ಪ್ರಿಯಾಂಕ್ ಖರ್ಗೆ ಹಾಲು ಕುಡಿದರೇನು? ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆಂದ ಡಿಸಿಎಂ ಡಿಕೆ ಶಿವಕುಮಾರ್- ಏನಿದು ಸದನ ಸ್ವಾರಸ್ಯ
ಸದನ ಸ್ವಾರಸ್ಯ: ವಿಧಾನ ಪರಿಷತ್‌ನ ಕಲಾಪದ ವೇಳೆ ಸದಸ್ಯ ಟಿಎಸ್ ಶರವಣ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಮಾತುಕತೆ ಕಾವೇರಿತು. ಹಾಲು- ನೀರಿನ ಹೇಳಿಕೆ ಹಿನ್ನೆಲೆಯಲ್ಲಿ, ಚರ್ಚೆಯ ಕಾವು ತಣಿಸಲು ಪ್ರಯತ್ನಿಸಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಹಾಲು ಕುಡಿದರೇನು? ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆ ಎಂದು ಹೇಳಿದರು. ಏನಿದು ಸದನ ಸ್ವಾರಸ್ಯ.

ಬೆಂಗಳೂರು: ವಿಧಾನಮಂಡಲದಲ್ಲಿ ಬಜೆಟ್ ಅಧಿವೇಶನದ ಕಲಾಪ ಮುಂದುವರಿದಿದೆ. ವಿಧಾನ ಪರಿಷತ್ ಹಾಗೂ ವಿಧಾನ ಸಭೆಗಳ ಕಲಾಪ ಅನೇಕ ಸಂದರ್ಭಗಳಲ್ಲಿ ಬಹಳ ಕುತೂಹಲಕರವಾಗಿರುತ್ತದೆ. ಸ್ವಾರಸ್ಯಕರ ಚರ್ಚೆಗೂ ವೇದಿಕೆ ಒದಗಿಸುತ್ತದೆ. ಹಾಸ್ಯ ಪ್ರಸಂಗಗಳಿಗೂ ಸಾಕ್ಷಿಯಾಗುತ್ತದೆ. ಅಂಥದ್ದೇ ಒಂದು ಸನ್ನಿವೇಶ ನಿನ್ನೆ (ಶುಕ್ರವಾರ ಮಾರ್ಚ್ 14) ವಿಧಾನಪರಿಷತ್ ಕಲಾಪದ ವೇಳೆ ನಡೆಯಿತು.
ಶರವಣ ಹಾಲು -ನೀರು ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಗರಂ
ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಸೇರಿ ವಿವಿಧ ಸೇವೆಗಳಿಗೆ ಪಾವತಿಸಿದ್ದ ಹಣದ ಮಾಹಿತಿ ಬಹಿರಂಗಪಡಿಸದ ಕರ್ನಾಟಕ ಸರ್ಕಾರದ ನಡೆ ಶುಕ್ರವಾರವೂ ವಿಧಾನ ಪರಿಷತ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಟೀಕೆಗೂ ಗುರಿಯಾಯಿತು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಟಿ.ಎಸ್. ಶರವಣ ಈ ವಿಚಾರ ಪ್ರಸ್ತಾಪಿಸಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಯ ಮೌಲ್ಯಮಾಪನಕ್ಕೆ ಹಲವು ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಆದರೆ, ಎರಡು ಸಂಸ್ಥೆಗಳ ಮಾಹಿತಿಯನ್ನು ನೀಡದೆ ಮುಚ್ಚಿಡಲಾಗಿದೆ. ರೈಟ್ ಪೀಪಲ್ ಸಂಸ್ಥೆಗೆ ಸರ್ಕಾರ ಪಾವತಿಸಿದ 9.25 ಕೋಟಿ ರೂಪಾಯಿ ಮಾಹಿತಿಯನ್ನೂ ನೀಡಿಲ್ಲ. ಸಾರ್ವಜನಿಕರ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು. ಆಗ ಶರವಣ ಅವರ ಮಾತಿಗೆ ಕಾಂಗ್ರೆಸ್ ಸದಸ್ಯ ಪುಟ್ಟಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿಮಗೆ ಯಾವ ವಿಷಯದ ಮಾಹಿತಿ ಬೇಕು ಎಂಬುದನ್ನು ಸ್ಪಷ್ಟವಾಗಿ ಕೇಳಿ ಎಂದು ಹೇಳಿದರು.
ಇವರಿಬ್ಬರ ಮಾತಿನ ನಡುವೆ ಮಧ್ಯ ಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೋಡಿದ ಟಿಎಸ್ ಶರವಣ ಅವರು, ‘ನೀವು ನಮಗಿಂತ ಬುದ್ಧಿವಂತರು. ನೀವು ಹಾಲು ಕುಡಿದಷ್ಟು, ನಾನು ನೀರು ಕುಡಿದಿಲ್ಲ’ ಎಂದು ಹೇಳಿದರು.
ಶರವಣ ಅವರ ಈ ಮಾತು ಪ್ರಿಯಾಂಕ್ ಖರ್ಗೆ ಅವರನ್ನು ಕೆರಳಿಸಿತು. ಕೂಡಲೇ, " ಏನ್ ಮಾಡೋದು, ಕೆಲವರಿಗೆ ದಲಿತರೊಬ್ಬರು ಶಾಸಕ, ಸಚಿವರಾಗುವುದು, ಕಂಪನಿ ತೆರೆಯುವುದು, ವ್ಯವಹಾರ ಮಾಡುವುದನ್ನು ಸಹಿಸಲು ಆಗುತ್ತಿಲ್ಲ. ಇದು ಅವರ ಅಸೂಯೆ, ಅಸಹನೆ ತೋರಿಸುತ್ತಿದೆ. ಇಂತಹ ಅಪಮಾನವನ್ನು ನಮ್ಮ ಕುಟುಂಬದ ವಿರುದ್ಧ ನಿರಂತರವಾಗಿ ಜೆಡಿಎಸ್–ಬಿಜೆಪಿ ಮಾಡುತ್ತಿವೆ ಎಂದು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.
ಶರವಣ ಸ್ಪಷ್ಟೀಕರಣಕ್ಕೂ ತಗ್ಗದ ಪ್ರಿಯಾಂಕ್ ಖರ್ಗೆ ಕೋಪ ಡಿಕೆಶಿ ಮಾತಿಗೆ ಕರಗಿತು ನೋಡಿ
ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿವಾಗುತ್ತಲೇ ಟಿಎಸ್ ಶರವಣ ಅವರು, "ಅನ್ಯಥಾ ಭಾವಿಸಬೇಡಿ. ಆ ಹೇಳಿಕೆಯನ್ನು ಬೇರೆ ರೀತಿ ಅರ್ಥ ಮಾಡಿಕೊಳ್ಳಬೇಕಾದ್ದಿಲ್ಲ. ನಾನು ಅದನ್ನು ಬೇರೆ ಅರ್ಥದಲ್ಲಿ ಹೇಳಿದ್ದಲ್ಲ. ಒಳ್ಳೆಯ ಭಾವನೆಯಿಂದ ಹೋಲಿಕೆ ನೀಡಿದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದಾಗ್ಯೂ ಪ್ರಿಯಾಂಕ್ ಖರ್ಗೆ ಕೋಪ ಕರಗಲಿಲ್ಲ. ಮಾತಿನ ಚಕಮಕಿ ಮುಂದುವರಿಯಿತು. ಆಗ ಉಪಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಅವರು ಮಧ್ಯ ಪ್ರವೇಶಿಸಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನಿಂತು ನೀಡಿದ ಹೇಳಿಕೆ ಕೇಳಿ ಪ್ರಿಯಾಂಕ್ ಖರ್ಗೆ ಕೋಪ ಕರಗಿದ್ದಲ್ಲದೆ, ಸದನ ದಂಗುಬಡಿದಂತಾಗಿ ನಗೆಗಡಲಲ್ಲಿ ತೇಲಿತು.
ಪ್ರಿಯಾಂಕ್ ಖರ್ಗೆ ಹಾಲು ಕುಡಿದರೆ ನಿಮಗೇನು, ನಾವು ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆ ಎಂದ ಡಿಸಿಎಂ
ಕಾಂಗ್ರೆಸ್ ಸದಸ್ಯರು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನಿಂತು ವಾಕ್ಸಮರ ಮುಂದುವರಿಯಿತು. ಈ ಹಂತದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಎಲ್ಲರನ್ನೂ ದಂಗುಬಡಿಸಿದ್ದಲ್ಲದೆ, ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.
‘ಪ್ರಿಯಾಂಕ್ ಖರ್ಗೆ ಹಾಲು ಕುಡಿದರೆ ನಿಮಗೇನು? ನಾವು ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆ. ಅದನ್ನು ಯಾರಾದರೂ ಏಕೆ ಪ್ರಶ್ನಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶರವಣ ಅವರನ್ನು ಲಘುವಾಗಿ ಛೇಡಿಸಿದರು. ಅಲ್ಲದೆ, ‘ನೀವು ಚಿನ್ನದ ವ್ಯಾಪಾರಿ ಅಲ್ಲವೆ, ಬೆಳ್ಳಿ, ತಾಮ್ರ ಹೆಚ್ಚು ಹಾಕುವಿರಿ ಎಂದು ಟೀಕೆ ಮಾಡಬಹುದೇ? ಎಲ್ಲರ ಬಗ್ಗೆ ಗೌರವ ಇರಬೇಕು. ಯಾರು–ಯಾರನ್ನೂ ಮನ ನೋಯಿಸುವ ಕೆಲಸ ಮಾಡಬಾರದು’ ಎಂದು ಶರವಣ ಅವರಿಗೆ ಕಿವಿಮಾತು ಹೇಳಿದರು. ಈ ನಡುವೆ ಹೇಳಿಕೆಗಳು ‘ಹೊಟ್ಟೆ ಪಾಡು, ವೃತ್ತಿಧರ್ಮ’ದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಜೆಡಿಎಸ್, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಸಭಾಪತಿ ಪೀಠದಲ್ಲಿದ್ದ ಎಸ್ ಎಲ್ ಬೋಜೇಗೌಡ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.


