ಕನ್ನಡ ಸುದ್ದಿ  /  Karnataka  /  Viral Video Reactions Of Kannadigas On Passengers Who Made Reels In Namma Metro For Karimani Malika Neenalla Song Bgy

Viral Video: ಕರಿಮಣಿ ಮಾಲಿಕ ನೀನಲ್ಲ ಎಂದು ನಮ್ಮ ಮೆಟ್ರೋದಲ್ಲಿ ಕಿರುಚಾಡಿ ರೀಲ್ಸ್ ಮಾಡಿದವರ ಬಗ್ಗೆ ಕನ್ನಡಿಗರು ಹೇಳೋದಿಷ್ಟು

ಕರಿಮಣಿ ಮಾಲಿಕ ನೀನಲ್ಲ ಎಂಬ ಹಾಡು 25 ವರ್ಷಗಳ ನಂತರ ಮತ್ತೆ ಟ್ರೆಂಡ್​​ನಲ್ಲಿದ್ದು, ನಮ್ಮ ಮೆಟ್ರೋ ರೈಲಿನಲ್ಲೂ ಸದ್ದು ಮಾಡಿದೆ. ಓ ನಲ್ಲ, ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಅನ್ನೋ ಸಾಲಿಗೆ ಯುವಕರು ಗುಂಪು ಕಿರುಚಾಡಿ ರೀಲ್ಸ್ ಮಾಡಿ, ಇತರ ಮೆಟ್ರೋ ಪ್ರಯಾಣಿಕರಿಗೂ ಇರಿಸುಮುರುಸು ಉಂಟುಮಾಡಿದ್ದಾರೆ.

ನಮ್ಮ ಮೆಟ್ರೋದಲ್ಲಿ ರೀಲ್ಸ್ (ಎಡಚಿತ್ರ)  (Right PC: Freepik)
ನಮ್ಮ ಮೆಟ್ರೋದಲ್ಲಿ ರೀಲ್ಸ್ (ಎಡಚಿತ್ರ) (Right PC: Freepik)

ಹಳೆಯ ಹಾಡುಗಳಿಗೆ ಹೊಸ ಟಚ್​​ ನೀಡಿ ರಿಮಿಕ್ಸ್ ಮಾಡುವುದು, ಅದು ಟ್ರೆಂಡ್​ ಆಗಿ ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್ ಆಗುವುದು, ಇದಕ್ಕೆ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ರೀಲ್ಸ್​ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಆ ಪೈಕಿ ಫೆಬ್ರವರಿ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯಗೊಂಡಿರುವುದು ʻಕರಿಮಣಿ ಮಾಲಿಕ ನೀನಲ್ಲʼ ಎಂಬ ಹಾಡು. 1999ರಲ್ಲಿ ರಿಲೀಸ್‌ ಆಗಿದ್ದ ಉಪೇಂದ್ರ ಚಿತ್ರದ ಕರಿಮಣಿ ಮಾಲಿಕ ನೀನಲ್ಲ ಹಾಡು, ಆಗಿನ ಕಾಲಕ್ಕೇ ಸಾಕಷ್ಟು ಸದ್ದು ಮಾಡಿದ್ದು, 25 ವರ್ಷಗಳ ಬಳಿಕ ಮತ್ತೆ ವೈರಲ್‌ ಆಗಿದೆ. ಪುಟಾಣಿ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರ ಬಾಯಲ್ಲೂ ಇದೇ ಹಾಡು ಕೇಳಿ ಬರುತ್ತಿದ್ದು, ಸ್ಟೆಪ್ಸ್‌ ಹಾಕಿ ಮಾಡಿರುವ ರೀಲ್ಸ್‌ ಅಂತೂ ಭಾರೀ ಮೆಚ್ಚುಗೆಯನ್ನೇ ಗಳಿಸಿಕೊಂಡಿದೆ. ಆದರೀಗ ಅದೇ ಹಾಡು ಭಾರೀ ವಿವಾದಕ್ಕೂ ಕಾರಣವಾಗಿದೆ.

ನಿಯಮದ ಪ್ರಕಾರ, ನಮ್ಮ ಮೆಟ್ರೋದಲ್ಲಿ ಯಾವುದೇ ರೀಲ್ಸ್‌ ಮಾಡಲು ಅವಕಾಶವಿಲ್ಲ. ಯುವ ಜನತೆ ಮಾತ್ರವಲ್ಲದೆ ಮಕ್ಕಳು, ವಯಸ್ಸಾದವರು ಪ್ರಯಾಣಿಸುವ ನಮ್ಮ ಮೆಟ್ರೋದಲ್ಲಿ ರೀಲ್ಸ್‌ ಹಾವಳಿ ಶುರುವಾದರೆ ಅದು ಎಲ್ಲರಿಗೂ ಇರಿಸುಮುರುಸು ಉಂಟುಮಾಡುವ ಸಾಧ್ಯತೆಯಿರುವುದಕ್ಕಾಗಿ ನಮ್ಮ ಮೆಟ್ರೋ ನಿಯಮಗಳ ಪಾಲನೆಗೆ ಒತ್ತು ನೀಡಿತ್ತು. ಆದರೆ ಈ ನಿಯಮವನ್ನು ಗಾಳಿಗೆ ತೂರಿ ನಮ್ಮ ಮೆಟ್ರೋ ರೈಲಿನಲ್ಲಿ ಯುವಕರ ಗುಂಪೊಂದು ಕರಿಮಣಿ ಮಾಲಿಕ ಹಾಡು ಹೇಳಿ ಕಿರುಚಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ ಮುಗಿಸಿ 11 ಗಂಟೆ ಸುಮಾರಿಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಈ ಯುವಕರ ಗುಂಪು ʻಕರಿಮಣಿ ಮಾಲಿಕ ನೀನಲ್ಲ.. ಕರಿಮಣಿ ಮಾಲಿಕ ರಾವುಲ್ಲಾʼ ಎಂದು ಏರು ದನಿಯಲ್ಲಿ ಜೊತೆಯಾಗಿ ಹಾಡಿ ರೀಲ್ಸ್‌ ಮಾಡಿದ್ದರು. ಇದು ಕೆಲಸ ಮುಗಿಸಿ ನೆಮ್ಮದಿಯಿಂದ ಮನೆಯತ್ತ ವಾಪಾಸ್ಸಾಗುತ್ತಿದ್ದ ಅನೇಕ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿತ್ತು. ಈ ವಿಡಿಯೋ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶೇರ್‌ ಆಗಿದ್ದೇ ತಡ ನೆಟ್ಟಿಗರು ಬಿಎಂಆರ್‌ ಸಿಎಲ್​​ಗೆ ಟ್ಯಾಗ್‌ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿದ ಅನೇಕರು, ಸಾರ್ವಜನಿಕ ಸ್ಥಳದಲ್ಲಿ ನೆಮ್ಮದಿಯನ್ನು ಹಾಳುಮಾಡಿರುವುದಾಗಿ ಆಕ್ಷೇಪ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬಿಎಂಆರ್​​ಸಿಎಲ್ ಮೆಟ್ರೋ ರೈಲುಗಳಲ್ಲಿ ನಿಯಮಗಳನ್ನು ರೂಪಿಸಿರುವುದು ಪಾಲಿಸುವುದಕ್ಕಾಗಿ, ಉಲ್ಲಂಘಿಸುವುದಕ್ಕಾಗಿ ಅಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಇದಾದ ನಂತರ ಬಂದ ಚರ್ಚೆ ಎಲ್ಲರ ಗಮನಸೆಳೆದಿದೆ.

ಪ್ರಾದೇಶಿಕತೆಯ ಹೆಸರಿನಲ್ಲಿ ಹಗ್ಗಜಗ್ಗಾಟ:

ಟ್ವಿಟ್ಟರ್​​​ನಲ್ಲಿ ಹರಿದಾಡುತ್ತಿದ್ದ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರ ಗುಂಪೊಂದು, ಪ್ರಾದೇಶಿಕತೆಯ ಹೆಸರಿನಲ್ಲಿ ಭಾರೀ ಪ್ರತಿಕ್ರಿಯೆಯನ್ನೇ ನೀಡಿದೆ. "ಇದು ನಮ್ಮ ಬೆಂಗಳೂರು, ಹೊರಗಿನವರಿಗೆ ಯಾರಿಗಾದರೂ ಅನಾನುಕೂಲವಾಗಿದ್ದರೆ ಅವರು ಬೆಂಗಳೂರು ಬಿಟ್ಟು ಹೊರಗೆ ಹೋಗಬಹುದು. ಅವರನ್ನು ಯಾರೂ ತಡೆಯುವುದಿಲ್ಲ” ಎಂಬುದಾಗಿ ಕಾಮೆಂಟ್‌ ಮಾಡಿದೆ.

ಇದಕ್ಕೆ ಬಂದಿರುವ ಪ್ರತಿಕ್ರಿಯೆಯಲ್ಲಿ, "ಪ್ರತಿಯೊಂದು ದೇಶದಲ್ಲಿ ಕಾನೂನುಗಳಿವೆ ಮತ್ತು ಈ ಗೂಂಡಾಗಳು ಆ ಕಾನೂನುಗಳನ್ನು ಅನುಸರಿಸಲು ಬಯಸದಿದ್ದರೆ ಅವರು ಆ ದೇಶವನ್ನು ತೊರೆಯಬಹುದು." ಎಂಬುದಾಗಿ ಬರೆಯಲಾಗಿದೆ.

ಒಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ-ತಪ್ಪು ಎಂಬುದೇ ಈಗ ಚರ್ಚೆಗೆ ದಾರಿಯಾಗಿದೆ.

IPL_Entry_Point