Kannada News  /  Karnataka  /  War Continues Between Political Parties For Bangalore Mysore Expressway Credit
ಬೆಂಗಳೂರು-ಮೈಸೂರು ದಶಪಥದ ಎಕ್ಸ್‌ಪ್ರೆಸ್‌ವೇ
ಬೆಂಗಳೂರು-ಮೈಸೂರು ದಶಪಥದ ಎಕ್ಸ್‌ಪ್ರೆಸ್‌ವೇ

Bangalore Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕ್ರೆಡಿಟ್ ಗಾಗಿ ರಾಜಕೀಯ ಪಕ್ಷಗಳ ನಡುವೆ ವಾರ್ ಮುಂದುವರಿಕೆ

11 March 2023, 11:44 ISTHT Kannada Desk
11 March 2023, 11:44 IST

ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ಅನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟನೆ ಮಾಡಲಿದ್ದಾರೆ. ಆದರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಈ ಹೆದ್ದಾರಿಯ ಕ್ರೆಡಿಟ್ ವಾರ್ ಮುಂದುವರೆಯುತ್ತಲೇ ಇದೆ.

ಬೆಂಗಳೂರು: ಚುನಾವಣಾ ಸಮರಕ್ಕೆ ವೇದಿಕೆ ಸಜ್ಜಾಗಿರುವ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಭೇಟಿ ನೀಡುತ್ತಿದ್ದು, ಮಂಡ್ಯದ ಬಳಿ ಅತ್ಯಂತ ಪ್ರಮುಖ ಹಾಗೂ ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬಳಿಕ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಆ ಮೂಲಕ ಹಳೆ ಮೈಸೂರು ಭಾಗದ ಮಂಡ್ಯದಲ್ಲಿ ಮತಬೇಟೆ ನಡೆಸಲಿದ್ದಾರೆ.

ಆದರೆ ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕ್ರೆಡಿಟ್ ಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ವಾಕ್ಸಮರ ನಡೆಯುತ್ತಿದೆ. ಯುಪಿಎ ಅವಧಿಯಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಸರಿ ಪಕ್ಷ ಆಕ್ರೋಶಗೊಂಡಿದೆ.

ಮೈಸೂರು-ಬೆಂಗಳೂರು ರಸ್ತೆ 2013ರವರೆಗೂ ರಾಜ್ಯ ಹೆದ್ದಾರಿ ಆಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದುದ್ದನ್ನು ಮಾನದಂಡವಾಗಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಯಿತು. ಕೆಆರ್ ಡಿಸಿಎಲ್ ಮೂಲಕ ನಾಲ್ಕು ಪಥವಾಗಿ ಮಾಡಿದರೂ ಒತ್ತಡ ಹೆಚ್ಚಾದ್ದರಿಂದ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಡಿಪಿಆರ್ ತಯಾರಿಸಲು ನಿರ್ಧರಿಸಲಾಯಿತು ಎಂದು ಡಾ ಹೆಚ್ ಸಿ ಮಹದೇವಪ್ಪ ವಿವರಿಸಿದ್ದಾರೆ.

ಮಾಜಿ ಸಚಿವ ಮಹದೇವಪ್ಪ ಅವರ ಹೇಳಿಕೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವುದು ಸಿದ್ದರಾಮಯ್ಯ, ಮಹದೇವಪ್ಪ ಅವರ ಕೆಲಸ ಅಲ್ಲ. ಅದೊಂದು ಯಾಂತ್ರೀಕೃತ ಕಾರ್ಯ. ಇದಕ್ಕೆ ಸಹಿಹಾಕುವುದು ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಹೊರತು ಸಿದ್ದರಾಮಯ್ಯ, ಮಹದೇವಪ್ಪ ಅಲ್ಲ ಎಂದಿದ್ದಾರೆ.

ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳನ್ನು ಸಹಜವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅದನ್ನಷ್ಟೇ ಕಾಂಗ್ರೆಸ್ ಪಕ್ಷ ಮಾಡಿರುವುದು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದು, ಈ ಬಗ್ಗೆ ಬೇಕಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಾ ಹೆಚ್ ಸಿ ಮಹದೇವಪ್ಪ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಮಾಡಿದವರು ನಾವು. ಹೀಗಾಗಿ ಅದರ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಈ ಯೋಜನೆಯಲ್ಲಿ ಪ್ರತಾಪ್ ಸಿಂಹ ಅಥವಾ ಬಿಜೆಪಿಯ ಯಾವುದೇ ನಾಯಕರ ಪಾತ್ರವಿಲ್ಲ. ಸುಮ್ಮನೆ ನಾವೇ ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದಿದ್ದರು.

118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 6 ಮುಖ್ಯ ಕ್ಯಾರೇಜ್‌ವೇ ಲೇನ್‌ಗಳನ್ನು ಮತ್ತು ಎರಡೂ ಬದಿಗಳಲ್ಲಿ 2 ಸರ್ವಿಸ್ ರಸ್ತೆ ಲೇನ್‌ಗಳನ್ನು ಒಳಗೊಂಡಿದೆ. ಇದನ್ನು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ8,478 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 10-ಲೇನ್ ಯೋಜನೆಯಾಗಿದ್ದು, ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಬೆಂಗಳೂರಿನಿಂದ ನಿಡಗಟ್ಟಾ ಮತ್ತು ನಿಡಗಟ್ಟಾದಿಂದ ಮೈಸೂರಿಗೆ. ಮೊದಲ ಹಂತದಲ್ಲಿ, 52 ಕಿಮೀ ಗ್ರೀನ್‌ಫೀಲ್ಡ್ ಇದ್ದು, ಐದು ಬೈಪಾಸ್‌ಗಳನ್ನು ಒಳಗೊಂಡಿದೆ. ಈ ಬೈಪಾಸ್ ಬೆಂಗಳೂರಿನ ಟ್ರಾಫಿಕ್ ಬ್ಲಾಕ್‌ಗಳನ್ನು ಕಡಿಮೆ ಮಾಡುತ್ತದೆ.

ಎಕ್ಸ್‌ಪ್ರೆಸ್‌ವೇ ಐದು ಮುಖ್ಯ ಬೈಪಾಸ್‌ಗಳನ್ನು ಹೊಂದಿದೆ. ಅವುಗಳೆಂದರೆ ಶ್ರೀರಂಗಪಟ್ಟಣ ಬೈಪಾಸ್, ಮಂಡ್ಯ ಬೈಪಾಸ್, ಬಿಡದಿ ಬೈಪಾಸ್ ಗಳು. ರಾಮನಗರ, ಚನ್ನಪಟ್ಟಣ ಹಾಗೂ ಮದ್ದೂರು ಬೈಪಾಸ್ 22 ಕಿಲೋಮೀಟರ್ ಉದ್ದದ ವಿಸ್ತರಣೆಯಾಗಿದೆ. ಸದ್ಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ದೊರೆಯಲಿದೆ. ಜನರ ತೆರಿಗೆ ಹಣದಿಂದ ಈ ಹೆದ್ದಾರಿ ನಿರ್ಮಾಣ ಆಗಿದ್ದು, ರಾಜಕೀಯ ಪಕ್ಷಗಳ ಈ ಕ್ರೆಡಿಟ್ ವಾರ್ ನಿಲ್ಲುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.