ಬೆಂಗಳೂರು ರಾಜಭವನ ನೋಡುವ ಬಯಕೆಯಿದೆಯೇ; ಇಂದು, ನಾಳೆ ಉಂಟು ಅವಕಾಶ, ರಾಜ್ಯಪಾಲರ ಕಚೇರಿ, ಮನೆಯಲ್ಲಿ ಏನೇನು ನೋಡಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಾಜಭವನ ನೋಡುವ ಬಯಕೆಯಿದೆಯೇ; ಇಂದು, ನಾಳೆ ಉಂಟು ಅವಕಾಶ, ರಾಜ್ಯಪಾಲರ ಕಚೇರಿ, ಮನೆಯಲ್ಲಿ ಏನೇನು ನೋಡಬಹುದು

ಬೆಂಗಳೂರು ರಾಜಭವನ ನೋಡುವ ಬಯಕೆಯಿದೆಯೇ; ಇಂದು, ನಾಳೆ ಉಂಟು ಅವಕಾಶ, ರಾಜ್ಯಪಾಲರ ಕಚೇರಿ, ಮನೆಯಲ್ಲಿ ಏನೇನು ನೋಡಬಹುದು

ಬೆಂಗಳೂರಿನಲ್ಲಿರುವ ರಾಜಭವನವನ್ನು ವೀಕ್ಷಣೆ ಮಾಡಲು ಎರಡು ದಿನಗಳ ಮಟ್ಟಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.ಭೇಟಿಗೆ ನೀವು ಈ ಕ್ರಮವನ್ನು ಅನುಸರಿಸಿದರೆ ಒಳಿತು.

ಕರ್ನಾಟಕ ರಾಜಭವನ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ರಾಜಭವನ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಬೆಂಗಳೂರು: ಬೆಂಗಳೂರು ರಾಜಭವನವನ್ನು ನಾವು ಮುಖ್ಯಮಂತ್ರಿ ಇಲ್ಲವೇ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ನೋಡಿರಬಹುದು. ಇಲ್ಲದೇ ಶಾಸಕರು, ಮುಖಂಡರು ಮನವಿಗಳನ್ನು ಸಲ್ಲಿಸಲು ಹೋದಾಗ ರಾಜಭವನವನ್ನು ಫೋಟೋಗಳಲ್ಲಿ ವೀಕ್ಷಿಸಿರಬಹುದು. ಆದರೆ ನೇರವಾಗಿ ವೀಕ್ಷಣೆ ಮಾಡಲು ಸಾಮಾನ್ಯರಿಗೆ ಅವಕಾಶ ಬಹಳ ಕಡಿಮೆ. ಮೊದಲೇ ಅನುಮತಿ ಪಡೆದಿದ್ದರೆ ಅವಕಾಶ ಸಿಗಬಹುದು ಇಲ್ಲವೇ ಸಿಗದೇ ಇರಬಹುದು. ಆದರೆ ಈಗ ರಾಜಭವನವನ್ನು ವೀಕ್ಷಿಸಲು ರಾಜ್ಯಪಾಲರ ಕಚೇರಿಯೇ ಅನುಮತಿ ನೀಡಿದೆ. ಅದೂ 76ನೇ ಗಣರಾಜ್ಯೋತ್ಸವದ ನಿಮಿತ್ತ ದಿನಾಂಕ 26 ಮತ್ತು 27 ಜನವರಿ ರಂದು ರಾಜಭವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ.

ಸಾರ್ವಜನಿಕರು ಮುಖ್ಯದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ. ರಾಜಭವನ ಪ್ರವೇಶ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಪ್ರವೇಶದ ಸಮಯ: ಸಂಜೆ 6 ರಿಂದ 7.30

ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮರಾ, ಕೈ ಚೀಲ, ಚೂಪಾದ ವಸ್ತುಗಳು, ತಿಂಡಿ-ತಿನಿಸು, ಪ್ಲಾಸ್ಟಿಕ್ ವಸ್ತುಗಳು ಇನ್ನಿತರ ಯಾವುದೇ ಲಗೇಜ್ ಬ್ಯಾಗ್ ತರುವಂತಿಲ್ಲ. ರಾಜಭವನದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.

ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳು ನೀಡುವ ಸೂಚನೆಗಳನ್ನು ಪಾಲಿಸಿ, ಸಹಕರಿಸಬೇಕಾಗಿ ಕೋರಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಭವನ ಇತಿಹಾಸ

ಬೆಂಗಳೂರಿನಲ್ಲಿರುವ ರಾಜಭವನವು ಪ್ರವಾಸಿಗರು ಸುಲಭವಾಗಿ ಭೇಟಿ ನೀಡುವಂಥ ಸ್ಥಳವಲ್ಲ. ಸಾಮಾನ್ಯ ಜನರಿಗೆ ಇದು ಇನ್ನೂ ನಿಗೂಢವಾಗಿದೆ. ವಸಾಹತುಶಾಹಿಯ ಕಾಲದಿಂದಲೂ ಈ ಕಟ್ಟಡವು ಯಾವಾಗಲೂ ಅಧಿಕಾರ ಕೇಂದ್ರಿತ ಸ್ಥಳವಾಗಿ ಉಳಿದಿದೆ ಹಾಗೂ ಇದು ಅತ್ಯುನ್ನತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಮತ್ತು ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ಆಡಳಿತಕ್ಕೆ ನೂತನ ಮಾರ್ಗದರ್ಶನವನ್ನು ನೀಡಿರುವಂಥ ಸರ್‍. ಮಾರ್ಕ್‍ ಕಬ್ಬನ್‍ ಮತ್ತು ಎಲ್‍.ಬಿ. ಬೌರಿಂಗ್‍ನಂಥ ಶ್ರೇಷ್ಠ ಆಡಳಿತಗಾರರು ಇದರ ಮೂಲದೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ, ಇದರ ಇತಿಹಾಸ ನಿಗೂಢ ಕುತೂಹಲಕರವಾಗಿಯೇ ಉಳಿದಿದೆ.

ರಾಜಭವನವು ಬ್ರಿಟಿಷ್‍ ಯುಗವನ್ನು ಪ್ರತಿಬಿಂಬಿಸುತ್ತದೆ, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಹಾದು ನಡುವೆ ಕಮಿಷನರ್ ಆಳ್ವಿಕೆಯ ಮುಖಾಂತರ ಬ್ರಿಟಿಷರ ನೇರ ಆಡಳಿತಕ್ಕೆ ಒಳಗಾಗಿ ನಂತರ ಭಾರತದ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿ ನಿಂತು ಭಾರತ ಗಣರಾಜ್ಯಕ್ಕೆ ತನ್ನ ಪಾದಾರ್ಪಣೆ ಮಾಡಿದೆ.

1834ರಿಂದ 1861ರ ವರೆಗೆ ಬ್ರಿಟಿಷರ ಮೈಸೂರು ಪ್ರಾಂತ್ಯದ ಕಮೀಷನರ್‍ ಆಗಿದ್ದಂಥ ಸರ್. ಮಾರ್ಕ್‍ ಕಬ್ಬನ್‍ರವರು ಹಣ ನೀಡಿ ಈ ಸ್ವತ್ತನ್ನು ಖರೀದಿಸಿದರು ಹಾಗೂ 1840-1842ರ ಅವಧಿಯಲ್ಲಿ ತಮ್ಮ ಅಭಿರುಚಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ತಮ್ಮ ಸ್ವಂತ ಹಣದಿಂದ ಔಟ್‍ಹೌಸ್ ಮತ್ತು ಕುದುರೆ ಲಾಯಗಳೊಂದಿಗೆ ಈ ಬಂಗಲೆಯನ್ನು ಕಟ್ಟಿಸಿದರು.

1840ರಲ್ಲಿ ಮಾರ್ಕ್‍ ಕಬ್ಬನ್‍ ರವರು ಈ ಬಂಗಲೆಯನ್ನು ಕಟ್ಟಿಸಿದಾಗ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳು ಇರಲಿಲ್ಲ. ಇದು, ಈಗ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮಹಾನಗರದ ಹೃದಯ ಭಾಗವಾಗಿದೆ.

ಹೊಸ ಕಟ್ಟಡ ವಿಶೇಷ

ರಾಜಭವನ ಕಟ್ಟಡವು ಪೌರ್ವಾತ್ಯ ಮತ್ತು ಪಾಶ್ಚಾತ್ಯ ಎರಡೂ ಪರಂಪರೆಗಳ ಅತ್ಯುತ್ತಮ ಪರಿಕಲ್ಪನೆಯಿಂದ ರೂಪಿಸಲಾದ ಭವ್ಯವಾದ ಕಟ್ಟಡವಾಗಿದ್ದು, ಅದು ಸ್ವರೂಪದಲ್ಲಿ ಅತ್ಯಂತ ಅಲಂಕಾರಯುತ, ವಿಶ್ರಾಂತಿಯುತ, ಆಹ್ಲಾದಕರವಾದ ವಾತಾವರಣದ ಸಂಯೋಜನೆಯಿಂದ ಕೂಡಿದೆ. ಹಾಗಾಗಿ, ರಾಜಭವನ ಕಟ್ಟಡವು ಮನಸೊರೆಗೊಳ್ಳುತ್ತಿದೆ.

ರಾಜಭವನವು ಸುಮಾರು 18 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಆಗ್ನೇಯ ಮೂಲೆಯಲ್ಲಿ ವಿಧಾನ ಸೌಧ, ವಾಯುವ್ಯದಲ್ಲಿ ಶಾಸಕರ ಭವನ ಮತ್ತು ಈಶಾನ್ಯದಲ್ಲಿ ಆಲ್ ಇಂಡಿಯಾ ರೇಡಿಯೋ ಕೇಂದ್ರವನ್ನು ಕಾಣಬಹುದಾಗಿದೆ. ಸುಮಾರು ಎರಡೂವರೆ ಎಕರೆ ಪ್ರದೇಶವನ್ನು ಕಟ್ಟಡವು ಆವರಿಸಿಕೊಂಡಿದೆ.

ಮುಖ್ಯ ಕಟ್ಟಡದ ಮೊದಲ ಮಹಡಿಯನ್ನು 125 ವರ್ಷಗಳ ಹಿಂದೆ ನಿರ್ಮಿಸಲಾದ ಮೂಲ ಕಟ್ಟಡದ ವಾಸ್ತುಶಿಲ್ಪದ ವಿವರಗಳಿಗೆ ಹೊಳಪು ಬರುವಂತೆ ಯುಕ್ತ ಗಮನಹರಿಸಿ 1967ರಲ್ಲಿ ನಿರ್ಮಿಸಲಾಯಿತು.

ರಾಜಭವನ ಉದ್ಯಾನ

ರಾಜಭವನ ಉದ್ಯಾನವನವು ಸುಮಾರು ಒಂದೂವರೆ ಶತಮಾನದಷ್ಟು ಇತಿಹಾಸ ಹೊಂದಿರುವ ಉದ್ಯಾನವನ. ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ “ಕಮೀಷನರ್ ಬಂಗಲೆ” ಎಂದು ಕರೆಯಲ್ಪಡುತ್ತಿದ್ದು, ನಂತರದ ದಿನಗಳಲ್ಲಿ ರೆಸಿಡೆನ್ಸಿ ಪಾರ್ಕ್ ಎಂದು ಪ್ರಸ್ತುತ “ರಾಜಭವನ ಉದ್ಯಾನವನ” ಎಂದು ಕರೆಯಲ್ಪಡುತ್ತಿದೆ. ಬ್ರಿಟೀಷರ ಪ್ರತಿನಿಧಿ ಮತ್ತು ಆಗಿನ ಮೈಸೂರು ಸಂಸ್ಥಾನದ ಆಯುಕ್ತರಾಗಿದ್ದ ಸರ್ ಮಾರ್ಕ್ ಕಬ್ಬನ್ ರವರು ಈ ರಾಜಭವನದಲ್ಲಿ ನೆಲೆಸಿದ್ದರು. ಇಲ್ಲಿನ ಉದ್ಯಾನ ಈಗಲೂ ಆಕರ್ಷಕವಾಗಿದೆ.

ರಾಜಭವನದ ಕಲಾಕೃತಿಗಳು

ರಾಜಭವನವು ಕಲೆಯ ನಿಧಿಯಾಗಿದೆ ಮತ್ತು ಅದರ ಕಲಾ ಸಂಗ್ರಹವು ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಎರಡೂ ಪರಂಪರೆಗಳನ್ನು ಹೊಂದಿದೆ. ಅದರ ಕಲಾಕೃತಿ ಸಂಗ್ರಹವು ಪಾಶ್ಚಾತ್ಯ ದೇಶದಿಂದ ಹರ್ಬಟ್‍ ಪ್ಯಾರಿಷ್ ಮತ್ತು ವೂವರ್‍ ಬ್ರಾಂಕ್ಟ್‍ನಂತಹವರ ಹಲವು ಶ್ರೇಷ್ಠ ಕಲಾಕೃತಿಗಳನ್ನು, ಹಾಗೆಯೇ ಮೈಸೂರು, ತಂಜಾವೂರು ಮತ್ತು ಬೆಂಗಾಲಿ ಕಲಾಪಂಥದ ಕುಂಚದ ಕಲೆಯ ಹಲವು ಪಾರಂಪರಿಕ ಕಲಾಕೃತಿಗಳನ್ನು ಒಳಗೊಂಡಿದೆ.

Whats_app_banner