ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿ, ಈಗ ಗೋಳೋ ಅಂತ ಅಳೋದಕ್ಕೆ ಇದುವೇ ಕಾರಣ
Bengaluru: ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿರುವ ಟೆಕ್ಕಿಯೊಬ್ಬರು ಈಗ, ಬೆಂಗಳೂರು ನಗರ ಹೇಗೆ ಅಸ್ತವ್ಯಸ್ತವಾಗಿ ಬೆಳೆದಿದೆ. ಏನೆಲ್ಲ ಸಮಸ್ಯೆ ಎದುರಿಸುತ್ತಿದೆ ಎಂಬುದರ ಕಡೆಗೆ ಸೂಕ್ಷ್ಮವಾಗಿ ಗಮನಸೆಳೆದಿದ್ದಾರೆ. ಇದಕ್ಕಾಗಿ ಸ್ವಾನುಭವವನ್ನು ಇಟ್ಟುಕೊಂಡು ಅದನ್ನು ನಿರೂಪಿಸಿದ್ದಾರೆ.

ಬೆಂಗಳೂರು: ಕಾರ್ಪೊರೇಟ್‌ನ ಉದ್ಯೋಗಿಯೊಬ್ಬರು ತಿಂಗಳಿಗೆ 30,000 ರೂಪಾಯಿ ವೇತನ ಹೆಚ್ಚಳ ಸಿಕ್ಕಿತು ಎಂದು ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದರು. ಆ ನಂತರ ಅವರು ಅನುಭವಿಸಿದ ಯಾತನೆಯನ್ನು, ಗೋಳಿನ ಕಥೆ- ವ್ಯಥೆಯನ್ನು ರೆಡ್ಡಿಟ್ ತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ ಆಗಿದೆ. ಬಹುತೇಕ, ಬೆಂಗಳೂರು ಮಹಾನಗರದ ಮೂಲಸೌಕರ್ಯ, ಟ್ರಾಫಿಕ್ ಜಾಮ್, ಬದುಕಿನ ಗುಣಮಟ್ಟ ಮುಂತಾದವುಗಳನ್ನು ಅವರು ಉಲ್ಲೇಖಿಸಿದ್ದು, ಬಹಳ ಚರ್ಚೆಗೆ ಒಳಗಾಗಿದೆ.
ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿಯ ಕಥೆ-ವ್ಯಥೆ
ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿ ಈಗ ಗೋಳೋ ಅಂತ ಅಳೋದಕ್ಕೆ ಶುರುಮಾಡಿದ್ದಾರೆ. ಹೌದು, ರೆಡ್ಡಿಟ್ ತಾಣದಲ್ಲಿ ಅವರು “ಮೂವ್ಡ್ ಟು ಬೆಂಗಳೂರು ಫ್ರಂ ನೋಯ್ಡಾ ಆಂಡ್ ಐ ರಿಗ್ರೆಟ್ ಇಟ್” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಕಥೆ-ವ್ಯಥೆಯನ್ನು ಹಂಚಿಕೊಂಡಿದ್ದಾರೆ. ಅವರು, ಬೆಂಗಳೂರು ಮಹಾನಗರವನ್ನು ಕೊಳಕು ನಗರ ಎಂದು ಹೇಳಿದ್ದು, ನಗರೀಕರಣ ಸರಿಯಾಗಿ ಆಗಿಲ್ಲ. ಕೆಟ್ಟ ರಸ್ತೆಗಳು, ವಿಪರೀತ ಸಂಚಾರ ದಟ್ಟಣೆ, ಬದುಕಿನ ವೆಚ್ಚ, ಅರೋಗ್ಯ, ನೀರಿನ ಗುಣಮಟ್ಟ ಸೇರಿ ವಿವಿಧ ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ.
ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಒಂದು ವರ್ಷ ನೋಯ್ಡಾದಲ್ಲಿ ಕೆಲಸ ಮಾಡಿದ ಟೆಕ್ಕಿ, ಬಳಿಕ ಉದ್ಯೋಗದ ಹುಡುಕಾಟವನ್ನು ನೋಯ್ಡಾ ಬಿಟ್ಟು ಹೊರಗಿನ ಪ್ರದೇಶಕ್ಕೂ ವಿಸ್ತರಿಸಿದ್ದಾಗಿ ಹೇಳುತ್ತ ತನ್ನ ಕಥೆ-ವ್ಯಥೆಯನ್ನು ವಿವರಿಸಿದ್ದಾರೆ ಅವರು. ನೋಯ್ಡಾದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಇದ್ದು, ಆ ನಗರವನ್ನು ಬಹಳ ಇಷ್ಟಪಟ್ಟಿದ್ದೆ. ಅಲ್ಲಿನ ಮೂಲಸೌಕರ್ಯ ಮತ್ತು ವೈವಿಧ್ಯ ಹಾಗೂ ಇನ್ನೂ ಅನೇಕ ವಿಚಾರಗಳು ಮನಕ್ಕೆ ಇಷ್ಟವಾಗಿದ್ದವು. ನೋಯ್ಡಾ ಹಾಗೂ ಎನ್‌ಸಿಆರ್ ಸುತ್ತಮುತ್ತವೇ ಉದ್ಯೋಗ ಹುಡುಕಾಟ ಮಾಡಿದ್ದೆ. ಉದ್ಯೋಗ ಹುಡುಕಾಟ ನಡೆಸುವಾಗ ಪ್ರದೇಶಕ್ಕೆ ಸೀಮಿತವಾಗಿ ಹುಡುಕಿದರೆ ಅವಕಾಶಗಳು ನಷ್ಟವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಂಡು ಹೊರಗೂ ಹುಡುಕಾಟ ನಡೆಸಿದೆ. ಕೊನೆಗೆ ತಿಂಗಳಿಗೆ 30,000 ರೂಪಾಯಿ ವೇತನ ಹೆಚ್ಚಳ ಸಿಕ್ಕಿತು ಎಂದು ಬೆಂಗಳೂರಿಗೆ ಸ್ಥಳಾಂತರವಾದೆ. 30,000 ರೂಪಾಯ ಹೆಚ್ಚಳ ಎಂಬುದನ್ನು ನೋಯ್ಡಾದಿಂದ ಬೆಂಗಳೂರಿಗೆ ಬಂದದ್ದು ಯಾಕೆ ಎಂಬುದನ್ನು ಅರ್ಥಮಾಡಿಸಲು ಬಳಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಈಗ ಬೆಂಗಳೂರಲ್ಲಿ ಇದ್ದೇನೆ. ಕೆಟ್ಟ ರಸ್ತೆ, ಕೆಟ್ಟ ಹವಾಮಾನ, ಹಾಳಾದ ರಸ್ತೆಗಳು ಇನ್ನೂ ಅನೇಕ ಸಮಸ್ಯೆಗಳಿರುವ ಬೆಂಗಳೂರು ಅತ್ಯಂತ ಕೆಟ್ಟ ನಗರವೆನಿಸತೊಡಗಿದೆ. ಇದಕ್ಕಿಂತ ನೋಯ್ಡಾವೇ ಬೆಸ್ಟ್. ನೋಯ್ಡಾದಲ್ಲಿ ಜನದಟ್ಟಣೆ ಕಾಣಿಸುತ್ತಿರಲಿಲ್ಲ. ಬೆಂಗಳೂರು ಜನದಟ್ಟಣೆ ಹೆಚ್ಚಾಗಿದೆ. ಖರ್ಚು ವೆಚ್ಚಗಳು ಕೂಡ ಹೆಚ್ಚು. ನೋಯ್ಡಾ ಬಿಟ್ಟು ಬಂದಿರುವುದಕ್ಕೆ ಈಗ ವಿಷಾದವೆನಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ಹಾಗೆಂದು ಬೆಂಗಳೂರು ವಿರೋಧಿ ಅಲ್ಲ. ನಾನು ಕೂಡ ದಕ್ಷಿಣ ಭಾರತೀಯನೇ. ನನಗೆ ವ್ಯಕ್ತಿಗತವಾಗಿ ಬೆಂಗಳೂರು ಬಗ್ಗೆ ದ್ವೇಷ ಇಲ್ಲ ಎಂಬುದನ್ನೂ ಸ್ಪಷ್ಟ ಪಡಿಸಿದ್ದು, ಬದುಕಿನ ಬವಣೆಯ ಚಿತ್ರಣ ಕಟ್ಟಿಕೊಡಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ.
ನನ್ನನ್ನು ಯಾಕೆ ದ್ವೇಷಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಬೆಂಗಳೂರನ್ನು ದ್ವೇಷಿಸುವುದಿಲ್ಲ ಅಥವಾ ಪ್ರೀತಿಸುವುದಿಲ್ಲ. ನಾನು ನೋಯ್ಡನ್ನು ಇತರ ನಗರಗಳಿಗಿಂತ ಹೆಚ್ಚಾಗಿ ಏಕೆ ಪ್ರೀತಿಸುತ್ತೇನೆ ಎಂಬುದರ ಕುರಿತು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಮತ್ತು “ಉತ್ತರಕ್ಕೆ ವಾಪಸ್ ಹೋಗಿ” ಎಂದು ಹೇಳುವ ಜನರು ಅರ್ಥಮಾಡಿಕೊಳ್ಳಬೇಕಾದ್ದು ಬಹಳಷ್ಟಿದೆ. ನಾನು ಅದನ್ನು ಯೋಜಿಸುತ್ತಿದ್ದೇನೆ ಮತ್ತು ಹುಡುಗರಿಗೆ ದೇಶವನ್ನು ಅನ್ವೇಷಿಸುವ ಹಕ್ಕಿದೆ. ಇದನ್ನು ಉತ್ತರ ಮತ್ತು ದಕ್ಷಿಣ ಚರ್ಚೆಯ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ. ನಾನು ದಕ್ಷಿಣ ಭಾರತದ ಸ್ವಚ್ಛ ನಗರದಿಂದ ಬಂದಿದ್ದೇನೆ. ಇಂದೋರ್ ನಗರದಲ್ಲಿ 4 ವರ್ಷ ಇದ್ದೆ. ಬೆಂಗಳೂರು ಉಳಿದ ನಗರಗಳಂತೆ ಇಲ್ಲ ಎಂಬುದನ್ನು ನಿರೂಪಿಸಿದ್ದೇನೆ ಅಷ್ಟೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
