವಿರುದ್ಧ ಕ್ರಮವಾಗಿ ಏಳು ದಿನಗಳ ಕಾಲ ಮಾಲ್ ಅನ್ನು ಮುಚ್ಚಲಾಗುವುದು" ಎಂದು ಹೇಳಿದ್ದರು.
ಸುರೇಶ್ ಅವರ ಘೋಷಣೆಯ ನಂತರ, ಸ್ಪೀಕರ್ ಯುಟಿ ಖಾದರ್ ಈ ಕ್ರಮವನ್ನು ಸ್ವಾಗತಿಸಿ ಅದನ್ನು ತಕ್ಷಣವೇ ಜಾರಿಗೆ ತರಲು ಸಚಿವರನ್ನು ಆಗ್ರಹಿಸಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.