Karnataka Rains: ಯುಗಾದಿ ನಂತರ ಕರ್ನಾಟಕದಲ್ಲಿ ಉತ್ತಮ ಮಳೆ, ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರ ಬಲಿ
Weather Updates ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಬೆಂಗಳೂರು: ಯುಗಾದಿ ಆಚರಿಸಿದ ಮರುದಿನವೇ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅದರಲ್ಲೂ ಸತತ ಎರಡು ತಿಂಗಳಿನಿಂದ ಬಿಸಿಲ ಬೇಗೆಯಲ್ಲಿ ಬಳಲಿದ್ದ ವಿಜಯಪುರ ಜಿಲ್ಲೆಯಲ್ಲಿ ಗುಡುಗು, ಸಿಡಿಲಿನ ಭಾರೀ ಮಳೆಯಾದ ವರದಿಯಾಗಿದೆ. ಸಿಡಿಲಿಗೆ ಬಾಲಕನೂ ಸೇರಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಇದರಿಂದ ಗುರುವಾರ ರಾತ್ರಿ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಿತ್ತು. ಬುಧವಾರ ಹಾಗೂ ಗುರುವಾರ ಎರಡೂ ದಿನವೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಿರುವುದರಿಂದ ಉಷ್ಣಾಂಶ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ.
ವಿಜಯಪುರದಲ್ಲಿ ಸಿಡಿಲ ಮಳೆ
ವಿಜಯಪುರ ಜಿಲ್ಲೆಯಲ್ಲಿ ಬುಧವಾರ ಸಂಜೆಯೂ ಮಳೆಯಾಗಿತ್ತು. ಗುರುವಾರವೂ ಜೋರಾಗಿಯೇ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿಯಿತು. ಇಂಡಿ ತಾಲ್ಲೂಕಿನಲ್ಲಿಯೇ ಇಬ್ಬರು ಸಿಡಿಲು ಬಡಿದು ಜೀವ ಕಳೆದುಕೊಂಡಿದ್ದಾರೆ. ಇಂಡಿ ನಗರ ಹೊರ ವಲಯದಲ್ಲಿ ಕುರಿ ಮೇಯಿಸಲು ಹೋಗಿದ್ದ ಬೀರಪ್ಪ ನಿಂಗಪ್ಪ ಅವರಾದಿ ಎಂಬಾತ ಮರ ಕೆಳಕ್ಕೆ ರಕ್ಷಣೆಗಾಗಿ ನಿಂತಾಗ ಸಿಡಿಲು ಬಡಿದಿದೆ. ಸಿಡಿಲು ಬಡಿಲು ಬಡಿದ ರಭಸಕ್ಕೆ ಆತ ಅಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಈ ಬಾರಿ ಎಸ್‌ಎಸ್‌ಎಲ್‌ಸಿಗೆ ಹೋಗಬೇಕಾಗಿದ್ದ ಬೀರಪ್ಪನ ಕುಟುಂಬದಲ್ಲಿ ಸಾವಿನ ನೋವು ಮಡುಗಟ್ಟಿದೆ.
ಬಾಲಕನ ಕುಟುಂಬ ಬಡತನದಲ್ಲಿದ್ದು, ಪರಿಹಾರ ರೂಪವಾಗಿ 10 ಲಕ್ಷ ರೂ. ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೇ ರೀತಿ ಇಂಡಿ ತಾಲ್ಲೂಕಿನ ಬಿ.ಕೆ.ಮಸಳಿ ಗ್ರಾಮದ ಸೋಮು ಪಟ್ಟಣಶೆಟ್ಟಿ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರೂ ಕೂಡ ರಕ್ಷಣೆಗೆ ಮರದ ಕಳೆಗೆ ನಿಂತಾಗಲೇ ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಇದರ ನಡುವೆ ವಿಜಯಪುರ ಜಿಲ್ಲೆಯ ತಿಕೋಟಾ, ದೇವರಹಿಪ್ಪರಗಿ, ಸಹಿತ ಹಲವು ಕಡೆ ಭಾರೀ ಮಳೆಯಾಗಿದೆ. ಹಲವು ಕಡೆ ಗಾಳಿ ಸಹಿತ ಮಳೆ ಸುರಿದಿದೆ. ವಿಜಯಪುರ ನಗರದಲ್ಲೂ ಮಳೆಯಾದ ವರದಿಯಾಗಿದೆ.
ಉತ್ತರ ಕರ್ನಾಟಕದಲ್ಲಿ ವರುಣ ದರ್ಶನ
ಇದಲ್ಲದೇ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯನಗರ, ಬಾಗಲಕೋಟೆ, ಹಾವೇರಿ ಸಹಿತ ಹಲವು ಭಾಗಗಳಲ್ಲೂ ಮೂರು ದಿನಗಳಲ್ಲಿ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ವರುಣ ತಂಪೆರಿದ್ದಾನೆ. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದರಿಂದ ಅಲ್ಲಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅದನ್ನು ಬಿಟ್ಟರೆ ಕೆಲವು ಭಾಗಗಳಲ್ಲಿ ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದರೂ ಅನಾಹುತಗಳ ವರದಿಯಾಗಿಲ್ಲ.
ಬೆಳಗಾವಿ ಜಿಲ್ಲೆಯಲ್ಲೂ ವರುಣನ ದರ್ಶನ ನಿರಾಳತೆ ತಂದಿದೆ. ಯಮಕನಮರಡಿ. ಹುಕ್ಕೇರಿ, ಸಂಕೇಶ್ವರ ಸಹಿತ ಹಲವು ಕಡೆಗಳಲ್ಲಿ ಮಳೆ ಸುರಿದಿದೆ. ಬೆಳಗಾವಿ ನಗರದಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ 3 ಸೆ.ಮೀ, ಹುಕ್ಕೇರಿಯಲ್ಲಿ ) 2 ಸೆಂ.ಮೀ ಹಾಗೂ ಯಡವಾಡದಲ್ಲಿ 1 ಸೆ.ಮೀನಷ್ಟು ಮಳೆ ಗುರುವಾರ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ವಿಜಯನಗರ ಜಿಲ್ಲೆಯೂ ಕೆಲವು ಕಡೆ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಕೆಲವು ಕಡೆ ಗುಡುಗು, ಸಿಡಿಲಿನ ಪ್ರಮಾಣವೂ ಜೋರಾಗಿತ್ತು. ಹಾವೇರಿ. ಬಾಗಲಕೋಟ ಜಿಲ್ಲೆಗಳಲ್ಲೂ ಮಳೆ ಸುರಿದು ಬಿಸಿಲಿನ ಝಳ ಕೊಂಚ ಕಡಿಮೆಯಾಗಿದೆ.
ಸಿಡಿಲ ಮಳೆ ಎಚ್ಚರ
ಶುಕ್ರವಾರ ಹಾಗೂ ಶನಿವಾರವೂ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಸಿಡಿಲು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಕೇಂದ್ರದ ವಿಜ್ಞಾನಿ ಸುಂದರ ಮೇತ್ರಿ ತಿಳಿಸಿದ್ದಾರೆ.
