ಕನ್ನಡ ಸುದ್ದಿ  /  Karnataka  /  We Will Definitely Give Strong Competition In Varuna Says Cm Basavaraj Bommai

CM Basavaraj Bommai: ವರುಣಾದಲ್ಲಿ ನಾವು ಖಂಡಿತವಾಗಿ ಪ್ರಬಲವಾದ ಪೈಪೋಟಿ ನೀಡ್ತೇವೆ: ಸಿಎಂ ಬೊಮ್ಮಾಯಿ

ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂದು ಜನರ ಅಭಿಪ್ರಾಯವಿದೆ. ಅಂತಿಮವಾಗಿ ಎಲ್ಲಿ‌ ನಿಲ್ಲಬೇಕು ಎಂಬುದನ್ನ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ದೇವಾಲಯಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ವರುಣಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಬಿಎಸ್ ವೈ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ವರುಣಾದಲ್ಲಿ ನಾವು ಖಂಡಿತವಾಗಿ ಪ್ರಬಲವಾದ ಪೈಪೋಟಿ ನೀಡುತ್ತೇವೆ ಎಂದಿದ್ದಾರೆ.

ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂದು ಜನರ ಅಭಿಪ್ರಾಯವಿದೆ. ಅಂತಿಮವಾಗಿ ಎಲ್ಲಿ‌ ನಿಲ್ಲಬೇಕು ಎಂಬುದನ್ನ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪರವಾಗಿ ಇಲ್ಲ

ಬಹಳಷ್ಟು ಚುನಾವಣಾ ಸಮೀಕ್ಷೆಗಳು ನಡೆದಿದ್ದು, ಪೈಪೋಟಿಯನ್ನೇ ತೋರಿಸುತ್ತಿದೆ. ಕಾಂಗ್ರೆಸ್ ಪರವಾಗಿ ಇಲ್ಲ. ಚುನಾವಣೆಗೆ ಇನ್ನೂ ಒಂದೂವರೆ ತಿಂಗಳಿದ್ದು, ಬಹಳಷ್ಟು ಬದಲಾವಣೆಗಳು ಕಾಣುತ್ತಿವೆ ಎಂದಿದ್ದಾರೆ.

ಇನ್ನೊಂದು ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಅಭಿಪ್ರಾಯ ಸಂಗ್ರಹ

ಸಂಭಾವ್ಯ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಸಭೆ ನಡೆಯುತ್ತಿರುವ ಬಗ್ಗೆ ಮಾತನಾಡಿ, ತಳಮಟ್ಟದ ಕ್ಷೇತ್ರ ಮಟ್ಟದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪಾರಾಮರ್ಶಿಸಿ ಸಂಸದೀಯ ಮಂಡಳಿಗೆ ಸಲ್ಲಿಸಲಾಗುವು ಎಂದಿದ್ದಾರೆ.

ಸಿದ್ದರಾಮಯ್ಯ ಹತಾಶರಾಗಿದ್ದಾರೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. 2013 ರಲ್ಲಿ ಕೊನೆ ಚುನಾವಣೆ ಎಂದರು. 2018 ರಲ್ಲಿ ಮತ್ತೆ ಸ್ಪರ್ಧಿಸಿದರು. ಈಗ ಪುನಃ ಕನಸು ಕಾಣುತ್ತಿದ್ದಾರೆ. ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಮುಖ್ಯ ಮಂತ್ರಿಯಾಗಿ ರಾಜ್ಯದ ಜನಕ್ಕೇನು ಮಾಡಬಲ್ಲರು ಎನ್ನುವುದು ಮುಖ್ಯ. 2018 ರಲ್ಲಿ ಜನ ತಿರಸ್ಕರಿಸಿದ್ದಾರೆ. ಈ ಬಾರಿಯೂ ತಿರಸ್ಕರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮೀಸಲಾತಿಯಲ್ಲಿ ಕಾಂಗ್ರೆಸ್ ಸಾಹಸಕ್ಕೆ ಮುಂದಾಗಲಿಲ್ಲ

ಮೀಸಲಾತಿ ಚುನಾವಣಾ ಗಿಮಿಕ್ ಎಂದಿರುವ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇದನ್ನು ಕಾಂಗ್ರೆಸ್ ನವರು ಇದ್ದಾಗಲೇ ಮಾಡಬಹುದಿತ್ತು. ಇದು 30 ವರ್ಷಗಳ ಬೇಡಿಕೆ. ಬದ್ಧತೆ ಇರದ ಕಾರಣ ಅವರು ಈ ಸಾಹಸಕ್ಕೆ ಹೋಗಲಿಲ್ಲ. ಜನರನ್ನು ಮತ ಬ್ಯಾಂಕ್ ಆಗಿ ಕಾಣುತ್ತಾರೆ. ಅವರಿಗೆ ಅಸಾಧ್ಯವಾದುದನ್ನು ಮಾವು ಮಾಡಿದ್ದೇವೆ. ಹೀಗಾಗಿ ಅವರಿಗೆ ತಳಮಳ ಶುರುವಾಗಿದ್ದು, ಎಲ್ಲ ದರಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಕುಟುಂಬ ಸಮೇತರಾಗಿ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ವಿರೋಧ ಪಕ್ಷದ ಆರೋಪ ಯಶಸ್ವಿಯಾಗಿಲ್ಲ

ವಿರೋಧ ಪಕ್ಷದವರು ಹಲವಾರು ಆರೋಪಗಳನ್ನು ಮಾಡಿದ್ದು ಅವರು ಮಾಡಿರುವ ಯಾವುದೇ ಆರೋಪ ಯಶಸ್ವಿ ಆಗಿಲ್ಲ. ಜನರ ಮಧ್ಯೆ ನಿಂತಿಲ್ಲ. ಭ್ರಷ್ಟಾಚಾರದ ವಿಚಾರ ಸೇರಿದಂತೆ ಎಲ್ಲವೂ ಅವರಿಗೆ ತಿರುಗುಬಾಣವಾಗಿದೆ. ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಮ್ಮ ಶಾಸಕರ ಮೇಲೆ ದಾಳಿ ಮಾಡಿರುವುದು, ನಾವು ಲೋಕಾಯುಕ್ತವನ್ನು ಬಲ ಪಡಿಸಿದ್ದರಿಂದ‌ ನ್ಯಾಯಸಮ್ಮತವಾಗಿ ಅಧಿಕಾರ ನೀಡಿದ್ದರಿಂದ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಎಂ ಬೊಮ್ಮಾಯಿ ನಿನ್ನೆ ತಿಳಿಸಿದ್ದರು.

ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕ್ ಸಂಪೂರ್ಣ ಛಿದ್ರ

ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕ್ ಸಂಪೂರ್ಣ ಛಿದ್ರವಾಗಿದೆ. ಹೀಗಾಗಿ ಅವರು ಹತಾಶರಾಗಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅವರ ಕೀಳು ಮಟ್ಟದ ಭಾಷೆಯೇ ಅವರ ಹತಾಶೆಯನ್ನು ತೋರಿಸುತ್ತದೆ ಎಂದಿದ್ದರು.

IPL_Entry_Point