ಸಾರ್ವಜನಿಕ ಗ್ರಂಥಾಲಯದಲ್ಲಿ ಸುನಿತಾ ವಿಲಿಯಮ್ಸ್ ಬಗ್ಗೆ ಓದುತ್ತಿರುವ ಗ್ರಾಮೀಣ ಮಹಿಳೆ; ಹೃದಯಸ್ಪರ್ಶಿ ಫೋಟೊಗೆ ಹರಿದು ಬಂತು ಭಾರಿ ಮೆಚ್ಚುಗೆ
ಬಾಹ್ಯಾಕಾಶದಲ್ಲಿ 9 ತಿಂಗಳ ಕಾಲ ಇದ್ದು, ಇತ್ತೀಚೆಗಷ್ಟೇ ಭೂಮಿಗೆ ಮರಳಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಗೆಗಿನ ಲೇಖನಗಳನ್ನು ಬೆರಗುಗಣ್ಣಿನ ನೋಡುತ್ತಿರುವ ಮಹಿಳೆಯೊಬ್ಬರ ಫೋಟೊ ವೈರಲ್ ಆಗಿದ್ದು, ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿ ಮೂರು ದಿನಗಳಾಗಿವೆ. ಆಕೆ ಹಾಗೂ ಸಹ ಯಾತ್ರಿ ವಿಲ್ಮೋರ್ ಬುಚ್ ಒಂಬತ್ತು ತಿಂಗಳ ಕಾಲ ಅಂತರಿಕ್ಷದಲ್ಲೇ ಇದ್ದರು. ಕಳೆದೊಂದಿಷ್ಟು ದಿನಗಳಿಂದ ಸುನಿತಾ ವಿಲಿಯಮ್ಸ್ ಬಗ್ಗೆ ಸಾಕಷ್ಟು ಸುದ್ದಿ, ಫೋಟೊ, ವಿಡಿಯೊಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಫೋಟೊ ಇದೆ. ಈ ಫೋಟೊ ನಿಜಕ್ಕೂ ಹೃದಯಸ್ಪರ್ಶಿ ಅನ್ನಿಸೋದು ಸುಳ್ಳಲ್ಲ. ಅಲ್ಲದೇ ಆ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹಾಗಾದರೆ ಆ ಫೋಟೊದಲ್ಲಿ ಅಂಥದ್ದೇನಿದೆ ಅಂತೀರಾ, ಅದು ಸಾರ್ವಜನಿಕ ಲೈಬ್ರರಿ ಒಂದರಲ್ಲಿ ಗ್ರಾಮೀಣ ಮಹಿಳೆಯೊಬ್ಬರು ಸುನಿತಾ ವಿಲಿಯಮ್ಸ್ ಕುರಿತ ಸುದ್ದಿಯನ್ನು ದಿಟ್ಟಿಸಿ ನೋಡುತ್ತಿರುವುದು. ಈ ಫೋಟೊಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ದಾಸ್‌ಗುಪ್ತ ಈ ಫೋಟವನ್ನು ಹಂಚಿಕೊಂಡಿದ್ದಾರೆ. ಉಡುಪಿಯ ಕರ್ಜೆಯಲ್ಲಿರುವ ಉಚಿತ ಸಾರ್ವಜನಿಕ ಗ್ರಾಮೀಣ ಗ್ರಂಥಾಲಯವಾದ ಅರಿವು ಕೇಂದ್ರದಲ್ಲಿ ಮಹಿಳೆ ಪೇಪರ್ ಓದುತ್ತಿರುವ ದೃಶ್ಯ ಇದಾಗಿದೆ. ಆಕೆ ಅದೆಷ್ಟು ಆಸಕ್ತಿಯಿಂದ ಸುನಿತಾ ವಿಲಿಯಮ್ಸ್ ಕುರಿತ ಸುದ್ದಿಗಳನ್ನು ಓದುತ್ತಿದ್ದಾರೆ ಎಂಬುದು ಫೋಟೊ ನೋಡಿದರೆ ಅರಿವಾಗುತ್ತದೆ. ಈ ಪೋಸ್ಟ್ ವೈರಲ್ ಆದಾಗಿನಿಂದ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವುಗಳ ಜ್ಞಾನಕೇಂದ್ರಗಳು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಪೋಸ್ಟ್ ನೆಟಿಜನ್‌ಗಳ ಮನ ಗೆದ್ದಿದ್ದು, 50,000 ಕ್ಕೂ ಹೆಚ್ಚು ವೀಕ್ಷಣೆಗಳು, 3,000 ಲೈಕ್‌ಗಳು ಮತ್ತು 100 ಕ್ಕೂ ಹೆಚ್ಚು ಮರುಹಂಚಿಕೆಗಳನ್ನು ಗಳಿಸಿದೆ. ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ಜ್ಞಾನವನ್ನು ಬೆಳೆಸುವಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನು ಅನೇಕ ಬಳಕೆದಾರರು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆ
ಈ ಚಿತ್ರವು ಸಮುದಾಯಗಳನ್ನು ರೂಪಿಸುವಲ್ಲಿ ಗ್ರಂಥಾಲಯಗಳ ಪಾತ್ರದ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಜ್ಞಾನವನ್ನು ಬೆಳೆಸುವಲ್ಲಿ ಮತ್ತು ಡಿಜಿಟಲ್ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನು ಒತ್ತಿ ಹೇಳಿದರು.
‘ಇಂತಹ ಚಿತ್ರಗಳು ಭರವಸೆ ನೀಡುತ್ತವೆ!ಗ್ರಂಥಾಲಯಗಳು ಯಾವುದೇ ಪಟ್ಟಣದ ಅತ್ಯುತ್ತಮ ಸಂಪನ್ಮೂಲಗಳಲ್ಲಿ ಒಂದಾಗಿದೆ‘ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಸಾರ್ವಜನಿಕ ಗ್ರಂಥಾಲಯಗಳು ದೇಶದ ಅಭಿವೃದ್ಧಿಗೆ ನಿರ್ಣಾಯಕವಾಗಿವೆ. ಜ್ಞಾನ ಮತ್ತು ಶಿಕ್ಷಣ ಅತ್ಯಗತ್ಯ - ಯಾವುದೇ ಪರ್ಯಾಯವಿಲ್ಲ!‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಇದು ಓದುಗರಿಗೆ ಸ್ಫೂರ್ತಿ‘ ಎಂದು ನೆಟ್ಟಗರೊಬ್ಬರು ಮನ ತುಂಬಿ ಹೇಳಿದ್ದಾರೆ. ‘ನಾನು ಒಂದು ಹಳ್ಳಿಯಲ್ಲಿ ಬೆಳೆದವಳು. ಗ್ರಾಮೀಣ ಗ್ರಂಥಾಲಯಗಳು ನನ್ನ ಶಿಕ್ಷಣ ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಿವೆ ಎಂದು ನಾನು ದೃಢವಾಗಿ ನಂಬುತ್ತೇನೆ. ಅಲ್ಲಿ ಗಂಟೆಗಟ್ಟಲೆ ಕಳೆಯುವುದು ನನ್ನ ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪೋಷಿಸಿತು, ಇದು ಅಂತಿಮವಾಗಿ ಸಮಾಜಕ್ಕಾಗಿ ವಕಾಲತ್ತು ವಹಿಸುವತ್ತ ನನ್ನ ಮಾರ್ಗವನ್ನು ರೂಪಿಸಿಕೊಳ್ಳಲು ನನಗೆ ಸ್ಫೂರ್ತಿ ನೀಡಿತು‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
