Viral Video: ಅತ್ತೆಗೆ ಸೊಸೆ ಹೊಡೆಯುವ ವಿಡಿಯೊ ವೈರಲ್;ಸೊಸೆ ವಿರುದ್ದ ದೂರು; ಇಷ್ಟಕ್ಕೂ ವಿಡಿಯೋ ಮಾಡಿದ್ದು ಯಾರು, ತಿಳಿದರೆ ಅಚ್ಚರಿಯಾದೀತು
Channapatna News ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತ್ತೆ ಮೇಲೆ ಸೊಸೆ ಹಲ್ಲೆ ಮಾಡುತ್ತಿರುವ, ಅದನ್ನು ಮಗನೇ ಚಿತ್ರೀಕರಣ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಸೊಸೆಯು ಅತ್ತೆಗೆ ದೊಣ್ಣೆಯಿಂದ ಹೊಡೆಯುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚನ್ನಪಟ್ಟಣದ ನಿವಾಸಿಯೊಬ್ಬರು ಮನೆಯಲ್ಲಿ ಈ ಕೃತ್ಯ ನಡೆದಿದ್ದು ಸ್ವತಃ ಮಗ ವಿಡಿಯೊ ಮಾಡಿ ಕ್ರೌರ್ಯ ಮೆರೆದಿದ್ದಾನೆ. ವಿಡಿಯೊ ದೃಶ್ಯ ಆಧರಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಲ್ಲೂಕಿನ ಅಬೂರುದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೊಸೆಯಿಂದ ಹಲ್ಲೆಗೊಳಗಾದವರು 60 ವರ್ಷದ ಶಾಂತಮ್ಮ. ಹೆಂಡತಿ ಅಮ್ಮನಿಗೆ ದೊಣ್ಣೆಯಿಂದ ಥಳಿಸುವ ದೃಶ್ಯವನ್ನು ಸೆರೆ ಹಿಡಿದಿದ್ದು ಪುತ್ರ ರವೀಂದ್ರ.
ರವೀಂದ್ರ ಮನೆಯಲ್ಲೂ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆಯುತ್ತಲೇ ಇತ್ತು. ಜಗಳದಿಂದ ಬೇಸತ್ತಿದ್ದ ಶಾಂತಮ್ಮ ತಮ್ಮ ತವರು ಮನೆಗೆ ಹೋಗಿದ್ದರು. ಮರಳಿ ಮನೆಗೆ ಬಂದಾಗ ಏಪ್ರಿಲ್ ಸೊಸೆ ಸಂಜನಾ ಮರಳಿ ಬಂದದ್ದು ಏಕೆ ಎಂದು ಅತ್ತೆ ಜೊತೆ ಜಗಳ ತೆಗೆದಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ ಶಾಂತಮ್ಮ ಮಂಚದಿಂದ ಎದ್ದು ಹೊರ ಹೋಗಲು ಮುಂದಾದಾಗ ಸಂಜನಾ ತಳ್ಳಿದ್ದಾಳೆ. ಪಕ್ಕದಲ್ಲಿದ್ದದೊಣ್ಣೆಯನ್ನು ತೆಗೆದುಕೊಂಡು ಮನಬಂದಂತೆ ಕೈ, ಕಾಲು ಹಾಗೂ ಬೆನ್ನಿಗೆ ಹೊಡೆದಿದ್ದಾಳೆ. ಒದ್ದು ಎಳೆದಾಡಿದ್ದಾಳೆ. ಹೆಂಡತಿಯ ಅಣತಿಯಂತೆ ಪತಿರಾಯ ವಿಡಿಯೊ ಮಾಡಿಕೊಂಡಿದ್ದಾನೆ. ವಿಡಿಯೋ ನೋಡಿದರೆ ರವೀಂದ್ರ ಹೆಂಡತಿಯನ್ನು ತಡೆಯುವ ಕಿಂಚಿತ್ತೂ ಪ್ರಯತ್ನ ಮಾಡುವುದಿಲ್ಲ. ನಂತರ ವಿಡಿಯೊವನ್ನು ರವೀಂದ್ರ ತನ್ನ ಬಂಧು ಬಳಗದವರೊಂದಿಗೆ ವಾಟ್ಸ್ ಅಪ್ ನಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೊ ಗಮನಿಸಿದ
ಕನಕಪುರ ತಾಲ್ಲೂಕಿನ ಜೀವನ ಸಾಮಾಜಿಕ ಕಾರ್ಯಕರ್ತ ಜೀವನ್ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೂ ದೂರು ಕೊಟ್ಟಿದ್ದರು.
ಕೂಡಲೇ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ರವೀಂದ್ರ
ಮನೆಗೆ ದೌಡಾಯಿಸಿದ್ದಾರೆ. ಪ್ರಕರಣ ಕುರಿತು ಅತ್ತೆ, ಸೊಸೆ ಹಾಗೂ ಮಗನನ್ನು ವಿಚಾರಣೆ ನಡೆಸಿ ಮಗ ಸೊಸೆಗೆ ಕಿವಿಮಾತು ಹೇಳಿದ್ದಾರೆ. ಹಿರಿಯರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ. ಹಿರಿಯರ ರಕ್ಷಣೆಗೆ ಕಾನೂನು ಇದ್ದು, ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶ ಇದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣ ನಡೆದು ನಾಲ್ಕು ತಿಂಗಳಾಗಿದ್ದು, ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಇಬ್ಬರನ್ನು ರಾಜಿ ಮಾಡಿಸಿದ್ದಾರೆ. ಆದರೂ ಸೊಸೆ ಸಂಜನಾ ವಿರುದ್ಧ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಹೇಳಿದ್ದಾರೆ.
ರಾಜಿ ನಂತರ ಯಾವುದೇ ಸಮಸ್ಯೆ ಇಲ್ಲ. ಒಂದು ಮನೆಯಲ್ಲಿ ಮಗ ಸೊಸೆ ಮತ್ತೊಂದು ಮನೆಯಲ್ಲಿ ನಾನು ವಾಸ ಮಾಡುತ್ತಿದ್ದೇನೆ ಎಂದು ಅತ್ತೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)