Bangalore Summer: ಬೆಂಗಳೂರಿಗರಿಗೆ ಈ ಬೇಸಿಗೆಯಲ್ಲೂ ಕಾಡಲಿದೆಯೇ ನೀರಿನ ಬವಣೆ, ಜಲಮಂಡಳಿ, ಐಐಎಸ್ಸಿ ಅಧ್ಯಯನ ಬಹಿರಂಗಪಡಿಸಿದೆ ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Summer: ಬೆಂಗಳೂರಿಗರಿಗೆ ಈ ಬೇಸಿಗೆಯಲ್ಲೂ ಕಾಡಲಿದೆಯೇ ನೀರಿನ ಬವಣೆ, ಜಲಮಂಡಳಿ, ಐಐಎಸ್ಸಿ ಅಧ್ಯಯನ ಬಹಿರಂಗಪಡಿಸಿದೆ ಕಾರಣ

Bangalore Summer: ಬೆಂಗಳೂರಿಗರಿಗೆ ಈ ಬೇಸಿಗೆಯಲ್ಲೂ ಕಾಡಲಿದೆಯೇ ನೀರಿನ ಬವಣೆ, ಜಲಮಂಡಳಿ, ಐಐಎಸ್ಸಿ ಅಧ್ಯಯನ ಬಹಿರಂಗಪಡಿಸಿದೆ ಕಾರಣ

Bangalore Summer: ಬೆಂಗಳೂರಿನಲ್ಲಿ ನಡೆಸಲಾದ ಇತ್ತೀಚಿನ ಅಧ್ಯಯನವು ನೀರಿನ ಕೊರತೆಯ ಅಪಾಯದಲ್ಲಿರುವ 80 ವಾರ್ಡ್ ಗಳನ್ನು ಗುರುತಿಸಿದೆ. ಇದಲ್ಲದೇ ಬೆಂಗಳೂರು ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಕೊಂಚ ಕಾಡಬಹುದು.

ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಈ ಬಾರಿಯೂ ನೀರಿನ ಸಮಸ್ಯೆ ಎದುರಾಗಬಹುದು.
ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಈ ಬಾರಿಯೂ ನೀರಿನ ಸಮಸ್ಯೆ ಎದುರಾಗಬಹುದು. (PTI)

Bangalore Summer: ರಾಜಧಾನಿ ನಗರಿ ಬೆಂಗಳೂರಿನಲ್ಲಿ ಈ ಬೇಸಿಗೆಯಲ್ಲೂ ನೀರಿನ ಬವಣೆ ಉಂಟಾಗುವ ಆತಂಕ ಎದುರಾಗಿದೆ. ಬೆಂಗಳೂರಿನ ಕೆಲವು ಭಾಗದಲ್ಲಿ ಒಂದಷ್ಟು ನೀರಿನ ಬವಣೆ ಎದುರಾದರೆ, ಇನ್ನಷ್ಟು ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆಯೇ ಎದುರಾಗಲಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಬೆಂಗಳೂರಿನ ಹೆಚ್ಚಿನ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಒಂದು ತಿಂಗಳ ಕಾಲವಂತೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನೀರು ಸರಬರಾಜಿಗೆ ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಈ ಬಾರಿಯೂ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಂಡಿರುವ ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದ್ದು, ಜನತೆ ಸಹಕರಿಸಬೇಕು ಎಂದು ಜಲಮಂಡಳಿ ಮನವಿಯನ್ನೂ ಮಾಡಿಕೊಂಡಿದೆ.

ಬೆಂಗಳೂರಿನ ಮಹದೇವಪುರ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಕುಸಿಯುವ ನಿರೀಕ್ಷೆಯಿದ್ದು, ಈ ಬೇಸಿಗೆಯಲ್ಲಿ ಬೆಂಗಳೂರು ಮತ್ತೊಂದು ನೀರಿನ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಅಂತರ್ಜಲವನ್ನು ಅವಲಂಬಿಸುವುದನ್ನು ತಪ್ಪಿಸಲು ಮತ್ತು ಪರ್ಯಾಯ ನೀರಿನ ಮೂಲಗಳನ್ನು ಪರಿಗಣಿಸುವಂತೆ ಸಲಹೆ ನೀಡಿದೆ.

ಅಧ್ಯಯನ ಏನು ಹೇಳುತ್ತದೆ

ಬೆಂಗಳೂರು ನಗರವು ಬೇಸಿಗೆಯಲ್ಲಿ ನೀರಿನ ಕೊರತೆಯ ಅಪಾಯಗಳನ್ನು ಮೌಲ್ಯಮಾಪನ ಮಾಡಲು ಇತ್ತೀಚೆಗೆ ನಡೆಸಿದ ವೈಜ್ಞಾನಿಕ ಅಧ್ಯಯನಕ್ಕಾಗಿ ಬೆಂಗಳೂರು ಜಲಮಂಡಳಿ 110 ಗ್ರಾಮಗಳು ಸೇರಿದಂತೆ 80 ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ಭಾಗಗಳು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ತೀವ್ರ ನೀರಿನ ಕೊರತೆಯ ಗಮನಾರ್ಹ ಅಪಾಯದಲ್ಲಿದೆ ಎಂದು ಗುರುತಿಸಲಾಗಿದ್ದು. ಈ ಪ್ರದೇಶಗಳು ಬೇಸಿಗೆ ವೇಳೆ ಪರ್ಯಾಯ ನೀರಿನ ಪರಿಹಾರಗಳ ತುರ್ತು ಅಗತ್ಯವನ್ನು ಎದುರಿಸುತ್ತಿವೆ.

ಪಿಟಿಐ ಜೊತೆ ಮಾತನಾಡಿದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್‌ ಮನೋಹರ್, "ನಿವಾಸಿಗಳಿಗೆ, ವಿಶೇಷವಾಗಿ ಹೆಚ್ಚಿನ ಅಪಾಯದ ವಾರ್ಡ್‌ಗಳಲ್ಲಿ ವಾಸಿಸುವವರಿಗೆ ಅಂತರ್ಜಲದ ಬಳಕೆಯಿಂದ ಕಾವೇರಿ ನೀರಿನ ಸಂಪರ್ಕಕ್ಕೆ ಬದಲಾಗುವಂತೆ ನಾವು ಮನವಿ ಮಾಡುತ್ತೇವೆ. ಕಾವೇರಿ 5 ನೇ ಹಂತದ ಯೋಜನೆಯು ನೀರು ಸರಬರಾಜನ್ನು ಹೆಚ್ಚಿಸಿದೆ, ಬೆಂಗಳೂರಿನ ಬೆಳೆಯುತ್ತಿರುವ ಜನಸಂಖ್ಯೆಗೆ ಹೆಚ್ಚು ಸುಸ್ಥಿರ ಆಯ್ಕೆಯನ್ನು ಒದಗಿಸುತ್ತದೆ.

ಆದರೆ ನೀರಿನ ಸಮಸ್ಯೆಯನ್ನು ಅರಿಯುವ ಉದ್ದೇಶದಿಂದಲೇ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಹಭಾಗಿತ್ವದಲ್ಲಿ ಅಧ್ಯಯನವನ್ನು ನಡೆಸಲಾಯಿತು. ಈ ಸಂಶೋಧನೆಯು ಬೇಸಿಗೆಯ ತಿಂಗಳುಗಳಲ್ಲಿ ಬೆಂಗಳೂರಿನ ನೀರಿನ ಸವಾಲುಗಳನ್ನು ಎದುರಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ ಎನ್ನುತ್ತಾರೆ.

ಅಧ್ಯಯನ ಆಧರಿತ ಕಾರ್ಯಯೋಜನೆ

"ಈ ಅಧ್ಯಯನವು ನಗರಕ್ಕೆ ಸುಸ್ಥಿರ ನೀರಿನ ನಿರ್ವಹಣೆಯನ್ನು ಉತ್ತೇಜಿಸುವ ಮಾರ್ಗೋಪಾಯಗಳನ್ನು ಸೂಚಿಸುತ್ತದೆ. ವೈಜ್ಞಾನಿಕ ಸಂಶೋಧನೆಯನ್ನು ಬಳಸುವ ಮೂಲಕ, ನೀರಿನ ಕೊರತೆಯನ್ನು ನಿಭಾಯಿಸಲು ಮತ್ತು ದೀರ್ಘಕಾಲೀನ ಪರಿಹಾರಗಳನ್ನು ಕಾರ್ಯಗತಗೊಳಿಸಲು ಮಂಡಳಿಯಿಂದಲೂ ಉತ್ತಮವಾಗಿ ಸಜ್ಜುಗೊಂಡಿದ್ದೇವೆ" ಎನ್ನುವುದು ಅವರ ವಿವರಣೆ.

ನೀರಿಗಾಗಿ ಕೊಳವೆಬಾವಿಗಳನ್ನು ಹೆಚ್ಚು ಅವಲಂಬಿಸಿರುವ ಬೆಂಗಳೂರಿನಾದ್ಯಂತ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಕುಸಿದಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಅಂದಾಜು ಪ್ರತಿದಿನ 800 ಮಿಲಿಯನ್ ಲೀಟರ್ ಹೊರತೆಗೆಯಲಾಗುತ್ತದೆ. ಕೇಂದ್ರ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ 5 ಮೀಟರ್‌ನಷ್ಟು ಕುಸಿಯುವ ನಿರೀಕ್ಷೆಯಿದ್ದರೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ 10 ರಿಂದ 15 ಮೀಟರ್‌ಗಳಷ್ಟು ಕುಸಿಯುವ ಸಾಧ್ಯತೆಯಿದೆ. ಬೆಂಗಳೂರು ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಲ್ಲಿ, ಕುಸಿತವು 20 ರಿಂದ 25 ಮೀಟರ್‌ಗಳಷ್ಟು ತೀವ್ರವಾಗಿರಲಿದೆ ಎನ್ನುತ್ತಾರೆ ಅವರು.

ವಿಶೇಷ ಕಾರ್ಯಪಡೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಐಐಎಸ್ಸಿ ವಿಜ್ಞಾನಿಗಳು ಮತ್ತು ರಾಜ್ಯ ಮತ್ತು ಕೇಂದ್ರ ಅಂತರ್ಜಲ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ನಗರದಲ್ಲಿ ಭವಿಷ್ಯದ ನೀರಿನ ಬಿಕ್ಕಟ್ಟನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಸುಸ್ಥಿರ ಕ್ರಿಯಾ ಯೋಜನೆಯನ್ನು ರೂಪಿಸಲು ಕಾರ್ಯಪಡೆಯು ಆರು ತಿಂಗಳ ಕಾಲ ಬೆಂಗಳೂರಿನ ನೀರು ಸರಬರಾಜು ಮತ್ತು ಅಂತರ್ಜಲ ದತ್ತಾಂಶದ ಆಳವಾದ ವಿಶ್ಲೇಷಣೆ ನಡೆಸಿ ಅಧ್ಯಯನದ ವರದಿ ಆಧರಿಸಿಯೇ ಜಲಮಂಡಳಿ ಕಾರ್ಯತಂತ್ರ ರೂಪಿಸಲಿದೆ.

Whats_app_banner