ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ಉಪಟಳ ತಡೆಯಲು ಬೃಹತ್ ಆನೆ ಕಂದಕ ನಿರ್ಮಾಣಕ್ಕೆ ಮುಂದಾದ ಅರಣ್ಯ ಇಲಾಖೆ
ಕಾಡಾನೆ ಉಪಟಳ ದಕ್ಷಿಣ ಕನ್ನಡ ಭಾಗದಲ್ಲೂ ಜೋರಾಗಿದೆ. ಆನೆ ಕಾಟ ತಡೆಯಲು ಕಂದಕ ನಿರ್ಮಾಣಕ್ಕೆ ಕರ್ನಾಟಕ ಅರಣ್ಯ ಇಲಾಖೆ ಮುಂದಾಗಿದೆ. ಸುಳ್ಯ ಹಾಗೂ ಬೆಳ್ತಂಗಡಿ ತಾಲ್ಲೂಕಲ್ಲಿ ಕಂದಕ ನಿರ್ಮಿಸಲಾಗುತ್ತಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಆನೆಗಳು ಕೃಷಿಕರ ತೋಟಗಳಿಗೆ ಲಗ್ಗೆ ಇಡುವುದು, ರಸ್ತೆಯಲ್ಲಿ ಕಾಣಸಿಗುವುದು ಮಾಮೂಲು. ಆನೆ ಹೋದದ್ದೇ ದಾರಿ ಎಂಬ ಮಾತಿನಂತೆ ಆನೆಯ ಸಂಚಾರವನ್ನು ತಡೆಯಲು ಕಷ್ಟಸಾಧ್ಯವಾದರೂ ಹಲವು ಪ್ರಯತ್ನಗಳು ನಿರಂತರವಾಗಿ ಅರಣ್ಯ ಇಲಾಖೆ ಹಾಗೂ ಊರವರಿಂದ ನಡೆಯುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಆನೆಕಂದಕ ನಿರ್ಮಾಣಕ್ಕೆ ಮುಂದಾಗಿದೆ. ಕೃಷಿ ಭೂಮಿಗೆ ನುಗ್ಗುವ ಆನೆಯನ್ನು ನಿಯಂತ್ರಿಸಿ ಮರಳಿ ಕಾಡಿಗೆ ಕಳುಹಿಸುವ ಯತ್ನದ ಯೋಜನೆಯ ಭಾಗವಾಗಿ ಆನೆ ಕಂದಕ ನಿರ್ಮಾಣವಾಗುತ್ತಿದೆ.
ಕಳೆದ ಎರಡು-ಮೂರು ವರ್ಷಗಳಿಂದ ಕಾಡಾನೆಯ ನಿರಂತರ ಉಪಟಳದಿಂದ ಬೇಸತ್ತು ಹೋಗಿದ್ದ ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶಕ್ಕೆ ಇದೀಗ ರಾಜ್ಯ ಸರಕಾರ ಆನೆ ಕಂದಕ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದೆ. ಹೀಗಾಗಿ ಆನೆ ಕಂದಕದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ಓಡಾಟ ನಡೆಸುತ್ತಾ ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟು ಮಾಡುತ್ತಿತ್ತು. ಆನೆಯನ್ನು ಅರಣ್ಯಕ್ಕೆ ಓಡಿಸಿದರೆ ಎರಡೇ ದಿನದಲ್ಲಿ ಅದು ಮತ್ತೆ ಬಂದು ಕೃಷಿಗೆ ಹಾನಿ ಯುಂಟು ಮಾಡುತ್ತಿದೆ. ಇಲ್ಲಿ ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಮೌಲ್ಯದ ಕೃಷಿಗೆ ಕಾಡಾನೆಗಳು ಹಾನಿಯುಂಟುಮಾಡಿತ್ತು. ಇದೀಗ ಸರಕಾರದಿಂದ ಅರಣ್ಯ ಇಲಾಖೆಯ ಮೂಲಕ 5 ಲಕ್ಷ ರೂ. ಮಂಜೂರಾಗಿದ್ದು ಒಂದೂವರೆ ಕಿ.ಮೀ ದೂರದವರೆಗೆ ಆನೆ ಕಂದಕ ನಿರ್ಮಾಣವಾಗಲಿದೆ. ಆನೆ ಕಂದಕದ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ಅತಿ ಹೆಚ್ಚು ದಾಳಿಯಾಗುತ್ತಿದ್ದ ಪ್ರದೇಶ:
ನೇರ್ತನೆಯ ಅತಿ ಹೆಚ್ಚು ಆನೆ ದಾಳಿಯಾಗುತ್ತಿದ್ದ ಪ್ರದೇಶದಲ್ಲಿ ಆನೆ ಕಂದಕ ನಿರ್ಮಿಸಲಾಗಿದೆ. ಕಾಡಾನೆಗಳು ಇಲ್ಲಿ ಕೃಷಿಭೂಮಿಗೆ ನೇರವಾಗಿ ನುಗ್ಗುವುದು ಕಡಿಮೆಯಾಗಲಿದೆ. ಅರಣ್ಯಕ್ಕೆ ತಾಗಿಕೊಂಡಿರುವ ಇತರ ಪ್ರದೇಶಗಳಿಗೂ ಕಂದಕ ನಿರ್ಮಿಸಿದರೆ ಮಾತ್ರ ಆನೆಯ ಉಪಟಳ ಸಂಪೂರ್ಣವಾಗಿ ತಡೆಯಲು ಸಾಧ್ಯವಿದೆ. ಇನ್ನೂ ಸುಮಾರು ಮೂರುವರೆ ಕಿ.ಮೀ ಉದ್ದಕ್ಕೆ ಆನೆ ಕಂದಕ ನಿರ್ಮಾಣಮಾಡಬೇಕಾಗಿದೆ ಹಾಗೂ ತೋಡು ಹಾಗು ಮುರಕಲ್ಲಿನ ಪ್ರದೇಶಗಳಲ್ಲಿ ತಡೆ ಬೇಲಿಯನ್ನು ನಿರ್ಮಿಸಬೇಕಾದ ಅಗತ್ಯತೆಯಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ಅನುದಾನ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ನಿವಾಸಿಗಳು.
ಹಿಂದೆಲ್ಲ ಅಪರೂಪಕ್ಕೆ ಆನೆಗಳು ಬರುತ್ತಿದ್ದವು ಇದೀಗ ಕಳೆದ ಎರಡುಮೂರು ವರ್ಷಗಳಿಂದ ಆನೆಗಳ ಉಪಟಳ ತೀರಾ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಆನೆ ಕಂದಕವನ್ನು ನಿರ್ಮಿಸಿ ನೀಡಿರುವುದು ಈ ಪ್ರದೇಶದ ಜನರಿಗೆ ತುಂಬಾ ಪ್ರಯೋಜನ ಕಾರಿಯಾಗಿದೆ. ಅನುದಾನ ಒದಗಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸ್ಥಳೀಯ ನಿವಾಸಿ, ಮಾಜಿ ಸೈನಿಕ ತಂಗಚ್ಚನ್ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಾಡಾನೆ ದಾಳಿಯಿಂದ ಇಲ್ಲಿನ ಜನರು ತತ್ತರಿಸಿ ಹೋಗಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ಗಮನ ಸೆಳೆದಾಗ ಅವರು ಕೂಡಲೇ ಅರಣ್ಯ ಸಚಿವರ ಬಳಿ ಕರೆದೊಯ್ದು ಮನವಿ ಸಲ್ಲಿಸಿದ್ದರು ಇದೀಗ ಅನುದಾನ ಒದಗಿಸುವ ಕಾರ್ಯ ಮಾಡಿದ್ದಾರೆ. ಆನೆ ಕಂದಕ ನಿರ್ಮಾಣದಿಂದಾಗಿ ಈ ಪ್ರದೇಶದ ಜನರ ಬಹುದಿನಗಳ ಕನಸು ಈಡೇರಿದಂತಾಗಿದೆ ಎಂದು ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಟಿ.ವಿ.ದೇವಸ್ಯ ಹೇಳಿದ್ದಾರೆ.
ಅಧಿಕಾರಿ ಹೇಳೋದು ಏನು
ನೇರ್ತನೆ ಪ್ರದೇಶದಲ್ಲಿ ಸುಮಾರು 5 ಕಿಮೀಯಷ್ಟು ದೂರಕ್ಕೆ ಆನೆ ಕಂದಕ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಪ್ರಥಮ ಹಂತದಲ್ಲಿ ಒಂದೂವರೆ ಕಿಮೀ ದೂರ ಆನೆಕಂದಕ ನಿರ್ಮಾಣವಾಗುತ್ತಿದ್ದು ಅನುದಾನದ ಆಧಾರದಲ್ಲಿ ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ ಎಂದು ಬೆಳ್ತಂಗಡಿ ಆರ್.ಎಫ್.ಓ. ತ್ಯಾಗರಾಜ್ ಹೇಳುತ್ತಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
