ಬೆಂಗಳೂರು ಕೋರಮಂಗಲದಲ್ಲಿ 2 ಬಿಎಚ್‌ಕೆ ಮನೆ ಬಾಡಿಗೆಗೆ ಇದೆ, ಬಾಡಿಗೆ ಮತ್ತು ಠೇವಣಿ ಮೊತ್ತ ನೋಡಿ ಎಕ್ಸ್‌ನಲ್ಲಿ ಶುರುವಾಯಿತು ಚರ್ಚೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೋರಮಂಗಲದಲ್ಲಿ 2 ಬಿಎಚ್‌ಕೆ ಮನೆ ಬಾಡಿಗೆಗೆ ಇದೆ, ಬಾಡಿಗೆ ಮತ್ತು ಠೇವಣಿ ಮೊತ್ತ ನೋಡಿ ಎಕ್ಸ್‌ನಲ್ಲಿ ಶುರುವಾಯಿತು ಚರ್ಚೆ

ಬೆಂಗಳೂರು ಕೋರಮಂಗಲದಲ್ಲಿ 2 ಬಿಎಚ್‌ಕೆ ಮನೆ ಬಾಡಿಗೆಗೆ ಇದೆ, ಬಾಡಿಗೆ ಮತ್ತು ಠೇವಣಿ ಮೊತ್ತ ನೋಡಿ ಎಕ್ಸ್‌ನಲ್ಲಿ ಶುರುವಾಯಿತು ಚರ್ಚೆ

ಬೆಂಗಳೂರಲ್ಲಿ ಸಂಚಾರ ದಟ್ಟಣೆಯಂತೆ ಹೆಚ್ಚು ಚರ್ಚೆಗೆ ಒಳಗಾಗುವ ಮತ್ತೊಂದು ವಿಚಾರ ಮನೆ ಬಾಡಿಗೆ ಮತ್ತು ಠೇವಣಿ. ಮಹಿಳೆಯೊಬ್ಬರು ಬೆಂಗಳೂರು ಕೋರಮಂಗಲದಲ್ಲಿರುವ ತಾನು ಪ್ರಸ್ತುತ ವಾಸವಿದ್ದ 2BHK ಅಪಾರ್ಟ್‌ಮೆಂಟ್‌ ಬಾಡಿಗೆ ಮತ್ತು ಠೇವಣಿ ತೀವ್ರ ಚರ್ಚೆಗೊಳಗಾಗಿದೆ. ಅಂಥದ್ದೇನಿದೆ ಅದರಲ್ಲಿ- ಇಲ್ಲಿದೆ ವಿವರ.

ಬೆಂಗಳೂರು ಕೋರಮಂಗಲದಲ್ಲಿರುವ 2 ಬಿಎಚ್‌ಕೆ ಮನೆಯ ಒಳಾಂಗಣದ ನೋಟ. ಬಾಡಿಗೆ ಮತ್ತು ಠೇವಣಿ ಮೊತ್ತ ನೋಡಿ ಎಕ್ಸ್‌ನಲ್ಲಿ ಚರ್ಚೆ ಜೋರಾಗಿದೆ.
ಬೆಂಗಳೂರು ಕೋರಮಂಗಲದಲ್ಲಿರುವ 2 ಬಿಎಚ್‌ಕೆ ಮನೆಯ ಒಳಾಂಗಣದ ನೋಟ. ಬಾಡಿಗೆ ಮತ್ತು ಠೇವಣಿ ಮೊತ್ತ ನೋಡಿ ಎಕ್ಸ್‌ನಲ್ಲಿ ಚರ್ಚೆ ಜೋರಾಗಿದೆ. (X/@Theleeshesh)

ಬೆಂಗಳೂರು: ಮಹಿಳೆಯೊಬ್ಬರು ಬೆಂಗಳೂರು ಕೋರಮಂಗಲದಲ್ಲಿರುವ ತಾನು ಪ್ರಸ್ತುತ ವಾಸವಿದ್ದ 2BHK ಅಪಾರ್ಟ್‌ಮೆಂಟ್‌ ಅನ್ನು ಬಾಡಿಗೆ ನೀಡುವುದಾಗಿ ಎಕ್ಸ್‌ನಲ್ಲಿ ಪ್ರಕಟಿಸಿದ್ದರು. ಆ ಪೋಸ್ಟ್‌ನಲ್ಲಿ ಅವರು, ಬಾಡಿಗೆ ಮತ್ತು ಠೇವಣಿ ಮೊತ್ತವನ್ನೂ ಉಲ್ಲೇಖಿಸಿದ್ದರು. ಈ ವಿಚಾರವು ಮೈಕ್ರೋಬ್ಲಾಗಿಂಗ್‌ ಸೈಟ್‌ನಲ್ಲಿ ಬೆಂಗಳೂರು ಮಹಾನಗರದ ಬಾಡಿಗೆ ಠೇವಣಿ ವ್ಯವಸ್ಥೆಯ ಕುರಿತು ಭಾರಿ ಚರ್ಚೆಯನ್ನು ಹುಟ್ಟುಹಾಕಿತು.

ವೈರಲ್‌ ಪೋಸ್ಟ್‌ನ ಮಹಿಳೆಯ ಹೆಸರು ಲೀಶಾ ಅಗರವಾಲ್‌. ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿರುವುದು ಇಷ್ಟು - “ನಾವು ಕೋರಮಂಗಲದಲ್ಲಿರುವ ನಮ್ಮ ಪ್ರಸ್ತುತ 2BHK ಮನೆ ಬಿಟ್ಟು ಬೇರೆಡೆಗೆ ಹೋಗುತ್ತಿದ್ದೇವೆ. ಅದರಲ್ಲಿ ಬಾಡಿಗೆಗೆ ಕೂರಲು ಯಾರಿಗಾದರೂ ಆಸಕ್ತಿ ಇರುವಂಥವರನ್ನು ಹುಡುಕುತ್ತಿದ್ದೇವೆ!. ಮನೆಯಲ್ಲಿರುವ ಪೀಠೋಪಕರಣಗಳ ಸಹಿತ ಬಾಡಿಗೆಗೆ ಪಡೆಯುವವರು ಬೇಕು. ಬಾಡಿಗೆ 43 ಸಾವಿರ ರೂಪಾಯಿ, ಠೇವಣಿ 2.5 ಲಕ್ಷ ರೂಪಾಯಿ. ಪೀಠೋಪಕರಣಗಳ ವೆಚ್ಚ ಹೆಚ್ಚುವರಿಯಾಗಿ ಪಾವತಿಸಬೇಕು. ಆಸಕ್ತರು ನೇರ ಮೆಸೇಜ್ ಮಾಡಿ" ಎಂದು ಮಹಿಳೆ ಮೊದಲ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ಹೌದು ಒಂದು ಕೋಣೆಯಲ್ಲಿನ ಬಾಲ್ಕನಿಯು ಸುಂದರವಾಗಿದೆ. ಈ ಮನೆ ಇರುವ ಸ್ಥಳವು ವಿಪ್ರೋ ಸಿಗ್ನಲ್‌ಗೆ ಹತ್ತಿರದಲ್ಲಿದೆ. ಅಡುಗೆಮನೆಯು ಕೂಡ ಸ್ವಲ್ಪ ತೆರೆದ ಸ್ಥಿತಿಯಲ್ಲಿದ್ದು ಉತ್ತಮ ಗಾಳಿ ಬೆಳಕು ಇದೆ. ದಂಪತಿಗಳಿಗೆ ಉತ್ತಮವಾಗಿದೆ. ಯಾವುದೇ ಕುಟುಂಬಗಳ ಗಲಾಟೆ, ಸಾಕುಪ್ರಾಣಿಗಳ ಗೌಜಿ ಗದ್ದಲಗಳಿಲ್ಲ. 10/10 ಉತ್ತಮ ವಾತಾವರಣವಿದೆ" ಎಂದು ಹೇಳಿಕೊಂಡಿದ್ದಾರೆ.

ಲೀಶಾ ಅಗರವಾಲ್ ಅವರ ವೈರಲ್‌ ಟ್ವೀಟ್ ಹೀಗಿದೆ

ಲೀಶಾ ಅವರು ಈ ಟ್ವೀಟ್ ಮಾಡಿದ ಆ ಕ್ಷಣದಿಂದ ಈ ವರದಿ ಪಬ್ಲಿಷ್ ಆಗುವ ಕ್ಷಣಕ್ಕೆ ಅವರ ಪೋಸ್ಟ್ 2.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 50ಕ್ಕೂ ಹೆಚ್ಚು ಕಾಮೆಂಟ್‌ಗಳಿಗೆ ಕಾರಣವಾಗಿದೆ. ಅದೂ ಅಲ್ಲದೆ, 800ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಅನೇಕರು ಈ ಪೋಸ್ಟ್ ನೋಡಿ ಹೌಹಾರಿದ್ದಾರೆ. ಬಾಡಿಗೆ ಹಾಗೂ ಠೇವಣಿ ಮೊತ್ತ ನೋಡಿ ಅಂಗಾಂಗ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಈ ಪೋಸ್ಟ್ ಬಗ್ಗೆ X ಬಳಕೆದಾರರು ಏನು ಹೇಳಿದರು?

"ಒಳ್ಳೆಯ ಮನೆ. ಆದರೆ ಕೋರಮಂಗಲದಲ್ಲಿ ಮನೆಗಾಗಿ 2.5 ಲಕ್ಷ ಠೇವಣಿ? ಇದನ್ನು ಸರಿದೂಗಿಸಲು ಅಂಗಾಂಗಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಬಹುದು" ಎಂದು ಎಕ್ಸ್ ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು "2.5 ಲಕ್ಷ ರೂಪಾಯಿ ಠೇವಣಿ ಡಬ್ಲ್ಯೂಟಿಎಫ್" ಎಂದು ಸೇರಿಸಿದ್ದಾರೆ.

ಮೂರನೆಯವರು "ಠೇವಣಿ 2.5 ಲಕ್ಷ ರೂಪಾಯಿ ಮಜಾಕ್ ಹೈ ಕ್ಯಾ ಬೆಂಗಳೂರಲ್ಲಿ" ಎಂದು ಕಾಮೆಂಟ್ ಮಾಡಿದರೆ, ನಾಲ್ಕನೆಯವರು "2 ಬಿಎಚ್ಕೆಗೆ 43 ಸಾವಿರ ಬಾಡಿಗೆ ಹೇಳಿದರೆ ಹುಚ್ಚು ಎನ್ನಬೇಕಷ್ಟೆ" ಎಂದಿದ್ದಾರೆ.

2BHK ಗಾಗಿ ಬಾಡಿಗೆದಾರರನ್ನು ಹುಡುಕುವ ಈ X ಪೋಸ್ಟ್ ಬಗ್ಗೆ ನೀವೇನು ಹೇಳ್ತೀರಿ..

ಈ ಹಿಂದೆ, ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಉಬರ್ ಶುಲ್ಕಗಳ ಬಗ್ಗೆ ಮಾಡಿದ ಮತ್ತೊಂದು ಪೋಸ್ಟ್ ಜನರ ಅಚ್ಚರಿಗೆ ಕಾರಣವಾಗಿತ್ತು. "ನನ್ನ ಉಬರ್ ವೆಚ್ಚಗಳು ಬೆಂಗಳೂರಿನಲ್ಲಿ ಮನೆಗೆ ಬಾಡಿಗೆಯಾಗಿ ಪಾವತಿಸುವ ಅರ್ಧಕ್ಕಿಂತ ಹೆಚ್ಚು ಎಂದರೆ ನನಗೆ ನಂಬಲಾಗುತ್ತಿಲ್ಲ. ನನಗೆ, ಇದು ಇಲ್ಲಿಯವರೆಗೆ ಗೊತ್ತಿರಲಿಲ್ಲ. ಇದನ್ನು ಕ್ರೆಡ್‌ (CRED) ಅನುಸರಿಸಿದಾಗ ಗೊತ್ತಾಯಿತು. ಇದು ಅತ್ಯಂತ ಉಪಯುಕ್ತ ಫೀಚರ್" ಎಂದು ಮಹಿಳೆ ಬರೆದು ತನ್ನ ವಹಿವಾಟಿನ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದರು. ಅವರ 74 ಉಬರ್ ಸಂಚಾರದ ಹಣ16,600 ರೂಪಾಯಿ ಇತ್ತು.