ಸಂಬಳಕ್ಕಿಂತ ವೇಗವಾಗಿ ಹೆಚ್ಚುತ್ತಿದೆ ಮನೆ ಬಾಡಿಗೆ ದರ; ಬೆಂಗಳೂರಿನ ಬದುಕಿನ ಸಮಸ್ಯೆಗಳಿಗೆ ಹೊಸ ಸೇರ್ಪಡೆ
ಬೆಂಗಳೂರಲ್ಲಿ ಸಂಬಳಕ್ಕಿಂತ ಬಾಡಿಗೆಯೇ ವೇಗವಾಗಿ ಬೆಳೆಯುತ್ತಿದೆ ಎಂಬ ಪೋಸ್ಟ್‌ವೊಂದು ಇದೀಗ ಚರ್ಚೆ ಹುಟ್ಟುಹಾಕಿದೆ. ಮಹಾನಗರಿಯ ಆರ್ಥಿಕ ಸಂಕಷ್ಟಗಳನ್ನು ನೆಟ್ಟಿಗರು ಕಾಮೆಂಟ್ ಮೂಲಕ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು: ಮಹಾನಗರಿ ಬೆಂಗಳೂರು ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಮೂಲವಾಗುತ್ತಿರುತ್ತದೆ. ಇದೀಗ ಬೆಂಗಳೂರಿನ ಬಾಡಿಗೆ ಮನೆ ವಿಚಾರ ಚರ್ಚೆಗೆ ಹಾಟ್‌ಟಾಪಿಕ್ ಆಗಿದೆ. ಸಾಮಾಜಿಕ ಜಾಲತಾಣ ವೇದಿಕೆಯಾದ ಗ್ರೇಪ್ ವೈನ್‌ನಲ್ಲಿ ಮನೆ ಬಾಡಿಗೆ ವಿಚಾರವಾಗಿ ಪೋಸ್ಟ್‌ವೊಂದು ಪ್ರಕಟವಾಗಿದೆ.
ಆ ಪೋಸ್ಟ್‌ನಲ್ಲಿ ಬೆಂಗಳೂರಲ್ಲಿ ಸಂಬಳಕ್ಕಿಂತ ಮನೆ ಬಾಡಿಗೆಯೇ ವೇಗವಾಗಿ ಬೆಳೆಯುತ್ತಿದೆ ಎಂದು ಬರೆಯಲಾಗಿದೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು ಈ ವಿಚಾರ ಸಮರ್ಥನೀಯವಲ್ಲ ಎಂದಿದ್ದಾರೆ. ಅಲ್ಲದೇ ಬಾಡಿಗೆ ದರ ದಿನೇ ದಿನೇ ಏರಿಕೆಯಾಗುತ್ತಿರುವ ಬಗ್ಗೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮಹಾನಗರಿಯಲ್ಲಿ ತಾವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆಯೂ ಮಾತನಾಡಿದ್ದಾರೆ.
‘ಸಂಬಳ ಹೆಚ್ಚುವುದಕ್ಕಿಂತ ವೇಗವಾಗಿ ಬಾಡಿಗೆ ಹೆಚ್ಚುತ್ತಿದೆ‘ ಎಂದು ಬರೆದಿರುವ ಈ ಪೋಸ್ಟ್ ಬೆಂಗಳೂರು ಜೀವನದ ಕಟು ವಾಸ್ತವವನ್ನು ಎತ್ತಿ ತೋರಿಸಿದೆ. ‘ಸದ್ಯ ಟಾಪ್ ಏರಿಯಾಗಳಲ್ಲಿ 3 ಬೆಡ್‌ರೂಮ್ ಮನೆಗೆ 90 ಸಾವಿರ ಬಾಡಿಗೆ ಹೇಳುತ್ತಾರೆ. ಸರ್ಜಾಪುರ ರಸ್ತೆ, ಬೆಳ್ಳಂದೂರಿನಂತಹ ಟೆಕ್‌ಪಾರ್ಕ್ ಬಳಿ 70 ಸಾವಿರಕ್ಕಿಂತ ಕಡಿಮೆಯಿಲ್ಲ. ಇದು ಸಮರ್ಥನೀಯವಲ್ಲ ಏಕೆಂದರೆ ಸಂಬಳ ಈ ದರದಲ್ಲಿ ಹೆಚ್ಚಾಗುತ್ತಿಲ್ಲ. ನನಗೆ ಇದು ಖಚಿತವಾಗಿ ತಿಳಿದಿದೆ. ಈ ಪರಿಸ್ಥಿತಿ ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿ ಗುರುಗ್ರಾಮ್‌ದಲ್ಲೂ ಹೀಗೆ ಇದೆ. ಮುಂಬೈ ಪರಿಸ್ಥಿತಿಯಂತೂ ಕೇಳೋದೇ ಬೇಡ‘ ಎಂದು ಇತರ ಮೆಟ್ರೋ ಸಿಟಿಗಳ ಪರಿಸ್ಥಿತಿ ಬಗ್ಗೆಯೂ ವಿವರಿಸಿದ್ದಾರೆ. ಬೆಂಗಳೂರಿನ ಬಾಡಿಗೆ ದರ ಏರಿಕೆಯ ಚಿತ್ರಣ ಬಿಚ್ಚಿಟ್ಟ ಈ ಪೋಸ್ಟ್‌ಗೆ ಹಲವು ಗ್ರೇಪ್‌ವೈನ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಸ್ಯಾಲರಿ ಸಿಟಿಸಿ ವರ್ಷದ ನನ್ನ ಬಾಡಿಗೆಗೆ ಸಮನಾಗಿದೆ, ಕಳೆದ ವರ್ಷ ನನಗೆ ಶೇ 8 ರಷ್ಟು ಸಂಬಳ ಏರಿಕೆ ಮಾಡಿದ್ದರು, ಆದರೆ ಬಾಡಿಗೆ ಶೇ 10 ರಷ್ಟು ಏರಿಕೆಯಾಗಿತ್ತು‘ ಎಂದು ಬೇಸರದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ‘ಒಬ್ಬ ವ್ಯಕ್ತಿಯ ಆದಾಯವನ್ನು ಸಂಪೂರ್ಣವಾಗಿ ಬಾಡಿಗೆಗೆ ಖರ್ಚು ಮಾಡುತ್ತಿರುವುದು ನಿಜವಾಗಿಯೂ ದುರದೃಷ್ಟಕರ. ನೀವು ನಿಮ್ಮ ಮನೆ ಮಾಲೀಕರಿಗೆ ಕೆಲಸ ಮಾಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ಒಂದು ಫ್ಲ್ಯಾಟ್ ಖರೀದಿ ಮಾಡಿ ತಿಂಗಳಿಗೆ 50 ಸಾವಿರ ಇಎಂಐ ಪಾವತಿಸಿ. ಆಗ ಕನಿಷ್ಠ ನಿಮ್ಮದೇ ಆದ ಆಸ್ತಿ ನೀವು ಸಂಪಾದಿಸಿದಂತಾಗುತ್ತದೆ‘ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.
ಆದರೆ ಮೆಟ್ರೊ ಸಿಟಿಗಳಲ್ಲಿ ಮನೆ ಬಾಡಿಗೆ ದರ ಏರಿಕೆಯಾಗುತ್ತಿರುವುದು ನಿಜಕ್ಕೂ ಭಯ ಹುಟ್ಟಿಸುವಂತಿದೆ. ಇದರಿಂದ ದುಡಿದ ದುಡಿಮೆಯನ್ನೆಲ್ಲಾ ಬಾಡಿಗೆಗೆ ಕೊಡುವಂತಾಗಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ. ಇನ್ನೂ ಕೆಲವರು ‘ಬಾಡಿಗೆ ಈ ಮಟ್ಟಿಗೆ ಏರಲು ಬಾಡಿಗೆದಾರರೇ ಕಾರಣ. ಪದವಿ ವಿದ್ಯಾರ್ಥಿಗಳು 70 ಸಾವಿರಕ್ಕೆ 2/3 ಬಿಎಚ್‌ಕೆ ತೆಗೆದುಕೊಳ್ಳಲು ಸಿದ್ಧರಿದ್ದಾರೆ ಮತ್ತು 10 ಜನರು ಬಾಡಿಗೆ ಹಂಚಿಕೊಂಡು ಅಲ್ಲಿಯೇ ಇರುತ್ತಾರೆ. ಆದ್ದರಿಂದ 7 ಸಾವಿರ ಪಿಜಿಗಿಂತ ಅಗ್ಗವಾಗಿದೆ‘ ಆದರೆ ಒಬ್ಬರೇ ದುಡಿಯುವ ಮನೆಯಲ್ಲಿ ಬಾಡಿಗೆ ಕೊಡುವುದು ಕಷ್ಟ‘ ಎಂದು ಅವರು ಕಾಮೆಂಟ್ ಮಾಡಿದ್ದಾರೆ.


