ಪಶ್ಚಿಮಘಟ್ಟ ಸಂರಕ್ಷಿಸುವ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಬಗ್ಗೆ ಇರುವ ಆಕ್ಷೇಪಗಳೇನು; ಇಲ್ಲಿದೆ ಈ ಕುರಿತ 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಪಶ್ಚಿಮಘಟ್ಟ ಸಂರಕ್ಷಿಸುವ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಬಗ್ಗೆ ಇರುವ ಆಕ್ಷೇಪಗಳೇನು; ಇಲ್ಲಿದೆ ಈ ಕುರಿತ 10 ಅಂಶಗಳು

ಪಶ್ಚಿಮಘಟ್ಟ ಸಂರಕ್ಷಿಸುವ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಬಗ್ಗೆ ಇರುವ ಆಕ್ಷೇಪಗಳೇನು; ಇಲ್ಲಿದೆ ಈ ಕುರಿತ 10 ಅಂಶಗಳು

ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ಹರಡಿರುವ ಪಶ್ಚಿಮಘಟ್ಟಗಳ ಸುಂದರ ಪ್ರಕೃತಿಯನ್ನು ಉಳಿಸುವ ಉದ್ದೇಶವನ್ನು ಹೊಂದಿರುವ ಮಾಧವ ಗಾಡ್ಗೀಳ್‌ ಹಾಗೂ ಕಸ್ತೂರಿ ರಂಗನ್‌ ವರದಿ ಅನುಷ್ಠಾನದ ಬಗ್ಗೆ ಮೊದಲಿನಿಂದಲೂ ಹಲವು ಆಕ್ಷೇಪಗಳು ಕೇಳಿಬರುತ್ತಿವೆ. ಈ ವರದಿಯ ಬಗ್ಗೆ ಪರ–ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದು, ಈ ಕುರಿತು ಇರುವ ಪ್ರಮುಖ ಅಕ್ಷೇಪಗಳೇನು ಎಂಬ ವಿವರ ಇಲ್ಲಿದೆ.

ಪಶ್ಚಿಮ ಘಟ್ಟ (ಸಾಂಕೇತಿಕ ಚಿತ್ರ)
ಪಶ್ಚಿಮ ಘಟ್ಟ (ಸಾಂಕೇತಿಕ ಚಿತ್ರ)

ಸಮೃದ್ದ ಹಾಗೂ ಜಗತ್ತಿನಲ್ಲಿಯೇ ಹೆಚ್ಚಿನ ಜೀವ ವೈವಿಧ್ಯತೆ ಹೊಂದಿರುವ ಪಶ್ಚಿಮ ಘಟ್ಟಗಳನ್ನು ಉಳಿಸುವ ದೃಷ್ಟಿಯಿಂದ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿತ್ತು. ಮೊದಲು ಕೇಂದ್ರ ಸರ್ಕಾರ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿಯು ಮಾಧವ ಗಾಡ್ಗೀಳ್ ವರದಿಯನ್ನು ಸಿದ್ಧಪಡಿಸಿತ್ತು. ನಂತರ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಈ ವರದಿಯನ್ನು ಪರಿಶೀಲಿಸಿ ಇನ್ನೊಂದು ವರದಿ ಸಿದ್ಧಪಡಿಸಿದ್ದು, ಅದಕ್ಕೆ ಕಸ್ತೂರಿ ರಂಗನ್ ವರದಿ ಎಂದು ಹೆಸರಿಸಲಾಗಿತ್ತು. ಈ ವರದಿ ಸಿದ್ಧವಾದ ನಂತರ ಇವರ ಅನುಷ್ಠಾನದ ಬಗ್ಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ವರದಿಯನ್ನು ಜಾರಿಗೊಳಿಸುವ ಬಗ್ಗೆ ಕೆಲವು ವರ್ಷಗಳಿಂದ ಪರ–ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಒಂದು ವರ್ಗ ಈ ವರದಿ ಅನುಷ್ಠಾನವಾಗಬೇಕು ಎಂದರೆ, ಇನ್ನೊಂದು ವರ್ಗ ಯಾವುದೇ ಕಾರಣಕ್ಕೂ ವರದಿ ಅನುಷ್ಠಾನಗೊಳ್ಳಬಾರದು ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಮಾಧವ್ ಗಾಡ್ಗೀಳ್ ಅವರ ವರದಿಯು ಪಶ್ಚಿಮ ಘಟ್ಟದ ಶೇ 94 ರಿಂದ 97ರಷ್ಟು ಭೂ ಭಾಗವನ್ನು ಸೂಕ್ಷ್ಮ ಪರಿಸರ ಎಂದು ಗುರುತಿಸಿತ್ತು. ನಂತರ ಕಸ್ತೂರಿ ರಂಗನ್ ನೇತೃತ್ವದ ತಂಡವು ಗಾಡ್ಗೀಳ್ ವರದಿಯನ್ನು ಪರಿಶೀಲಿಸಿ, ಲೋಪ ದೋಷಗಳನ್ನು ಸರಿಪಡಿಸಿ ಇನ್ನೊಂದು ವರದಿ ಸಿದ್ಧಪಡಿಸಿತ್ತು. ಕಸ್ತೂರಿ ರಂಗನ್ ವರದಿಯು ಗುಜರಾತ್‌ನ ತಪತಿ ನದಿಯಿಂದ ಮಹಾರಾಷ್ಟ್ರ, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮಾರಿವರೆಗೆ ಸುಮಾರು 1,64, 280 ಚದರ ಕಿಲೋಮೀಟರ್ ‍ಪ್ರದೇಶವನ್ನು ಪಶ್ಚಿಮ ಘಟ್ಟ ಎಂದು ಗುರುತಿಸಿತ್ತು. ಕರ್ನಾಟಕದ ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಭೂಭಾಗಗಳು ಪಶ್ಚಿಮ ಘಟ್ಟದ ಸಾಲಿಗೆ ಸೇರುತ್ತವೆ.

ಪಶ್ಚಿಮ ಘಟ್ಟ ಎಂದು ಘೋಷಣೆಯಾದ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲು ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲವಿದ್ಯುತ್‌ ಯೋಜನೆ, ಪವನ ವಿದ್ಯುತ್ ಯೋಜನೆ ಸೇರಿ ಯಾವುದೇ ಯೋಜನೆಯನ್ನು ಜಾರಿಗೊಳಿಸುವಂತಿಲ್ಲ. ಈಗಾಗಲೇ ಇರುವ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಈ ವರದಿ ಶಿಫಾರಸು ಮಾಡಿದೆ. ಈ ಪ್ರದೇಶದಲ್ಲಿ ಸಿಮೆಂಟ್, ಕಲ್ಲು, ರಾಸಾಯನಿಕ ಬಳಕೆ ಹಾಗೂ ಜನವಸತಿ ಪ್ರದೇಶ ನಿರ್ಮಾಣಕ್ಕೂ ನಿಷೇಧ ವಿಧಿಸಬೇಕೆಂದು ವರದಿಯ ಶಿಫಾರಸು ಮಾಡಿದೆ. ಆ ಕಾರಣಕ್ಕೆ ವರದಿ ಅನುಷ್ಠಾನದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಈ ಯೋಜನೆಯ ಬಗ್ಗೆ ಹಲವಾರು ಆಕ್ಷೇಪಗಳು ಕೇಳಿ ಬರುತ್ತಿವೆ.

ಕಸ್ತೂರಿ ರಂಗನ್‌, ಮಾಧವ್ ಗಾಡ್ಗೀಳ್ ವರದಿ ಅನುಷ್ಠಾನದ ಕುರಿತ ಪ್ರಮುಖ ಆಕ್ಷೇಪಗಳು

  • ಕಸ್ತೂರಿ ರಂಗನ್ ವರದಿ ಅನುಷ್ಠಾನವಾದ್ರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಆ ನಂತರ ಈ ಭಾಗದಲ್ಲಿ ಮಾನವ ಹಸ್ತಕ್ಷೇಪವನ್ನು ಮಾಡುವಂತೆಯೇ ಇರುವುದಿಲ್ಲ.
  • ಇಡೀ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ. ಇಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಇದರಿಂದ ಕಾಡನ್ನೇ ಬದುಕು ಎಂದು ನಂಬಿರುವ ಆದಿವಾಸಿಗಳ ಬದುಕು ಅತಂತ್ರವಾಗುತ್ತದೆ ಎಂಬುದು ಕೆಲವರ ವಾದ.
  • ಈ ಪ್ರದೇಶ ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಸದ್ಯ ಇರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಮುಚ್ಚಬೇಕಾಗುತ್ತದೆ.
  • ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ಪಶ್ಚಿಮಘಟ್ಟದ ವ್ಯಾಪ್ತಿಗೆ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಕರ್ನಾಟಕದ ಹತ್ತು ಜಿಲ್ಲೆಗಳ ವ್ಯಾಪ್ತಿಯೂ ಇದರಲ್ಲಿದೆ.
  • ಅರಣ್ಯವಾಸಿಗಳು, ಆದಿವಾಸಿಗಳು ಹಾಗೂ ಮಲೆನಾಡಿನ ಭಾಗದ ಜನರನ್ನು ಒಕ್ಕಲೆಬ್ಬಿಸುವ ಬಗ್ಗೆ ಸ್ಪಷ್ಟ ವಿರೋಧ ಕೇಳಿಬರುತ್ತಿದೆ. ಹೊಲ-ಗದ್ದೆ, ತೋಟ ಮಾಡಿಕೊಂಡು ಬದುಕು ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ವಿರೋಧ ಮಾಡಲಾಗುತ್ತಿದೆ.

    ಇದನ್ನೂ ಓದಿ: Karnataka Naxal Movement: ಕರ್ನಾಟಕದ ನಕ್ಸಲ್‌ ಚಳಿವಳಿಗೆ ಈಗ 25ರ ಹಾದಿ; ಬೆಳೆದುಬಂದು ಬಗೆ ಹೇಗಿದೆ, ಏನೆಲ್ಲಾ ಬದಲಾವಣೆಗಳಾದವು
  • ಈ ವರದಿಯು ವಿದೇಶಿ ಪ್ರಾಯೋಜಿತ ವರದಿಯಾಗಿದ್ದು, ಇದರಿಂದ ಪರಿಸರ ಸಂರಕ್ಷಣೆ ಅಸಾಧ್ಯ ಎಂಬ ವಾದವೂ ಇದೆ.
  • ಅಧಿಸೂಚನೆ ಜಾರಿಯಿಂದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೂ ತೊಡಕು ಎಂದು ಜನರು ಆತಂಕದಲ್ಲಿದ್ದಾರೆ.
  • ಈ ಭಾಗದಲ್ಲಿ ಕೈಗಾರಿಕೆಗಳು ಇಲ್ಲವಾದ್ರೆ, ಕಟ್ಟಡಗಳನ್ನು ಕಟ್ಟಲು ನಿರ್ಬಂಧ ವಿಧಿಸಿದರೆ ಬದುಕೋದು ಹೇಗೆ ಎನ್ನುವುದು ಪಶ್ಚಿಮಘಟ್ಟದ ತ‍ಪ್ಪಲಿನಲ್ಲಿರುವ ಜನರ ಪ್ರಶ್ನೆ. ಹಳ್ಳಿಗಳ ಜನರು ಎಲ್ಲಿ ಹೋಗಬೇಕು, ಅವರು ಹೇಗೆ ಬದುಕು ಕಟ್ಟಿಕೊಳ್ಳಬೇಕು ಜನರು ಪ್ರಶ್ನಿಸುತ್ತಿದ್ದಾರೆ.
  • ಪ್ರಾಣಿ, ಪಕ್ಷಿಗಳ ರೀತಿಯಲ್ಲೇ ಮನುಷ್ಯರಿಗೂ ಬದುಕುವ ಹಕ್ಕಿದೆ ಎಂದು ಹೋರಾಟಗಾರರು ವಾದಿಸುತ್ತಿದ್ದಾರೆ. ಪರಿಸರ ಹೆಸರಿನಲ್ಲಿ ಜನರ ಬದುಕನ್ನು ಬಲಿ ಕೊಡುತ್ತಿದ್ದಾರೆ ಎಂಬುದು ಕಸ್ತೂರಿ ರಂಗನ್‌, ಮಾಧವ ಗಾಡ್ಗೀಳ್ ವರದಿ ಅನುಷ್ಠಾನಕ್ಕೆ ಅಕ್ಷೇಪ ವ್ಯಕ್ತಪಡಿಸುತ್ತಿರುವವರ ವಾದ.
  • ಕೇಂದ್ರ ಸರ್ಕಾರ ವರದಿಗಳ ಜಾರಿ ನಿಟ್ಟಿನಲ್ಲಿ ಆಯಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ. ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು ಬಹುತೇಕ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರದ ನಿರ್ಧಾರ ಮಾತ್ರ ಬಾಕಿ ಇದೆ.

    ಇದನ್ನೂ ಓದಿ: ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ

Whats_app_banner