ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ
ಕನ್ನಡ ಸುದ್ದಿ  /  ಕರ್ನಾಟಕ  /  ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ

ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ

ಬಂಟ್ವಾಳದ ಇರಾಕೋಡಿ ರಹಿಮಾನ್ ಹತ್ಯೆ ಕೇಸ್‌ ಪ್ರವೀಣ್ ನೆಟ್ಟಾರ್ ಕೊಲೆ ಮಾದರಿಯಲ್ಲೇ ನಡೆಯಿತಾ, ಹಂತಕರು ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ಕೊಲೆ ಮಾಡಿದಾರಾ? ಇಲ್ಲಿದೆ ಆ ವಿವರ (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ ಎಂಬ ಸಂದೇಹ ವ್ಯಕ್ತವಾಗಿದೆ (ಕಡತ ಚಿತ್ರ)
ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ ಎಂಬ ಸಂದೇಹ ವ್ಯಕ್ತವಾಗಿದೆ (ಕಡತ ಚಿತ್ರ)

ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಇರಾ ಕೋಡಿ ಎಂಬಲ್ಲಿ ಮೇ 27ರಂದು ಅಪರಾಹ್ನ 3.30ರ ಸುಮಾರಿಗೆ ನಡೆದ ಮರಳು ಸಾಗಾಟದ ಪಿಕಪ್ ವಾಹನ ಚಾಲಕ, ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (33) ಅವರ ಹತ್ಯೆಯ ಹಿಂದೆ ಪಕ್ಕಾ ವೃತ್ತಿಪರ ಹಂತಕರು ಕೈಯಾಡಿಸಿದ್ದಾರೆಯೇ? ಕೊಲೆ ಮಾಡುವ ಮೊದಲು ಕೆಲವಾರು ದಿನಗಳ ವ್ಯವಸ್ಥಿತ ಯೋಜನೆ ರೂಪಿಸಲಾಗಿದೆಯೇ ಎಂಬ ಅಂಶ ಇದೀಗ ಚರ್ಚೆಗೆ ಬರುತ್ತಿದೆ. ಕೊಲೆ ನಡೆದ ರೀತಿ ಇಂಥದೊಂದು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರವೀಣ್ ನೆಟ್ಟಾರ್ ಕೊಲೆ ಮಾದರಿ

2022 ರ ಜುಲೈ 26ರಂದು ಮಂಗಳವಾರ ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಅತ್ಯಂತ ವ್ಯವಸ್ಥಿತ ಯೋಜನೆಯ ಮೂಲಕ ನಡೆದಿತ್ತು ಎಂಬುದು ಎನ್ಐಎ ತನಿಖೆಯಿಂದ ಬೆಳಕಿಗೆ ಬಂದಿತ್ತು. ಪ್ರವೀಣ್ ನೆಟ್ಟಾರ್ ಚಲನವಲನಗಳನ್ನು ಪೂರ್ತಿ ಅಧ್ಯಯನ ಮಾಡಿ ಸಮಯ, ಸಂದರ್ಭ ಮೊದಲೇ ನಿಗದಿ ಮಾಡಿ ದಾಳಿ ಮಾಡಲಾಗಿತ್ತು. ಕೊಲೆಗೆ ಕೆಲ ದಿನಗಳ ಮೊದಲು ಹಂತಕರಿಗೆ ಪುತ್ತೂರು ಹೊರವಲಯದ ಕೇಂದ್ರವೊಂದರಲ್ಲಿ ತರಬೇತಿ ಕೂಡ ನೀಡಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅದೇ ರೀತಿ ಅಬ್ದುಲ್ ರಹಿಮಾನ್ ಕೊಲೆಯ ಹಿಂದೆಯೂ ಇಂಥದೊಂದು ಪ್ರೊಫೆಶನಲ್ ಐಡಿಯಾ ಕೆಲಸ ಮಾಡಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಪ್ರವೀಣ್ ನೆಟ್ಟಾರ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಅಮಾಯಕ ಯುವಕನಾಗಿದ್ದರು. ಆದರೂ ಅವರನ್ನು ಟಾರ್ಗೆಟ್ ಮಾಡಿ ಪ್ಲ್ಯಾನ್ ರೂಪಿಸಿ ಕೊಲೆ ಮಾಡಲಾಗಿತ್ತು. ೩ ವಾರಗಳ ಹಿಂದೆ ಇದೇ ಬೆಳ್ಳಾರೆ ಠಾಣೆ ವ್ಯಾಪ್ತಿಯ ಕಳಂಜದಲ್ಲಿ ನಡೆದ ಮುಸ್ಲಿಂ ಯುವಕ ಮಸೂದ್ನ ಕೊಲೆ ನಡೆದ ಬಳಿಕ ಈ ಕೊಲೆ ವ್ಯವಸ್ಥಿತವಾಗಿ ನಡೆದಿತ್ತು.

ಪ್ರಸ್ತುತ ಜಿಲ್ಲೆಯನ್ನೇ ತಲ್ಲಣಗೊಳಿಸಿದ ಸುಹಾಸ್ ಶೆಟ್ಟಿ ಕೊಲೆ ನಡೆದ 27 ದಿನಗಳ ಬಳಿಕ ಅಬ್ದುಲ್ ರಹಿಮಾನ್ ಕೊಲೆ ನಡೆದಿದ್ದು, ಇದರ ಹಿಂದೆ ನಡೆದಿರಬಹುದಾದ ಪ್ಲ್ಯಾನ್ ಬಗ್ಗೆ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಅಬ್ದುಲ್ ರಹಿಮಾನ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಅಮಾಯಕ ಎಂಬುದು ಈಗಾಗಲೇ ಬೆಳಕಿಗೆ ಬಂದಿದೆ. ಆದರೂ ಸುಲಭ ತುತ್ತನ್ನು ಟಾರ್ಗೆಟ್ ಮಾಡಿ ಪ್ಲ್ಯಾನ್ ರೂಪಿಸಿ ಕೊಲೆ ಮಾಡಲಾಯಿತೇ ಎಂಬ ಪ್ರಶ್ನೆ ಮೂಡುತ್ತಿದೆ.

ಅದೇ ರೀತಿ 2017ರ ಜು. 4ರಂದು ರಾತ್ರಿ 9.30ಕ್ಕೆ ಬಿ.ಸಿ.ರೋಡಿನಲ್ಲಿ ದುಷ್ಕರ್ಮಿಗಳಿಂದ ಲಾಂಡ್ರಿ ಮಾಲೀಕ ಶರತ್ ಮಡಿವಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ದುಷ್ಕರ್ಮಿಗಳು ಇದೇ ರೀತಿ ಬಂದು ಮಾರಕಾಯುಧಗಳಿಂದ ಇರಿದಿದ್ದರು. ಮೂರು ದಿನಗಳಲ್ಲಿ ಶರತ್ ಮೃತಪಟ್ಟಿದ್ದರು. ಬಳಿಕ ಬಂಟ್ವಾಳ ಹಿಂದೆಂದೂ ಕಂಡು ಕೇಳರಿಯದ ಸುದೀರ್ಘ ಅವಧಿಯ ನಿಷೇಧಾಜ್ಞೆಯ ಪರ್ವವನ್ನು ಕಂಡಿತ್ತು.

ಕರೆಸಿ ಕೊಲೆ ಮಾಡಲಾಯಿತೇ?

ಟೆಂಪೊ ಚಾಲಕ ರಹಿಮಾನ್ ಎಲ್ಲರಿಗೂ ಬೇಕಾದ ವ್ಯಕ್ತಿ. ‘ಪೊಯ್ಯೆ ಬೋಡು’ (ಮರಳು ಬೇಕು) ಎಂದು ಕರೆ ಬಂದರೆ ಸಾಕು, ಜಾಗ ಎಲ್ಲಿ ಎಂದು ಕೇಳಿ ಹೊರಟುಬಿಡುತ್ತಾರೆ. ಯಾವುದೇ ಧರ್ಮ, ಜಾತಿ ನೋಡಿದವರಲ್ಲ. ಅವರ ಗ್ರಾಹಕರಲ್ಲಿ ಎಲ್ಲ ಧರ್ಮದವರೂ ಇದ್ದರು.

ಮೇ 27ರಂದು ಮಧ್ಯಾಹ್ನ ಅವರಿಗೆ ಕರೆ ಬಂದಿದೆ. ಕೂಡಲೇ ಹೊರಟ ರಹಿಮಾನ್, ಅಪರಾಹ್ನ 3 ರಿಂದ 3.30ರ ಅವಧಿಯಲ್ಲಿ ಕಲಂದರ್ ಶಾಫಿಯನ್ನು ಕರೆದುಕೊಂಡು ಹೊಳೆ ಬದಿಯಿಂದ ಮರಳು ಲೋಡ್ ಮಾಡಿ, ಕುರಿಯಾಳ ಗ್ರಾಮದ ಇರಾಕೋಡಿ ರಾಜೀವಿ ಎಂಬವರ ಮನೆ ಬಳಿ ಇಳಿಸಲು ಬಂದಿದ್ದಾರೆ.

ಸುಮಾರು 15 ಜನರ ಗುಂಪು ಸುತ್ತುವರಿದಾಗಲೇ ಅಪಾಯದ ಮುನ್ಸೂಚನೆ ರೆಹಮಾನ್ಗೆ ಸಿಕ್ಕಿದೆ. ಯೋಚನೆಗೂ ಅವಕಾಶವಿಲ್ಲದಂತೆ ಚಾಲಕನ ಸೀಟಿನಲ್ಲಿದ್ದ ರಹಿಮಾನ್ ಅವರನ್ನು ಹೊರಕ್ಕೆಳೆದವರೇ ಯದ್ವಾತದ್ವಾ ತಲವಾರಿನಿಂದ ಕಡಿದಿದ್ದಾರೆ.

ತಡೆಯಲು ಹೋದ ಶಾಫಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ರಹಿಮಾನ್ ಅವರನ್ನು ಆ ಜಾಗಕ್ಕೆ ಕರೆಸಿ ಕೊಲೆ ಮಾಡಲಾಯಿತೇ ಅಥವಾ ಅವರು ಅಲ್ಲಿಗೆ ಬರುವುದು ಗೊತ್ತಿದ್ದು ಕೊಲೆ ಮಾಡಲಾಯಿತೇ ಎಂಬ ಪ್ರಶ್ನೆ ಮೂಡಿದೆ. ಹಂತಕರು ರಹಿಮಾನ್ ಅವರನ್ನು ಫೋಲೋ ಮಾಡುತ್ತಲೇ ಇದ್ದಿರಬೇಕೆಂಬ ಶಂಕೆಯೇ ಬಲವಾಗುತ್ತಿದೆ.

ನಿರ್ಜನ ಪ್ರದೇಶ ಟಾರ್ಗೆಟ್

2017ರಲ್ಲಿ ಅಶ್ರಫ್ ಕಲಾಯಿ ಎಂಬ ಆಟೊ ಚಾಲಕನನ್ನು ಬೆಂಜನಪದವು ಸಮೀಪದ ಕರಾವಳಿ ಸೈಟ್ ಎಂಬಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಬೈಕ್ ನಲ್ಲಿ ಬಂದ ಆರೋಪಿಗಳು ಅಶ್ರಫ್ ಹತ್ಯೆ ಮಾಡಿದ್ದರು. ಈ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಹತ್ಯೆಯ ಮಾದರಿ ಇದೇ ರೀತಿ ಇರುವ ವಿಚಾರದತ್ತಲೂ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. 2008ರಲ್ಲಿ ಇಕ್ಬಾಲ್ ಎಂಬಾತನನ್ನು ಬಾಡಿಗೆಂದು ಕರೆಸಿ ಪಚ್ಚಿನಡ್ಕ ಸಮೀಪದ ರಬ್ಬರ್ ತೋಟದಲ್ಲಿ ಹತ್ಯೆ ನಡೆಸಲಾಗಿತ್ತು. ಪ್ರವೀಣ್ ನೆಟ್ಟಾರ್ ಸೇರಿದಂತೆ ಈ ಎಲ್ಲ ಕೊಲೆ ಪ್ರಕರಣಗಳಲ್ಲೂ ಹಂತಕರು ನಿರ್ಜನ ಪ್ರದೇಶವನ್ನೇ ಆರಿಸಿದ್ದರು.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.