Karnataka Weather: ಕರ್ನಾಟಕದಲ್ಲಿ ಹಗಲು ಭಾರಿ ಬಿಸಿಲು, ರಾತ್ರಿ ಚಳಿ; ಫೆ 14ರವರೆಗೂ ಹೆಚ್ಚಿನ ತಾಪಮಾನದ ಬಿಸಿ
ಫೆ. 15ರವರೆಗೂ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದ್ದು, ಹಗಲಿನ ವೇಳೆ ಬಿಸಿಲಿನ ವಾತಾವರಣವು ಜನರನ್ನು ಕಾಡಲಿದೆ. ರಾತ್ರಿ ವೇಳೆ ಚಳಿಯ ಪ್ರಮಾಣ ಕಡಿಮೆ ಇರಲಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ.

ಬೆಂಗಳೂರು: ಚಳಿಗಾಲದಲ್ಲೂ ಪ್ರಖರ ಬಿಸಿಲಿಗೆ ಕರ್ನಾಟಕದ ಜನ ಹೈರಾಣಾಗಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬೇಸಿಗೆ ಆರಂಭಕ್ಕೂ ಮುನ್ನವೇ, ಹೆಚ್ಚಿನ ತಾಪಮಾನ ಕಂಡುಬರುತ್ತಿದೆ. ಹಗಲು ಭಾರಿ ಬಿಸಿಲು, ರಾತ್ರಿ ಸ್ವಲ್ಪ ಚಳಿ ಎಂಬಂತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ದಾಖಲಾಗಿದೆ. ಸದಾ ತಂಪಾಗಿರುವ ವಿಶ್ವದ ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಗರಿಷ್ಠ ತಾಪಮಾನ 30 ಡಿಗ್ರಿಯವರೆಗೆ ತಲುಪಿದೆ. ಈ ನಡುವೆ ಭಾರತ ಹವಾಮಾನ ಇಲಾಖೆಯ ಬೆಂಗಳೂರು ಹವಾಮಾನ ಕೇಂದ್ರದ ವರದಿಯಂತೆ (ಫೆ.9) ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.
ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿಅತಿ ಕಡಿಮೆ ಉಷ್ಣಾಂಶ 13.5 ಡಿಗ್ರಿ ಸೆಲ್ಸಿಯಸ್ ದಾವಣಗೆರೆಯಲ್ಲಿ ದಾಖಲಾಗಿದೆ. ಕಳೆದ ದಿನ ರಾಜ್ಯಾದ್ಯಂತ ಒಣ ಹವೆ ಇತ್ತು. ಇಂದು (ಫೆ.10, ಸೋಮವಾರ) ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಂಜು ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಫೆಬ್ರುವರಿ 15ರವರೆಗೂ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದ್ದು, ಹಗಲಿನ ವೇಳೆ ಬಿಸಿಲಿನ ವಾತಾವರಣವು ಜನರನ್ನು ಕಾಡಲಿದೆ. ರಾತ್ರಿ ಚಳಿಯ ಪ್ರಮಾಣ ಕಡಿಮೆ ಇರಲಿದೆ. ತಾಪಮಾನ ಏರಿಕೆ ಕಾಣಲಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ.
ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಇದೇ ವೇಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ದೆೊದ್ಡ ಬದಲಾವಣೆ ಸಾಧ್ಯತೆ ಇಲ್ಲ. ಅಲ್ಲದೆ ಕನಿಷ್ಠ ತಾಪನದಲ್ಲಿಯೂ ಹೆಚ್ಚು ಬದಲಾವಣೆ ಇಲ್ಲ ಎಂದು ವರದಿ ಹೇಳಿದೆ.
ಬೆಂಗಳೂರಿನಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ
ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳ ಕಾಲ ಶುಭ್ರ ಆಕಾಶ ಇರಲಿದೆ. ಮೋಡ ಮರೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಸೆಲ್ಸಿಯಸ್ ಮತ್ತು 17 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಅವಧಿಗೂ ಮುನ್ನವೇ ಪ್ರಖರ ಬಿಸಿಲು
ಕೆಲವು ಜಿಲ್ಲೆಗಳಲ್ಲಿ ಮುಂದಿನ ವಾರದ ವೇಳೆಗೆ 40ರಿಂದ 42 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಮಂಜು ಬೀಳುವ ಸಾಧ್ಯತೆ ಇದ್ದು, ಫೆ. 14ರವರೆಗೆ ಬಿಸಿಲು ಹೆಚ್ಚಾಗಿರಲಿದೆ. ರಾಜ್ಯದಲ್ಲಿ ಬೇಸಿಗೆ ಅವಧಿಯು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಆರಂಭವಾಗಿ ಮೇ ತಿಂಗಳವರೆಗೆ ಮುಂದುವರಿಯುತ್ತದೆ. ಆದರೆ ಈ ಬಾರಿ ಅವಧಿಗೂ ಮುನ್ನವೇ ತಾಪಮಾನ ಅವಧಿಗೂ ಮುನ್ನವೇ ಏರಿಕೆ ಕಾಣುತ್ತಿದೆ. ಹಲವು ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದೆ.
