ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಶಿಯಸ್‌ಗೆ ಇಳಿಕೆ ಸಾಧ್ಯತೆ, ಶೀತಗಾಳಿ ಕಾರಣ ಮೈನಡುಕದ ಚಳಿಯೂ ಕಾಡಬಹುದು
Bengaluru Temperature: ಬೆಂಗಳೂರು ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ಇನ್ನೆರಡು ದಿನ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ಆಸುಪಾಸಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಮೈ ನಡುಕದ ಚಳಿಯೂ ಕಾಡಬಹುದು. ಅಂದ ಹಾಗೆ, ಬೆಂಗಳೂರಿನ ಸಾರ್ವಕಾಲಿಕ ಕನಿಷ್ಠ ತಾಪಮಾನ ಎಷ್ಟು ಎಂದು ತಿಳಿಯುವ ಕುತೂಹಲವೇ? ಈ ವರದಿ ಓದಿ.
Bengaluru Temperature: ಕರ್ನಾಟಕದ ಉತ್ತರ ಒಳನಾಡಿನಲ್ಲಷ್ಟೇ ಅಲ್ಲ, ರಾಜಧಾನಿ ಬೆಂಗಳೂರು ಸುತ್ತಮುತ್ತ ಕೂಡ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 10.2 ಡಿಗ್ರಿ ಸೆಲ್ಶಿಯಸ್ ತನಕ ಇಳಿಕೆಯಾಗಬಹುದ. ಶೀತಗಾಳಿ ಕಾರಣ ಮೈ ನಡುಕದ ಚಳಿಯೂ ಉಂಟಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ (ಜನವರಿ 4) ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನಿನ್ನೆ (ಜನವರಿ 3) ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ 16.4 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ, ಬೆಂಗಳೂರು ಗ್ರಾಮಾಂತರದಲ್ಲಿ ಕನಿಷ್ಠ ತಾಪಮಾನ 15.1 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದರು. ಬೆಂಗಳೂರಿನ ಜಿಕೆವಿಕೆ ಪ್ರದೇಶದಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು.
ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ದಿಢೀರ್ ಇಳಿಕೆಗೇನು ಕಾರಣ
ಜನವರಿ ತಿಂಗಳ ಕನಿಷ್ಠ ತಾಪಮಾನ ಬೆಂಗಳೂರಿನಲ್ಲಿ ವಾಡಿಕೆಯಂತೆ 15.8 ಡಿಗ್ರಿ ಸೆಲ್ಶಿಯಸ್. ಆದರೆ ಈ ಬಾರಿ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಕ್ಕೆ ಇಳಿದಿದೆ. ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಕುಸಿತಕ್ಕೆ ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತಗಾಳಿ ಕಾರಣ ಎಂದು ಹೇಳಲಾಗುತ್ತಿದೆ. ಇದು ಬೆಂಗಳೂರಿನ ಹವಾಮಾನದ ಮೇಲೆ ಪರಿಣಾಮ ಬೀರತೊಡಗಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಗಿಳಿದಿದೆ.
ಬೆಂಗಳೂರಿನಲ್ಲಿ ರಾತ್ರಿ ವೇಳೆ ವಿಪರೀತ ಚಳಿ ಅನುಭವಕ್ಕೆ ಬಂದಿದ್ದು, ಮುಂದಿನ ಎರಡು ದಿನಗಳ ಕಾಲ ಕನಿಷ್ಠ ತಾಪಮಾನ ಇಳಿಕೆಯಾಗಲಿದೆ. ಇಂದು ಕೆಲವು ಕಡೆಗಳಲ್ಲಿ 10.2 ಡಿಗ್ರಿ ಸೆಲ್ಶಿಯಸ್‌ಗೆ ಇಳಿಯಲಿರುವ ಕಾರಣ ಚಳಿ ಹೆಚ್ಚಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ತಾಪಮಾನವಾಗಿರಲಿದೆ.
ಬೆಂಗಳೂರಿನ ಸಾರ್ವಕಾಲಿಕ ಕನಿಷ್ಠ ತಾಪಮಾನ 7.8 ಡಿಗ್ರಿ ಸೆಲ್ಶಿಯಸ್
ಬೆಂಗಳೂರಿನಲ್ಲಿ ಸಾರ್ವಕಾಲಿಕ ಕನಿಷ್ಠ ತಾಪಮಾನ ದಾಖಲಾಗಿ 140 ವರ್ಷಗಳಾಯಿತು. ಹೌದು, 1884ರ ಜನವರಿ 13ರಂದು ಬೆಂಗಳೂರಿನ ಸಾರ್ವಕಾಲಿಕ ಕನಿಷ್ಠ ತಾಪಮಾನ 7.8 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಅದಾದ ಬಳಿಕ, 2012ರ ಜನವರಿ 16 ರಂದು 12 ಡಿಗ್ರಿ ಸೆಲ್ಶಿಯಸ್, 2019ರ ಜನವರಿ 15 ರಂದು 12.3 ಡಿಗ್ರಿ ಸೆಲ್ಶಿಯಸ್, 2024ರ ಡಿಸೆಂಬರ್ 16-17 ರಂದು 12.2 ಡಿಗ್ರಿ ಸೆಲ್ಶಿಯಸ್ ಕನಿಷ್ಥ ತಾಪಮಾನಗಳು ದಾಖಲಾಗಿದ್ದವು. ಕಳೆದ 14 ವರ್ಷಗಳಲ್ಲಿ ಡಿಸೆಂಬರ್ ತಿಂಗಳ ಕನಿಷ್ಠ ತಾಪಮಾನ ಮಟ್ಟ ಇದಾಗಿತ್ತು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಡಿಸೆಂಬರ್‌ನಲ್ಲಿ ಕೊನೆಯ ಭಾಗದಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗುವುದು ಸಾಮಾನ್ಯ. 2011ರ ಡಿಸೆಂಬರ್ 24 ರಂದು ಕನಿಷ್ಠ ತಾಪಮಾನ 12.8 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು.
ಪ್ರಸ್ತುತ ಹವಾಮಾನ ಮುನ್ಸೂಚನೆ ಪ್ರಕಾರ, ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ವಿಶೇಷವಾಗಿ ಕಲಬುರಗಿ, ವಿಜಯಪುರ, ಬೀದರ್ ಭಾಗಗಳಲ್ಲಿ ಶೀತಗಾಳಿ ಕನಿಷ್ಠ ಎರಡು ಅಥವಾ ಮೂರು ದಿನ ಇರಲಿದೆ. ಬೆಂಗಳೂರಿನಲ್ಲೂ ಕನಿಷ್ಥ ತಾಪಮಾನ ಇಳಿಕೆಯಾಗಿ ಮೈನಡುಕದ ಚಳಿ ಕಾಡಬಹುದು. ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕೂಡ ತಾಪಮಾನ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಇಳಿಕೆಯಾಗಬಹುದು. ಇನ್ನುಳಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಹವಾಮಾನದಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಇರಲ್ಲ.