VRS trending in BJP: ಬಿಜೆಪಿಯ ಹಿರಿಯ ನಾಯಕರ ʻವಿಆರ್‌ಎಸ್ʼ!; ಅನುಕಂಪದ ಟಿಕೆಟ್ ಲೆಕ್ಕಾಚಾರಕ್ಕೆ ವರಿಷ್ಠರ ನಿರ್ಧಾರ ನಿಗೂಢ
VRS trending in BJP: ಬಿಜೆಪಿಯ ಹಿರಿಯ ರಾಜಕಾರಣಿಗಳೆಲ್ಲ ಒಬ್ಬೊಬ್ಬರಾಗಿ ವಾಲೆಂಟರಿ ರಿಟೈರ್‌ಮೆಂಟ್ ಸ್ಕೀಮ್ (ವಿಆರ್‌ಎಸ್)ಗೆ ಮೊರೆ ಹೋಗುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಸ್ವೀಕರಿಸಲ್ಪಟ್ಟ ವಿಆರ್‌ಎಸ್ ಅನ್ನು ಈಗ ಉಳಿದ ನಾಯಕರೂ ಸ್ವೀಕರಿಸತೊಡಗಿದ್ದಾರೆ!
ರಾಜ್ಯ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಬಹಳಷ್ಟು ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳಿಗೆ ರಾಜ್ಯ ವೇದಿಕೆಯಾಗುತ್ತಿದೆ. ಆಡಳಿತಾರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಾರ್ಟಿಯ ನಾಯಕರು ಅದರ ಪ್ರಯೋಜನ ಪಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ, ಜೆಡಿಎಸ್ ಒಂದು ಪಟ್ಟಿ ಬಿಡುಗಡೆ ಮಾಡಿದೆ. ಏಪ್ರಿಲ್ 13ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಅಂದೇ ಶುರುವಾಗಲಿದೆ. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿಲ್ಲ. ಅಳೆದೂ ತೂಗಿ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ಮುಂದುವರಿದಿದೆ.
ಅದಕ್ಕೂ ಮೊದಲೇ ಬಿಜೆಪಿಯ ಹಿರಿಯ ರಾಜಕಾರಣಿಗಳೆಲ್ಲ ಒಬ್ಬೊಬ್ಬರಾಗಿ ವಾಲೆಂಟರಿ ರಿಟೈರ್‌ಮೆಂಟ್ ಸ್ಕೀಮ್ (Voluntary Retirement Scheme)ಗೆ ಮೊರೆ ಹೋಗುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಂದ ಸ್ವೀಕರಿಸಲ್ಪಟ್ಟ ವಿಆರ್‌ಎಸ್ ಅನ್ನು ಈಗ ಉಳಿದ ನಾಯಕರೂ ಸ್ವೀಕರಿಸತೊಡಗಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿಆರ್‌ಎಸ್ ಘೋಷಣೆ ಮಾಡಿದ ಕೂಡಲೇ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾನೆ. ಅತ್ಯಂತ ಹೆಚ್ಚು ಮತಗಳ ಗೆಲುವನ್ನು ಅವರಿಗೆ ಒದಗಿಸಿಕೊಡಬೇಕು ಎಂದು ಶಿಕಾರಿಪುರ ಮತ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದರು. ಬಳಿಕ ನಡೆದ ವಿದ್ಯಮಾನಗಳು ಏನೇ ಇದ್ದರೂ ಅದು ಈಗ ನಗಣ್ಯ.
ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ (K S Eshwarappa) ಸಚಿವ ಸ್ಥಾನಕ್ಕಾಗಿ ಹಂಬಲಿಸಿ ಕೊನೆಗೆ ಮೌನಕ್ಕೆ ಶರಣಾಗಿದ್ದರು. ಅವರು ಕೂಡ ಶಿವಮೊಗ್ಗದಲ್ಲಿ ಈ ಸಲ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿರುವುದಾಗಿ ಘೋಷಿಸಿದ್ದಾರೆ. ಅವರ ಪುತ್ರನಿಗೆ ಶಿವಮೊಗ್ಗ ಟಿಕೆಟ್ ನೀಡಬೇಕು ಎಂದು ಲಾಬಿ ನಡೆಸಿದ್ದಾಗಿ ಸುದ್ದಿ ಇದೆ.
ಬಿಎಸ್ ಯಡಿಯೂರಪ್ಪ ಅವರ ಆಪ್ತ, ಮಾಜಿ ಸಚಿವ ವಿ.ಸೋಮಣ್ಣ ಅವರು ಕೂಡ ಚುನಾವಣಾ ರಾಜಕೀಯದಿಂದ ವಿಆರ್‌ಎಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪುತ್ರ ಅರುಣ್ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಲು ಸೋಮಣ್ಣ ಪ್ರಯತ್ನಿಸಿದ್ದಾರೆ. ಈ ಕುರಿತ ವರದಿಯನ್ನು ಹಲವು ಮಾಧ್ಯಮಗಳು ಪ್ರಕಟಿಸಿವೆ.
ಇದೇ ರೀತಿ, ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಕೂಡ, ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಗ ನಿತೇಶ್ ಪುರುಷೋತ್ತಮ್‌ಗೆ ಹೊಸಕೋಟೆಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದು ಕಳೆದ ವಾರ ಹೇಳಿದ್ದರು. ನಿತೇಶ್ ಮಾಜಿ ಬಿಬಿಎಂಪಿ ಕೌನ್ಸಿಲರ್.
ಯಾವುದೇ ಬೇಡಿಕೆ ಇಲ್ಲದೆ ಚುನಾವಣಾ ರಾಜಕೀಯ ನಿವೃತ್ತಿ ಪಡೆದವರು
ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ ಶಾಸಕ): ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುತ್ತಿದ್ದಂತೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ. ಅವರು ಈ ತೀರ್ಮಾನವನ್ನು ಆರು ತಿಂಗಳ ಹಿಂದೆಯೇ ತೆಗೆದುಕೊಂಡಿದ್ದರೂ, ಪ್ರಕಟಿಸಿದ್ದು ಇತ್ತೀಚೆಗೆ. ಇದಕ್ಕೆ ಅವರು ಕುಂದಾಪುರ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ನಿರ್ಧಾರ ಪ್ರಕಟಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಚುನಾವಣೆಗೆ ನಿಲ್ಲುವುದಿಲ್ಲ ಎಂದು ಆರು ತಿಂಗಳು ಮೊದಲೇ ಘೋಷಣೆ ಮಾಡಿದ್ದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದ್ದವು. ನನ್ನ ನಿರ್ಧಾರದ ಹಿಂದೆ ಯಾರ ಒತ್ತಡವೂ ಇಲ್ಲ. ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿದಿದ್ದು, ಸಕ್ರಿಯ ರಾಜಕೀಯದಿಂದ ಅಲ್ಲ ಎಂದು ಶ್ರೀನಿವಾಸ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಎಸ್.ಎ.ರವೀಂದ್ರನಾಥ್ (ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ): ದಾವಣಗೆರೆ ಉತ್ತರ ಕ್ಷೇತ್ರದಿಂದ ಈ ಸಲದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್ಎ ರವೀಂದ್ರನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನಿನ್ನೆ ದಾವಣಗೆರೆ ತಾಲೂಕಿನ ಶಿರಮಗೊಂಡನ ಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ನಾನೇ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಕುಟುಂಬದವರಿಗೆ ಟಿಕೆಟ್ ಬೇಡ. ಹೊಸಬರಿಗೆ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.