Viral video: ನಸುಕಿನ ಮೂರರ ವೇಳೆ ಭೀಕರ ಅಪಘಾತ ನಡೆಸಿದ ಬೈಕರ್; ದಂಪತಿಯ ಕಾರನ್ನು ಮನೆ ತನಕ ಚೇಸ್ ಮಾಡಿದ್ರು!
Viral video: ದಂಪತಿ ನಸುಕಿನ 3 ಗಂಟೆಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಿರುವಿನಲ್ಲಿ ಇಂಡಿಕೇಟರ್ ಹಾಕಿ ಕಾರು ಎಡಕ್ಕೆ ತಿರುಗಿಸುತ್ತಿದ್ದರು. ಆಗ ಎದುರು ಭಾಗದಿಂದ ಬಂದ ಬೈಕ್ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ನಡೆದುದು ಚೇಸಿಂಗ್, ಭಯ ಮೂಡಿಸುವ ಕೆಲಸ! ವಿವರ ವರದಿ ಮತ್ತು ವಿಡಿಯೋ ಇಲ್ಲಿದೆ.
ತಡರಾತ್ರಿ ಸಂಚಾರ ಬಹಳ ಅಪಾಯಕಾರಿ. ಬೆಂಗಳೂರು ವಾಸಿ ದಂಪತಿಗೆ ಅಂಥದ್ದೇ ಒಂದು ಅನುಭವ. ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ಬಳಿಕ, ದಂಪತಿಯ ಕಾರನ್ನೇ ಅವರ ಮನೆ ತನಕ ಚೇಸ್ ಮಾಡಿದ ಕಳವಳಕಾರಿ ಘಟನೆ ದೇಶವಾಸಿಗಳ ಗಮನಸೆಳೆದಿದೆ.
ಈ ಅಪಘಾತದ ದೃಶ್ಯ, ದಂಪತಿಯ ಸಂಭಾಷಣೆ ಎಲ್ಲವೂ ಕಾರಿನ ಡ್ಯಾಶ್ ಬೋರ್ಡ್ ಮೇಲಿದ್ದ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ ಶೇರ್ ಆಗಿದ್ದು, ನೋಡುಗರಲ್ಲಿ ಶಾಕ್ ಉಂಟುಮಾಡಿದೆ.
ಟ್ವಿಟರ್‌ನಲ್ಲಿರುವ ಮಾಹಿತಿ ಪ್ರಕಾರ, ದಂಪತಿ ನಸುಕಿನ 3 ಗಂಟೆಗೆ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಿರುವಿನಲ್ಲಿ ಇಂಡಿಕೇಟರ್ ಹಾಕಿ ಕಾರು ಎಡಕ್ಕೆ ತಿರುಗಿಸುತ್ತಿದ್ದರು. ಆಗ ಎದುರು ಭಾಗದಿಂದ ಬಂದ ಬೈಕ್ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿ ಇಬ್ಬರು ಸವಾರರು ಇದ್ದರು. ಅವರು ಕಾರಿನಲ್ಲಿದ್ದವರನ್ನು ಬೆದರಿಸುತ್ತ, ಕೆಳಗೆ ಇಳಿಯುವಂತೆ ಒತ್ತಾಯಿಸಿದ ದೃಶ್ಯವಿದೆ. ಕಾರನ್ನು ರಿವರ್ಸ್ ಗೇರ್‌ನಲ್ಲಿ ಹಿಂದಕ್ಕೆ ಚಲಾಯಿಸಲು ಆರಂಭಿಸಿದಾಗ, ಬೈಕ್‌ನಲ್ಲಿದ್ದ ಒಬ್ಬಾತ ಬೆನ್ನಟ್ಟಿ ಬಂದಿದ್ದ. ಸ್ವಲ್ಪ ದೂರ ಚಲಿಸಿದ ಬಳಿಕ ಕಾರಿನಲ್ಲಿದ್ದವರು ಮತ್ತೆ ಗೇರ್ ಬದಲಾಯಿಸಿ ಮುಂದಕ್ಕೆ ಚಲಿಸಿದ್ದರು. ಆಗ ಬೈಕ್ ಸವಾರರು ಅವರನ್ನು ಮನೆ ತನಕ ಬೆನ್ನಟ್ಟಿದ್ದರು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಹೇಳಿದೆ.
ಈ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ದಂಪತಿಯನ್ನು ಬೆದರಿಸಿದ ಬೈಕ್ ಸವಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಹೇಳಿದ ಸರಣಿ ಟ್ವೀಟ್ ಕೂಡ ಇದೆ.
ಸಿಟಿಝೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಈ ವಿಡಿಯೋ ಶೇರ್ ಮಾಡಿದೆ. ಸರ್ಜಾಪುರ ರಸ್ತೆಯಲ್ಲಿ ಸೋಫಾಸ್ ಆಂಡ್ ಮೋರ್ ಶಾಪ್ ಸಮೀಪ ಈ ಘಟನೆ ನಡೆದಿದೆ. ದಂಪತಿ ಚಿಕ್ಕನಾಯಕನ ಹಳ್ಳಿಗೆ ಹೋಗಿದ್ದು, ಅಲ್ಲಿಯವರೆಗೂ 5 ಕಿ.ಮೀ. ತನಕ ಬೈಕ್ ಸವಾರರು ಚೇಸ್ ಮಾಡಿ ಭಯ ಹುಟ್ಟಿಸಿದ್ದಾರೆ. ರಾತ್ರಿ ಸಮಯದಲ್ಲಿ ಇಂತಹ ಘಟನೆ ಆದಾಗ ಕಾರಿನ ಡೋರ್ ತೆರೆಯಬೇಡಿ. ಡ್ಯಾಶ್ ಕ್ಯಾಮೆರಾ ಫಿಕ್ಸ್ ಮಾಡಿಸಿಕೊಳ್ಳಿ ಎಂಬ ಸಲಹೆಯನ್ನು ಅದು ನೀಡಿದೆ.
ಈ ವಿಡಿಯೋವನ್ನು ದೃಢೀಕರಿಸುವ ಕೆಲಸವನ್ನು ಮಾಡುವುದು ಸಾಧ್ಯವಾಗಿಲ್ಲ. ಈ ವಿಡಿಯೋ ಟ್ವೀಟ್‌ನ ಕಾಮೆಂಟ್ ವಿಭಾಗದಲ್ಲಿ ಮಿಥಿಲೇಶ್ ಕುಮಾರ್ ಎಂಬುವವರ ಟ್ವೀಟ್ ಗಮನಸೆಳೆದಿದೆ. ಸರ್ಜಾಪುರ ರಸ್ತೆಯಲ್ಲಿ ಇವು ಸಾಮಾನ್ಯ ದೃಶ್ಯಗಳು. ಇಲ್ಲಿ ಸ್ಟ್ರೀಟ್ ಲೈಟ್‌ಗಳೇ ಇಲ್ಲ. ಇದುವೇ ಕಾರಣ. ಅಲ್ಲದೆ, ಈ ಭಾಗದಲ್ಲಿ ಪೊಲೀಸರ ಪ್ಯಾಟ್ರೋಲಿಂಗ್ ಕೂಡ ಇರಲ್ಲ. ಅರವಿಂದ ಲಿಂಬಾವಳಿ ಸರ್, ಬಿಬಿಎಂಪಿ ಕಮಿಷನರ್ ಸರ್ ಬೀದಿ ದೀಪ ಅಳವಡಿಸಲು ಕ್ರಮತೆಗೆದುಕೊಳ್ಳಿ ಎಂಬ ಮನವಿಯನ್ನು ಅವರು ಮಾಡಿದ್ದಾರೆ.
ಬೆಂಗಳೂರು ಪೊಲೀಸರು ಕಾರ್ಯಾಚರಣೆಗಿಳಿದು ತನಿಖೆ ಆರಂಭಿಸಿದ್ದಾರೆ. "ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕಾಗಿ ನಿಮ್ಮ ಟ್ವೀಟ್ ಅನ್ನು @bellandurubcp ಗೆ ರವಾನಿಸಲಾಗಿದೆ" ಎಂದು ಬೆಂಗಳೂರು ಪೊಲೀಸರ ಉತ್ತರಿಸಿದ್ದಾರೆ.
ಇದಾದ ಬಳಿಕ, ಆರೋಪಿಗಳನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ ಎಂದು ಸಿಟಿಝೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಟ್ವೀಟ್ ಮಾಡಿದೆ.