Viral video: ಅನಾಥರೆಂದು ಭಾವಿಸಿದ್ದ ಪುತ್ತೂರು ವ್ಯಕ್ತಿಯನ್ನು 45 ವರ್ಷ ನಂತರ ಮನೆಗೆ ಸೇರಿಸಿದ ಬೆಂಗಳೂರು “ಆಸರೆ ”ಯ ವಿಡಿಯೋ
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಅನಾಥರೆಂದು ಭಾವಿಸಿದ್ದ ಪುತ್ತೂರು ವ್ಯಕ್ತಿಯನ್ನು 45 ವರ್ಷ ನಂತರ ಮನೆಗೆ ಸೇರಿಸಿದ ಬೆಂಗಳೂರು “ಆಸರೆ ”ಯ ವಿಡಿಯೋ

Viral video: ಅನಾಥರೆಂದು ಭಾವಿಸಿದ್ದ ಪುತ್ತೂರು ವ್ಯಕ್ತಿಯನ್ನು 45 ವರ್ಷ ನಂತರ ಮನೆಗೆ ಸೇರಿಸಿದ ಬೆಂಗಳೂರು “ಆಸರೆ ”ಯ ವಿಡಿಯೋ

Viral video: ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕೆಲವೊಂದು ವಿಡಿಯೋ ಕುಟುಂಬವನ್ನು ಬೆಸೆಯಲೂ ಬಲ್ಲವು. ಅಂತಹದ್ದೇ ಒಂದು ಅನುಭವ ದಕ್ಷಿಣ ಕನ್ನಡದ ಪುತ್ತೂರಿನ ಕುಟುಂಬ ಒಂದಕ್ಕೆ ಆಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಸಹೋದರ ರಾಮಚಂದ್ರ(ಬಿಳಿಅಂಗಿ) ಜತೆ ದಿವಾಕರ ರೈ. ಕಾರು ಏರಿ ಹೊರಟರು,.
ಸಹೋದರ ರಾಮಚಂದ್ರ(ಬಿಳಿಅಂಗಿ) ಜತೆ ದಿವಾಕರ ರೈ. ಕಾರು ಏರಿ ಹೊರಟರು,.

ಮಂಗಳೂರು: ಸುಮಾರು 45 ವರ್ಷಗಳ ಹಿಂದೆ ಮನೆ ಬಿಟ್ಟು ಉದ್ಯೋಗ ಅರಸುತ್ತಾ ಸಾಗಿದ ವ್ಯಕ್ತಿಯೋರ್ವರು ಕುಟುಂಬದಿಂದ ಸುದೀರ್ಘ ಕಾಲ ಸಂಪರ್ಕವನ್ನೇ ಕಡಿದು ಏಕಾಂಗಿಯಾಗಿದ್ದರೂ ಬಾಳ ಮುಸ್ಸಂಜೆಯಲ್ಲಿ ವಿಡಿಯೋ ತುಣುಕಿನ ಸಹಾಯದಿಂದ ಮನೆಗೆ ಮರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಕೆಲಸಗಳೂ ಆಗುತ್ತವೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ. ಆಸೆಯೇ ಬಿಟ್ಟಿದ್ದ ಕುಟುಂಬದ ಸದಸ್ಯ ಬೆಂಗಳೂರಿನ ಆಸರೆ ಸಂಸ್ಥೆಯಲ್ಲಿರುವುದು ಗೊತ್ತಾಗಿ ಈಗ ಅವರನ್ನು ಕರೆತರಲಾಗಿದೆ. ಮನೆ ಮಂದಿಯ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಪುತ್ತೂರು ತಾಲೂಕು ಕೈಯೂರು ಗ್ರಾಮದ ದೇರ್ಲ ರಾಮಣ್ಣ ರೈ ಬೊಳಿಕಲ ಪರಮೇಶ್ವರಿ ದಂಪತಿಯ ಪುತ್ರ ರಾಮಚಂದ್ರ ರೈ (65 ) ಸುಮಾರು 45 ವರ್ಷಗಳ ಹಿಂದೆ ಊರು ಬಿಟ್ಟಿದ್ದರು. ಮಗ ಎಲ್ಲಿದ್ದಾನೆ ಎಂಬುದೇ ಅಪ್ಪ, ಅಮ್ಮನಿಗೆ ಗೊತ್ತಿಲ್ಲದೆ ವರ್ಷಗಳೇ ಉರುಳಿದವು. ಕಳೆದು ಹೋದ ಮಗನ ನೆನಪಿನಲ್ಲೇ ಅಪ್ಪ, ಅಮ್ಮನೂ ಗತಿಸಿದರು.

ಆಸರೆ ಮೂಲಕ ಗೊತ್ತಾಯಿತು

ರಾಮಣ್ಣ ರೈಗಳು ಹೀಗೆ ಊರೂರು ಸುತ್ತುತ್ತಾ, ಸಣ್ಣ ಪುಟ್ಟ ಉದ್ಯೋಗ ಮಾಡುತ್ತಾ ವರ್ಷಗಳನ್ನು ಕಳೆದು, ಅನಾರೋಗ್ಯಕ್ಕೆ ತುತ್ತಾಗಿ ತುಮಕೂರಿನ ತಿಪಟೂರು ಸೇರಿದರು. ತಿಪಟೂರು ಪೊಲೀಸರು ಜನವರಿ 28 ರಂದು ಬೆಂಗಳೂರಿನ ಆಸರೆ ಫೌಂಡೇಶನ್ ಟ್ರಸ್ಟ್ ಗೆ ಕರೆ ಮಾಡಿ, ಇಲ್ಲೊಬ್ಬರು ಅನಾಥ ವ್ಯಕ್ತಿ ಇದ್ದಾರೆ, ಅನಾರೋಗ್ಯದಿಂದ ಕಂಗಾಲಾಗಿ ಪೇಟೆ ಸುತ್ತುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ನಡೆದಾಡಲೂ ಕಷ್ಟವಾಗುವ ಅವರನ್ನು ಜನರ ನೆರವಿನಿಂದ ಆಸರೆ ಸಂಸ್ಥೆ ಸೇರಿಸಿಕೊಂಡಿತು. ಇವರ ಕುರಿತು ಆಸರೆಯ ಜಯರಾಜ್ ನಾಯ್ಡು ವಿಡಿಯೋ ಮಾಡಿ ಹರಿಯಬಿಟ್ಟರು. ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ನೇವಿ ಆಫೀಸರ್ ದಿವಾಕರ ರೈ ವಿಡಿಯೋ ಕಂಡು ಇವರು ನನ್ನ ಸಹೋದರ ಎಂಬುದನ್ನು ಗುರುತು ಹಿಡಿದರು. ಕೂಡಲೇ ಆಸರೆಯನ್ನು ಅವರು ಸಂಪರ್ಕಿಸಿದರು. ಜನವರಿ 31 ರಂದು ಅಲ್ಲಿಗೆ ಹೋಗಿ ಅವರು ತಮ್ಮನೇ ಎಂಬುದನ್ನು ಖಚಿತಪಡಿಸಿಕೊಂಡರು. ರಾಮಚಂದ್ರನೂ ಅಣ್ಣನ ಗುರುತು ಹಿಡಿದರು. ಅಲ್ಲಿಗೆ ಕರೆತರುವ ವ್ಯವಸ್ಥೆ ಸುಗಮವಾಯಿತು.

ತುಳುವಿನಲ್ಲೇ ಮಾತಾಡಿದ ರಾಮಚಂದ್ರ

ದಿವಾಕರ ರೈ ಆಸರೆಗೆ ತೆರಳುವ ವೇಳೆ ತನ್ನ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಕೊಂಡೊಯ್ದಿದ್ದರು. ರಾಮಚಂದ್ರ ರೈ ಹೇಳಿದ ಮಾಹಿತಿಗಳು ಇದಕ್ಕೆ ತಾಳೆಯಾದವು. ಮನೆ, ಊರು, ಕುಟುಂಬದವರ ಹೆಸರು ಇತ್ಯಾದಿಗಳನ್ನು ರಾಮಚಂದ್ರ ರೈ ತುಳುವಿನಲ್ಲೇ ಹೇಳಿದ್ದು ಇದಕ್ಕೆ ಪುಷ್ಟಿ ನೀಡಿತು. ಊರಿಗೆ ಬಂದು ಸಹೋದರರ ಜೊತೆ ಚರ್ಚಿಸಿ, ರಾಮಚಂದ್ರರನ್ನು ಕರೆತರಲು ನಿರ್ಧರಿಸಿದ ದಿವಾಕರ ರೈ, ಪುತ್ತೂರಿನ ಸಂಪ್ಯ ಪೊಲೀಸರ ಮೂಲಕ ತಿಪಟೂರು ಪೊಲೀಸರಿಗೆ ಮಾಹಿತಿ ನೀಡಿ, ಅಲ್ಲಿಂದ ಪತ್ರ ಪಡೆಯಲಾಯಿತು. ಪೂರಕ ದಾಖಲೆಗಳ ಜೊತೆ ಫೆಬ್ರವರಿ 12ರಂದು ಆಸರೆಗೆ ತೆರಳಿದ ರೈ, ತಮ್ಮನನ್ನೂ ಊರಿನ ಬೊಳಿಕಲ ಎಂಬಲ್ಲಿರುವ ಮನೆಗೆ ಕರೆತಂದರು. ಈಗ ನಾಲ್ಕೂವರೆ ದಶಕದ ಬಳಿಕ ಮನೆ ಸೇರಿದ ಸಹೋದರನ ಕಂಡು ಮನೆಯವರಿಗೆ ಖುಷಿ. ಊರವರಲ್ಲೂ ಸಂತೋಷ ಮನೆ ಮಾಡಿದೆ.

ನನಗೆ ಸಹೋದರ ಸಿಗುತ್ತಾನೆ ಎಂದು ತಿಳಿದಿರಲಿಲ್ಲ. ಸಣ್ಣ ಪ್ರಾಯದಲ್ಲೇ ಏನೋ ಕಾರಣಕ್ಕೆ ಮನೆ ಬಿಟ್ಟು ಹೋದವ. ನಾನೂ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದುದರಿಂದ ಸರಿಯಾಗಿ ಹುಡುಕಲು ಆಗಲೇ ಇಲ್ಲ. ನಿವೃತ್ತಿ ನಂತರ ಊರಲ್ಲಿ ಇರುವಾಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಗಮನಿಸಿದೆ. ಅದು ನನ್ನ ಸಹೋದರನೇ ಆಗಿದ್ದ. ಕೊನೆಗೆ ಆಸರೆ ಸಂಸ್ಥೆ ಸಂಪರ್ಕಿಸಿ ಪೊಲೀಸರ ಸಹಕಾರದಿಂದ ಸಹೋದರನ್ನು ಪಡೆಯಲು ಸಾಧ್ಯವಾಯಿತು ಕಣ್ಣೀರಾದರು ದಿವಾಕರ್‌.

ವರದಿ: ಹರೀಶ ಮಾಂಬಾಡಿ. ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner