Viral: ಝಡ್ ಜನರೇಷನ್ ಮಕ್ಕಳಿಗೆ ರೀಲ್ಸ್ ಗೊತ್ತು ರಿಯಲ್ ಮ್ಯಾಥ್ಸ್ ಗೊತ್ತಿಲ್ಲ; ಚರ್ಚೆಗೆ ಗ್ರಾಸವಾಗಿದೆ ಬೆಂಗಳೂರು ಸಿಇಒ ಲಿಂಕ್ಡ್‌ಇನ್ ಪೋಸ್ಟ್
Viral Post: ಇಂದಿನ ಪದವಿಧರರಿಗೆ ಸಾಮಾನ್ಯ ಗಣಿತ, ಸಮಸ್ಯೆ ಪರಿಹರಿಸುವ ಗುಣವೇ ತಿಳಿದಿಲ್ಲ ಎಂದು ಬೆಂಗಳೂರು ಮೂಲದ ಸಿಇಒ ಒಬ್ಬರು ಆರೋಪಿಸಿದ್ದಾರೆ. ಅವರ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ದಿನಗಳಲ್ಲಿ ರ‍್ಯಾಂಕ್ ಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಯಾರ ಬಾಯಲ್ಲಿ ಕೇಳಿದರೂ ನನ್ನ ಮಗ 96%, ನನ್ನ ಮಗಳು 98% ಎಂದು ಹೇಳುತ್ತಾರೆ. ಆದರೆ ಹಗಲು ರಾತ್ರಿ ಶಾಲೆ, ಟ್ಯೂಷನ್, ಮನೆ ಎಂದು ಓದುವ ಮಕ್ಕಳಲ್ಲಿ ಸಾಮಾನ್ಯಜ್ಞಾನ ಎಷ್ಟಿದೆ ಎಂದು ಪರೀಕ್ಷೆ ಮಾಡಲು ಹೊರಟರೆ ಖಂಡಿತ ದಿಗ್ಭ್ರಮೆಯಾಗುತ್ತೆ, ಹಾಗಂತ ಎಲ್ಲಾ ಮಕ್ಕಳ ಹೀಗೆ ಇರುತ್ತಾರೆ ಎಂದಲ್ಲ. ಕೆಲವರು ಓದಿನೊಂದಿಗೆ ಸಾಮಾನ್ಯಜ್ಞಾನವನ್ನೂ ಬೆಳೆಸಿಕೊಳ್ಳುತ್ತಾರೆ. ಅದೆಲ್ಲಾ ಸರಿ, ಈ ಮಾತು ಈಗ್ಯಾಕೆ ಅಂತಿದ್ದೀರಾ? ಖಂಡಿತ ವಿಷಯ ಇದೆ.
ಬೆಂಗಳೂರು ಮೂಲದ ಸಿಇಒ ಒಬ್ಬರು ಲಿಂಕ್ಡ್‌ಇನ್‌ನಲ್ಲಿ ಹೇಳಿರುವ ವಿಚಾರ ಈಗ ಚರ್ಚೆ ಹುಟ್ಟು ಹಾಕಿದೆ. ಝಡ್ ಜನರೇಷನ್‌ನ ಸಾಮರ್ಥ್ಯದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜನರೇಷನ್‌ನವರಿಗೆ ಮೂಲಭೂತ ಸಮಸ್ಯೆ ಪರಿಹರಿಸುವ ಗುಣ ಹಾಗೂ ಹಣಕಾಸಿನ ಸಾಕ್ಷರತಾ ಕೌಶಲವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಸಿಇಓ ಆಶಿಷ್ ಗುಪ್ತಾ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಸ್ಟೇಟಸ್‌ವೊಂದನ್ನು ಪೋಸ್ಟ್ ಮಾಡಿದ್ದಾರೆ. ಝಡ್ ಜನರೇಷನ್ ಅವರಿಗೆ ರೀಲ್ಸ್ ಗೊತ್ತು, ಆದ್ರೆ ರಿಯಲ್ ಮ್ಯಾಥ್ಸ್ ಗೊತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಡಿಜಿಟಲ್ ಪ್ರವೃತ್ತಿಗಳನ್ನು ಮೀರಿದ ಯುವ ಪೀಳಿಗೆಯ ಸಾಮರ್ಥ್ಯಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪದವಿಧರರಿಗೆ ಸಾಧ್ಯವಾಗಿಲ್ಲ 5ನೇ ತರಗತಿ ಗಣಿತ ಸೂತ್ರ ಬಿಡಿಸುವುದು
ಬಿಬಿಎ, ಬಿಸಿಎ ಮತ್ತು ಇತರ ವಿಭಾಗಗಳಿಂದ ಪದವಿಧರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭವನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ 5ನೇ ತರಗತಿಯ ಸರಳ ಗಣಿತ ಪ್ರಶ್ನೆಗಳನ್ನು ಕೇಳಿದ್ದಾರೆ.
ಒಂದು ಕಾರು ಮೊದಲ 60 ಕಿಮೀ ಗಂಟೆಗೆ 30 ಕಿಮೀ ವೇಗದಲ್ಲಿ ಮತ್ತು ಮುಂದಿನ 60 ಕಿಮೀ ಗಂಟೆಗೆ 60 ಕಿಮೀ ವೇಗದಲ್ಲಿ ಚಲಿಸಿದರೆ, ಅದರ ಸರಾಸರಿ ವೇಗ ಎಷ್ಟು? ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ 50ರಲ್ಲಿ ಕೇವಲ ಇಬ್ಬರು ಮಾತ್ರ ಸರಿ ಉತ್ತರ ನೀಡಿದ್ದು, ಉಳಿದವರು ಉತ್ತರ ಹೇಳಲು ಹೆಣಗಾಡಿದ್ದಾರೆ.
ಝಡ್ ಜನರೇಷನ್ ನ್ಯೂನತೆ ಮತ್ತು ಸಾಮರ್ಥ್ಯ
ಅನೇಕ ವಿದ್ಯಾರ್ಥಿಗಳು ಮೂಲಭೂತ ಗಣಿತ ಪ್ರಶ್ನೆಯಲ್ಲಿ ಅನುತ್ತೀರ್ಣರಾಗಿದ್ದರೂ, ಇನ್‌ಸ್ಟಾಗ್ರಾಮ್ ರೀಲ್‌ಗಳು, ವೈರಲ್ ವಿಷಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳಲ್ಲಿ ಅವರ ಉತ್ಸಾಹ ಮತ್ತು ಪರಿಣತಿಯನ್ನು ಗಮನಿಸಿದ್ದಾರೆ ಆಶಿಷ್ ಗುಪ್ತಾ.
‘ಇದು ಕಟುವಾದ ವಾಸ್ತವವನ್ನು ಎತ್ತಿ ತೋರಿಸುತ್ತದೆ. ಝಡ್ ಜನರೇಷನ್ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಮೂಲಭೂತ ಸಮಸ್ಯೆ ಪರಿಹಾರ, ತಾರ್ಕಿಕ ವಿಚಾರದಗಳಲ್ಲಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಈ ಪ್ರವೃತ್ತಿಗಳು ಮುಂದುವರಿದರೆ, ವೈಯಕ್ತಿಕ ಹಣಕಾಸು, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ವಿಶ್ಲೇಷಣಾತ್ಮಕ ಕೌಶಲಗಳ ವಿಚಾರದಲ್ಲಿ ಅವರು ಹೆಣಗಾಡಬೇಕಾಗುತ್ತದೆ‘ ಎಂದು ಅವರು ಆತಂಕ ಹೊರ ಹಾಕಿದ್ದಾರೆ.
ಈ ಬಗ್ಗೆ ಪೋಷಕರು, ಶಿಕ್ಷಕರು ಹಾಗೂ ಮಾರ್ಗದರ್ಶಕರು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ
ಗುಪ್ತಾ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ .
‘ಇದು ಕಳವಳಕಾರಿ! ಶಾಲೆಗಳು ಕೇವಲ ಸಿದ್ಧಾಂತಕ್ಕಿಂತ ಹೆಚ್ಚಾಗಿ ನೈಜ ಜಗತ್ತಿನ ಸಮಸ್ಯೆ ಪರಿಹಾರದತ್ತ ಗಮನ ಹರಿಸಬೇಕು‘ ಎಂದು ಲಿಂಕ್ಡ್‌ಇನ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
‘ಗಣಿತವನ್ನು ತಿಳಿದುಕೊಳ್ಳುವುದು ಒಳ್ಳೆಯದು, ಆದರೆ ಇಂದಿನ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್‌ನ ಶಕ್ತಿಯನ್ನು ಕಡಗಣಿಸುವಂತಿಲ್ಲ‘ ಎಂದಿದ್ದಾರೆ. ‘ಎರಡೂ ಕೌಶಲ್ಯಗಳು ಮುಖ್ಯ! ಕಂಪನಿಗಳಿಗೆ ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ಯೋಗಿಗಳು ಬೇಕು‘ ಮೂರನೇ ವ್ಯಕ್ತಿ ತಿಳಿಸಿದ್ದಾರೆ.
