Western Ghats draft notification: 18ಕ್ಕೆ ಮಲೆನಾಡು ಶಾಸಕರ ಸಭೆ
ಕನ್ನಡ ಸುದ್ದಿ  /  ಕರ್ನಾಟಕ  /  Western Ghats Draft Notification: 18ಕ್ಕೆ ಮಲೆನಾಡು ಶಾಸಕರ ಸಭೆ

Western Ghats draft notification: 18ಕ್ಕೆ ಮಲೆನಾಡು ಶಾಸಕರ ಸಭೆ

ಕೇಂದ್ರ ಸರ್ಕಾರ ಪ್ರಕಟಿಸಿರುವ ಪಶ್ಚಿಮ ಘಟ್ಟ ಕರಡು ಅಧಿಸೂಚನೆ ಬಗ್ಗೆ ಮಲೆನಾಡು ಪ್ರದೇಶದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜು.18ರಂದು ಸೋಮವಾರ ಮಲೆನಾಡು ಶಾಸಕರ ಸಭೆ ಕರೆದಿದ್ದಾರೆ.

<p>ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (HT File)</p>
ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (HT File) (HT_PRINT)

ಬೆಂಗಳೂರು: ಕೇಂದ್ರ ಪರಿಸರ ಸಚಿವಾಲಯ ಪ್ರಕಟಿಸಿರುವ ಪಶ್ಚಿಮ ಘಟ್ಟ ಕರಡು ಅಧಿಸೂಚನೆ ಬಗ್ಗೆ ಮಲೆನಾಡು ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತು ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಜು.18ರಂದು ಮಲೆನಾಡು ಪ್ರತಿನಿಧಿಸುವ ಶಾಸಕರ ಸಭೆಯನ್ನು ಕರೆದಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ, ಭವಿಷ್ಯಕ್ಕೆ ಮಾರಕವಾಗಬಹುದಾದ ಅಧಿಸೂಚನೆಯ ಅಂಶಗಳ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಶಾಸಕರು ತೀರ್ಮಾನಿಸಿದ್ದಾರೆ.

ಕಳೆದ ವಾರ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56826 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು, ಎರಡು ತಿಂಗಳು ಗಡುವು ನೀಡಿದೆ.

ಒಂದು ವೇಳೆ ಈ ಅಧಿಸೂಚನೆ ಅನುಷ್ಠಾನವಾದರೆ, ಮಲೆನಾಡು ನಿವಾಸಿಗಳ ಬದುಕು ಮಸುಕಾಗುತ್ತದೆ. ಅಭಿವೃದ್ದಿ ಕುಂಟುತ್ತದೆ ಹಾಗೂ ತೀವ್ರ ಆರ್ಥಿಕ ಹಾನಿಗೆ ತುತ್ತಾಗಬೇಕಾಗುತ್ತದೆ. ಕರ್ನಾಟಕ ಸರಕಾರ ಈ ಹಿಂದೆ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಿದೆ. ತನ್ನ ನಿಲುವಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬುದು ಮಲೆನಾಡು ಭಾಗದ ಶಾಸಕರ ಆಗ್ರಹ ಎಂದಿರುವ ಸಚಿವರು, ಸೋಮವಾರದ ಸಭೆಯಲ್ಲಿ ಅಧಿಸೂಚನೆಯನ್ನು ವಿರೋಧಿಸಿ, ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಧಿಸೂಚನೆಯಲ್ಲೇನಿದೆ?

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56826 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಅಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಪಶ್ಚಿಮಘಟ್ಟ ಪ್ರದೇಶದ ಹಲವಾರು ಸಾರ್ವಜನಿಕ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಇತ್ತೀಚೆಗೆ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶದ (ESA) ಕರಡು ಅಧಿಸೂಚನೆಯನ್ನು ಮರು-ನೀಡಿತ್ತು, ಅದರಲ್ಲಿ 20,668 ಚ.ಕಿ.ಮೀ. ಕರ್ನಾಟಕದಲ್ಲಿದೆ. ಹಿಂದಿನ ಅಧಿಸೂಚನೆಗಳನ್ನು ರದ್ದುಗೊಳಿಸಿ, ಪರಿಸರ ಸಚಿವಾಲಯ ಅದನ್ನು ಮರು ಬಿಡುಗಡೆ ಮಾಡಿದೆ.

ಕರ್ನಾಟಕದ ಅರಣ್ಯ ಸಚಿವ ಉಮೇಶ ಕತ್ತಿ ಅವರು ಇತ್ತೀಚೆಗೆ ಈ ಪ್ರದೇಶದ ಅಧಿಕಾರಿಗಳು, ಶಾಸಕರು ಮತ್ತು ಮಧ್ಯಸ್ಥಗಾರರ ಜತೆ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.

ಒಂದು ವೇಳೆ ಈ ಅಧಿಸೂಚನೆ ಜಾರಿಗೆ ಬಂದರೆ ಮಲೆನಾಡು ಭಾಗದಲ್ಲಿ ವಾಸಿಸುವ ಜನರ ಜೀವನ ಅಸ್ತವ್ಯಸ್ತವಾಗುತ್ತದೆ, ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಲಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಗೃಹ ಸಚಿವ ಜ್ಞಾನೇಂದ್ರ ತಿಳಿಸಿದ್ದಾರೆ.

ಕಸ್ತೂರಿರಂಗನ್ ಸಮಿತಿಯ 2013ರ ವರದಿಯು ಕರ್ನಾಟಕದಲ್ಲಿ 20,668 ಚದರ ಕಿಲೋ ಮೀಟರ್‌ ಪರಿಸರ ಸೂಕ್ಷ್ಮ ಪ್ರದೇಶ ಎಂದು ಶಿಫಾರಸು ಮಾಡಿತ್ತು. ಕೇಂದ್ರವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಡಿರುವ ಒಟ್ಟು 46,832 ಚದರ ಕಿಲೋ ಮೀಟರ್‌ ಪ್ರದೇಶದ ಕುರಿತ ಕರಡು ಅಧಿಸೂಚನೆಯನ್ನು ಕರ್ನಾಟಕ ಸೇರಿ ಸಂಬಂಧಪಟ್ಟ ರಾಜ್ಯಗಳು ಹಲವು ಬಾರಿ ತಿರಸ್ಕರಿಸಿವೆ. ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದರಿಂದ ಗಣಿಗಾರಿಕೆ ಮತ್ತು ಇತರ ನಿರ್ಮಾಣಗಳು ಸೇರಿದಂತೆ ಕೆಲವು ಮಾನವ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ದುರ್ಬಲವಾದ ಪರಿಸರ ವ್ಯವಸ್ಥೆಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹಲವರು ಹೇಳುತ್ತಾರೆ.

Whats_app_banner