Forest News: ಬೇಲೂರು ತಾಲ್ಲೂಕಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು; ಎರಡು ತಿಂಗಳಲ್ಲೇ ನಾಲ್ಕನೇ ದುರ್ಘಟನೆ, ಶವ ಇರಿಸಿ ಪ್ರತಿಭಟನೆ
Forest News: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ತುಳಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದ್ದು, ಜನ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

Forest News: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಎರಡೇ ತಿಂಗಳ ಅಂತರದಲ್ಲಿ ನಾಲ್ಕನೇ ಆನೆ ದಾಳಿ ಪ್ರಕರಣ ನಡೆದಿದ್ದು. ಮಹಿಳೆಯೊಬ್ಬರು ಶುಕ್ರವಾರ ಜೀವ ಕಳೆದುಕೊಂಡಿದ್ದಾರೆ. ಬೇಲೂರು ತಾಲ್ಲೂಕಿನ ಕೋಗೋಡು ಬೊಮ್ಮನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಸುಶೀಲಮ್ಮ ಎಂಬುವವರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕೋಗೋಡು ಗ್ರಾಮಸ್ಥರು ಮಹಿಳೆ ಶವವನ್ನು ಇರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ರಸ್ತೆ ತಡೆ ಮಾಡಿ ಬೆಂಕಿಯನ್ನೂ ಹಚ್ಚಿ ಆಕ್ರೋಶ ಹೊರ ಹಾಕಿದರು. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯು ಕೂಡಲೇ ಸೆರೆ ಹಿಡಿಯಬೇಕು. ಆನೆ ಭಯದಿಂದ ಜನರನ್ನು ಮುಕ್ತಗೊಳಿಸಬೇಕು ಎನ್ನುವ ಒತ್ತಾಯದೊಂದಿಗೆ ಪ್ರತಿಭಟನೆ ನಡೆದಿದೆ.
ಕೆಲಸ ಮುಗಿಸಿ ಬರುವಾಗ ದುರ್ಘಟನೆ
ಮೂಡಿಗೆರೆ- ಬೇಲೂರು ರಸ್ತೆಯಲ್ಲಿರುವ ಕೋಗೋಡು ಬೊಮ್ಮನಹಳ್ಳಿ ಗ್ರಾಮದ ಬಳಿ ಮಧ್ಯಾಹ್ನದ ಸಮಯದಲ್ಲಿ ಕಾಫಿ ತೋಟದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಶೀಲಮ್ಮ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ತಲೆ ಭಾಗದ ಮೇಲೆ ತುಳಿದಿದ್ದರಿಂದ ಸುಶೀಲಮ್ಮ ಕೆಳಕ್ಕೆ ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಸಮೀಪದಲ್ಲಿಯೇ ಬರುತ್ತಿದ್ದವರು ಆನೆ ದಾಳಿಯಾಗಿದ್ದನ್ನು ಗಮನಿಸಿದ್ದು ಕೂಗಿಕೊಂಡಿದ್ದಾರೆ. ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದರು.
ಹಾಸನ ಡಿಸಿಎಫ್ ಸೌರಭ್‌ಕುಮಾರ್, ಬೇಲೂರು ಎಸಿಎಫ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಜನರ ಆಕ್ರೋಶ ಎದುರಿಸಬೇಕಾಯಿತು. ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟಿಸಿದರಲ್ಲದೇ ಮುಖ್ಯರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಅರಣ್ಯ ಇಲಾಖೆ ವಿರುದ್ದ ಆಕ್ರೋಶ
ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಎರಡೇ ತಿಂಗಳಲ್ಲಿ ನಾಲ್ಕು ಜನ ಆನೆ ದಾಳಿಗೆ ಮೃತಪಟ್ಟರೂ ಅರಣ್ಯ ಇಲಾಖೆ ಈವರೆಗೂ ಆನೆ ಸೆರೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ವಾರ ಅರಣ್ಯ ಸಚಿವರು ಇಲ್ಲಿಗೆ ಬಂದಾಗ ಆನೆ ಸೆರೆ ಹಿಡಿಯುವ ಭರವಸೆ ನೀಡಿದರೂ ಏನು ಆಗಿಲ್ಲ. ಈ ಭಾಗದಲ್ಲಿ ಜನ ಭಯದಿಂದಲೇ ಬದುಕುವ ಸ್ಥಿತಿಯಿದೆ. ಕಾಡಾನೆಗಳನ್ನು ಸೆರೆ ಹಿಡಿಯದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು. ಅರಣ್ಯ ಇಲಾಖೆಯವರ ಭರವಸೆಗೂ ಜಗ್ಗದೇ ಪ್ರತಿಭಟನೆ ಮುಂದುವರಿದಿತ್ತು.
ಕಳೆದ ವಾರವಿನ್ನೂ ಇದೇ ರೀತಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕಳೆದ ಮೂರ್ನಾಲ್ಕು ವರ್ಷದಲ್ಲಿ ಕಾಡಾನೆ ದಾಳಿಗೆ ಹಾಸನದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆನೆ ಸೆರೆ ವೇಳೆಯೇ ಆರ್ಜುನ ಆನೆ ಮೃತಪಟ್ಟು, ಶಾರ್ಪ್ ಶೂಟರ್ ವೆಂಕಟೇಶ್ ಕೂಡ ಪ್ರಾಣ ಕಳೆದುಕೊಂಡಿದ್ದರು.
ಅನಾರೋಗ್ಯದ ಕಾರಣದಿಂದ ಮಗನು ಆರು ತಿಂಗಳ ಹಿಂದೆ ತೀರಿಕೊಂಡಿದ್ದ. ಪತಿ ಕೂಡ ತೀರಿಕೊಂಡಿದ್ದರು. ಸಂಬಂಧಿಕರೊಂದಿಗೆ ಸುಶೀಲಮ್ಮ ಇದ್ದರು. ಪರಿಹಾರವನ್ನು ಕುಟುಂಬದವರಿಗೆ ನೀಡಲಾಗುವುದು ಎಂದು ಅರಣ್ಯ ಇಲಾಖೆ ಹೇಳಿದೆ.
ಆನೆ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ 45 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಈ ದುಃಖದ ಸಂದರ್ಭದಲ್ಲಿ ಸರ್ಕಾರ ಅವರ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಮೃತ ಮಹಿಳೆಯ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ಈ ನೋವು ತಾಳಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿರುವ ಅವರು, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಸರ್ವ ಪ್ರಯತ್ನ ಮಾಡುತ್ತಿದ್ದು, ಸರ್ಕಾರ ಸಂವೇದನಾತ್ಮಕವಾಗಿದೆ. ಜನರು ಮಳೆಗಾಲ ಆರಂಭವಾಗುವವರೆಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಪಿಸಿಸಿಎಫ್ ದರ್ಜೆಯ ಅಧಿಕಾರಿ ನೇತೃತ್ವದ ತಂಡವನ್ನು ಹಾಸನ ಜಿಲ್ಲೆಗೆ ಕಳುಹಿಸಿ, ಅಧ್ಯಯನ ಮಾಡಿ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕಲು ಸೂಚಿಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಬೇಲೂರು ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಯುವಕನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ತರುವಾಯ, ಬೇಲೂರು ಪಟ್ಟಣದಲ್ಲಿ ಸಭೆ ನಡೆಸಿ, ಜನರ ಅಹವಾಲು ಆಲಿಸಿದ್ದೇನೆ. ಸಾರ್ವಜನಿಕರ ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸುವ ಘೋಷಣೆಯನ್ನು ಬಜೆಟ್ ನಲ್ಲಿಯೇ ಮಾಡಲಾಗಿದೆ. ಆದಷ್ಟು ಶೀಘ್ರ ಆನೆ ಧಾಮ (ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸಿ ಮಾನವ-ಆನೆ ಸಂಘರ್ಷ ನಿಯಂತ್ರಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
