Wild Elephant Attack: ಬಂಡೀಪುರ ವ್ಯಾಪ್ತಿಯ ಸರಗೂರು ತಾಲ್ಲೂಕಿನಲ್ಲಿ ಕಾಡಾನೆ ಹಿಂಡು ತುಳಿದು ಯುವಕ ಸಾವು, ಶವ ಇರಿಸಿ ಪ್ರತಿಭಟನೆ
Wild Elephant Attack: ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ಕಾಡಾನೆ ಹಿಂಡು ತುಳಿದು ಯುವಕ ಮೃತಪಟ್ಟಿದ್ದಾನೆ.

Wild Elephant Attack: ಜಮೀನಿಗೆ ನೀರು ಹಾಯಿಸಲು ಹೋಗಿ ಮೋಟರ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಯುವಕನೋರ್ವ ಆನೆ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹೆಡಿಯಾಲ ಉಪವಿಭಾಗದ ಮೊಳೆಯೂರು ವಲಯ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಮೃತಪಟ್ಟ ಯುವಕನನ್ನು ಅವಿನಾಶ್ ಎಂದು ಗುರುತಿಸಲಾಗಿದೆ. ಆಕ್ರೋಶಗೊಂಡ ಕುಟುಂಬಸ್ಥರು ಹಾಗು ಗ್ರಾಮದವರು ಶವವನ್ನು ಜಮೀನಿನಲ್ಲಿಯೇ ಇರಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಈ ಭಾಗದಲ್ಲಿ ಆನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಿಂದ ಸುಮಾರು 65 ಕಿ.ಮಿ ದೂರ ಇರುವ ಸರಗೂರು ತಾಲೂಕಿನ ಮೊಳೆಯೂರು ವನ್ಯಜೀವಿ ವಲಯ ವ್ಯಾಪ್ತಿಯ ಗದ್ದೆಹಳ್ಳ ಗ್ರಾಮದಲ್ಲಿ ಬೆಳಕಿನ ಜಾವ 24 ವರ್ಷದ ಅವಿನಾಶ್ ಜಮೀನಿಗೆ ಹೋಗಿದ್ದ. ಈ ವೇಳೆ ಜಮೀನಿಗೆ ನೀರು ಹಾಯಿಸಲು ಮೋಟಾರ್ ಆನ್ ಮಾಡಲು ಮುಂದಾಗಿದ್ದ. ಮುಂಜಾನೆ 6 ಗಂಟೆಗೆ ಜಮೀನಿಗೆ ತೆರಳಿದ್ದಾಗ ಐದು ಆನೆಗಳ ಗುಂಪು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದವು. ಆನೆಗಳ ದಾಳಿಗೆ ತಪ್ಪಿಸಿಕೊಳ್ಳಲು ಆಗದೇ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆನೆಗಳು ಆತನ ಮುಖ, ಎದೆ ಭಾಗದ ಮೇಲೆ ಕಾಲು ಇಟ್ಟಿರುವುದರಿಂದ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಕಣ್ಣು ಹೊರಗೆ ಬಂದಿದ್ದು, ಮುಖದ ಒಂದು ಭಾಗ ಸಂಪೂರ್ಣ ಹಾಳಾಗಿದೆ. ಮನೆಗೆ ಅವಿನಾಶ್ ಬಾರದೇ ಇದ್ದಾಗ ಕುಟುಂಬಸ್ಥರು ಜಮೀನು ಕಡೆ ಬಂದಾಗ ಆತ ಮೃತಪಟ್ಟು ಬಿದ್ದಿರುವುದು ಕಂಡು ಬಂದಿದೆ. ಪಕ್ಕದಲ್ಲಿಯೇ ಆನೆಯ ಲದ್ದಿ. ಹೆಜ್ಜೆ ಗುರುತು ಇರುವುದರಿಂದ ಆನೆಗಳ ದಾಳಿಯಿಂದಲೇ ಈತ ಮೃತಪಟ್ಟಿರುವುದು ಖಚಿತವಾಗಿದೆ.
ವಿಷಯ ತಿಳಿದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗಮಿಸಿದರು. ಅಲ್ಲಿನ ದೃಶ್ಯ ಕಂಡು ಗ್ರಾಮಸ್ಥರು ಮರುಗಿದರು. ಅಲ್ಲದೇ ಅರಣ್ಯ ಇಲಾಖೆ ವಿರುದ್ದ ಅಸಮಾಧಾನ ಹೊರ ಹಾಕಿದರು. ಆನಂತರ ಶವವನ್ನು ಅಲ್ಲಿಯೇ ಇರಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮೃತ ಅವಿನಾಶ್ ಸಂಬಂಧಿಕರು ಈ ಘಟನೆಗೆ ಅರಣ್ಯ ಇಲಾಖೆ ಜತೆಗೆ ವಿದ್ಯುತ್ ನಿಗಮದ ಅಧಿಕಾರಿಗಳೇ ನೇರ ಕಾರಣ. ರಾತ್ರಿ ವೇಳೆ ವಿದ್ಯುತ್ ನೀಡುವುದರಿಂದ ಈ ರೀತಿ ಸಾಕಷ್ಟು ಸಾವು ನೋವುಗಳಾಗುತ್ತಿವೆ, ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು ಇನ್ನು ಮುಂದಾದರು ಬೆಳಗಿನ ಸಮಯದಲ್ಲಿ ವಿದ್ಯುತ್ ನೀಡಿ ರೈತರ ಪ್ರಾಣ ಉಳಿಸಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ, ಮೃತ ರೈತ ಅವಿನಾಶ್ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಮತ್ತು ಮುಂದಿನ ದಿನಗಳಲ್ಲಿ ಈ ರೀತಿ ಅವಘಡಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊಳೆಯೂರು ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜಮೀನುಗಳಿಗೆ ಆನೆಗಳು ನುಗ್ಗುತ್ತಿವೆ. ಬೆಳೆ ಉಳಿಸಿಕೊಳ್ಳಲು ಜನ ಹೆಣಗಾಡುವ ಸ್ಥಿತಿಯಿದೆ. ಈಗಾಗಲೇ ಈ ಭಾಗದಲ್ಲಿ ಆನೆ ದಾಳಿಗೆ ಹಲವರು ಜೀವ ಕಳೆದುಕೊಂಡಿದ್ದಾರೆ. ಇನ್ನೆಷ್ಟು ಜನ ಪ್ರಾಣ ತೆರಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮಧ್ಯಾಹ್ನದವರೆಗೂ ಶವ ತೆಗೆಯಲು ಅವಕಾಶ ನೀಡಿರಲಿಲ್ಲ. ಜನ ಸೇರಿದ್ದರಿಂದ ಈ ಭಾಗದಲ್ಲಿ ಬಂದೋಬಸ್ತ್ ಹಾಕಲಾಗಿತ್ತು.
