ಸರ್, ಒಂದೇ ಒಂದು ಈರುಳ್ಳಿ ಕೊಡಿ; ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ
Onion Request: ಮನೆಗೆ ದಿನಸಿ ತಂದುಕೊಟ್ಟ ಡೆಲಿವರಿ ಏಜೆಂಟ್ ಟಿಪ್ಸ್ ಕೇಳಿದರೆ, ಅಥವಾ ಕುಡಿಯಲು ನೀರು ಕೇಳಿದರೆ ಏನೂ ಅನಿಸದು. ಆದರೆ, ಒಂದೇ ಒಂದು ಈರುಳ್ಳಿ ಕೊಡಿ ಎಂದರೆ ಹೇಗೆ? ಹೌದು, ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು ನೋಡಿ.
![ಸರ್, ಒಂದೇ ಒಂದು ಈರುಳ್ಳಿ ಕೊಡಿ ಪ್ಲೀಸ್ ಎಂಬ ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು. (ಮೆಟಾ ಎಐ ರಚಿತ ಚಿತ್ರವನ್ನು ಸಾಂಕೇತಿವಾಗಿ ಬಳಸಲಾಗಿದೆ) ಸರ್, ಒಂದೇ ಒಂದು ಈರುಳ್ಳಿ ಕೊಡಿ ಪ್ಲೀಸ್ ಎಂಬ ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು. (ಮೆಟಾ ಎಐ ರಚಿತ ಚಿತ್ರವನ್ನು ಸಾಂಕೇತಿವಾಗಿ ಬಳಸಲಾಗಿದೆ)](https://images.hindustantimes.com/kannada/img/2024/12/29/550x309/Onion_Please_1735455108218_1735455125215.png)
Onion Request: ಡೆಲಿವರಿ ಏಜೆಂಟ್‌ಗಳು ಊರೆಲ್ಲ ಸುತ್ತಾಡಿ ಮನೆ ಮನೆಗೆ ದಿನಸಿ ಸಾಮಗ್ರಿ ತಲುಪಿಸುತ್ತಿರುತ್ತಾರೆ. ಬಾಯಾರಿದಾಗ ನೀರು ಕೊಡಿ ಎಂದು ಕೇಳುವುದು ಸಾಮಾನ್ಯ. ಆದರೆ, ಬೆಂಗಳೂರಿನಲ್ಲಿ ಒಬ್ಬ ಡೆಲಿವರಿ ಏಜೆಂಟ್ ಮನೆಗೆ ಸಾಮಗ್ರಿ ತಲುಪಿಸಿದ ಬಳಿಕ ಒಂದೇ ಒಂದು ಈರುಳ್ಳಿ ಕೇಳಿದ್ದ ಎಂಬುದೇ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೀರು ಬೇಕು, ಜ್ಯೂಸ್ ಕೊಡ್ತೀರಾ ಇವೆಲ್ಲ ಒಕೆ. ಆದರೆ ಈ ವ್ಯಕ್ತಿ ಈರುಳ್ಳಿ ಯಾಕೆ ಕೇಳಿದ ಎಂಬುದೇ ದೊಡ್ಡ ಪ್ರಶ್ನೆ. ಚರ್ಚೆಯ ವಿಚಾರ ಮಾಟ ಮಂತ್ರದ ಆತಂಕ, ಕಳವಳದ ತನಕವೂ ಹೋಗಿದೆ. ಇದು ಶುರುವಾಗಿದ್ದು ರೆಡ್ಡಿಟ್ ತಾಣದಲ್ಲಿ. ರೆಡ್ಡಿಟ್ ತಾಣದಲ್ಲಿ yashwantptl7 ಎಂಬ ವ್ಯಕ್ತಿ ಈ ವಿಚಾರ ಪ್ರಸ್ತಾಪಿಸಿದ್ದು, ಅನೇಕರ ಅಚ್ಚರಿಗೆ ಕಾರಣವಾಯಿತು.
ಸರ್, ಒಂದೇ ಒಂದು ಈರುಳ್ಳಿ ಕೊಡಿ; ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ
ಬೆಂಗಳೂರು ನಿವಾಸಿಯಾಗಿರುವ yashwantptl7 ಎಂಬುವವರು ಆನ್‌ಲೈನ್‌ನಲ್ಲಿ ಗ್ರಾಸರಿ (ದಿನಸಿ) ಆರ್ಡರ್ ಮಾಡಿದ್ದರು. ಅದನ್ನು ತಂದು ಕೊಟ್ಟ ಡೆಲಿವರಿ ಏಜೆಂಟ್ ವಿಲಕ್ಷಣ ಬೇಡಿಕೆಯನ್ನು ಮುಂದಿಟ್ಟ. ನಿಜಕ್ಕೂ ಆಶ್ಚರ್ಯವಾಯಿತು ಎಂದು ರೆಡ್ಡಿಟ್ ತಾಣದಲ್ಲಿ ಘಟನೆಯನ್ನು ವಿವರಿಸಿರೋದು ಹೀಗೆ.
ದಿನಸಿ ತಂದು ಕೊಟ್ಟ ಡೆಲಿವರಿ ಏಜೆಂಟ್ ನನ್ನನ್ನು ಕೂಗಿದ. “ಸರ್…” ಏನು ಎನ್ನುತ್ತ ಹಿಂದಿರುಗಿದೆ. ಸರ್ ಏಕ್ ಪ್ಯಾಝ್ ಮಿಲ್ ಸಕ್ತಾ ಹೇ ಕ್ಯಾ (ಸರ್ ಒಂದು ಈರುಳ್ಳಿ ಸಿಗಬಹುದಾ) ಎಂದು ವಿನಯದಿಂದ ಕೇಳಿದ. ಇದು ನನಗೆ ಬಹಳ ಅಚ್ಚರಿ ಎನಿಸಿತು. ಟಿಪ್ಸ್ ಕೇಳೋದು ಅಥವಾ ಕುಡಿಯೋದಕ್ಕೆ ನೀರು ಕೇಳೋದು ಸಾಮಾನ್ಯ. ಈತ ಯಾಕೆ ಈರುಳ್ಳಿ ಕೇಳ್ತಿದ್ದಾನಲ್ಲ ಎಂದುಕೊಂಡು, ಈರುಳ್ಳಿ ಯಾಕೆ ಬೇಕು ಎಂದು ಕೇಳಿದೆ. ಆತ ಅದಕ್ಕೆ ಸಹಜವಾಗಿಯೆ "ಐಸೇ ಹಿ, ಖಾನೇ ಕೇ ಲಿಯೆ (ಹಾಗೇ, ತಿನ್ನೋದಕ್ಕೆ ಬೇಕು) ಎಂದು ಉತ್ತರ ಕೊಟ್ಟ. ಒಂದು ಈರುಳ್ಳಿ ಕೊಟ್ಟೆ. ಬಳಿಕ ಮೌನವಾಗಿ ಒಳಗೆ ಬಂದೆ. ಪತ್ನಿಗೆ ಈ ವಿಚಾರ ತಿಳಿಸಿದೆ. ಆತ ನಿಜವಾಗಿಯೂ ಆ ಈರುಳ್ಳಿ ತಿನ್ನುತ್ತಾನಾ ಅಥವಾ ಮಂತ್ರ ಮಾಟ ಏನಾದರೂ ಮಾಡ್ತಾನಾ ಎಂದು ಚರ್ಚಿಸಿದೆವು. ಈರುಳ್ಳಿ ತುಂಬಾ ದುಬಾರಿ ಆಗಿರುವ ಕಾರಣ ಕೇಳಿರಬೇಕು. ಪ್ರತಿ ಮನೆಯಿಂದಲೂ ಒಂದೊಂದು ಈರುಳ್ಳಿ ತಗೊಳ್ತಾ ಇರಬಹುದು ಎಂದು ನನ್ನ ಪತ್ನಿ ಹೇಳಿದಳು. ಈ ರೀತಿ ಅನುಭವ ನಿಮಗೆ ಯಾರಿಗಾದರೂ ಆಗಿದೆಯಾ ಎಂದು ಜನರನ್ನು ಕೇಳಿದ್ದಾರೆ.
ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು ಬೆಂಗಳೂರು ಡೆಲಿವರಿ ಏಜೆಂಟ್‌ನ ವಿಲಕ್ಷಣ ಬೇಡಿಕೆ
ರೆಡ್ಡಿಟ್‌ನಲ್ಲಿ yashwantptl7 ಎಂಬುವವರ ಈ ಪೋಸ್ಟ್ ಬಹುಬೇಗ ವೈರಲ್ ಆಗಿದ್ದು, ಅನೇಕರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಮನೆಗೆ ಈರುಳ್ಳಿ ತಗೊಂಡು ಹೋಗಲು ಈ ರೀತಿ ಮಾಡ್ತಾ ಇರಬಹುದು ಎಂದು ಕೆಲವರು ಹೇಳಿದರು. ಇನ್ನು ಕೆಲವರು ಗ್ರಾಹಕರ ಉದಾರ ಮನೋಭಾವವನ್ನು ಗುರುತಿಸಿದರು. ಡೆಲಿವರಿ ಏಜೆಂಟ್ ಒಂದೋ ಆರ್ಥಿಕವಾಗಿ ಕಷ್ಟಪಡುತ್ತಿರಬಹುದು. ಆದ್ದರಿಂದ ರೊಟ್ಟಿಯೊಂದಿಗೆ ತಿನ್ನಲು ಕೇಳಿರಬಹುದು ಅಥವಾ ಅವರು ಭಾನುವಾರ ಸಂಜೆ ಉತ್ತಮ ಮೂಡ್‌ನಲ್ಲಿದ್ದು, ಚಿಕನ್ ಮತ್ತು ಓಲ್ಡ್ ಮಾಂಕ್ ರಮ್ ಜತೆಗೆ ನೆಚ್ಚಿಕೊಳ್ಳಲು ಕೇಳಿರಬಹುದು. ಅಥವಾ ಬಹುಶಃ ಅವರು ಎಲ್ಲೋ ಯಾರಾದರೂ ಅಗತ್ಯವಿರುವವರನ್ನು ಕಂಡು ಆ ಈರುಳ್ಳಿಯನ್ನು ಅವರಿಗೆ ನೀಡಬಹುದು. ಏನೆಂಬ ಸ್ಪಷ್ಟತೆ ನಮಗೂ ಇಲ್ಲ ಎಂದು ಮತ್ತೊಬ್ಬರು ವಿವರಿಸಿದ್ದಾರೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
![Whats_app_banner Whats_app_banner](https://kannada.hindustantimes.com/static-content/1y/wBanner.png)