Banu Mushtaq: ಎದೆಯ ಹಣತೆ ಬೆಳಕಲ್ಲಿ ಸಮಾಜಕ್ಕೂ ದೀವಟಿಗೆ ಹಿಡಿದು ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್; ವ್ಯಕ್ತಿ -ವ್ಯಕ್ತಿತ್ವ
ಕನ್ನಡ ಸುದ್ದಿ  /  ಕರ್ನಾಟಕ  /  Banu Mushtaq: ಎದೆಯ ಹಣತೆ ಬೆಳಕಲ್ಲಿ ಸಮಾಜಕ್ಕೂ ದೀವಟಿಗೆ ಹಿಡಿದು ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್; ವ್ಯಕ್ತಿ -ವ್ಯಕ್ತಿತ್ವ

Banu Mushtaq: ಎದೆಯ ಹಣತೆ ಬೆಳಕಲ್ಲಿ ಸಮಾಜಕ್ಕೂ ದೀವಟಿಗೆ ಹಿಡಿದು ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್; ವ್ಯಕ್ತಿ -ವ್ಯಕ್ತಿತ್ವ

Banu Mushtaq Profile: ಹಾರ್ಟ್‌ ಲ್ಯಾಂಪ್ ಕೃತಿ ಬೂಕರ್ ಪ್ರಶಸ್ತಿಯ ರೇಸ್‌ನಲ್ಲಿರುವ ಕಾರಣ ಚರ್ಚೆಯಲ್ಲಿದೆ. ಕನ್ನಡ ಸಾಹಿತ್ಯ ಲೋಕದ ಮಟ್ಟಿಗೆ ಇದು ಮಹತ್ವದ ಕ್ಷಣವಾಗಿದ್ದು, ಎದೆಯ ಹಣತೆ ಕೃತಿಯ ಲೇಖಕಿ ಬಾನು ಮುಷ್ತಾಕ್ ಅವರ ಕಿರು ಪರಿಚಯ ಮಾಡಿಕೊಳ್ಳೋದಕ್ಕೆ ಈ ಹೊತ್ತು ಒಂದು ನಿಮಿತ್ತ.

ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್
ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್

Who is Banu Mushtaq: ಉಳಿಯ ಏಟುಗಳು ಶಿಲೆಯನ್ನು ಶಿಲ್ಪರೂಪಕ್ಕೆ ತರುವಂತೆ ಬದುಕಿನಲ್ಲಿ ಎದುರಾಗುವ ಹೊಡೆತಗಳು ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತವೆ. ಈ ಪೀಠಿಕೆ ಏನಕ್ಕೆ ಅಂತ ಹುಬ್ಬೇರಿಸಬೇಡಿ. ಸದ್ಯ ಬೂಕರ್ ಪ್ರಶಸ್ತಿ ಕಾರಣಕ್ಕೆ ಚರ್ಚೆಯಲ್ಲಿರುವ ಹಾರ್ಟ್‌ ಲ್ಯಾಂಪ್‌ ಎಂಬ ಕೃತಿಯ ಮೂಲ ಲೇಖಕಿ ಬಾನು ಮುಷ್ತಾಕ್ ಸದ್ಯ ಸುದ್ದಿಯ ಕೇಂದ್ರ ಬಿಂದು. ಹಾರ್ಟ್‌ ಲ್ಯಾಂಪ್ ಸೆಲೆಕ್ಟೆಡ್‌ ಸ್ಟೋರೀಸ್ ಎಂಬುದು ದೀಪಾ ಭಸ್ತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಕೃತಿ. ಇದು ಭಾನು ಮುಷ್ತಾಕ್ ಅವರು ‘ಎದೆಯ ಹಣತೆ’ ಕಥಾ ಸಂಲನದ ಅನುವಾದ. 1990 ರಿಂದ 2023ರ ಅವಧಿಯಲ್ಲಿ ಬರೆದ 12 ಸಣ್ಣ ಕಥೆಗಳ ಸಂಕಲನ ಇದಾಗಿದ್ದು, ಎದೆಯ ಹಣತೆ ಎಂಬುದು ಇದರಲ್ಲಿ ಬರುವ ಒಂದು ಕಥೆ.

ಬಾನು ಮುಷ್ತಾಕ್‌ ಅವರು ಯಾರು, ಅವರ ಹಿನ್ನೆಲೆ ಏನು ಎಂಬಿತ್ಯಾದ ಕುತೂಹಲ ಅವರನ್ನು ಗೊತ್ತಿರದ ಹೊಸ ಓದುಗರನ್ನು ಕಾಡುವುದು ಸಹಜ. ನಾಲ್ಕಾರು ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತ ಎದೆಯ ಹಣತೆ ಬೆಳಕಲ್ಲಿ ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್.

ಬಾನು ಮುಷ್ತಾಕ್ ಎದೆಯ ಹಣತೆ ಬೆಳಗಿದ್ದು ಹೀಗೆ…

ಬಾನು ಮುಷ್ತಾಕ್ ಅವರು ಬೇರೆ ಬೇರೆ ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ಹೇಳಿದ ಮಾಹಿತಿಗಳನ್ನು ಗಮನಿಸಿದಾಗ ಅವರ ಬದುಕು ಸಾಗಿ ಬಂದ ರೀತಿ, ಚಿತ್ರಣ ಎಲ್ಲವೂ ಹಲವು ರೀತಿಯಲ್ಲಿ ಅಭಿವ್ಯಕ್ತವಾಗುತ್ತ ಹೋಗಿದೆ. ಅವರ ಬದುಕಿನ ಘಟನೆಗೆ ಹತ್ತಿರದ ಘಟನೆ ಇನ್ಯಾರದ್ದೋ ಬದುಕಿನಲ್ಲಿ ನಡೆದರೂ ಅದನ್ನೂ ಅವರು ಅನುಭವಿಸಿದರು. ಅದು ಕಥೆಗಳ ರೂಪದಲ್ಲಿ ಅಭಿವ್ಯಕ್ತವಾಗುತ್ತ ಹೋಗಿದೆ. ಹಾಗೆ ಅವರ ವ್ಯಕ್ತಿತ್ವವೂ ಬೆಳಗುತ್ತ ಸಾಗಿರುವುದು ಹೀಗೆ

ಅಪ್ಪ ಅರಸೀಕರೆಯಲ್ಲಿ ಹೆಲ್ತ್ ಇನ್‌ಸ್ಪೆಕ್ಟರ್. ಬಾಲ್ಯದಲ್ಲಿ ಎಲ್ಲ ಮುಸಲ್ಮಾನ ಮಕ್ಕಳಂತೆ ಅರಸೀಕರೆಯಲ್ಲಿ ಉರ್ದು ಶಾಲೆ ಸೇರಿದರೂ ಉರ್ದು ಕಲಿಕೆ ತಲೆಹತ್ತಲಿಲ್ಲ. ಅದು ರುಚಿಸಲಿಲ್ಲ. ಮಗಳ ಕಲಿಕೆ ಬಗ್ಗೆ ಚಿಂತಿತರಾಗಿದ್ದ ವೇಳೆಯೇ ಅಪ್ಪನಿಗೆ ಪ್ರಮೋಷನ್ ಮತ್ತು ಶಿವಮೊಗ್ಗಕ್ಕೆ ವರ್ಗಾವಣೆ. ಅಲ್ಲಿ ಅಪ್ಪನ ಕಚೇರಿ ಸಮೀಪವೇ ಒಂದು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆ. ಮಗಳು ಉರ್ದು ಕಲಿಯಲಿಲ್ಲ. ಕನ್ನಡವಾದರೂ ಕಲಿಯಲಿ ಎಂದು ಅಲ್ಲಿ ಅಡ್ಮಿಷನ್ ಮಾಡಿಸೋದಕ್ಕೆ ಹೋದರು. ಕಾನ್ವೆಂಟ್ ಶಾಲೆಯ ಸಿಸ್ಟರ್‌ಗಳು ಮುಸಲ್ಮಾನ ಹುಡುಗಿಯರು ಕನ್ನಡ ಕಲಿಯುವುದಿಲ್ಲ. ಕನ್ನಡ ಮಾಧ್ಯಮ ಶಾಲೆಯಲ್ಲಿ ಅವರಿಗೆ ಪ್ರವೇಶ ಇಲ್ಲ ಎಂದು ಹೇಳಿದರೂ, ಅಪ್ಪನ ಮನವಿಗೆ ಸ್ಪಂದಿಸಿ ಆರು ತಿಂಗಳು ನೋಡೋಣ. ಕಲಿತರೆ ಕಲಿಸೋಣ. ಇಲ್ಲ ಅಂದರೆ ಟಿಸಿ ಕೊಡ್ತೇವೆ. ತಕರಾರು ಮಾಡಬೇಡಿ ಎಂಬುದು ಅವರ ಷರತ್ತು. ಹಾಗೆ ಬಾನು ಎಂಬ ಪುಟ್ಟ ಬಾಲಕಿ ಶಿವಮೊಗ್ಗದ ಕಾನ್ವೆಂಟ್ ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿದಳು. ಆಗ ಬಾಲಕಿಗೆ 8 ವರ್ಷ ವಯಸ್ಸು. ಓರಗೆಯ ವಯಸ್ಸಿನವರು ಮೇಲಿನ ತರಗತಿಯಲ್ಲಿದ್ದರು.

ಆರು ತಿಂಗಳಲ್ಲಿ ಕನ್ನಡ ಅಕ್ಷರಾಭ್ಯಾಸ ಮಾಡಿಕೊಂಡು, ಕಾಗುಣಿತ ಕಲಿತದ್ದಾಯಿತು. ಸಿಸ್ಟರ್‌ಗಳಿಗೆ ಅಚ್ಚರಿ. ಆರು ತಿಂಗಳಾದ ಕೂಡಲೇ ಟಿಸಿ ಕೊಡಲಿಲ್ಲ, ಬದಲಾಗಿ ಎರಡನೇ ತರಗತಿಗೆ ಬಡ್ತಿ. ಎರಡನೇ ತರಗತಿಯಲ್ಲೂ ಅಷ್ಟೇ ಆರೇ ತಿಂಗಳು. ಮೂರನೇ ತರಗತಿಗೆ ಬಡ್ತಿ. ಮೂರನೇ ತರಗತಿಯಿಂದ ಆರೇ ತಿಂಗಳಿಗೆ 4ನೇ ತರಗತಿಗೆ ಬಡ್ತಿ. ಅಲ್ಲಿಗೆ ಎರಡೇ ವರ್ಷದಲ್ಲಿ ಕಲಿಕೆಯಲ್ಲಿ ಪ್ರಗತಿ ತೋರಿಸುತ್ತ ಓರಗೆಯ ವಯಸ್ಸಿನವರ ತರಗತಿಗೆ ಬಂದು ಸೇರಿದ ಬಾನು ಅವರ ಬದುಕು ಪದವಿ ವ್ಯಾಸಂಗ ಮಾಡುವ ತನಕವೂ ಸುಸೂತ್ರವಾಗಿಯೇ ಇತ್ತು. ಆದಾಗ್ಯೂ ಅವರು ಸಮಾಜದ ಪ್ರತಿ ಆಗುಹೋಗುಗಳನ್ನು ಗಮನಿಸುತ್ತಿದ್ದರು.

ಓರಗೆಯ ವಯಸ್ಸಿನ ಮುಸಲ್ಮಾನ ಹೆಣ್ಣುಮಕ್ಕಳು ಬಾಲ್ಯದಲ್ಲೇ ವಿವಾಹವಾಗಿ ಪತಿ ಮನೆ ಸೇರುತ್ತಿದ್ದುದನ್ನು ನೋಡಿದ್ದರು. ಅಲ್ಲಿ ಅವರ ಯಾತನೆ, ತಳಮಳಗಳನ್ನು ಕಂಡಿದ್ದರು. ಅಂತಹ ಬದುಕು ಕಷ್ಟ ಎಂದುಕೊಳ್ಳುತ್ತ 26ರ ವಯಸ್ಸಿನಲ್ಲಿ ಮೆಚ್ಚಿದ ಯುವಕನನ್ನೇ ವಿವಾಹವಾಗಿ ಬಾನು ಮುಷ್ತಾಕ್ ಆದರು. ಮದುವೆಯ ನಂತರ ಬದುಕು ಬದಲಾಯಿತು. ಬುರ್ಖಾ ಧರಿಸಬೇಕು. ಮನೆಗೆಲಸ ಮಾಡುತ್ತ, ಪತಿಯ ಮತ್ತು ಪತಿ ಮನೆಯವರ ಚಾಕರಿ ಕೆಲಸಗಳನ್ನು ಮಾಡುತ್ತ ಕಾಲಕಳೆಯಬೇಕು ಎಂಬ ನಿರ್ಬಂಧಗಳು ಭಾವ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸಿತು.

ಪತಿಯ ಮನೆಯವರದ್ದು ವಾಚ್‌ ಮತ್ತು ಕಣ್ಣಡಕದ ಅಂಗಡಿ ಆದರ ಕಾರಣ ಅವರು ಅವುಗಳ ಬಿಡಿಭಾಗ ಸ್ವಚ್ಛಗೊಳಿಸುವುದಕ್ಕೆ ವೈಟ್ ಪೆಟ್ರೋಲ್‌ ಬಳಸುತ್ತಿದ್ದರು. ಅದೊಂದು ದಿನ ಅದೇ ವೈಟ್‌ ಪೆಟ್ರೋಲ್‌ ತಗೊಂಡು ಮೈ ಮೇಲೆ ಸುರಿದುಕೊಂಡ ಬಾನು ಅವರು, ಬೆಂಕಿ ಕಡ್ಡಿ ಗೀರುವುದರಲ್ಲಿದ್ದೆ ಆಗ ಅವರ ಪತಿ ಮುಷ್ತಾಕ್ ಅವರು ಮೂರು ತಿಂಗಳ ಮಗುವನ್ನು ಪಾದದ ಮೇಲೆ ಇಟ್ಟು ತಡೆದರು. ಅಲ್ಲಿಂದಾಚೆಗೆ ಬಾನು ಅವರ ಬದುಕು ಕೂಡ ಬದಲಾಯಿತು. ಮನೆಯಲ್ಲಿ ಪತಿ ಮತ್ತು ಮಕ್ಕಳ ಬೆಂಬಲವೂ ಸಿಕ್ಕಿತು. ಅಭಿವ್ಯಕ್ತಿ ಮಾಧ್ಯಮವಾಗಿ ಬರವಣಿಗೆ ಮುಂದುವರಿಯಿತು. ಹೀಗೆ ಬಾನು ಮುಸ್ತಾಕ್‌ ಅವರ ಎದೆಯ ಹಣತೆ ಬೆಳಗಿತು. ಅಂದ ಹಾಗೆ, ಬಾನು ಮುಷ್ತಾಕ್ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಪತಿ ಮತ್ತು ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರರಿದ್ದಾರೆ.

ಸಮಾಜಕ್ಕೆ ದೀವಟಿಗೆಯಾಯಿತು ಎದೆಯ ಹಣತೆ

ಎದೆಯ ಹಣತೆ ಕಥಾ ಹಂದರವನ್ನೂ ಒಮ್ಮೆ ಗಮನಿಸಿ. ಸಮಾಜದಲ್ಲಿ ಪ್ರತಿಯೊಂದಕ್ಕೂ ಆಕೆಯನ್ನು ನೀನು ಹೀಗಿರಬೇಕು, ನೀನು ಪತಿಯನ್ನು ಸುಧಾರಿಸಿಕೊಂಡು ಹೋಗಬೇಕು. ಆತನ ಗುಣ, ನಡವಳಿಕೆಗಳನ್ನು ಪ್ರಶ್ನೆ ಮಾಡಬಾರದು. ಆತ ಇನ್ನೊಬ್ಬಳನ್ನು ಮದುವೆಯಾದರೆ ಕೇಳಬಾರದು, ಹೀಗೆ ಪ್ರತಿಯೊಂದಕ್ಕೂ ಮಹಿಳೆಗೆ ಚೌಕಟ್ಟು, ಪುರುಷನಿಗೆ ಚೌಕಟ್ಟಿಲ್ಲದ ಬದುಕು. ಇದರಿಂದ ರೋಸಿದ ಹೋದ ಮೆಹ್ರೂನ್ ಎಂಬ ಕಥಾ ಪಾತ್ರದ ಸುತ್ತ ಹಣೆದಿರುವ ಕಥೆ. ಮೆಹ್ರೂನ್ ಅದೊಂದು ಹಂತದಲ್ಲಿ ಸೀಮೆ ಎಣ್ಣೆ ತಗೊಂಡು ಮನೆಯ ಹಿಂಬಾಗಿಲಲ್ಲಿ ಹಿತ್ತಲಿಗೆ ಬಂದು ಮೈಮೇಲೆ ಸೀಮೆ ಎಣ್ಣೆ ಸುರಿದು ನಿಂತಿದ್ದಾಳೆ. ಕೈಯಲ್ಲಿ ಬೆಂಕಿ ಕಡ್ಡಿ ಗೀರಲು ಮುಂದಾಗಿದ್ದಾಳೆ. ಆಗ, ಅಲ್ಲಿಗೆ ಆಕೆಯ ಮಗಳು ಸಲ್ಮಾ , ಅಳುತ್ತಿರುವ ಪುಟ್ಟ ತಂಗಿಯನ್ನು ಎತ್ತಿಕೊಂಡು ಬಂದು ತಾಯಿಯ ಪಾದದ ಬುಡದಲ್ಲಿ ಮಲಗಿಸುತ್ತಾಳೆ. ಆಗ ಕಣ್ಣೀರಾದ ಮೆಹ್ರೂನ್, ಪುಟ್ಟ ಕಂದಮ್ಮನನ್ನು ಎತ್ತಿಕೊಂಡು, ದೊಡ್ಡ ಮಗಳು ಸಲ್ಮಾಳನ್ನು ಎದೆಗವುಚಿಕೊಂಡು ಮನೆಯೊಳಕ್ಕೆ ಹೋಗುತ್ತಾಳೆ. ಅ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಎದೆಯ ಹಣತೆ ಎಂಬ ಶೀರ್ಷಿಕೆ ಕೊಟ್ಟದ್ದಾಗಿ ಬಾನು ಮುಷ್ತಾಕ್ ಒಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.

ಹೀಗೆ ಬದುಕು, ಜೀವನಾನುಭವ, ಕಥೆಗಳು ಒಂದಕ್ಕೊಂದು ಹೊಂದಿಕೊಂಡು ಅವರ ಬದುಕಿನ ಭಾಗವಾಗಿದೆ.

ಬಾನು ಮುಷ್ತಾಕ್ ಅವರು ಬಿಎಸ್‌ಸಿ, ಎಲ್‌ಎಲ್‌ಬಿ ಪದವೀಧರರಾಗಿದ್ದು, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ, ಶಿಕ್ಷಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. ಹಾಸನ ಜಿಲ್ಲೆಯವರು. ದೂರದ ವಿಜಯಪುರ ಜಿಲ್ಲೆಯಲ್ಲಿ ಮುಸಲ್ಮಾನ ಹೆಣ್ಮಗಳು ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಿದ್ದನ್ನು ಖಂಡಿಸಿ ಲಂಕೇಶ್ ಪತ್ರಿಕೆಗೆ ಲೇಖನ ಬರೆಯುವ ಮೂಲಕ ಪತ್ರಕರ್ತೆಯಾದವರು. ಬಾಲ್ಯದಲ್ಲೇ ಬರವರಣಿಗೆ ರೂಢಿಸಿಕೊಂಡಿದ್ದ ಬಾನು ಅವರು, ಮಹಡಿ ಮನೆ ಎಂಬ ಕಾದಂಬರಿ ಬರೆದಿದ್ದರು. ಆದರೆ ಅದು ಮನೆ ಬದಲಾಯಿಸುವ ವೇಳೆ ಎಲ್ಲೋ ಕಳೆದು ಹೋದುದಾಗಿ ಹೇಳಿಕೊಂಡಿದ್ದಾರೆ. ಕಥೆ, ಕಾದಂಬರಿ, ಪ್ರಬಂಧ ಹೀಗೆ ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ಕಾದಂಬರಿ ‘ಕುಬ್ರ’. ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ ಅವರ ಕಥಾಸಂಕಲನಗಳಲ್ಲಿ ಸೇರಿವೆ. 'ಇಬ್ಬನಿಯ ಕಾವು', 'ಹೂ ಕಣಿವೆಯ ಚಾರಣ' ಮುಂತಾದವು ಲೇಖನಗಳ ಸಂಕಲನಗಳು. 'ಒದ್ದೆ ಕಣ್ಣಿನ ಬಾಗಿನ' ಕವನ ಸಂಕಲನ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜಕ್ಕೆ ದೀವಟಿಗೆಯಾಗಿ ನಿಲ್ಲುವ ಪ್ರಯತ್ನ ಮುಂದುವರಿಸಿದ್ದಾರೆ.

ಅಂದ ಹಾಗೆ ಬಾನು ಮುಷ್ತಾಕ್ ಅವರ ಕರಿನಾಗರಗಳು ಎಂಬ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ಹಸೀನಾ ಸಿನಿಮಾ ಮಾಡಿದ್ದರು. ಇದರಲ್ಲಿ ತಾರಾ ಅನೂರಾಧಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದಕ್ಕೆ 3 ರಾಷ್ಟ್ರಪ್ರಶಸ್ತಿ ಬಂದಿದ್ದವು. ಅದರಲ್ಲಿ ಒಂದು ಬಾನು ಅವರ ಸಹೋದರಿಗೆ ಸಿನಿಮಾದ ಉಡುಪು ವಿನ್ಯಾಸಕ್ಕೆ ಸಿಕ್ಕಿತ್ತು.

ಬಾನು ಮುಷ್ತಾಕ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಕನ್ನಡ ಸಾಹಿತ್ಯ ಲೋಕದ ಮಟ್ಟಿಗೆ ಇದು ಮಹತ್ವದ ಕ್ಷಣವಾಗಿದ್ದು, ಕನ್ನಡದ ಎದೆಯ ಹಣತೆ ಕಥಾ ಸಂಕಲನ ಇಂಗ್ಲಿಷ್ ಭಾಷೆಗೆ ಅನುವಾದಗೊಂಡು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿರುವ ಹೊತ್ತು. ಕೃತಿಗೆ ಬೂಕರ್ ಪ್ರಶಸ್ತಿ ಸಿಗಲಿ. ಲೇಖಕಿ ಬಾನು ಮುಷ್ತಾಕ್ ಅವರಿಗೂ, ಅನುವಾದಕಿ ದೀಪಾ ಭಸ್ತಿ ಅವರಿಗೂ, ಪ್ರಕಾಶಕರಿಗೂ, ಕನ್ನಡ ಸಾಹಿತ್ಯಕ್ಕೂ, ಕನ್ನಡಿಗರಿಗೂ ಅವಿಸ್ಮರಣೀಯ ಕ್ಷಣವಾಗಲಿ ಎಂದು ಹಾರೈಸೋಣ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.