ಕರ್ನಾಟಕ ಹವಾಮಾನ ಫೆ 7; ಬೆಂಗಳೂರಿನಲ್ಲಿ ವಿಮಾನ ಯಾನಕ್ಕೆ ಮುಂಜಾನೆಯ ಮಂಜು ಅಡ್ಡಿ, ಹಗಲು ಬಿಸಿಲ ಬೇಗೆ, ತಾಪಮಾನ ಹೆಚ್ಚಳ
ಕರ್ನಾಟಕ ಹವಾಮಾನ ಫೆ 7; ಬೆಂಗಳೂರಿನಲ್ಲಿ ವಿಮಾನ ಯಾನಕ್ಕೆ ಮುಂಜಾನೆಯ ಮಂಜು ಅಡ್ಡಿಯಾಗಿದೆ. ಹಗಲು ಬಿಸಿಲ ಬೇಗೆ ಅನುಭವಕ್ಕೆ ಬರಲಿದ್ದು ತಾಪಮಾನ ಹೆಚ್ಚಳ ಕಾಡಲಿದೆ. ಫೆ.12ರ ತನಕ ಈ ರೀತಿ ಹವಾಮಾನ ಇರಲಿದ್ದು, ಮುಂಜಾನೆ ವಿಮಾನ ಹಾರಾಟಕ್ಕೆ ತೊಂದರೆ ಆಗಲಿದೆ. ರಾಜ್ಯದಲ್ಲಿ ಪ್ರಮುಖ ನಗರಗಳಲ್ಲಿ ಹಗಲು ಬಿಸಿಲ ಬೇಗೆ ಕಾಡುತ್ತಿದ್ದು, ಬೇಗನೆ ಬಿರುಬೇಸಿಗೆಯ ಅನುಭವ ಉಂಟಾಗಿದೆ.
ಬೆಂಗಳೂರು: ಚಳಿಗಾಲದ ನಡುವೆ, ಮುಂಜಾನೆ ಮಂಜು ಬೆಂಗಳೂರನ್ನು ಕಾಡಿದೆ. ವಿಮಾನ ಯಾನಕ್ಕೆ ಇದು ಅಡ್ಡಿಯಾಗಿದ್ದು,. ವಿಮಾನ ಯಾನ ಕಂಪನಿಗಳು ಯಾತ್ರಿಕರಿಗೆ ಸಲಹೆಗಳನ್ನು, ಸಂದೇಶಗಳನ್ನು ರವಾನಿಸತೊಡಗಿವೆ. ಮಂಗಳವಾರ (ಫೆ.6) ವಿಮಾನ ಯಾನ ಕಂಪನಿಗಳು ಮುಂಜಾನೆಯ ಕೆಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ತಾಪಮಾನ 32 ಡಿಗ್ರಿ ದಾಟಿದ್ದು, ಬಿರು ಬೇಸಿಗೆ ಅನುಭವ ಫೆಬ್ರವರಿಯಲ್ಲೇ ಕಾಡತೊಡಗಿದೆ. ನಿನ್ನೆ (ಫೆ.6) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಪಮಾನ ಹಗಲು ಹೊತ್ತು 32 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು. ಬೆಳಗಾವಿ, ಕಾರವಾರಗಳಲ್ಲೂ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ದಾಟಿತ್ತು. ಇಂದು ಕೂಡ ಈ ನಗರಗಳಲ್ಲಿ ತಾಪಮಾನ 32 ಡಿಗ್ರಿ ದಾಟಲಿದ್ದು, ಬಿಸಿಲ ಬೇಗೆ ಕಾಡಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಬೆಳಗಾವಿ ಜಿಲ್ಲೆ ಸುತ್ತಮುತ್ತ ಹಲವೆಡೆ ನಸುಕಿನ ವೇಳೆ ಮೋಡ ಕವಿದ ವಾತಾವರಣ ಇದೆ. ಮುಂಜಾನೆ ಮಂಜು ಮುಸುಕಿದ ವಾತಾವರಣದ ಇರುವಲ್ಲಿ ತೀವ್ರ ಚಳಿ ಕಾಡಬಹುದು. ಹಗಲು ತಾಪಮಾನ ಹೆಚ್ಚಳವನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ರಾತ್ರಿ ಮತ್ತು ಮುಂಜಾನೆ ಚಳಿ ಇದ್ದರೆ, ಹಗಲು ಒಣ ಹವೆ ಮುಂದುವರಿಯಲಿದೆ. ತಾಪಮಾನ ಸ್ವಲ್ಪ ಹೆಚ್ಚಳವಾಗಿರುವುದು ಅನುಭವಕ್ಕೆ ಬಂದೀತು.
ಕರಾವಳಿಯಲ್ಲಿ ಸಹಜ ವಾತಾವರಣ ಇದ್ದರೂ, ನಗರ ಪ್ರದೇಶ ಬಿಟ್ಟು ಬಹುತೇಕ ಕಡೆ ಮುಂಜಾನೆ ಮಂಜು ಮತ್ತು ರಾತ್ರಿ ಸಾಧಾರಣ ಚಳಿ ಇರಲಿದೆ. ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಕಡೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಶಿಯಸ್ ತನಕ ಏರಿಕೆ ಕಾಣಬಹುದು ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕಲಬುರಗಿ ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಚಳಿ ಇರಲಿದ್ದು, ಹಗಲು ಹೊತ್ತು ಒಣಹವೆ, ನಿರ್ಮಲ ಆಕಾಶವೂ ಇರಲಿದೆ.
ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ವಿಜಯನಗರ,ಚಾಮರಾಜನಗರ, ಕೋಲಾರ, ರಾಮನಗರ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರುಗಳಲ್ಲಿ ರಾತ್ರಿ ಚಳಿ, ಹಗಲಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಇಂದಿನ ಹವಾಮಾನ
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮಂಗಳವಾರ (ಫೆ.6) ಕೆಲವೆಡೆ ಮುಂಜಾನೆ ಮಂಜು ಇರಲಿದ್ದು, ಚಳಿ ಕೂಡ ಇರಲಿದೆ. ಹಗಲು ನಿರ್ಮಲ ಆಕಾಶ ಕಾಣಬಹುದು. ಸಂಜೆ ವೇಳೆ ಚಳಿ ಕಾಡಲಿದ್ದು, ಹಗಲು ಹೊತ್ತಿನಲ್ಲಿ ಒಣಹವೆ ಇರಲಿದೆ ಎಂದು ವರದಿ ಹೇಳಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು (ಫೆ.7) ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ನಿನ್ನೆ (ಫೆ.06) 31.8 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 18.1 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಲಿದೆ. ನಿನ್ನೆ (ಫೆ.06) ತಾಪಮಾನ 31.8 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಐಎನಲ್ಲಿ ಮುಂಜಾನೆ ಹೊತ್ತು ವಿಮಾನ ಹಾರಾಟಕ್ಕೆ ಅಡ್ಡಿ
ಬೆಂಗಳೂರು ವಿಮಾನ ನಿಲ್ದಾಣದ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಹವಾಮಾನ ವೈಪರೀತ್ಯ ಉಂಟಾಗಿದ್ದು, ಮುಂಬೈ-ಬೆಂಗಳೂರು ವಿಸ್ತಾರಾ ವಿಮಾನ ಮತ್ತು ಇಂಡಿಗೋದ ಕೆಲವು ವಿಮಾನ ಸೇವೆಗಳಿಗೆ ತೊಂದರೆಯಾಗಿದೆ. ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುನ್ಸೂಚನೆಯ ಪ್ರಕಾರ, ಫೆಬ್ರವರಿ 12 ರವರೆಗೆ ನಗರವು ಮಂಜಿನ ವಾತಾವರಣ ಇರಲಿದೆ.
ಇದೇ ಕಾರಣಕ್ಕೆ ನಿನ್ನೆ (ಫೆ.6) ಬೆಳಗ್ಗೆ ಕೆಟ್ಟ ಹವಾಮಾನದ ಕಾರಣ ಬೆಂಗಳೂರಿನ ಕೆಐಎನಲ್ಲಿ ವಿಮಾನ ಹಾರಾಟಕ್ಕೆ ತೊಂದರೆ ಆಗಿತ್ತು. ಈ ಕುರಿತು ಇಂಡಿಗೋ ಏರ್‌ಲೈನ್ಸ್ ಅಪ್ಡೇಟ್ ಅನ್ನು ಕೂಡ ಕೊಟ್ಟಿದೆ.
ಇದೇ ರೀತಿ, ವಿಸ್ತಾರಾ ಕೂಡ ಮುಂಬೈ- ಬೆಂಗಳೂರು ವಿಮಾನವನ್ನು ಕೊಯಮತ್ತೂರಿಗೆ ಡೈವರ್ಟ್ ಮಾಡಿತ್ತು. ಇದರ ಅಪ್ಡೇಟ್ ಅನ್ನು ಅದು ಎಕ್ಸ್‌ನಲ್ಲಿ ನೀಡಿದೆ.
ಪ್ರಮುಖ ನಗರಗಳಲ್ಲಿ ಈಗಿನ (ಫೆ.7ರ ಬೆಳಗ್ಗೆ 6 ಗಂಟೆಗೆ) ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಫೆ.7 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು - 22.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 75)
ಮಂಗಳೂರು - 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 84)
ಚಿತ್ರದುರ್ಗ - 22.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 46)
ಗದಗ - 24.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 50)
ಹೊನ್ನಾವರ - 32 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 44)
ಕಲಬುರಗಿ - 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 55)
ಬೆಳಗಾವಿ - 34.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 23)
ಕಾರವಾರ - 34 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 53)