ಬೆಂಗಳೂರು ಈಜಿಪುರ ಫ್ಲೈಓವರ್, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೊ ಕಾರ್ಯಾರಂಭಕ್ಕೆ ಬೇಕಿದೆ ಟ್ರಂಪ್ ಮಧ್ಯಸ್ತಿಕೆ, ವೈರಲ್ ಪೋಸ್ಟ್
ಬೆಂಗಳೂರಿನ ಈಜಿಪುರ ಫ್ಲೈವರ್ ಕಾಮಗಾರಿ ಕೆಲವು ದಿನಗಳಿಂದ ನಡೆಯುತ್ತಲೇ ಇದೆ. ಮೇಲ್ಸೇತುವೆ ಕಾಮಗಾರಿ ವಿಳಂಬವು ಈ ಭಾಗದಲ್ಲಿ ಸಂಚರಿಸುವವರಿಗೆ ನಿರಾಸೆ ಮೂಡಿಸಿದೆ. ಆ ಕಾರಣಕ್ಕೆ ಈ ವಿಚಾರದಲ್ಲಿ ಟ್ರಂಪ್ ಮದ್ಯೆ ಪ್ರವೇಶಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ತಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿತ್ತು. ಆ ನಂತರ ಟ್ರಂಪ್ ಮಧ್ಯಸ್ತಿಕೆಗೆ ಬೇಡಿಕೆ ಹೆಚ್ಚಿದಂತಿದೆ. ಇದೀಗ ಬೆಂಗಳೂರಿನ ಈಜಿಪುರ ಫ್ಲೈವರ್ ಕಾಮಗಾರಿ ವಿಚಾರದಲ್ಲೂ ಟ್ರಂಪ್ ಮಧ್ಯಸ್ತಿಕೆ ಬೇಕು ಎಂದು ಸ್ಥಳೀಯರೊಬ್ಬರು ಆಗ್ರಹಿಸಿದ್ದಾರೆ.
ಬೆಂಗಳೂರು ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಡೊನಾಲ್ಡ್ ಟ್ರಂಪ್ ನಗರದಲ್ಲಿ ಬಹಳ ದಿನಗಳಿಂದ ವಿಳಂಬವಾಗುತ್ತಿರುವ ಎರಡು ಮೂಲಸೌಕರ್ಯ ಯೋಜನೆಗಳಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು ಈಜಿಪುರ ಫ್ಲೈಓವರ್ ನಿರ್ಮಾಣ ಮತ್ತು ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಮಧ್ಯಸ್ತಿಕೆ ವಹಿಸಿ ಸ್ಥಳೀಯ ಅಧಿಕಾರಗಳ ಜೊತೆ ಮಾತನಾಡಬೇಕು ಎಂದು ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ.
ʼಬೆಂಗಳೂರಿನಲ್ಲಿ ಈಜಿಪುರ ಫ್ಲೈಓವರ್ ಕಾಮಗಾರಿಗಳನ್ನು ESCALATE ಮಾಡಲು ದಯವಿಟ್ಟು ಬಿಬಿಎಂಪಿಯೊಂದಿಗೆ ಮಧ್ಯಸ್ಥಿಕೆ ವಹಿಸಬಹುದೇ? ನಾವು ಇದಕ್ಕೆ ಮೆಗಾ ಟ್ರಂಪ್ ಫ್ಲೈಓವರ್ ಎಂದು ಹೆಸರಿಡುತ್ತೇವೆ. ಹಾಗೆಯೇ ಹಳದಿ ಮಾರ್ಗದ ಮೆಟ್ರೊ ರೈಲುಗಳು ಕಾರ್ಯರಂಭಕ್ಕೆ ಬಿಎಂಆರ್‌ಸಿಎಲ್ ಜೊತೆ ಕೂಡ ಮಾತುಕತೆ ನಡೆಸಿ ಎಂದು ಟ್ರಂಪ್ ಅವರ ಅಧಿಕೃತ ಹ್ಯಾಂಡಲ್ @realDonaldTrump ಅನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ʼಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸುವುದು ಅಷ್ಟು ದೊಡ್ಡ ವಿಷಯವಲ್ಲ. ಅವರು ಪ್ರಬಲ ಸಂಧಾನಕಾರ ಮತ್ತು ಜಾಗತಿಕ ನಾಯಕ ಎಂದು ಸಾಬೀತುಪಡಿಸಲು ಬಯಸಿದರೆ, ಅವರು ಬೆಂಗಳೂರಿನ ಈ ಎರಡು ವಿಚಾರಗಳಲ್ಲಿ ಮಧ್ಯಸ್ತಿಕ ವಹಿಸಿ ಜಗತ್ತಿಗೆ ತಮ್ಮ ಮೌಲ್ಯವನ್ನು ಸಾಬೀತುಪಡಿಸಲಿ. ಮುಕ್ತ ಸವಾಲುʼ ಎಂದು ಬರೆದುಕೊಂಡಿದ್ದಾರೆ.
ಡೋನಾಲ್ಡ್ ಟ್ರಂಪ್ ಭಾರತ ಹಾಗೂ ಪಾಕ್ ನಡುವಿನ ಕದನ ವಿರಾಮ ಘೋಷಣೆಯ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೆ ಈ ರೀತಿಯ ಹಾಸ್ಯಮಯ ಟ್ವೀಟ್‌ವೊಂದನ್ನು ಪೋಸ್ಟ್ ಮಾಡಿದ್ದಾರೆ ಬೆಂಗಳೂರು ನಿವಾಸಿ.
ಈಜಿಪುರ ಮೇಲ್ಸೇತುವೆ ಕಾಮಗಾರಿಯು ಹಲವು ವರ್ಷಗಳಿಂದ ನಡೆಯಿತ್ತಿದ್ದು, ಪ್ರಯಾಣಿರಿಗೆ ನಿರಾಶೆ ಉಂಟು ಮಾಡುತ್ತಿದೆ. ಅದೇ ರೀತಿ, ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗವು ಹಲವು ಬಾರಿ ಗಡುವು ತಪ್ಪಿದೆ. ಈ ಎರಡೂ ಪೂರ್ಣಗೊಂಡರೆ ಸಂಚಾರ ದಟ್ಟಣೆ ತಗ್ಗುತ್ತದೆ ಎಂದು ಜನರು ಆಸೆಯಿಂದ ಕಾಯುತ್ತಿದ್ದಾರೆ.
ಈ ಪೋಸ್ಟ್ ವಿಡಂಬನೆಯನ್ನು ಹೊಂದಿದ್ದರು, ಜನರು ಸಂಚಾರ ದಟ್ಟಣೆ ತಗ್ಗಲು ಹಾಗೂ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಅಸಹನೆ ಈ ಪೋಸ್ಟ್‌ನಲ್ಲಿ ಎದ್ದು ಕಾಣುತ್ತಿದೆ.
ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್‌ಗೆ ಹಲವು ಬೆಂಗಳೂರು ನಿವಾಸಿಗಳು ಕಾಮೆಂಟ್ ಮಾಡುವ ಮೂಲಕ ಹಾಸ್ಯಸ್ಪದವಾಗಿ ಸ್ಪಂದಿಸಿದ್ದಾರೆ. ಈಜಿಪುರ ಫ್ಲೈಓವರ್ ಪೂರ್ಣಗೊಳಿಸಲು ಟ್ರಂಪ್ ಅವರನ್ನು ಕೇಳಿದ ಕ್ಷಣ ಅವರು ಕದನ ವಿರಾಮ ಕೊನೆಗೊಳ್ಳಬಹುದು ಆದರೆ ಈ ಫ್ಲೈಓವರ್ ಪೂರ್ಣಗೊಳ್ಳುವುದಿಲ್ಲʼ ಎಂದು ಹೇಳುತ್ತಾರೆ ಎಂದು ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ ಎಕ್ಸ್ ಬಳಕೆದಾರರು.
ʼನೀವು ಬಿಬಿಎಂಪಿ ಜೊತೆ ಮಾತುಕತೆ ನಡೆಸಲು ಸಾಧ್ಯವಾದರೆ, ನೀವು ನಿಜವಾಗಿಯೂ ಜಾಗತಿಕ ನಾಯಕʼ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼಹೊರ ವರ್ತುಲ ರಸ್ತೆ ಮತ್ತು ವಿಶೇಷವಾಗಿ ಹೊಸ್ಕೆರೆಹಳ್ಳಿ ಫ್ಲೈಓವರ್ ದುರಸ್ತಿ ಮಾಡಲು ಬಿಬಿಎಂಪಿಯನ್ನು ಎಸ್ಕಲೇಟ್ ಮಾಡಿʼ ಎಂದು ಟ್ರಂಪ್ ಅವರು ಟ್ಯಾಗ್ ಮಾಡಿ ಹೇಳಲಾಗಿದೆ.