ಕರ್ನಾಟಕ ಹವಾಮಾನ ಫೆ 8; ಬೆಂಗಳೂರು ತಾಪಮಾನ ಹಗಲು 33, ರಾತ್ರಿ 17 ಡಿಗ್ರಿ ಸೆಲ್ಶಿಯಸ್; ರಾಜ್ಯದ ಉಳಿದೆಡೆಯೂ ಬಿಸಿಲ ಬೇಗೆ
Weather Bengaluru Feb 8 : ಬೆಂಗಳೂರು ಸೇರಿ ಕರ್ನಾಟಕದ ಹಲವು ಕಡೆಗಳಲ್ಲಿ ಫೆಬ್ರವರಿ ಆರಂಭದಲ್ಲೇ ಬಿರುಬೇಸಿಗೆಯ ಬಿಸಿಲಿನ ಅನುಭವ ಕಾಡಿದೆ. ಕರ್ನಾಟಕ ಹವಾಮಾನ ವರದಿ ಪ್ರಕಾರ ಫೆ 8 ರಂದು ಬೆಂಗಳೂರು ತಾಪಮಾನ ಹಗಲು 33, ರಾತ್ರಿ 17 ಡಿಗ್ರಿ ಸೆಲ್ಶಿಯಸ್ ಇರಲಿದೆ. ರಾಜ್ಯದ ಉಳಿದೆಡೆಯೂ ಬಿಸಿಲ ಬೇಗೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಬೆಂಗಳೂರು: ಒಂದು ರೀತಿಯ ವಿಪರೀತ ಹವಾಮಾನ ಬೆಂಗಳೂರು ಸೇರಿ ಕರ್ನಾಟಕದ ಹಲವು ಕಡೆ ಅನುಭವಕ್ಕೆ ಬಂದಿದೆ. ಹಗಲು ಹೊತ್ತು ಬಿಸಿಲಿನ ಬೇಗೆ ಕಾಡಿದರೆ, ರಾತ್ರಿ ವೇಳೆ ಮೈ ನಡುಕದ ಚಳಿ. ಕಳೆದ ಒಂದು ವಾರದಿಂದ ಈ ರೀತಿಯ ಹವಾಮಾನ ಅನುಭವದಲ್ಲಿದ್ದು, ಇಂದು (ಫೆ.8) ಕೂಡ ಇದು ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ತಾಪಮಾನ 33 ಡಿಗ್ರಿ ಆಸುಪಾಸಿನಲ್ಲಿದ್ದು, ಫೆಬ್ರವರಿಯಲ್ಲೇ ಬಿರುಬೇಸಿಗೆಯ ತಾಪ ಕಾಡತೊಡಗಿದೆ. ನಿನ್ನೆ (ಫೆ.7) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಪಮಾನ ಹಗಲು ಹೊತ್ತು 32-33 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು. ಬೆಳಗಾವಿ, ಕಾರವಾರಗಳಲ್ಲೂ ತಾಪಮಾನ 32-34 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು.. ಇಂದು ಕೂಡ ಈ ನಗರಗಳಲ್ಲಿ ತಾಪಮಾನ 32 ಡಿಗ್ರಿ ದಾಟಲಿದ್ದು, ಬಿಸಿಲ ಬೇಗೆ ಹೆಚ್ಚಾಗಲಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಬೆಳಗಾವಿ, ವಿಜಯಪುರ ಜಿಲ್ಲೆ ಸುತ್ತಮುತ್ತ ಹಲವೆಡೆ ನಸುಕಿನ ವೇಳೆ ಮೋಡ ಕವಿದಂತೆ ಕಾಣಬಹುದು. ಮುಂಜಾನೆ ಮಂಜು ಮುಸುಕಿದ ವಾತಾವರಣದ ಇರುವಲ್ಲಿ ತೀವ್ರ ಚಳಿ ಕಾಡಬಹುದು. ಹಗಲು ತಾಪಮಾನ ಹೆಚ್ಚಳವನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ರಾತ್ರಿ ಮತ್ತು ಮುಂಜಾನೆ ಚಳಿ ಇದ್ದರೆ, ಹಗಲು ಒಣ ಹವೆ ಮುಂದುವರಿಯಲಿದೆ. ತಾಪಮಾನ ಸ್ವಲ್ಪ ಅಂದರೆ 2 ರಿಂದ 3 ಡಿಗ್ರಿ ಸೆಲ್ಶಿಯಸ್ ತನಕ ಹೆಚ್ಚಳ ಅನುಭವಕ್ಕೆ ಬಂದೀತು. ಕರಾವಳಿಯಲ್ಲಿ ಸಹಜ ವಾತಾವರಣ ಇದ್ದರೂ, ನಗರ ಪ್ರದೇಶ ಬಿಟ್ಟು ಬಹುತೇಕ ಕಡೆ ಮುಂಜಾನೆ ಮಂಜು ಮತ್ತು ರಾತ್ರಿ ಸಾಧಾರಣ ಚಳಿ ಇರಲಿದೆ. ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಕಡೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಶಿಯಸ್ ಏರಬಹುದು ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಹವಾಮಾನ ಇಂದು
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಬುಧವಾರ (ಫೆ.8) ಕೆಲವೆಡೆ ಮುಂಜಾನೆ ಮಂಜು ಇರಲಿದ್ದು, ಚಳಿ ಕೂಡ ಇರಲಿದೆ. ಬಹುತೇಕ ಕಡೆಗಳಲ್ಲಿ ಹಗಲು ನಿರ್ಮಲ ಆಕಾಶ ಕಾಣಬಹುದು. ಕೆಲವು ಕಡೆ ಮೋಡ ಕವಿದ ವಾತಾವರಣ ಇದ್ದೀತು. ಸಂಜೆ ವೇಳೆ ಚಳಿ ಕಾಡಲಿದ್ದು, ಹಗಲಲ್ಲಿ ಒಣಹವೆ ಇರಲಿದೆ ಎಂದು ವರದಿ ಹೇಳಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು (ಫೆ.8) ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ನಿನ್ನೆ (ಫೆ.7) 33.1 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 17.4 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಲಿದೆ. ನಿನ್ನೆ (ಫೆ.7) ತಾಪಮಾನ 33.1 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17.4 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ನಗರಗಳಲ್ಲಿ ಈಗಿನ (ಫೆ.8 ರ ಬೆಳಗ್ಗೆ 6 ಗಂಟೆಗೆ) ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಫೆ.8 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು - 22 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 58)
ಮಂಗಳೂರು - 27.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 84)
ಚಿತ್ರದುರ್ಗ - 24 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 36)
ಗದಗ - 24 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 52)
ಹೊನ್ನಾವರ - 31.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 60)
ಕಲಬುರಗಿ - 28.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 44)
ಬೆಳಗಾವಿ - 32.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 21)
ಕಾರವಾರ - 34 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 53)