200 ಸ್ಥಳೀಯ ಪದ ಕಲಿಯೋದು ಕಷ್ಟನಾ? ಕನ್ನಡ ಮಾತಾಡಲು ನಿರಾಕರಿಸಿದ ಎಸ್‌ಬಿಐ ಮ್ಯಾನೇಜರ್‌ಗೆ ಮೋಹನ್‌ದಾಸ್ ಪೈ ತರಾಟೆ
ಬೆಂಗಳೂರಿನ ಚಂದಾಪುರ ಎಸ್‌ಬಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿರುವ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ 200 ಸ್ಥಳೀಯ ಪದ ಕಲಿಯೋದು ಕಷ್ಟವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿರುವುದು ಹಾಗೂ ಕನ್ನಡ ಕಲಿಯುವುದಿಲ್ಲ ಎಂದು ಹೇಳಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಆಕೆ ಕನ್ನಡ ಕಲಿಯುವುದೇ ಇಲ್ಲ, ಕನ್ನಡ ಮಾತನಾಡುವುದೇ ಇಲ್ಲ ಎಂದು ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಟಿ ವಿ ಮೋಹನದಾಸ್ ಪೈ ಸ್ಥಳೀಯ ಭಾಷೆಯ 200 ಪದ ಕಲಿಯುವುದು ಅಷ್ಟೊಂದು ಕಷ್ಟವೇ ಎಂದು ಪ್ರಶ್ನಿಸಿದ್ದಾರೆ.
ಮ್ಯಾನೇಜರ್ ವರ್ತನೆ ಹಾಗೂ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ‘ಪ್ರತಿಯೊಂದು ವ್ಯವಹಾರವು ತನ್ನ ಸ್ಥಳೀಯ ಗ್ರಾಹಕರಿಗೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಸೇವೆ ಸಲ್ಲಿಸಬೇಕು. ಇದು ಮತ್ತೆ ಬ್ರಿಟಿಷ್ ರಾಜ್ಯವಲ್ಲ. ಇದು ಸೇವಾ ವ್ಯವಹಾರ‘ ಎಂದು ಹೇಳಿದ್ದಾರೆ.
ಈ ಪೋಸ್ಟ್‌ನಲ್ಲಿ ಅವರು ಬ್ಯಾಂಕ್ ಸಿಬ್ಬಂದಿಯನ್ನು ಯಾರೂ ಸ್ವಚ್ಛ ಕನ್ನಡ ಕಲಿಯಿರಿ ಅಥವಾ ಓದಲು, ಬರೆಯಲು ಕಲಿಯಿರಿ ಎಂದು ಹೇಳುತ್ತಿಲ್ಲ. ಬದಲಾಗಿ ಗ್ರಾಹಕರೊಂದಿಗೆ ಗೌರವಯುತವಾಗಿ ಸಂವಹನ ನಡೆಸಲು ಅಗತ್ಯ ಇರುವಷ್ಟು ಮಾತ್ರ ಕನ್ನಡ ಕಲಿಯಲು ಹೇಳುತ್ತಿದ್ದಾರೆ‘ ಎಂದು ಅವರು ಬರೆದುಕೊಂಡಿದ್ದಾರೆ.
‘ಸಂವಹನ ನಡೆಸಲು 200 ಪದಗಳನ್ನು ಕಲಿಯುವುದು ಕಷ್ಟವೇ? ಅವರು ನಿಮ್ಮ ಗ್ರಾಹಕರು, ನಿಮ್ಮ ಅಡಿಯಾಳುಗಳಲ್ಲ. ಈ ದುರಹಂಕಾರ ಎಂದೆಂದಿಗೂ ಸರಿಯಲ್ಲ‘ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
‘ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಕರ್ನಾಟಕ ಅಲ್ಲ. ರಾಜ್ಯದಲ್ಲಿ ಕೆಲಸ ಮಾಡಲು ಸ್ಥಳೀಯ ಭಾಷೆಯನ್ನು ಕಲಿಯಿರಿ' ಎಂಬ ಈ ವ್ಯವಹಾರವನ್ನು ಅನುಮತಿಸಲಾಗುವುದಿಲ್ಲ. ನಾವು ಮೊದಲು ಭಾರತೀಯರು. ಸಂವಿಧಾನವು ಅಂತಹ ಯಾವುದೇ ಷರತ್ತು ಹೊಂದಿಲ್ಲ‘ ಎಂದು ತುಷಾರ್ ಗುಪ್ತಾ ಎನ್ನುವ ಎಕ್ಸ್ ಬಳಕೆದಾರರು ಮಾಡಿರುವ ಪೋಸ್ಟ್‌ಗೆ ಮೋಹನ್ ದಾಸ್ ಪೈ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ವಿವಾದ? ವಿವರ ಇಲ್ಲಿದೆ
ಆನೇಕಲ್ ತಾಲ್ಲೂಕಿನ ಚಂದಾಪುರದ ಸೂರ್ಯ ಸಿಟಿ ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರೊಬ್ಬರು ಮಹಿಳಾ ಮ್ಯಾನೇಜರ್ ಬಳಿ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಆ ಮ್ಯಾನೇಜರ್ ನಾನು ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡುವುದಿಲ್ಲ, ಕನ್ನಡ ಕಲಿಯುವುದಿಲ್ಲ ಎಂದು ರೋಷದಲ್ಲಿ ಹೇಳಿರುವ ವಿಡಿಯೊ ವೈರಲ್ ಆಗಿದೆ. ಜೊತೆ ಈ ವಿಡಿಯೊದಲ್ಲಿ ಆ ಮ್ಯಾನೇಜರ್ ಗ್ರಾಹಕರ ಬಳಿ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದನ್ನು ಗಮನಿಸಬಹುದು.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಕನ್ನಡ ಪರ ಸಂಘಟನೆಗಳು ಮತ್ತು ನಾಗರಿಕರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಘಟನೆಯ ನಂತರ ಬ್ಯಾಂಕ್ ಅಧಿಕಾರಿ ಕ್ಯಾಮೆರಾ ಮುಂದೆ ಕ್ಷಮೆಯಾಚಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಬ್ಯಾಂಕ್ ಅಧಿಕಾರಿಯ ವರ್ತನೆಯನ್ನು ‘ತೀವ್ರ ಖಂಡನೀಯ‘ ಎಂದು ಕರೆದಿದ್ದರು ಮತ್ತು ಉದ್ಯೋಗಿಯನ್ನು ತ್ವರಿತವಾಗಿ ವರ್ಗಾವಣೆ ಮಾಡಿದ್ದಕ್ಕೆ ಎಸ್‌ಬಿಐಗೆ ಧನ್ಯವಾದ ಅರ್ಪಿಸಿದ್ದರು. ಭಾರತದಾದ್ಯಂತ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯವನ್ನು ಒತ್ತಾಯಿಸಿದರು. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು" ಎಂದು ಪ್ರತಿಪಾದಿಸಿದರು.
ಇದೀಗ ಮೋಹನ್‌ದಾಸ್ ಪೈ ಕೂಡ ಕರ್ನಾಟಕದಲ್ಲಿದ್ದು ಸ್ಥಳೀಯ ಭಾಷೆಯನ್ನು ಸಂವಹನಕ್ಕೆ ಅಗತ್ಯವಿರುವಷ್ಟನ್ನಾದರೂ ಕಲಿಯುವುದು ಅವಶ್ಯ ಎಂದು ಪ್ರತಿಪಾದಿಸಿದ್ದಾರೆ.