ಸಚಿವರ ಕಾಲಬುಡದಲ್ಲಿ ರಾಶಿರಾಶಿ ನೋಟುಗಳು; ಇಲ್ಲಿ ಬರ ಇದ್ರೆ ಅಲ್ಲಿ ಮದುವೆ ಮಾಡಬಾರ್ದಾ ಎಂದ ಶಿವಾನಂದ ಪಾಟೀಲ್
Shivanand Patil: ಜನಪ್ರತಿನಿಧಿಗಳು ಸೂಕ್ಷ್ಮ ಮತಿಗಳಾಗಿರಬೇಕಾಗುತ್ತದೆ. ಇಂತಹ ಕೃತ್ಯವನ್ನು ತಡೆಯಬೇಕು ಇಲ್ಲವೇ ಅಲ್ಲಿಂದ ನಿರ್ಗಮಿಸಬೇಕು. ಆದರೆ ಸಚಿವರು ಏನೂ ಆಗುತ್ತಿಲ್ಲ ಎಂಬಂತೆ ಕುಳಿತಿದ್ದರು. ಗಾಳಿಯಲ್ಲಿ ಹಾರಿಕೊಂಡು ಬಂದ ನೋಟುಗಳು ಸಚಿವರ ಕಾಲಬುಡದಲ್ಲಿ ಬೀಳುತ್ತವೆ. ಆದರೂ ಸಚಿವರು ಸುಮ್ಮನೆ ಕುಳಿತಿದ್ದದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಖವ್ವಾಲಿ ಗಾಯಕರ ಮೇಲೆ ಎರಚುತ್ತಿದ್ದ ನೋಟುಗಳು ಕಾಲಬುಡದಲ್ಲಿ ಬಿದ್ದಿದ್ದರೂ ನಿರ್ಲಿಪ್ತರಾಗಿ ಕುಳಿತಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಚಿವರ ಈ ನಡೆಯನ್ನು ಖಂಡಿಸಿರುವ ಬಿಜೆಪಿ ಸಚಿವರ ಬಂಧನಕ್ಕೆ ಆಗ್ರಹಪಡಿಸಿದೆ.
ಏನಿದು ಪ್ರಕರಣ?
ಹೈದರಾಬಾದ್‌ನ ಪದ್ಮಜಾ ಪಾಮ್ ಗ್ರೋವ್ ರೆಸಾರ್ಟ್ ಕನ್ವೆನ್ಷನ್ ಹಾಲ್‌ನಲ್ಲಿ ಬೀದರ್ ಕಾಂಗ್ರೆಸ್ ಮುಖಂಡ ಜನಾಬ್ ಅಯಾಜ್ ಖಾನ್ ಸೋನ್ ಅವರ ಪುತ್ರನ ವಿವಾಹ ಹೈದರಾಬಾದ್‌ನ ಗುಟ್ಕಾ ವ್ಯಾಪಾರಿಯೊಬ್ಬರ ಪುತ್ರಿಯ ಜತೆ ನೆರವೇರಿತು. ಈ ಸಮಾರಂಭದಲ್ಲಿ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಶಿವಾನಂದ ಪಾಟೀಲ್ ಸೇರಿದಂತೆ ಅನೇಕ ಸಚಿವರು ಮತ್ತು ಮುಖಂಡರು ಭಾಗವಹಿಸಿದ್ದರು. ಸಾಮಾನ್ಯವಾಗಿ ಇಸ್ಲಾಂ ಸಂಪ್ರದಾಯದಂತೆ ಖವ್ವಾಲಿ ಗಾಯನ ಹಮ್ಮಿಕೊಳ್ಳಲಾಗುತ್ತದೆ. ಹಾಡುಗಾರರ ಮೇಲೆ ನೋಟುಗಳನ್ನು ಎರಚಲಾಗುತ್ತದೆ. ಇಲ್ಲಿಯೂ ಅದೇ ನಡೆದಿದೆ. ಆದರೆ ಸಾರ್ವಜನಿಕ ಜೀವನದಲ್ಲಿ ಇರುವವರು, ಜನಪ್ರತಿನಿಧಿಗಳು ಸೂಕ್ಷ್ಮ ಮತಿಗಳಾಗಿರಬೇಕಾಗುತ್ತದೆ. ಇಂತಹ ಕೃತ್ಯವನ್ನು ತಡೆಯಬೇಕು ಇಲ್ಲವೇ ಅಲ್ಲಿಂದ ನಿರ್ಗಮಿಸಬೇಕು. ಆದರೆ ಸಚಿವರು ಏನೂ ಆಗುತ್ತಿಲ್ಲ ಎಂಬಂತೆ ಸೋಫಾ ಮೇಲೆ ನಿರ್ಲಿಪ್ತರಾಗಿ ಕುಳಿತಿದ್ದರು. ಗಾಳಿಯಲ್ಲಿ ಹಾರಿಕೊಂಡು ಬಂದ ನೋಟುಗಳು ಸಚಿವರ ಕಾಲಬುಡದಲ್ಲಿ ಬೀಳುತ್ತವೆ. ಆದರೂ ಸಚಿವರು ಸುಮ್ಮನೆ ಕುಳಿತಿದ್ದದ್ದು ಆಕ್ರೋಶಕ್ಕೆ ಕಾರಣವಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಧನಕ್ಕೆ ಬಿಜೆಪಿ ಆಗ್ರಹ:
ಸಚಿವರ ಕಾಲ ಕೆಳಗೆ ರಾಶಿ ರಾಶಿ ಹಣ ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಸರಿಯಾಗಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜನರ ನೋವಿಗೆ ಸ್ಪಂದಿಸಬೇಕಿದ್ದ ನಾಯಕರು ಅಹಂಕಾರ ಪ್ರದರ್ಶನ ಮಾಡುತ್ತಿರುವುದು ಆಘಾತಕಾರಿ ಎಂದು ಬಿಜೆಪಿ ನಾಯಕ ಅಶ್ವತ್ ನಾರಾಯಣ್ ಕಿಡಿ ಕಾರಿದ್ದಾರೆ. ತೆಲಂಗಾಣ ಪೊಲೀಸರು ಸಚಿವ ಶಿವಾನಂದ ಪಾಟೀಲ್ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆಗ್ರಹಪಡಿಸಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎನ್ನುವುದನ್ನು ಸಚಿವ ಶಿವಾನಂದ ಪಾಟೀಲ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಎಕ್ಸ್ ನಲ್ಲಿ ಬಿಜೆಪಿ ಟೀಕಿಸಿದೆ. ಸಾರ್ವಜನಿಕರೂ ಸಹ ಸಚಿವರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲಡಿಯಲ್ಲಿ ರಾಶಿ ಹಣ ಬಿದ್ದಿದ್ದರೂ ಸಚಿವರು ಕುಳಿತಲ್ಲೇ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಚಿವರ ಸಮರ್ಥನೆ
ನಾನು ಹೈದರಾಬಾದ್‍ಗೆ ಲಗ್ನಕ್ಕೆ ಹೋಗಿದ್ದೆ. ಅವರ ಸಂಸ್ಕೃತಿ ಪ್ರಕಾರ ಅವರು ನಡೆದುಕೊಂಡರೆ ನಾನೇನು ಮಾಡಲಿ. ಇಲ್ಲಿ ಬರ ಇದೆ ಎಂದು ಅಲ್ಲಿ ಹೈದರಾಬಾದ್ನಲ್ಲಿ ಮದುವೆ ಮಾಡಬಾರದಾ ? ಅಲ್ಲಿ ಬರ ಇದೆಯಾ ಎಂದು ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ.
ಅಲ್ಲಿನ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನೂ ವೈರಲ್ ಮಾಡಿದರೆ ಹೇಗೆ? ಯಾರೋ ಮಾಡಿದ್ದಕ್ಕೆ ನಾನು ಹೊಣೆಗಾರನೆ ಎಂದು ಉಡಾಫೆ ರೀತಿಯಲ್ಲಿ ಉತ್ತರಿಸಿದ್ದಾರೆ. ರೈತರ ಆತ್ಮಹತ್ಯೆ ಕುರಿತು ಸಚಿವ ಸಚಿವ ಶಿವಾನಂದ ಪಾಟೀಲ್ ಈ ಹಿಂದೆ ಉಡಾಫೆ ಉತ್ತರ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಆತ್ಮಹತ್ಯೆಗೆ ಪರಿಹಾರ ಹೆಚ್ಚಳ ಮಾಡಿದ ನಂತರ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿಕೆ ನೀಡಿದ್ದರು.
ವರದಿ: ಎಚ್ ಮಾರುತಿ