Reservoirs Water Level: ಕರ್ನಾಟಕದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತ ರಾಜ್ಯಗಳಲ್ಲೂ ನೀರಿನ ಸಮಸ್ಯೆ, ಜಲಾಶಯಗಳ ಮಟ್ಟ ತೀವ್ರ ಕುಸಿತ
ಮಳೆ ಕೊರತೆಯಿಂದ ಜಲಾಶಯಗಳು ತುಂಬದೇ ಈ ಬೇಸಿಗೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಈ ಕುರಿತು ವಿವರ ಇಲ್ಲಿದೆ.
ಬೆಂಗಳೂರು: ಬೇಸಿಗೆಯ ಬಿರುಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ ನೀರಿನ ಸಮಸ್ಯೆ ಕಾಡುತ್ತಿದೆ. ಅದು ಬೆಂಗಳೂರು, ಕರ್ನಾಟಕದಲ್ಲಿ ಮಾತ್ರ ನೀರಿನ ಸಮಸ್ಯೆಯಾಗಿಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲೂ ನೀರಿನ ಕೊರತೆ ಅತಿಯಾಗಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ ಗಣನೀಯ ಕುಸಿತ ಕಂಡಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಬೇಸಿಗೆಯ ಅವಧಿ ಇನ್ನೂ ಎರಡು ತಿಂಗಳು ಇರುವಾಗ ಪರಿಸ್ಥಿತಿ ಇನ್ನೂ ಕಷ್ಟಕರ ಸನ್ನಿವೇಶಕ್ಕೆ ಹೋಗಲಿದೆ ಎನ್ನುವ ಮುನ್ನಚ್ಚರಿಕೆಯನ್ನೂ ನೀಡಲಾಗಿದೆ. ಈ ನಡುವೆ ಕೇಂದ್ರ ಜಲ ಆಯೋಗವೂ ಭಾರತದ ಜಲಾಶಯಗಳ ನೀರಿನ ಸ್ಥಿತಿಗತಿಯ ಅಂಕಿ ಅಂಶಗಳನ್ನೊಳಗೊಂಡ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ.
ದಕ್ಷಿಣ ಭಾರತದಲ್ಲಿನ ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಪ್ರಮಾಣ ಶೇ.23 ರಷ್ಟಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ. 17 ರಷ್ಟು ಕಡಿಮೆ. ಕಳೆದ ಹತ್ತು ವರ್ಷಗಳಲ್ಲಿನ ಜಲಾಶಯಗಳ ನೀರಿನ ಸ್ಥಿತಿಗತಿಯನ್ನು ಗಮನಿಸಿದರೆ ಇದು ಶೇ.9ರಷ್ಟು ಕಡಿಮೆ. ದಕ್ಷಿಣ ಮಾತ್ರವಲ್ಲದೇ ಪಶ್ಚಿಮ, ಪೂರ್ವ, ಉತ್ತರ ಭಾಗದ ಜಲಾಶಯಗಳಲ್ಲೂ ಇದೇ ಸ್ಥಿತಿಯಿದೆ.
ಯಾವ ಜಲಾಶಯದಲ್ಲಿ ಎಷ್ಟು?
ಕರ್ನಾಟಕದ ತುಂಗಭದ್ರಾ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಬೇರ್ಪಡಿಸುವ ನಾಗಾರ್ಜುನ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿಎ. ತಮಿಳುನಾಡಿನ ಮೆಟ್ಟೂರು, ಆಂಧ್ರಪ್ರದೇಶ- ತೆಲಂಗಾಣ ನಡುವಿನ ಶ್ರೀಶೈಲಂ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಸಾಮರ್ಥ್ಯಕ್ಕಿಂತ ಶೇ. 30 ಕಡಿಮೆ ಇದೆ ಎನ್ನುವುದನ್ನು ಅಂಕಿ ಅಂಶಗಳೇ ಹೇಳುತ್ತಿವೆ.
ಕರ್ನಾಟಕದಲ್ಲಿ ಲಿಂಗನಮಕ್ಕಿ ಜಲಾಶಯ ಶೇ. 22 ರಷ್ಟು ಭರ್ತಿಯಾಗಿದ್ದರೆ,. ಸೂಪಾ ಆಣೆಕಟ್ಟಿನಲ್ಲಿ ಶೇ. 36 ರಷ್ಟು ನೀರಿದೆ. ಲಿಂಗನಮಕ್ಕಿ ಜಲಾಶಯ 4.3 ಲಕ್ಷ ಕೋಟಿ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಸುಪಾ ಜಲಾಶಯದಲ್ಲಿ 4.1 ಲಕ್ಷ ಕೋಟಿ ಲೀಟರ್ ನೀರು ಸಂಗ್ರಹಿಸಬಹುದು.
ಆಂಧ್ರ ತೆಲಂಗಾಣದ ಶ್ರೀಶೈಲಂ ಜಲಾಶಯದಲ್ಲಿ 6 ಲಕ್ಷ ಕೋಟಿ ಲೀಟರ್ ಸಂಗ್ರಹಕ್ಕೆ ಅವಕಾಶವಿದ್ದು. ಇಲ್ಲಿಯೂ ಶೇ.15ರಷ್ಟು ನೀರಿದೆ. ಅದೇ ರೀತಿ ನಾಗಾರ್ಜುನ ಸಾಗರ ಜಲಾಶಯದಲ್ಲಿ 5.1ಲಕ್ಷ ಕೋಟಿ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಇಲ್ಲಿ ಬರೀ ಶೇ. 4ರಷ್ಟು ನೀರು ಲಭ್ಯವಿದೆ.
ತಮಿಳುನಾಡಿನ ಮೆಟ್ಟೂರು ಜಲಾಶಯವು 2 .65 ಲಕ್ಷ ಲೀಟರ್ ಸಂಗ್ರಹದ ಸಾಮರ್ಥ್ಯ ಹೊಂದಿದ್ದರೂ ಇಲ್ಲಿಯೂ ಬರೀ ಶೇ.28ರಷ್ಟು ನೀರಿದೆ ಎಂದು ತಿಳಿಸಲಾಗಿದೆ.
ಆಯೋಗದ ವರದಿ
ಭಾರತದ 150 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 178.784 ಬಿಸಿಎಂ ಅಂದರೆ ಶತಕೋಟಿ ಘನ ಮೀಟರ್‌ಗಳು. ಈಗಿನ ಸನ್ನಿವೇಶದಲ್ಲಿ ಜಲಾಶಯಗಳ ಒಟ್ಟು ಸಾಮರ್ಥ್ಯದ ಶೇ 36ರಷ್ಟು ಮಾತ್ರ ನೀರು ಲಭ್ಯವಿದೆ. ಇದು 64.606 ಬಿಸಿಎಂನಷ್ಟು ನೀರು ಲಭ್ಯತೆ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಭಾರತದ ಪ್ರಮುಖ 150 ಜಲಾಶಯಗಳಲ್ಲಿ 76.991 ಬಿಸಿಎಂನಷ್ಟು ನೀರು ಲಭ್ಯ ಅಂದರೆ ಶೇ. 45 ರಷ್ಟು ನೀರು ಸಂಗ್ರಹವಿತ್ತು ಎಂದು ಆಯೋಗವು ನೀಡಿರುವ ವಿವರದಲ್ಲಿ ತಿಳಿಸಿದೆ.
ಕರ್ನಾಟಕದಲ್ಲಂತೂ ಲಿಂಗನಮಕ್ಕಿ. ಕೃಷ್ಣರಾಜಸಾಗರ, ಕಬಿನಿ, ಭದ್ರಾ, ತುಂಗಭದ್ರಾ, ಆಲಮಟ್ಟಿ ಸಹಿತ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಬಹಳಷ್ಟು ಕುಸಿದಿದೆ. ಮುಂಗಾರಿನಲ್ಲಿ ನಿರೀಕ್ಷೆಯಷ್ಟು ಮಳೆಯಾಗದೇ ಇದ್ದುದ್ದು, ಜಲಾಶಯಗಳು ತುಂಬದೇ ಇದ್ದುದರಿಂದ ನೀರಿನ ಪ್ರಮಾಣದಲ್ಲಿ ಕುಸಿತವಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನೀರಿನ ಸಮಸ್ಯೆ ಇದೇ ಕಾರಣಕ್ಕೆ ಕಂಡು ಬಂದಿದೆ ಎನ್ನುವುದು ಆಯೋಗದ ವಿವರಣೆ.
ನಗರೀಕರಣದಿಂದಾಗಿ ನೀರಿನ ಬೇಡಿಕೆ ಎಲ್ಲೆಡೆ ಹೆಚ್ಚಿದೆ. ಕೆರೆಗಳೂ ಹಲವು ಕಡೆ ಬತ್ತಿ ಹೋಗಿವೆ. ಅಂತರ್ಜಲ ಪ್ರಮಾಣದಲ್ಲೂ ಕುಸಿತ ಕಂಡಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಬೇಸಿಗೆಯಲ್ಲಿ ಯೋಜಿತವಾಗಿಯೇ ನೀರಿನ ನಿರ್ವಹಣೆ ಮಾಡುವ ಅನಿವಾರ್ಯತೆಯಿದೆ ಎಂದು ಆಯೋಗವೂ ಸೂಚನೆ ನೀಡಿದೆ.