Road Humps: ರೋಡ್ ಹಂಪ್‌ಗೆ ಬಲಿಯಾದ ಅಮೂಲ್ಯ ಜೀವದ ಹೊಣೆ ಹೊರುವವರು ಯಾರು? ಅವೈಜ್ಞಾನಿಕ ವಿಧಾನಕ್ಕೆ ಇನ್ನಾದರೂ ಬೀಳಲಿ ಬ್ರೇಕ್
ಕನ್ನಡ ಸುದ್ದಿ  /  ಕರ್ನಾಟಕ  /  Road Humps: ರೋಡ್ ಹಂಪ್‌ಗೆ ಬಲಿಯಾದ ಅಮೂಲ್ಯ ಜೀವದ ಹೊಣೆ ಹೊರುವವರು ಯಾರು? ಅವೈಜ್ಞಾನಿಕ ವಿಧಾನಕ್ಕೆ ಇನ್ನಾದರೂ ಬೀಳಲಿ ಬ್ರೇಕ್

Road Humps: ರೋಡ್ ಹಂಪ್‌ಗೆ ಬಲಿಯಾದ ಅಮೂಲ್ಯ ಜೀವದ ಹೊಣೆ ಹೊರುವವರು ಯಾರು? ಅವೈಜ್ಞಾನಿಕ ವಿಧಾನಕ್ಕೆ ಇನ್ನಾದರೂ ಬೀಳಲಿ ಬ್ರೇಕ್

ರಾತ್ರೋ ರಾತ್ರಿ ಉದ್ಭವವಾಗುವ ಅವೈಜ್ಞಾನಿಕ ರೋಡ್‌ ಹಂಪ್‌ಗಳಿಂದ ಬಲಿಯಾಗುವ ಜೀವಗಳಿಗೆ ಹೊಣೆ ಯಾರು? ಕಾಂಕ್ರಿಟ್ ರಾಶಿಯಿಂದ ಗುಡ್ಡೆಯಂತೆ ನಿರ್ಮಾಣ ಮಾಡಿ ಜನರ ಪ್ರಾಣಕ್ಕೆ ಅಪಾಯ ತಂದೊಡ್ಡುವವರಿಗೆ ಏನು ಹೇಳೋದು?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಮು ಎಂಬ ಆ ಯುವಕನ ವಯಸ್ಸು ಇನ್ನೂ 35 ರ ಆಸುಪಾಸು. ವೃತ್ತಿಯಿಂದ ಶಿಕ್ಷಕ. ತುಮಕೂರಿನ ಎಸ್.ಐ.ಟಿ. ಬಡಾವಣೆಯ ಪೊಲೀಸ್ ಕ್ವಾರ್ಟರ್ಸ್ ಹಿಂಬದಿ ರಸ್ತೆಯ ಕೃಷ್ಣನಗರದ ನಿವಾಸಿ. ಪರಸ್ಥಳದ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ. ದಿನವೂ ಬೈಕ್‌ನಲ್ಲಿ ಬೆಳಗ್ಗೆ ತೆರಳಿ, ರಾತ್ರಿ ಹೊತ್ತಿಗೆ ಮನೆಗೆ ಮರಳುತ್ತಿದ್ದವರು. ನಾಲ್ಕೈದು ತಿಂಗಳ ಹಿಂದೆ ಅದೊಂದು ದಿನ ಎಂದಿನಂತೆಯೇ ಬೈಕ್ ನಲ್ಲಿ ಕೆಲಸಕ್ಕೆ ತೆರಳಿದರು. ಅಂದು ರಾತ್ರಿ ಮರಳುವಾಗ, ಮನೆ ಹತ್ತಿರದ ಕ್ರಾಸ್ ಬಳಿ ದಿಢೀರನೆ ಅವೈಜ್ಞಾನಿಕ ರೋಡ್ ಹಂಪ್ಸ್ ತಲೆಯೆತ್ತಿತ್ತು. ಕಾಂಕ್ರಿಟ್ ರಾಶಿಯಿಂದ ಗುಡ್ಡೆಯಂತೆ ಅದು ನಿರ್ಮಾಣವಾಗಿತ್ತು. ಈ ಬಗ್ಗೆ ಏನೇನೂ ಗೊತ್ತಿರದ ಆ ಯುವಕ ರೋಡ್ ಹಂಪ್ಸ್ ಹತ್ತಿಸುವಾಗ ಬೈಕ್ ಸಮೇತ ಉರುಳಿಬಿದ್ದಿದ್ದಾರೆ. ಅವರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಪ್ರಜ್ಞಾಹೀನರಾಗಿದ್ದಾರೆ. ಸ್ಥಳೀಯರು ಒಡನೆಯೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಮನೆಯ ಬಳಿಯೇ ನಡೆದ ಈ ದುರಂತದಲ್ಲಿ ಅವರು ಜೀವ ಕಳೆದುಕೊಂಡಿದ್ದಾರೆ.

ತುಮಕೂರಿನ ಶೆಟ್ಟಿಹಳ್ಳಿ ಅಂಡರ್ ಪಾಸ್ ಒಳಗೆ ಮೊನ್ನೆ ಗೌರಿ ಹಬ್ಬದಂದು ಮಧ್ಯಾಹ್ನ ದಿಢೀರನೆ ಅವೈಜ್ಞಾನಿಕವಾದ ಫೈಬರ್ ರೋಡ್ ಹಂಪ್ಸ್ ನ ತ್ರಿವಳಿ ಪಟ್ಟಿಗಳನ್ನು ಅಳವಡಿಸಲಾಯಿತು. ತಕ್ಷಣ ಇದನ್ನು ಸಚಿತ್ರವಾಗಿ ಸೋಷಿಯಲ್ ಮೀಡಿಯಾ ಮೂಲಕ ನಾನು ಸಾರ್ವಜನಿಕ ಗಮನಕ್ಕೆ ತಂದೆ.

ಆಗ ಈ ರೋಡ್ ಹಂಪ್ಸ್ ವಿರುದ್ಧ ಜನಾಭಿಪ್ರಾಯವೇ ಮೊಳಗಿತು. ಇದರಿಂದ ಸಂಬಂಧಿಸಿದವರು ಎಚ್ಚೆತ್ತು ಮರುದಿನವೇ ಅಂದರೆ ಗಣೇಶನ ಹಬ್ಬದಂದು ಮೂರರಲ್ಲಿ ಎರಡು ಪಟ್ಟಿಗಳನ್ನು ಕಿತ್ತುಹಾಕಿಬಿಟ್ಟರು. ಇವೆಲ್ಲ ಬೆಳವಣಿಗೆಗಳು ನಡೆದಿರುವಾಗಲೇ ಮಾಜಿ ಕಾರ್ಪೊರೇಟರ್ ಒಬ್ಬರು ನಿನ್ನೆ ನನ್ನೊಡನೆ ಮಾತನಾಡುವಾಗ “ಅವೈಜ್ಞಾನಿಕ ರೋಡ್ ಹಂಪ್ಸ್ಗೆ ಅಮೂಲ್ಯ ಜೀವವೊಂದು ಬಲಿಯಾದ” ಈ ಹೃದಯ ವಿದ್ರಾವಕ ಪ್ರಸಂಗವನ್ನು ನೋವಿನಿಂದಲೇ ಹಂಚಿಕೊಂಡರು.

ಅಲ್ಲಿನ ಯಾರೋ ಕೆಲಜನರು ಈ ರಸ್ತೆಗೆ “ರೋಡ್ ಹಂಪ್ಸ್” ಹಾಕಿ ಎಂದರಂತೆ. ಇದಕ್ಕೆ ತಲೆ ಆಡಿಸಿದವರೊಬ್ಬರು ಅದಕ್ಕೆ ಏರ್ಪಾಡು ಮಾಡಿದರಂತೆ. ಒಡನೆಯೆ ಅದೆಲ್ಲಿಂದಲೋ ಒಂದಿಷ್ಟು ಕಾಂಕ್ರಿಟ್ ರಾಶಿ ತಂದು ಸುರಿಯಲಾಯಿತಂತೆ. ಗುಡ್ಡೆಯಂತೆ ಅದು ಅಲ್ಲಿ ಗಟ್ಟಿಯಾಗಿ, “ರೋಡ್ ಹಂಪ್ಸ್” ಆಯಿತಂತೆ. ಅಂದೇ ರಾತ್ರಿ ಈ ದುರಂತ ಘಟನೆ ಅಲ್ಲಿ ನಡೆದಿದೆ. ಆಗ ದಿಕ್ಕೆಟ್ಟ ಕೆಲವರು ತಕ್ಷಣವೇ ರಾತ್ರೋರಾತ್ರಿಯೇ ಈ ಹಂಪ್ಸ್ ಅನ್ನು ಕಿತ್ತುಹಾಕಿಬಿಟ್ಟರಂತೆ.

ಆರ್.ಎಸ್.ಅಯ್ಯರ್ ಅವರ ಪೋಸ್ಟ್‌

ಈಗಿರುವ ಪ್ರಶ್ನೆ. “ಒಂದು ಅಮೂಲ್ಯವಾದ ಜೀವವನ್ನು ಬಲಿ ಪಡೆದ ಈ ದುರಂತಕ್ಕೆ ಹೊಣೆ ಹೊರುವವರು ಯಾರು?”

-ಆರ್.ಎಸ್.ಅಯ್ಯರ್, ತುಮಕೂರು ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ.

Whats_app_banner