ಕನ್ನಡ ಸುದ್ದಿ  /  Karnataka  /  Viral News Ksrtc Woman Employee Video Viral On Leave Issue With Menstruation Period Mrt

Viral News:ಕರ್ನಾಟಕ ಸಾರಿಗೆ ನಿಗಮಲ್ಲೊಂದು ಅಮಾನವೀಯ ಘಟನೆ; ವೈರಲ್ ಆದ ಮಹಿಳಾ ಉದ್ಯೋಗಿಯ ನೋವು

ಸಾರಿಗೆ ನಿಗಮದಲ್ಲಿ ಮಹಿಳೆಯೊಬ್ಬರಿಗೆ ಮುಟ್ಟಿನ ಅವಧಿಯಲ್ಲೂ ಕೆಲಸ ಮಾಡಿಸಿರುವುದು ವಿವಾದ ಸೃಷ್ಟಿಸಿದೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸರಿಪಡಿಸಲಾಗಿದೆ.(ವರದಿ: ಎಚ್.ಮಾರುತಿ, ಬೆಂಗಳೂರು)

ಸಾರಿಗೆ ನೌಕರರೊಬ್ಬರು ರಜೆ ವಿಚಾರದಲ್ಲಿ ತೊಂದರೆ ಅನುಭವಿಸಿದ್ದಾರೆ.
ಸಾರಿಗೆ ನೌಕರರೊಬ್ಬರು ರಜೆ ವಿಚಾರದಲ್ಲಿ ತೊಂದರೆ ಅನುಭವಿಸಿದ್ದಾರೆ.

ಬೆಂಗಳೂರು: ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಸರ್ಕಾರಿ ಮತ್ತು ಖಾಸಗಿ ಎರಡೂ ಕಡೆ ಪಾಲನೆಯಾಗುತ್ತಿಲ್ಲ. ಬದಲಾಗಿ ಮಹಿಳಾ ಉದ್ಯೋಗಿಗಳ ಶೋಷಣೆ ನಡೆಯುತ್ತಲೇ ಇದೆ. ಪ್ರತಿ ದಿನ ಒಂದಿಲ್ಲೊಂದು ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಹಿಂಸಿಸುವ ವರದಿಗಳು ಕೇಳಿ

ಬರುತ್ತಿವೆ. ಇನ್ನು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದಶೋಷಣೆಯನ್ನು ಸಹಿಸಿಕೊಳ್ಳುತ್ತಲೇ ಕರ್ತವ್ಯ ನಿರ್ವಹಿಸುವ ಅಸಂಖ್ಯಾತ ಮಹಿಳಾ ಉದ್ಯೋಗಿಗಳಿದ್ದಾರೆ.

ನಾಗರೀಕರು ತಲೆ ತಗ್ಗಿಸುವ ರೀತಿಯ ವಿದ್ಯಾಮಾನವೊಂದು ಸಾರಿಗೆ ನಿಗಮದಲ್ಲಿ ಈ ವಾರ ನಡೆದಿದೆ. ಮುಟ್ಟಿನ ಸಂದರ್ಭದಲ್ಲಿಯೂ ಮಹಿಳಾ ಉದ್ಯೋಗಿಗಳಿಗೆ ಮೇಲಾಧಿಕಾರಿಗಳು ಹೇಗೆ ಶೋಷಣೆ ಮಾಡುತ್ತಾರೆ ಎಂದು ಒಬ್ಬ ನಿರ್ವಾಹಕಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಯ್ಯೂ ಟ್ಯೂಬ್ ಚಾನೆಲ್ ವೊಂದು ಅವರ ಹೇಳಿಕೆಯನ್ನು ಬಿತ್ತರಿಸಿರುವುದು ಸಾಕಷ್ಟು ವೈರಲ್ ಆಗಿದೆ.

ಮಧ್ಯ ವಯಸ್ಸಿನ ಈ ಮಹಿಳಾ ನಿರ್ವಾಹಕಿ ತಮ್ಮ ನೋವನ್ನು ಹಂಚಿಕೊಂಡಿರುವ ರೀತಿ ಸಾರಿಗೆ ನಿಗಮ ಮಹಿಳಾ ಉದ್ಯೋಗಿಗಳನ್ನು ಕುರಿತಾದ ತನ್ನ ನೀತಿ ನಿಯಮಗಳನ್ನು ಮತ್ತಷ್ಟುಬಿಗಿಗೊಳಿಸಬೇಕಾದ ಅವಶ್ಯಕೆತಯನ್ನು ತೋರಿಸುತ್ತದೆ. ನನಗೆ ಮುಟ್ಟಿನ ಸಮಯ. ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ. ಸಾಕಷು ರಕ್ತ ಹರಿದು ಹೋಗುತ್ತಿದೆ ಎಂದು ಕಣ್ಣೀರುಸುರಿಸುತ್ತಾ ಹೇಳಿಕೊಂಡಿದ್ದಾರೆ.

ತಮಗೆ ಆಗುತ್ತಿರುವ ದೈಹಿಕ ಸಂಕಟಗಳನ್ನು ಇವರು ಮೇಲಾಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ. ಆದರೆ ಅವರು ಉದ್ದೇಶಪೂರ್ವಕವಾಗಿ ಇವರಿಗೆ ಹಿಂಸೆ ಕೊಡುತ್ತಿದ್ದಾರೆ ಎನ್ನುವುದು ಇವರ ಮಾತಿನಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ನೈಸರ್ಗಿಕ ಸಮಸ್ಯೆಗಳು ಎದುರಾದಾಗ ಇಲಾಖೆಗಳು ಮಹಿಳಾ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ರಿಯಾಯಿತಿನ್ನು ತೋರಿಸಲು ಯಾವುದೇ ಅಭ್ಯಂತರ ಇರುವುದಿಲ್ಲ. ನಿರ್ವಾಹಕಿಯರಿಗೆ ಕುಳಿತುಕೊಂಡು ಮಾಡುವಂತಹ ಕೆಲಸಗಳನ್ನು ಹಚ್ಚಲು ಅವಕಾಶಗಳಿವೆ. ಬೇಕಿರುವುದು ಕಾನೂನು ಕಟ್ಟಳೆಗಳಲ್ಲ. ಮಾನವೀಯತೆ.

ಮನುಷ್ಯತ್ವವೊಂದಿದ್ದರೆ ಅನುಕೂಲ ಸಹಾಯ ಮಾಡಲು ಯಾವುದೇ ಕಾನೂನು ನಿಯಮಗಳು ಅಡ್ಡ ಬರುವುದಿಲ್ಲ ಎನ್ನುವುದು ಹತ್ತಾರು ಬಾರಿ ಸಾಬೀತಾಗಿದೆ. ನ್ಯಾಯಾಲಯಗಳೂ ಇಂತಹಕೆಲಸಗಳನ್ನು ಬೆಂಬಲಿಸಿರುವುದನ್ನು ಕಾಣಬಹುದಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರು ಹೇಳುತ್ತಾರೆ.

ಈ ಮಹಿಳಾ ಉದ್ಯೋಗಿಯು ಅನುಭವಿಸಿರುವ ನೋವು ಕೊನೆಗೂ ಮೇಲಾಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ದೂರು ದಾಖಲಾಗಿದ್ದು ಆ ಸಂತ್ರಸ್ತ ಮಹಿಳಾ ಉದ್ಯೋಗಿಗೆ ನ್ಯಾಯ ಸಿಕ್ಕಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ಮಹಿಳಾ ಉದ್ಯೋಗಿಯ ನೋವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಸ್ಥೆಯ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ದರ್ಪ ಹೆಚ್ಚು. ಹಗಲು ರಾತ್ರಿ ಬಸ್ ಓಡಿಸಿ, ಟಿಕೆಟ್ ಹಂಚುವ ನಿರ್ವಾಹಕರ ಕಷ್ಟ ಅವರಿಗೆ ತಿಳಿಯುವುದಿಲ್ಲ. ತಾವೇ ಸಂಬಳ ಕೊಡುತ್ತೇವೆ ಎನ್ನುವಂತೆ ವರ್ತಿಸುತ್ತಾರೆ. ಆದರೆ ಚಾಲಕರು ಮತ್ತು ನಿರ್ವಾಹಕರು ಕೆಲಸ ಮಾಡಿದರೆ ಮಾತ್ರಕಚೇರಿಯಲ್ಲಿ ಕುಳಿತಿರುವವರಿಗೆ ಸಂಬಳ ಸಿಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಛೇಡಿಸಿದ್ದಾರೆ.

ಸಾರಿಗೆ ಸಂಸ್ಥೆ ರಜೆ ವಿಚಾರದಲ್ಲಿ ತನ್ನದೇ ನೀತಿಯನ್ನು ಹೊಂದಿದೆ. ಇದು ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯಿಸುವ ಹಾಗೆ ಇಲ್ಲಿಯೂ ಅನ್ವಯವಾಗುತ್ತದೆ. ಆದರೆ ಜಾರಿ ಮಾಡುವ ವಿಚಾರದಲ್ಲಿ ಕೆಳ ಹಂತದ ಅಧಿಕಾರಿಗಳು ಕೆಲವೊಮ್ಮೆ ಅಮಾನವೀಯವಾಗಿ ನಡೆದುಕೊಳ್ಳುವುದರಿಂದ ಇಂತಹ ಅಭಾಸಗಳು ಆಗುತ್ತವೆ ಎನ್ನುವುದು ನೌಕರರ ಅಭಿಪ್ರಾಯ.

ಅಭಿಪ್ರಾಯಗಳು ಏನೇ ಇರಲಿ, ಈ ಮಹಿಳಾಉದ್ಯೋಗಿಗೆ ನ್ಯಾಯ ಸಿಕ್ಕಿದೆ ಎನ್ನುವುದು ಮುಖ್ಯ. ಹಾಗೆಯೇ ಭವಿಷ್ಯದಲ್ಲಿ ಮಹಿಳಾ ನೌಕರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದೆ ಸೌಹಾರ್ದಯುತ ವಾತಾವರಣದಲ್ಲಿ ಕೆಲಸ ಮಾಡುವಂತಾಗಲಿ ಎನ್ನುವುದೇ ಎಲ್ಲರ ಕಾಳಜಿಯಾಗಿದೆ ಎನ್ನುವುದು ಪ್ರಜ್ಞಾವಂತರ ನುಡಿ.

(ವರದಿ: ಎಚ್.ಮಾರುತಿ, ಬೆಂಗಳೂರು)