Weather Warriors: ಇವರು ಭಾರತದ ಹೆಮ್ಮೆಯ ಹವಾಮಾನ ವಾರಿಯರ್‌ಗಳು, ಕ್ಷಣ ಕ್ಷಣದ ನಿಖರ ಮಾಹಿತಿ ನೀಡ್ತಾರೆ, ಕನ್ನಡಿಗರೂ ಉಂಟು
Weather Updaters ಈಗ ಹವಾಮಾನವೂ ಒಂದು ಪ್ಯಾಷನ್. ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡುವ ಹಲವರು ವಿಭಿನ್ನವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮಾಹಿತಿ ಇಲ್ಲಿದೆ.

ಬೆಂಗಳೂರು: ಭಾರತದಲ್ಲಿ ಹವಾಮಾನ ಎನ್ನುವುದು ಈಗ ಪ್ರಮುಖ ವಿಷಯವೇ. ಎಲ್ಲೆಡೆ ಬಿರುಬಿಸಿಲು ಮುಗಿದು ತಿಂಗಳು ಕಳೆದಿಲ್ಲ. ಆಗಲೇ ರಣ ಮಳೆ. ಅದೂ ಎಲ್ಲಿ ನೋಡಿದರೂ ಪ್ರವಾಹ. ಹಳ್ಳಿಗಳನ್ನು ಬಿಡಿ ಮಹಾನಗರಗಳೇ ಮಳೆಗೆ ಮುಳುಗಿವೆ. ಇನ್ನು ಗುಡುಗು ಹಾಗೂ ಸಿಡಿಲಿಗೂ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಪ್ರವಾಸಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕುವವರೂ ಇದ್ದಾರೆ. ಮಳೆ, ಜಲಾಶಯಗಳ ಸ್ಥಿತಿಗತಿ ಹೀಗೆ ಎಲ್ಲ ಮಾಹಿತಿಯನ್ನೂ ಜನ ಕ್ಷಣ ಕ್ಷಣದ ಲೆಕ್ಕದಲ್ಲಿ ಬಯಸುತ್ತಿದ್ದಾರೆ. ಹೀಗೆ ಕ್ಷಣ ಕ್ಷಣದಲ್ಲಿಯೇ ನಿಮಗೆ ನಮ್ಮ ಭಾಗ, ರಾಜ್ಯ, ಪ್ರದೇಶ, ನದಿಗಳು, ಜಲಪಾತಗಳು, ಪ್ರವಾಸಿ ಸ್ಥಳಗಳ ಜಲ ಲೋಕದ ನಿಖರ ಮಾಹಿತಿ, ಫೋಟೋಗಳು, ವಿಡಿಯೋ ಹಾಗೂ ವಿಶ್ಲೇಷಣೆಗಳನ್ನು ನೀಡುವ ಹವ್ಯಾಸಿ ಹವಾಮಾನ ಪರಿವೀಕ್ಷಕರು ಈಗ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಒಂದು ರೀತಿ ಸೇನಾನಿಗಳು( ವಾರಿಯರ್ಸ್) ರೀತಿಯಲ್ಲೇ ಮಾಹಿತಿ ಹೆಕ್ಕಿ ಹೆಕ್ಕಿ ತೆಗೆಯುತ್ತಾರೆ. ಅದನ್ನು ಆ ಕ್ಷಣಕ್ಕೆ ನೀಡುತ್ತಾರೆ. ಇಂತಹ ಹವ್ಯಾಸಿ ಹವಾಮಾನ ಪರಿವೀಕ್ಷಕರನ್ನು ಸೃಷ್ಟಿಸಿರುವುದು ಸಾಮಾಜಿಕ ಮಾಧ್ಯಮ.
ಹಿಂದೆಲ್ಲಾ ಮಳೆ, ಪ್ರವಾಹ, ಹೆದ್ದಾರಿಯಲ್ಲಿ ಗುಡ್ಡಕುಸಿತ, ರಸ್ತೆ ಬಿರುಕಿನಂತಹ ಅನಾಹುತಗಳು ಇರಲಿಲ್ಲ ಎಂದೇನೂ ಅಲ್ಲ. ಅದು ಮಹಾಮಳೆ ಕಾಲ. ಆದರೆ ಅನಾಹುತ ಕೊಂಚ ಕಡಿಮೆಯೇ ಎನ್ನುವಂತೆ ಇರುತ್ತಿತ್ತು. ಈಗ ಈ ಅನಾಹುತಗಳು ಎಲ್ಲೆಡೆ ಆಗುತ್ತಿವೆ. ಇದರ ಹಿಂದೆ ಇರುವ ನಾಗರೀಕರತೆಯಲ್ಲಿನ ಬದಲಾವಣೆ, ಸೌಲಭ್ಯಗಳ ಯಥೇಚ್ಛ ಬಳಕೆ ಮಾತ್ರವಲ್ಲದೇ ದುರ್ಬಳಕೆಯೂ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಇದರ ಜತೆಗೆ ಈ ಅನಾಹುತಗಳು ನಮ್ಮ ಕಣ್ಣಿಗೆ ಕಾಣುತ್ತಿವೆ. ಹಿಂದೆಲ್ಲಾ ಈ ರೀತಿಯ ಅನಾಹುತಗಳನ್ನು ನೋಡಲು ಟಿವಿಗಳಿರಲಿಲ್ಲ.ಬಂದರೆ ಬೆಳಿಗ್ಗೆ ಪತ್ರಿಕೆಗಳಲ್ಲಿ ಚಿತ್ರ ನೋಡಿ ಮಾಹಿತಿ ಪಡೆಯಬೇಕು. ಇಲ್ಲವೇ ಆಕಾಶವಾಣಿಯಲ್ಲಿ ಮಳೆ ಅನಾಹುತ, ಇತರೆ ವಿವರಗಳನ್ನು ಪಡೆದುಕೊಳ್ಳಬೇಕು. ನಮ್ಮೂರು ದ್ವೀಪವಾದರೂ ಬೇರೆ ಊರಿನ ಮಾಹಿತಿ ಸಿಗುವುದು ಅಪರೂಪವೇ ಆಗಿತ್ತು. ಅದು ಬಾಯಿ ಮಾತಿನಲ್ಲಿ ಕೇಳಿಯೇ ತಿಳಿದುಕೊಳ್ಳಬೇಕಿತ್ತು. ಈಗ ಸಾಮಾಜಿಕ ಮಾಧ್ಯಮವು ಎಲ್ಲವನ್ನೂ ಖುಲ್ಲಂ ಖುಲ್ಲಾ ಎನ್ನುವ ರೀತಿ ತೋರಿಸುತ್ತಿದೆ. ಮಳೆ, ಅನಾಹುತ, ಸಾವಿನ ಸುದ್ದಿಗಳು ಲೈವ್ ಆಗಿ ಬಿತ್ತರಗೊಳ್ಳುತ್ತಿವೆ. ಒಂದು ಕಡೆ ಸಾಮಾಜಿಕ ಮಾಧ್ಯಮ ಅತಿಯಾದ ಬಳಕೆ ಅನಗತ್ಯ ಭಯ, ಕಿರಿಕಿರಿಗೆ ದಾರಿ ಮಾಡಿಕೊಡುತ್ತಿದೆ. ಇನ್ನೊಂದು ಕಡೆ ಒಂದಷ್ಟು ಮಾಹಿತಿಯೂ ನಮಗೆ ಇರಬೇಕು.ಇದಕ್ಕಾಗಿ ಸಾಮಾಜಿಕ ಮಾಧ್ಯಮ ಬೇಕು ಎನ್ನುವ ಚರ್ಚೆಯೂ ಇದೆ.
ಇಂತಹ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹವಾಮಾನದ ಮಾಹಿತಿಯನ್ನು ನೀಡುವ ಹವ್ಯಾಸಿ ಹವಾಮಾನ ಪರಿವೀಕ್ಷಕರು ಸೃಷ್ಟಿಯಾಗಿದ್ದಾರೆ. ಅವರು ಮಳೆಯಾಗುವ ಮಾಹಿತಿ ಕೊಡುತ್ತಾರೆ. ಎಷ್ಟು ಮಳೆಯಾಗಿದೆ ಎನ್ನುವ ವಿವರ ನೀಡುತ್ತಾರೆ. ಮಳೆ ನಾಳೆ ಎಲ್ಲಿ ಆಗಬಹುದು ಎನ್ನುವ ವಿಷಯವನ್ನು ತಿಳಿಸುತ್ತಾರೆ. ಭಾರತೀಯ ಹವಾಮಾನ ಇಲಾಖೆ ನೀಡುವ ಮಾಹಿತಿ ಆಧರಿಸಿ ವಿಶ್ಲೇಷಣೆಗಳನ್ನು ಕೊಡುತ್ತಾರೆ. ಮಳೆಯಿಂದ ನದಿಗಳು ತುಂಬಿ ಹರಿಯುವ, ಜಲಾಶಯಗಳು ಭರ್ತಿಯಾಗಿ ನೀರು ಹೊರ ಹರಿಸುವ, ಮಳೆಯಿಂದ ಸೃಷ್ಟಿಯಾದ ಸುಂದರ ಸೊಬಗಿನ ಕ್ಷಣಗಳನ್ನು ಕಟ್ಟಿ ಕೊಡುತ್ತಾರೆ. ಛಾಯಾಚಿತ್ರಗಳ ಜತೆಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅಭಿಪ್ರಾಯಗಳು, ಜನರ ಮೂಡ್‌ಗಳನ್ನು ಕ್ಷಣ ಮಾತ್ರದ ವಿಡಿಯೋ ಕೊಲ್ಯಾಜ್‌ಗಳ ಮೂಲಕ ತೋರಿಸುತ್ತಾರೆ.
ನೀವು ಫೇಸ್‌ಬುಕ್, ಎಕ್ಸ್, ಇನ್ಸ್‌ಟಾ ಸಹಿತ ಹಲವು ಸಾಮಾಜಿಕ ಮಾಧ್ಯಮಗಳನ್ನು ಹೊಕ್ಕು ಅಲ್ಲಿ ವೆದರ್‌ಮ್ಯಾನ್( WeatherMan) ಎನ್ನುವ ಪದ ನೀಡಿದರೆ ಅಲ್ಲಿ ದೊಡ್ಡ ಸಂಖ್ಯೆಯ ಹೆಸರುಗಳು ಕಾಣ ಸಿಗುತ್ತವೆ. ಕರ್ನಾಟಕ, ಭಾರತದ ನಾನಾ ಹವಾಮಾನ ಮಾಹಿತಿ ನೀಡುವ ಹೆಸರುಗಳು ವೆದರ್‌ಮ್ಯಾನ್ ನೊಂದಿಗೆ ನಂಟು ಹಾಕಿರುವುದು ಕಾಣುತ್ತವೆ. ಮೂರ್ನಾಲ್ಕು ವರ್ಷದಲ್ಲಿ ಇಂತ ದೊಡ್ಡ ಪಡೆಯೇ ನಿರ್ಮಾಣವಾಗಿದೆ. ಅವರೆಲ್ಲರೂ ಒಂದು ಕಡೆಯಲ್ಲಿ ವೃತ್ತಿಯಲ್ಲಿರುವವರು. ಟೆಕ್ಕಿಗಳು, ವಿಜ್ಞಾನಿಗಳು, ಖಾಸಗಿ ಕಂಪೆನಿ ಉದ್ಯೋಗಿಗಳು, ಸಂಶೋಧಕರು... ಹೀಗೆ ನಾನಾ ವಲಯದವರು ಹವಾಮಾನ ತಜ್ಞರಾಗಿ ರೂಪುಗೊಂಡಿದ್ದಾರೆ.
ಮೈಸೂರಿನ ರವಿಕೀರ್ತಿಗೌಡ(ravikeerthi22) ಅವರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಅವರು ಹವ್ಯಾಸಿ ಹವಾಮಾನ ಪರಿವೀಕ್ಷಕ. ಅದರಲ್ಲೂ ಕಾವೇರಿ ಕೊಳ್ಳದ ಹವಾಮಾನ, ನೀರಾವರಿ, ಜಲತಾಣಗಳ ಮಾಹಿತಿಯನ್ನ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ನೀಡುತ್ತಾರೆ. ಬಹುತೇಕ ಹದಿನಾರು ಗಂಟೆ ಕಾಲ ಅವರ ಖಾತೆ ಸಕ್ರಿಯವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ಮಾಹಿತಿ ನೀಡಿದರೆ ಈಗ ಮಳೆಗಾಲದಲ್ಲಂತೂ ಅವರು ಸಕ್ರಿಯರು. ಸಂಪರ್ಕ ಜಾಲವನ್ನು ಬೆಳೆಸಿಕೊಂಡು ಮಾಹಿತಿ ತೆಗೆದು ಅಪ್ಲೋಡ್ ಮಾಡುತ್ತಾರೆ. ನಿಜಕ್ಕೂ ಅವರು ನೀಡುವ ವಿವರಗಳನ್ನು ಕ್ಷಣ ಮಾತ್ರದಲ್ಲಿ ಸಹಸ್ರಾರು ಜನ ನೋಡುತ್ತಾರೆ. ಅಂತಹ ಫಾಲೋವರ್ಸ್‌ಗಳನ್ನು ಕೂಡ ರವಿಕೀರ್ತಿಗೌಡ ಹೊಂದಿದ್ದಾರೆ.
ಕರ್ನಾಟಕದವರೇ ಆದ ನವೀನ್ ರೆಡ್ಡಿ(navin_ankampali) ಮೂಲತಃ ಟೆಕ್ಕಿ. ಅವರ ಹವ್ಯಾಸ ಪ್ರವಾಸ, ಹವಾಮಾನ. ಅವರು ಕೃಷ್ಣಾ, ತುಂಗಭದ್ರಾ ಕಣಿವೆಯ ನದಿಗಳು, ಜಲಾಶಯಗಳು, ಜಲ ತಾಣಗಳ ಮಾಹಿತಿಯನ್ನು ನಿಖರವಾಗಿ ನೀಡುತ್ತಾರೆ. ಕ್ಷಣ ಕ್ಷಣಕ್ಕೆ ಅಪ್ಡೇಟ್ ಮಾಡುತ್ತಾರೆ. ಮಳೆಗಾಲದಲ್ಲಿ ವಾರಾಂತ್ಯ ಮಾತ್ರವಲ್ಲ. ಇತರೆ ಸಮಯದಲ್ಲಿ ಹೆಚ್ಚು ಪ್ರವಾಸವನ್ನು ನವೀನ್ ರೆಡ್ಡಿ ಮಾಡುತ್ತಾರೆ. ಅವರು ಕೂಡ ಸಹಸ್ರಾರು ಮಂದಿ ಫಾಲೋವರ್ಸ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ರೂಪಿಸಿಕೊಂಡಿದ್ದಾರೆ.
ಕಾರವಾರದವರಾದ ದೇವರಾಜ ಭಟ್ಕಳ್(Devraj Bhatal) ಕೂಡ ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸೊಬಗನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಉಣ ಬಡಿಸುತ್ತಾರೆ. ಕಾಳಿ, ಅಘನಾಶಿನಿ ನದಿಯ ಜಲ ವೈಭವ, ಅಲ್ಲಿನ ರುದ್ರ ರಮಣೀಯ ಜಲಪಾತಗಳ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ಕಳೆದ ವಾರ ನಡೆದ ಅಂಕೋಲಾ ಸಮೀಪದ ಶಿರೂರು ಹೆದ್ದಾರಿ ಭೂಕುಸಿತಕ್ಕೆ ಸಂಬಂಧಿಸಿ ಸಾಕಷ್ಟು ಮಾಹಿತಿಯನ್ನು ನೆಟ್ಟಿಗರಿಗೆ ದೇವರಾಜ್ ಒದಗಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನೆಲೆಸಿರುವ ರಾಮಕೃಷ್ಣ ಅನಂತ ಗೋಪಾಲಿ(RamakrishnaAG) ಕೂಡ ಮಳೆ ಮತ್ತು ಹವಾಮಾನ ಕುತೂಹಲಿ. ತಮ್ಮೂರ ಮಧ್ಯೆವೇ ಹರಿವ ತುಂಗಭದ್ರಾ ಒಡಲಿನ ಸ್ಥಿತಿಗತಿ, ಅಕ್ಕಪಕ್ಕದ ಮಾಹಿತಿಯನ್ನು ನೀಡುತ್ತಾರೆ.
ಅದೇ ರೀತಿ ವಿದೇಶದಲ್ಲಿರುವ ಕರ್ನಾಟಕದವರಾದ ಸುನೀಲ್ ನಾಗರಾಜ್(sunil_nagaraj) ವೆದರ್‌ಸೈಟಿಯೋ(weathersightio) ಸಂಸ್ಥಾಪಕ. ಆ ಮೂಲಕ ಅವರು ಹವಾಮಾನದ ನಿಖರ ಮಾಹಿತಿ ಒದಗಿಸುತ್ತಾರೆ.
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಹಾಗೂ ಕೇರಳದವರಾದ ಹಲವರು ಇದ್ದಾರೆ. ಸೆಲ್ವಿನ್( Selwyn),ಶ್ರೀನಿವಾಸನ್ ವೆಂಕಟೇಶ್(MASRAINMAN) ಕೂಡ ಪ್ರಮುಖರು. ಹೇಮಚಂದರ್ ಅವರು ಡೆಲ್ಟಾ ವೆದರ್‌ಮೆನ್(Delta Weatherman) ಮೂಲಕ ಗಮನ ಸೆಳೆದವರು, ಹೇಮಚಂದರ್ ಹವಾಮಾನ ಬ್ಲಾಗರ್ ಕೂಡ. ಅದೇ ರೀತಿ ಟಿ. ರಾಜಾ ತೆಂಕಾಸಿ ವೆದರಮನ್(Tenkasi Weatherman) ತಮಿಳುನಾಡಿನಲ್ಲಿ ರಾಜಾ ಉಪನ್ಯಾಸಕ. ಹವಾಮಾನ ಇವರ ಆಸಕ್ತಿ. ಗೋಕುಲ್ ತಮಿಳ್ ಸೆಲ್ವಂ(Gokul Tamilselvam) ಪುಣೆ ನಿವಾಸಿ.ಹವಾಮಾನ ಸಂಶೋಧಕ. ನವ್‌ದೀಪ್ ದಹಿಯಾ(navdeep dahiya) ಗುರಗಾಂವ್ ನಿವಾಸಿ ಕೃಷಿಕರಿಗೆ ಹವಾಮಾನ ಜಾಗೃತಿ ಇವರ ಕಾಯಕ. ಇದೇ ರೀತಿ ಸಾಮಾಜಿಕ ಮಾಧ್ಯಮದಲ್ಲಿ ಹತ್ತಾರು ವಿಭಿನ್ನ ವೃತ್ತಿಯ ವಾರಿಯರ್‌ಗಳ ಹವಾಮಾನ ಸೇವೆ ಮುಂದುವರೆದಿದೆ. ನಿಮಗೂ ಹವಾಮಾನದ ನಿಖರ ಮಾಹಿತಿ ಬೇಕು ಎನ್ನಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇವರನ್ನು ಫಾಲೋ ಮಾಡಬಹುದು. ವಾರಿಯರ್‌ಗಳ ರೀತಿಯಲ್ಲಿಯೇ ಕೆಲಸ ಮಾಡುವ ಇವರಿಗೊಂದು ಸಲಾಂ .

ವಿಭಾಗ