70 Hour Work: ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು; ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ ಇನ್ಫೋಸಿಸ್ ನಾರಾಯಣ ಮೂರ್ತಿ ಮಾತು
ಕನ್ನಡ ಸುದ್ದಿ  /  ಕರ್ನಾಟಕ  /  70 Hour Work: ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು; ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ ಇನ್ಫೋಸಿಸ್ ನಾರಾಯಣ ಮೂರ್ತಿ ಮಾತು

70 Hour Work: ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು; ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದ ಇನ್ಫೋಸಿಸ್ ನಾರಾಯಣ ಮೂರ್ತಿ ಮಾತು

ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್‌ಫೋಸಿಸ್‌ ಸಂಸ್ಥಾಪಕ ಚೇರ್‌ಮನ್‌ ಎನ್‌ ಆರ್ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೊಳಗಾಗಿದೆ. ಪರ ವಿರೋಧದ ಚರ್ಚೆ ನಡೆದಿದ್ದು, ಆರೋಗ್ಯ ಕಾಳಜಿ, ವೇತನ ಮುಂತಾದ ವಿಚಾರಗಳು ಪ್ರಸ್ತಾಪವಾಗಿವೆ. ಈ ಕಡೆಗೊಂದು ನೋಟ ಹೀಗಿದೆ.

ಇನ್‌ಫೋಸಿಸ್‌ ಸಂಸ್ಥಾಪಕ ಚೇರ್‌ಮನ್‌ ಎನ್‌ ಆರ್ ನಾರಾಯಣ ಮೂರ್ತಿ
ಇನ್‌ಫೋಸಿಸ್‌ ಸಂಸ್ಥಾಪಕ ಚೇರ್‌ಮನ್‌ ಎನ್‌ ಆರ್ ನಾರಾಯಣ ಮೂರ್ತಿ (Photo by Samir Jana/ Hindustan Times)

ಇತರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಉತ್ಪಾದಕತೆ ಬಹಳ ಕಡಿಮೆ. ಆದ್ದರಿಂದ ಚೀನಾದಂತಹ ರಾಷ್ಟ್ರಗಳ ಜತೆಗೆ ಪೈಪೋಟಿ ನಡೆಸುವುದಕ್ಕಾಗಿ ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ.

3ಒನ್‌4 ಕ್ಯಾಪಿಟಲ್‌ನ ದ ರೆಕಾರ್ಡ್ ಎಂಬ ಪಾಡ್‌ಕಾಸ್ಟ್‌ನಲ್ಲಿ ಸಿಎಫ್‌ಒ ಮೋಹನದಾಸ ಪೈ ಅವರ ಜತೆಗಿನ ಮಾತುಕತೆಯಲ್ಲಿ ನಾರಾಯಣ ಮೂರ್ತಿ ಇದನ್ನು ಹೇಳಿದರು.

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ

ಚೀನಾ ಮತ್ತು ಜಪಾನ್‌ನಂತಹ ವೇಗವಾಗಿ ಬೆಳೆಯುತ್ತಿರುವ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಬಯಸುವುದಾದರೆ, ನಮ್ಮ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ. ಈಗ, ಭಾರತದ ಕೆಲಸದ ಉತ್ಪಾದಕತೆ ತುಂಬಾ ಕಡಿಮೆ ಇದೆ. ಸರ್ಕಾರವು ನಿರ್ಧಾರ ತೆಗೆದುಕೊಳ್ಳುವುದಕ್ಕೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಬೇಕು. ಅಧಿಕಾರಶಾಹಿಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸಬೇಕು. ನಮ್ಮ ಯುವಜನರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.

“ಎರಡನೆಯ ಮಹಾಯುದ್ಧದ ನಂತರ, ಜರ್ಮನಿ ಮತ್ತು ಜಪಾನ್‌ನ ಜನ ತಮ್ಮ ದೇಶಕ್ಕಾಗಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರು. ಭಾರತದಲ್ಲಿನ ಯುವಕರು ಸಹ ದೇಶವನ್ನು ಹೊಂದಿದ್ದಾರೆ. ಅವರೂ ನಮ್ಮ ಆರ್ಥಿಕತೆಯ ಸಲುವಾಗಿ ಶ್ರಮಿಸುತ್ತಾರೆ” ಎಂದು ನಾರಾಯಣ ಮೂರ್ತಿ ಅವರು ಮಾತು ಮುಂದುವರಿಸಿದ್ದರು.

‘ಯುವಜನರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು’ ಹೇಳಿಕೆಯಷ್ಟೆ ಚರ್ಚೆಗೆ ಒಳಗಾಗಿದೆ

ಆಕಾಂಕ್ಷಾ ಎಂಬುವವರು ಎಕ್ಸ್‌ನಲ್ಲಿ ‘ಯುವಜನರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು’ ಹೇಳಿಕೆಯ ಕುರಿತಾದ ಚರ್ಚೆಗೆ ಪ್ರತಿಕ್ರಿಯಿಸಿದ್ದು, ನಾರಾಯಣ ಮೂರ್ತಿ ಅವರ ಆಯ್ದ ಹೇಳಿಕೆಯನ್ನು ಆ ಹೇಳಿಕೆಯ ಸಂದರ್ಭಕ್ಕೆ ಹೊರತಾಗಿ ತೆಗೆದುಕೊಂಡು ಚರ್ಚೆ ಮಾಡುತ್ತಿದ್ದಾರೆ.

ಹಲವಾರು ಕಾರಣಗಳಿಂದಾಗಿ ದೇಶದಲ್ಲಿ ಉತ್ಪಾದಕತೆ ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆ.

ಇದನ್ನು ಪರಿಹರಿಸಲು

- ಭ್ರಷ್ಟಾಚಾರವನ್ನು ನಿಗ್ರಹಿಸಬೇಕು

- ಅಧಿಕಾರಶಾಹಿ ಹೆಚ್ಚು ದಕ್ಷತೆಯನ್ನು ಹೊಂದಬೇಕು ಎಂದು ಅವರು ಹೇಳುತ್ತಾರೆ.

ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತಾರೆ. ಅವರು ಅದನ್ನು ಹೇರುತ್ತಿಲ್ಲ ಎಂದು ವಿವರಿಸುತ್ತ ವಿಡಿಯೋ ಲಗತ್ತಿಸಿದ್ದಾರೆ.

ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದ ಡಾಕ್ಟರ್

ಬೆಂಗಳೂರಿನ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನಲ್ಲಿ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ದೀಪಕ್‌ ಕೃಷ್ಣಮೂರ್ತಿ ಎಕ್ಸ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವುದು ಹೀಗೆ -

24 ಗಂಟೆ ದಿನಕ್ಕೆ (ನನ್ನ ತಿಳಿವಳಿಕೆ ಪ್ರಕಾರ)

ಒಂದೊಮ್ಮೆ ನೀವು ವಾರಕ್ಕೆ 6 ದಿನ ಕೆಲಸ ಮಾಡಿದರೆ ದಿನಕ್ಕೆ 12 ಗಂಟೆ

ಉಳಿಯುವುದು 12 ಗಂಟೆ

8 ಗಂಟೆ ನಿದ್ದೆ

4 ಗಂಟೆ ಉಳಿಯುವುದು

ಬೆಂಗಳೂರಿನಂತಹ ಮಹಾನಗರದಲ್ಲಿ

2 ಗಂಟೆ ರಸ್ತೆಯಲ್ಲಿ

2 ಗಂಟೆ ಉಳಿದದ್ದರಲ್ಲಿ, ನಿತ್ಯ ಕರ್ಮಗಳನ್ನು ಪೂರೈಸಬೇಕು

ಸಾಮಾಜಿಕವಾಗಿ ಭಾಗಿಯಾಗಲು ಸಮಯವಿಲ್ಲ

ಕುಟುಂಬದ ಜತೆಗೆ ಮಾತನಾಡಲು ಸಮಯವಿಲ್ಲ

ಮನರಂಜನೆಗೆ ಸಮಯವಿಲ್ಲ,

ಕೆಲಸದ ಸಮಯದ ನಂತರವೂ ಜನರು ಇಮೇಲ್‌ಗಳು ಮತ್ತು ಕರೆಗಳಿಗೆ ಉತ್ತರಿಸುತ್ತಾರೆ ಎಂದು ಕಂಪನಿಗಳು ನಿರೀಕ್ಷಿಸುತ್ತವೆ.

ಇಷ್ಟಾದ ಬಳಿಕ ಯುವಜನತೆ ಹೃದಯಾಘಾತಕ್ಕೆ ಒಳಗಾಗುತ್ತಿರುವುದೇಕೆ?! ಎಂದು ಅಚ್ಚರಿಪಡುತ್ತಾರೆ.

ನಾರಾಯಣ ಮೂರ್ತಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಓಲಾ ಸಿಇಒ ಭವಿಶ್ ಅಗರ್ವಾಲ್

ನಾರಾಯಣ ಮೂರ್ತಿಯವರ ಹೇಳಿಕೆಗೆ ಓಲಾ ಸಿಇಒ ಭವಿಶ್ ಅಗರ್ವಾಲ್ ಸಹಮತ ವ್ಯಕ್ತಪಡಿಸಿದ್ದು, ಇದು "ಕಡಿಮೆ ಕೆಲಸ ಮಾಡುವ ಮತ್ತು ನಮ್ಮ ಪಾಲಿನ ಮನರಂಜಿಸುವ ಕ್ಷಣವಲ್ಲ" ಎಂದು ಹೇಳಿದರು.

ನವೋದ್ಯಮಗಳ ಸಂಸ್ಥಾಪಕರು ದಿನಕ್ಕೆ 14 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಾರೆ - ದಿವ್ಯಾ ಗಂಡೋತ್ರಾ ಟಂಡನ್

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು "ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು" ಎಂಬ ಕಲ್ಪನೆಯೊಂದಿಗೆ ಭಾರತದ ಕೆಲಸದ ಸಂಸ್ಕೃತಿಯನ್ನು ವಿಕಸನಗೊಳಿಸಬೇಕಾಗಿದೆ ಎಂದು ಸಲಹೆ ನೀಡುತ್ತಾರೆ.

ಇದು ತುಂಬಾ ಸಾಮಾನ್ಯ ಎಂದು ನಾನು ನಂಬುತ್ತೇನೆ ಮತ್ತು ಆಘಾತದಿಂದ ಪ್ರತಿಕ್ರಿಯಿಸುವವರಿಗೆ ಸ್ಟಾರ್ಟ್‌ಅಪ್‌ಗಳ ಬೇಡಿಕೆಗಳ ಬಗ್ಗೆ ತಿಳಿದಿಲ್ಲದಿರಬಹುದು. ಪ್ರತಿಯೊಂದು ಸ್ಟಾರ್ಟಪ್‌ನ ಸಂಸ್ಥಾಪಕರು ದಿನಕ್ಕೆ 14 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಮತ್ತು ಪ್ರಮುಖ ಕಾರ್ಯಗಳು ಕೆಲವೊಮ್ಮೆ ರಾತ್ರಿಯವರೆಗೆ ವಿಸ್ತರಿಸುತ್ತವೆ. ಇದು ವಾಣಿಜ್ಯೋದ್ಯಮ ಜಗತ್ತಿನಲ್ಲಿ ಅಸಾಮಾನ್ಯ ಅಥವಾ ಆಶ್ಚರ್ಯಕರ ಸಂಗತಿಯಲ್ಲ.

ವೇತನದ ಕಡೆಗೂ ಗಮನಕೊಡಿ - ನೀತೂ ಖಂಡೇಲ್‌ವಾಲ

ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಮರ್ಪಣೆಯ ಭಾವದೊಂದಿಗೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಭಾರತದ ಯುವಕರನ್ನು ಒತ್ತಾಯಿಸಿದ್ದಾರೆ.

ಕಳೆದ ದಶಕದಲ್ಲಿ ಫ್ರೆಶರ್‌ಗಳ ಸರಾಸರಿ ವೇತನವು 3.50 ಲಕ್ಷ ರೂಪಾಯಿಯಷ್ಟಿದೆ. ಅದೇ ಅವಧಿಯಲ್ಲಿ ಹಣದುಬ್ಬರವು ಶೇಕಡಾ 82 ರಷ್ಟು ಏರಿಕೆಯನ್ನು ದಾಖಲಿಸಿದೆ. ಇದರರ್ಥ 2012ರಲ್ಲಿ ಗಳಿಸಿದ ಪ್ರತಿ 1,000 ರೂ.ಗೆ ಒಬ್ಬ ವ್ಯಕ್ತಿಯು 2023 ರಲ್ಲಿ 1820 ರೂಪಾಯಿಗಳನ್ನು ಗಳಿಸಬೇಕು ಎನ್ನುತ್ತ ವೇತನದ ಕಡೆಗೂ ಗಮನಕೊಡಿ ಎಂದು ಹೂಡಿಕೆದಾರರಾದ ನೀತೂ ಖಂಡೇಲ್‌ವಾಲಾ ಹೇಳಿದ್ದಾರೆ.

ಉತ್ಪಾದಕತೆ ಹೆಚ್ಚಿಸುವುದು ಎಂದರೆ ದೀರ್ಘ ಅವಧಿಗೆ ಕೆಲಸ ಮಾಡುವುದಲ್ಲ- ರೋನಿ ಸ್ಕ್ರೂವಾಲಾ

ಟೆಕ್ ಬಿಲಿಯನೇರ್‌ ಆಗಿರುವ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಚಲನಚಿತ್ರ ನಿರ್ಮಾಪಕ ರೋನಿ ಸ್ಕ್ರೂವಾಲಾ ಸಹಮತ ಸೂಚಿಸಿಲ್ಲ.

"ಉತ್ಪಾದಕತೆಯನ್ನು ಹೆಚ್ಚಿಸುವುದು ಕೇವಲ ಹೆಚ್ಚು ಗಂಟೆಗಳ ಕೆಲಸವಲ್ಲ" ಎಂದು ರೋನಿ ಸ್ಕ್ರೂವಾಲಾ ಪ್ರತಿಪಾದಿಸಿದ್ದಾರೆ.

Whats_app_banner