Siddaramaiah: 'ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು'
ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು, ಕುಮಾರಸ್ವಾಮಿ ಏನು ಮಹಾನ್ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತುಮಕೂರು: ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು, ಇದನ್ನೇ ಕುಮಾರಸ್ವಾಮಿ ಅವರು ಆಗಾಗ ಕಾಂಗ್ರೆಸ್ ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎನ್ನುತ್ತಾರೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು, ಕುಮಾರಸ್ವಾಮಿ ಏನು ಮಹಾನ್ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಟ್ರೆಂಡಿಂಗ್ ಸುದ್ದಿ
ತುಮಕೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2006ರಲ್ಲಿ ಕುಮಾರಸ್ವಾಮಿ ಅವರು ಧರಂ ಸಿಂಗ್ ಅವರನ್ನು ಕಿತ್ತುಹಾಕಿ ಬಿಜೆಪಿ ಜೊತೆ ಹೋದರಲ್ಲ ಇದಕ್ಕೆ ಏನನ್ನಬೇಕು? ಬಿಜೆಪಿ ಜೊತೆ ಹೋಗಿದ್ದ ಕುಮಾರಸ್ವಾಮಿ ಅವರದ್ದು ಯಾವ ರೀತಿ ಜಾತ್ಯತೀತ ಪಕ್ಷ? ಸಿದ್ದರಾಮಯ್ಯ ಅವರ ಮಾತು ಕೇಳಿಕೊಂಡು ಸುರ್ಜೇವಾಲಾ ಅವರು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಬಿಜೆಪಿ ಜೊತೆ ಹೋಗಿದ್ದ ನಿಮ್ಮನ್ನು ಏನೆಂದು ಕರೆಯಬೇಕು ನೀವೇ ಹೇಳಿ ಕುಮಾರಸ್ವಾಮಿ ಅವರೇ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಾರೆ, ಕೊಟ್ಟ ಕುದುರೆ ಏರಲಾರದವ ವೀರನು ಅಲ್ಲ, ಶೂರನೂ ಅಲ್ಲ. ಇದು ಕುಮಾರಸ್ವಾಮಿ ಅವರಿಗೆ ಹೊಂದಿಕೆಯಾಗುತ್ತದೆ. ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಈಗ ನಮ್ಮ ಮೇಲೆ ಗೂಬೆ ಕೂರಿಸಲಿ ಎಂದು ನಾವು ನಿಮಗೆ ಅಧಿಕಾರ ನೀಡಿದ್ದಾ ಕುಮಾರಸ್ವಾಮಿ? ಬಿಜೆಪಿಗೂ ಜೆಡಿಎಎಸ್ ಗೂ ಯಾವ ವ್ಯತ್ಯಾಸವೂ ಇಲ್ಲ, ಬಿಜೆಪಿ ಬಹಿರಂಗವಾಗಿ ಅಲ್ಪಸಂಖ್ಯಾತರ ವಿರೋಧ ಮಾಡಿದರೆ, ಜೆಡಿಎಸ್ ನವರು ಒಳಗೊಳಗೆ ವಿರೋಧ ಮಾಡುತ್ತಾರೆ. ಇಂಥವರ ಮಾತುಗಳನ್ನು ಅಲ್ಪಸಂಖ್ಯಾತ ಬಂಧುಗಳು ನಂಬಿ ಮೋಸ ಹೋಗಬಾರದು ಎಂದರು.
ಬೆಂಗಳೂರಿಗೆ ಕೇವಲ 70 ಕಿ.ಮೀ ದೂರದಲ್ಲಿದ್ದರೂ ತುಮಕೂರು ಎಷ್ಟು ಅಭಿವೃದ್ಧಿ ಆಗಬೇಕಿತ್ತು, ಆ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಡಾ. ನಂಜುಂಡಪ್ಪ ಅವರ ವರದಿ ಪ್ರಕಾರ ತುಮಕೂರಿನ 10 ತಾಲೂಕುಗಳಲ್ಲಿ 8 ತಾಲೂಕುಗಳು ಹಿಂದುಳಿದವು. ನಾವು ಅಧಿಕಾರಕ್ಕೆ ಬಂದಾಗ 2013 ರಲ್ಲಿ ತುಮಕೂರಿನ ಜನರ ತಲಾ ಆದಾಯ 43,687 ರೂ. ಇತ್ತು. ನಾವು ಅಧಿಕಾರದಿಂದ ಇಳಿಯುವಾಗ ತಲಾಆದಾಯ 1,74.884 ರೂ. ಆಗಿತ್ತು. ಈಗಿನ ತಲಾ ಆದಾಯ 1,84,000 ರೂ. ಇದೆ. ಕಳೆದ 5 ವರ್ಷಗಳಲ್ಲಿ 9,200 ರೂ. ಮಾತ್ರ ಜಾಸ್ತಿಯಾಗಿದೆ. ಇದು ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ, ಈ ಅಂಕಿಅಂಶಗಳನ್ನು ರಾಜ್ಯ ಬಿಜೆಪಿ ಸರ್ಕಾರವೇ ನೀಡಿರುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿರುವುದಲ್ಲ, ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವುದು. ಬಿಜೆಪಿ ಪಕ್ಷ ಕಳೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್ ಪಕ್ಷ ಪಡೆದ ಒಟ್ಟು ಮತಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚಿದೆ. ನಮಗೆ 38.15% ಮತಗಳು ಬಂದಿದ್ದರೆ, ಬಿಜೆಪಿಗೆ 36.42% ಮತ ಬಂದಿತ್ತು. ಅಂದರೆ ಜನರ ಆಶೀರ್ವಾದ ಯಾರ ಪರವಾಗಿದೆ ಎಂದು ಅರ್ಥ? ನಮ್ಮ ಪರವಾಗಿದೆ ಅಲ್ಲವೇ? ಎಂದರು.
ಉಳಿದಂತೆ ಸಿದ್ದರಾಮಯ್ಯರ ಭಾಷಣದ ಸಾರಾಂಶ ಹೀಗಿತ್ತು..
ನರೇಂದ್ರ ಮೋದಿ ಹೇಳುವ ಸಬ್ ಕ ಸಾಥ್ ಸಬ್ ಕ ವಿಕಾಸ್ ನಲ್ಲಿ ಮಕ್ಕಳು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರನ್ನು ಹೊರಗಿಟ್ಟಿದ್ದಾರೆ. ಮೋದಿಜೀ ಯಾಕ್ರೀ ಇಂಥಾ ಸುಳ್ಳುಗಳನ್ನು ಹೇಳುತ್ತೀರಿ? ಮೋದಿ ಅವರು ಈ ದೇಶವನ್ನು ಸಾಲಗಾರರ ದೇಶವಾಗಿ ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆಯವರೆಗೆ ದೇಶದ ಒಟ್ಟು ಸಾಲ ಇದ್ದದ್ದು 53 ಲಕ್ಷ ಕೋಟಿ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಸಾಲ 153 ಲಕ್ಷ ಕೋಟಿಗೆ ತಲುಪಲಿದೆ. 9 ವರ್ಷದಲ್ಲಿ ಮೋದಿ ಅವರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ.
ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಮಾಡಿದ್ದಾರ? ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ಅಕ್ಕಿ, ಗೋದಿ, ಕಬ್ಬು, ಅಡುಗೆ ಎಣ್ಣೆ ಬೆಲೆಗಳು ಎಷ್ಟಿತ್ತು ಎಂದು ಕಾಂಗ್ರೆಸ್ ಪಕ್ಷ ಇಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ ಇದ್ದರೆ ಈ ಲೆಕ್ಕ ತಪ್ಪು ಎಂದು ಹೇಳಲಿ. 414 ರೂ. ಇದ್ದ ಗ್ಯಾಸ್ ಬೆಲೆ ಇಂದು 1150 ರೂ. ಆಗಿದೆ. ಇಷ್ಟು ದುಡ್ಡು ಕೊಡಲು ರಾಜ್ಯದ ತಾಯಂದಿರಿಗೆ ಕಷ್ಟವಾಗಲ್ವ? ರೈತರು ಬಳಸುವ ಡಿಎಪಿ ಬೆಲೆ 450 ರೂ. ಇದ್ದದ್ದು ಇಂದು 1400 ರೂ. ಆಗಿದೆ. ಇದೇನಾ ಅಚ್ಚೇದಿನ್? ಇದಕ್ಕೆ ಕಾರಣವಾದ ಬಿಜೆಪಿ ಸರ್ಕಾರ ಇರಬೇಕ?
ಬಿಜೆಪಿ ಒಂದು ಕೋಮುವಾದಿ ಪಕ್ಷ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ರನ್ನು ಪರಸ್ಪರ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಇವೆಲ್ಲ ವಿವಾದವಾಗಿಸುವುದು ಜನರಿಗೆ ಬೇಕಿತ್ತಾ? ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಜನರಿಗೆ ವ್ಯಾಪಾರ ನಿರ್ಬಂಧ ಮಾಡುವಂತ ಕೀಳು ಮಟ್ಟಕ್ಕೆ ಇಳಿದ ಬಿಜೆಪಿಗೆ ನಾಚಿಕೆಯಾಗಬೇಕು. ಅಂಬೇಡ್ಕರರ ಸಂವಿಧಾನದ ಆಶಯ ಏನು? ಎಲ್ಲರಿಗೂ ಸಮಪಾಲು, ಸಮಬಾಳು, ಸಹಿಷ್ಣುತೆ, ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟುಕೊಂಡವರು ನಾವು, ಮನುಷ್ಯತ್ವಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಕುವೆಂಪು ಅವರು ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು, ರಾಷ್ಟ್ರಗೀತೆಯನ್ನು ಹಾಡುತ್ತಲೇ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜಗತ್ತಿನ ಯಾವ ಧರ್ಮವೂ ಬೇರೆಯವರನ್ನು ಕೊಲ್ಲು ಎಂದು ಹೇಳುವುದಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸು ಎಂದು ಎಲ್ಲ ಧರ್ಮಗಳು ಹೇಳುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದು ಜನ ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನ ನೆಮ್ಮದಿಯಿಂದ ಬದುಕಬೇಕು ಎಂದಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು.
ಸ್ಯಾಂಟ್ರೋ ರವಿಯನ್ನು ಬಿಜೆಪಿಯವರೇ ಗುಜರಾತಿಗೆ ಕಳಿಸಿ, ಕಣ್ಣೆರೊಸಲು ಇವರೇ ಹಿಡಿದುಕೊಂಡು ಬಂದರು. ಬಿಜೆಪಿಯವರು ಅವನ ಜೊತೆ ಷಾಮೀಲಾಗದೆ ಹೋಗಿದ್ದರೆ ಪೊಲೀಸ್ ಅಧಿಕಾರಿಗಳನ್ನು ಆತ ವರ್ಗಾವಣೆ ಮಾಡಿಸಲು ಸಾಧ್ಯವಾಗುತ್ತಿತ್ತಾ? ಸ್ಯಾಂಟ್ರೋನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲು ಅರ್ಜಿಯನ್ನೂ ಹಾಕಲಿಲ್ಲ. ಇದೆಲ್ಲ ಒಂದು ನಾಟಕ ಅಷ್ಟೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ತುಮಕೂರಿನ ಗುತ್ತಿಗೆದಾರ ಪ್ರಸಾದ್ ಅವರು ದೇವರಾಯನದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಇದಕ್ಕೆ ಯಾರು ಕಾರಣ? ಬೆಂಗಳೂರಿನ ಮಹದೇವಪುರದ ಪ್ರದೀಪ್ ಎಂಬುವ ವ್ಯಕ್ತಿ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ, ಶಾಸಕ ಅರವಿಂದ ಲಿಂಬಾವಳಿ ಅವರು ಪ್ರದೀಪ್ ಗೆ ಅನ್ಯಾಯ ಮಾಡಿದ್ದ ಜನರ ಜೊತೆ ಸೇರಿಕೊಂಡಿದ್ದು ಆತ ಸಾಯಲು ಕಾರಣ. ಕೆ.ಆರ್ ಪುರಂನ ಇನ್ಸ್ ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಾಗ ಶವ ನೋಡಲು ಹೋದ ಸಚಿವ ಎಂಟಿಬಿ ನಾಗರಾಜ್ ಅವರು 70-80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದರೆ ಸಾಯದೆ ಇನ್ನೇನು ಎಂದಿದ್ದರು. ಶಿವಕುಮಾರ್ ಎಂಬ ಗುತ್ತಿಗೆದಾರ ತನಗೆ ದಯಾಮರಣ ಕೊಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. 40% ಕಮಿಷನ್ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸುಮಾರು 20 ರಿಂದ 30 ಸಾವಿರ ಕೋಟಿ ಬಿಲ್ ಹಣವನ್ನು ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ.
ನಾವು ಅಧಿಕಾರಕ್ಕೆ ಬಂದರೆ ಬಡಜನರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ನೀಡುತ್ತೇವೆ. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಗುಜರಾತ್, ಉತ್ತರ ಪ್ರದೇಶದಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರ? ಯಾಕೆ ಕೊಡುತ್ತಿಲ್ಲ ಬೊಮ್ಮಾಯಿ? ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವ ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆ ಜಾರಿ ಮಾಡಿದ್ದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ಮಾಡಿದ್ದು ನಮ್ಮ ಸರ್ಕಾರ. ದೇಶದಲ್ಲೆ ಮೊದಲ ಬಾರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದವರು ನಾವು.
ಮೊನ್ನೆ ಪ್ರಧಾನಿಗಳು ಕಲಬುರಗಿಯಲ್ಲಿ ಹಕ್ಕುಪತ್ರ ಹಂಚಿದರು. ಆದರೆ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಕಾನೂನು ರೂಪಿಸಿ ಜಾರಿಗೆ ಕೊಟ್ಟಿದ್ದು ನಾವು. ಅಡುಗೆ ಮಾಡಿದವರು ನಾವು, ಊಟ ಮಾಡಿದ್ದು ಬಿಜೆಪಿ. ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾನೂನು ತಂದಿದ್ದು ನಾವು. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ, ನಮ್ಮವರು ಜನರಿಗೆ ಸತ್ಯ ಹೇಳಿದರೆ ಸಾಕು ಎಂದರು.